Advertisement

ಬಿಜೆಪಿಯಿಂದ ಹಸು, ಕಾಂಗ್ರೆಸ್‌ನಿಂದ ಕಾಸು

11:57 AM Nov 30, 2018 | Team Udayavani |

ಹೊಸದಿಲ್ಲಿ: ವಿಧಾನಸಭೆ ಚುನಾವಣೆಯ ಹೊಸ್ತಿಲಲ್ಲಿರುವ ತೆಲಂಗಾಣ ಹಾಗೂ ರಾಜಸ್ಥಾನದಲ್ಲಿ ಕ್ರಮವಾಗಿ ಬಿಜೆಪಿ ಮತ್ತು ಕಾಂಗ್ರೆಸ್‌ ಪ್ರಣಾಳಿಕೆಗಳು ಗುರುವಾರ ಬಿಡುಗಡೆಯಾಗಿವೆ. ಒಂದು ಲಕ್ಷ ಜನರಿಗೆ ಪ್ರತಿ ವರ್ಷ ಉಚಿತವಾಗಿ ಹಸು ವಿತರಣೆ ಮಾಡುವುದಾಗಿ ಬಿಜೆಪಿ ತೆಲಂಗಾಣದ ಜನತೆಗೆ ಆಶ್ವಾಸನೆ ನೀಡಿದ್ದರೆ, ಅತ್ತ ರಾಜಸ್ಥಾನದಲ್ಲಿ ವಿದ್ಯಾವಂತ ನಿರುದ್ಯೋಗಿಗಳಿಗೆ ಮಾಸಿಕ 3,500 ರೂ. ಭತ್ಯೆ ನೀಡುವುದಾಗಿ ಕಾಂಗ್ರೆಸ್‌ ಘೋಷಿಸಿದೆ.

Advertisement

ಇದಲ್ಲದೆ, 2 ಲಕ್ಷ ರೂ.ವರೆಗಿನ ರೈತರ ಸಾಲ ಮನ್ನಾ, ಒತ್ತಾಯಪೂರ್ವಕ ಮತಾಂತರ ತಡೆಗೆ ಕಾನೂನು ಜಾರಿ, ಪದವಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌, ಮದ್ಯ ಮಾರಾಟಕ್ಕೆ ನಿರ್ಬಂಧ ಸೇರಿದಂತೆ ಹಲವು ಘೋಷಣೆಗಳನ್ನು ಬಿಜೆಪಿ ಮಾಡಿದೆ. ಅಲ್ಲದೆ, ಬಾಂಗ್ಲಾದೇಶದಿಂದ ಅಕ್ರಮವಾಗಿ ನುಸುಳಿರುವ ವ್ಯಕ್ತಿಗಳು ಮತ್ತು ರೋಹಿಂಗ್ಯಾಗಳನ್ನು ವಾಪಸ್‌ ಕಳುಹಿಸುವ ಭರವಸೆಯನ್ನೂ ನೀಡಲಾಗಿದೆ. ಕಾಂಗ್ರೆಸ್‌ನ ಪ್ರಣಾಳಿಕೆಯಲ್ಲಿ ರೈತರ ಸಾಲ ಮನ್ನಾ, ಹೆಣ್ಣುಮಕ್ಕಳಿಗೆ ಉಚಿತ ಶಿಕ್ಷಣ, ನಿರುದ್ಯೋಗಿ ಭತ್ಯೆ, ಹಿರಿಯ ರೈತರಿಗೆ ಪಿಂಚಣಿಯನ್ನು ಘೋಷಿಸಲಾಗಿದೆ. ಇದಲ್ಲದೆ, ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಸ್ಪರ್ಧಿಸಲು ಇದ್ದ ಕನಿಷ್ಠ ವಯೋಮಿತಿಯನ್ನು ರದ್ದು ಮಾಡುವುದಾಗಿಯೂ ಕಾಂಗ್ರೆಸ್‌ ಭರವಸೆ ನೀಡಿದೆ.

ನಾನು “ಸೇವಕ’, “ಪೈಲಟ್‌’ ಅಲ್ಲ:  ರಾಜಸ್ಥಾನದ ಟೋಂಕ್‌ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಪ್ರಬಲ ಅಭ್ಯರ್ಥಿ ಸಚಿನ್‌ ಪೈಲಟ್‌ ವಿರುದ್ಧ ಕಣಕ್ಕಿಳಿದಿರುವ ಬಿಜೆಪಿ ನಾಯಕ ಯೂನುಸ್‌ ಖಾನ್‌, “ಸೇವಕ’, “ಪೈಲಟ್‌’ ಎಂಬ ಹೆಸರನ್ನೆತ್ತಿಕೊಂಡು ಪ್ರಚಾರ ನಡೆಸುತ್ತಿದ್ದಾರೆ. ಈ ಚುನಾವಣೆಯು ಟೋಂಕ್‌ ಅನ್ನು ಉತ್ತಮವಾಗಿ ಯಾರು ಅಭಿವೃದ್ಧಿಪಡಿಸುತ್ತಾರೆ ಎಂಬುದರಲ್ಲಿ ನಿಂತಿದೆ. ಒಬ್ಬ ಸಚಿವನಾಗಿ ನಾನು ಇಲ್ಲಿಗೆ ಸಾಕಷ್ಟು ಕೆಲಸ ಮಾಡಿದ್ದೇನೆ. ಅವರು ಪೈಲಟ್‌(ಹೊರಗಿ ನವರು), ಆದರೆ ನಾನು “ಸೇವಕ್‌’. ಇಲ್ಲಿನ ಜನರ ಬಗ್ಗೆ ನನಗೆ ಗೊತ್ತು ಎಂದು ಹೇಳಿದ್ದಾರೆ.

