Advertisement

ಸೃಜನಶೀಲ ಮನಸ್ಸು ಸಾಹಿತ್ಯದ ಜೀವಾಳ

03:15 PM Mar 06, 2018 | Team Udayavani |

ಸುಬ್ರಹ್ಮಣ್ಯ: ಸಾಹಿತ್ಯಿಕ ಬರವಣಿಗೆಗೆ ಮುಖ್ಯವಾಗಿ ಬೇಕಾದದ್ದು ಸೃಜನಶೀಲ ಮನಸ್ಸು.ಅದುವೇ ಸಾಹಿತ್ಯದ ಜೀವಾಳ ಎಂದು ದಕ್ಷಿಣ ಕನ್ನಡ ಜಿಲ್ಲಾ 22ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆ, ಕಾದಂಬರಿಗಾರ್ತಿ ಎ.ಪಿ.ಮಾಲತಿ ಅಭಿಪ್ರಾಯಪಟ್ಟರು.

Advertisement

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸೋಮವಾರ ಆರಂಭವಾದ ಮೂರು ದಿನಗಳ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯ ಪ್ರಾಕೃತಿಕ ಚಿತ್ರಣ ಸಂಪೂರ್ಣ ಬದಲಾಗಿದೆ. ಹಸಿರು ಪರಿಸರ,ಗದ್ದೆ -ತೋಟ ಇತ್ಯಾದಿಗಳು ನಶಿಸಿ ಬಹುರಾಷ್ಟ್ರೀಯ ಕಂಪೆನಿಗಳು ಇಲ್ಲಿ ನೆಲೆಯೂರಿವೆ. ನೇತ್ರಾವತಿ ನದಿ ತಿರುವು ಸೇರಿದಂತೆ ಪ್ರಕೃತಿ ವಿರೋಧಿ ಧೋರಣೆಗಳಿಂದ ಕೃಷಿ ಸಂಸ್ಕೃತಿ, ನಂಬಿಕೆಗಳು ನಶಿಸುತ್ತಿವೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಭಾಷಿಕ ಆಕ್ರಮಣ ಸಹಿಸಲಸಾಧ್ಯ: ಎಸ್‌.ಜಿ. ಸಿದ್ದರಾಮಯ್ಯ
ಸಮ್ಮೇಳನವನ್ನು ಉದ್ಘಾಟಿಸಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್‌.ಜಿ. ಸಿದ್ದರಾಮಯ್ಯ ಮಾತ ನಾಡಿ, ನಾವು ಎಲ್ಲ ಭಾಷೆಗಳನ್ನೂ ಗೌರ ವಿಸುತ್ತೇವೆ. ಆದರೆ ಇನ್ನೊಂದು ಭಾಷೆ ನಮ್ಮ ಭಾಷೆಯನ್ನು ತುಳಿಯುವ ಮಟ್ಟಿಗೆ ಆಕ್ರಮಣ ಮಾಡುವುದನ್ನು ಸಹಿಸಲು ಸಾಧ್ಯವಿಲ್ಲ.ಯಾವುದೇ ಅನ್ಯ ಭಾಷೆಯಾಗಲಿ;ನೆಲದ ಭಾಷೆಯ ಮೇಲೆ ಮಾಡುವ ಆಕ್ರಮಣವನ್ನು ವಿರೋಧಿಸಲೇ ಬೇಕು ಎಂದರು.

ಅನ್ಯ ನೆಲದಿಂದ ಕನ್ನಡ ನೆಲಕ್ಕೆ ಬಂದು ಅಧಿಕಾರಿಗಳಾಗಿ ಕೆಲಸ ನಿರ್ವ ಹಿಸುತ್ತಿರುವವರು, ಚಾಪೆಯ ಕೆಳಗೆ ತೂರುವ, ರಂಗೋಲಿಯ ಕೆಳಗೆ ನುಸುಳುವ ಪ್ರಯತ್ನ ಮಾಡುತ್ತಾರೆ. ನಾವು ವಲಸೆಯನ್ನು ಸ್ವಾಗತಿಸುತ್ತೇವೆ, ಆದರೆ ನಮ್ಮ ಮನೆಗೆ ಬಂದು ನಮ್ಮನ್ನೇ ಹೊರದಬ್ಬಲು ಯತ್ನಿಸಿದರೆ ಸುಮ್ಮನಿರಲು ಸಾಧ್ಯವಿಲ್ಲ ಎಂದರು.

Advertisement

ವಿಧಾನ ಪರಿಷತ್‌ ಸಭಾಪತಿ ಡಿ.ಎಚ್‌.ಶಂಕರಮೂರ್ತಿ ವಿವಿಧ ಕೃತಿಗಳನ್ನು ಬಿಡುಗಡೆಗೊಳಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವನ್ನು ಶಾಸಕ ಎಸ್‌.ಅಂಗಾರ ಉದ್ಘಾಟಿಸಿದರು. ನಿಕಟ ಪೂರ್ವ ಸಮ್ಮೇನಾಧ್ಯಕ್ಷ ಪ್ರೊ| ಕೆ. ಚಿನ್ನಪ್ಪ ಗೌಡ, ತಾ.ಪಂ.ಅಧ್ಯಕ್ಷ ಚನಿಯ ಕಲ್ತಡ್ಕ, ತಾ.ಪಂ.ಸದಸ್ಯ ಅಶೋಕ್‌ ನೆಕ್ರಾಜೆ, ಸುಬ್ರಹ್ಮಣ್ಯ ಗ್ರಾ.ಪಂ.ಅಧ್ಯಕ್ಷೆ ಸುಶೀಲಾ ಹೊಸ ಮನೆ, ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು,ಹಿರಿಯ ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವ, ಕುವೆಂಪು ವಿ.ವಿ. ನಿವೃತ್ತ ಕುಲಪತಿ ಕೆ.ಚಿದಾನಂದ ಗೌಡ, ಕರ್ನಾಟಕ ಗೇರು ನಿಗಮದ ಅಧ್ಯಕ್ಷ ಬಿ.ಎಚ್‌.ಖಾದರ್‌,ಅರೆಭಾಷೆ ಅಕಾಡೆಮಿ ಅಧ್ಯಕ್ಷ ಪಿ.ಸಿ.ಜಯರಾಂ,ವಾರ್ತಾಧಿಕಾರಿ ಖಾದರ್‌ ಶಾ ಉಪಸ್ಥಿತರಿದ್ದರು.

ಕೆ.ಎಸ್‌.ಎಸ್‌. ಕಾಲೇಜಿನ ವಿದ್ಯಾರ್ಥಿಗಳು ರಾಷ್ಟ್ರಗೀತೆ, ನಾಡ ಗೀತೆ, ರೈತಗೀತೆ ಹಾಡಿ ದರು. ಜಿಲ್ಲಾ
ಕ.ಸಾ.ಪ. ಅಧ್ಯಕ್ಷ ಎಸ್‌. ಪ್ರದೀಪ್‌ ಕುಮಾರ್‌ ಕಲ್ಕೂರ ಪ್ರಸ್ತಾ ವನೆಗೈದರು. ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಸ್ವಾಗತಿಸಿದರು. ಸುಬ್ರಹ್ಮಣ್ಯ ಕೆ.ಎಸ್‌.ಎಸ್‌.ಕಾಲೇಜಿನ ಪ್ರಾಂಶುಪಾಲ ಪ್ರೊ| ರಂಗಯ್ಯ ಶೆಟ್ಟಿಗಾರ್‌ ಕೆ.ವಂದಿಸಿದರು. ದುರ್ಗಾಕುಮಾರ್‌ ನಾಯರ್‌ಕೆರೆ, ಉದಯಕುಮಾರ್‌ ಕೆ.ನಿರೂಪಿಸಿದರು.

ಭಾವಗಳು ಅಕ್ಷರಗಳಾದಾಗ ಸೃಜನಶೀಲ ಕೃತಿ
ಏನು ಬರೆಯಬೇಕು ಎಂಬ ಸ್ಪಷ್ಟತೆ ಇದ್ದಾಗ ಬರವಣಿಗೆ ಸುಲಭವಾಗುತ್ತದೆ. ಸೃಜನಶೀಲತೆಯಿಲ್ಲದೆ ಭಾವ ಅರಳುವುದಿಲ್ಲ, ಭಾಷೆ ಕಾಯಿಗಟ್ಟುವುದಿಲ್ಲ, ಸಾಹಿತ್ಯದ ಚೌಕಟ್ಟು ತುಂಬುವುದಿಲ್ಲ. ನಮ್ಮೊಳಗಿನ ಮೌನವು ಧ್ವನಿಯಾಗುವ, ಧ್ವನಿಯು ಭಾವವಾಗುವ, ಭಾವವು ಅಕ್ಷರಗಳಾಗುವ ಪ್ರಕ್ರಿಯೆಯೇ ಸೃಜನಶೀಲ ಕೃತಿಯ ಸಾಕ್ಷಾತ್ಕಾರ.
– ಸಮ್ಮೇಳನಾಧ್ಯಕ್ಷೆ ಕಾದಂಬರಿ, ಕತೆಗಾರ್ತಿ ಎ.ಪಿ. ಮಾಲತಿ ಬಣ್ಣನೆ

Advertisement

Udayavani is now on Telegram. Click here to join our channel and stay updated with the latest news.

Next