ಇನ್ನೊಂದೆಡೆ, ರಾಜಸ್ಥಾನ ದಲ್ಲಿ ವಿವಿಧ ಅಭ್ಯರ್ಥಿಗಳ ಪರ ಪ್ರಚಾರ ನಡೆಸುತ್ತಿರುವ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಅವರಿಗೆ ಸವಾಲು ಹಾಕಿರುವ ಕಾಂಗ್ರೆಸ್‌ ನಾಯಕ ಸಚಿನ್‌ ಪೈಲಟ್‌, “ಯೋಗಿ ಅವರೇ, ನೀವು ಟೋಂಕ್‌ಗೆ ಬಂದು ನಿಮ್ಮ ಅಭ್ಯರ್ಥಿ ಯೂನುಸ್‌ ಖಾನ್‌ ಪರ ಪ್ರಚಾರ ನಡೆಸುತ್ತೀರಾ’ ಎಂದು ಪ್ರಶ್ನಿಸಿದ್ದಾರೆ.

ಇದೇ ವೇಳೆ, ರಾಜಸ್ಥಾನ ವಿಧಾನಸಭೆಯ ಮಾಜಿ ಸ್ಪೀಕರ್‌ ಸುಮಿತ್ರಾ ಸಿಂಗ್‌ ಗುರುವಾರ ಕಾಂಗ್ರೆಸ್‌ಗೆ ಸೇರ್ಪಡೆ ಯಾಗಿ ದ್ದಾರೆ. ಇನ್ನೊಂದೆಡೆ, ಅಲ್ವಾರ್‌ನ ರಾಮಗಡದ ಬಿಎಸ್‌ಪಿ ಅಭ್ಯರ್ಥಿ ಗುರುವಾರ ಮೃತಪಟ್ಟ ಹಿನ್ನೆಲೆಯಲ್ಲಿ, ಈ ಕ್ಷೇತ್ರದ ಚುನಾ ವಣೆಯನ್ನು ಮುಂದೂಡಲು ಚುನಾವಣಾ ಆಯೋಗ ಚಿಂತನೆ ನಡೆಸಿದೆ. 

Advertisement

ತೆಲಂಗಾಣದಲ್ಲಿ ರಾಹುಲ್‌ ರ್ಯಾಲಿ: ತೆಲಂಗಾಣದಲ್ಲಿ ಗುರು ವಾರ ರ್ಯಾಲಿ ನಡೆಸಿದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಪ್ರಧಾನಿ ವಿರುದ್ಧ ಹರಿಹಾಯ್ದಿದ್ದಾರೆ. ಮೋದಿ ಅವರು ತಾವು ನೀಡಿದ್ದ ಒಂದೇ ಒಂದು ಆಶ್ವಾಸನೆಯನ್ನೂ ಈಡೇರಿಸಲಿಲ್ಲ. ಕಡೇ ಪಕ್ಷ “ಪ್ರಾಮಾಣಿಕ ‘ ಪ್ರಧಾನಿಯೂ ಆಗಲಿಲ್ಲ ಎಂದು ಟೀಕಿಸಿದ್ದಾರೆ.

ಕಣಿವೆ ರಾಜ್ಯ-ಲೋಕಸಭೆ ಏಕಕಾಲಕ್ಕೆ ಚುನಾವಣೆ?
ಮುಂದಿನ ವರ್ಷ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆ ಹಾಗೂ ಲೋಕಸಭೆ ಚುನಾವಣೆ ಏಕಕಾಲಕ್ಕೆ ನಡೆಯುವ ಸಾಧ್ಯತೆಯಿದೆ. ಕಳೆದ ವಾರ ಜಮ್ಮು-ಕಾಶ್ಮೀರ ವಿಧಾನಸಭೆ ವಿಸರ್ಜನೆಯಾಗಿದ್ದು, ಮುಂದಿನ ಮೇ 21ರೊಳಗೆ ಇಲ್ಲಿ ಚುನಾವಣೆ ಘೋಷಿಸಬೇಕಾಗುತ್ತದೆ. ಅದೇ ಸಮಯದಲ್ಲಿ ಲೋಕಸಭೆ ಚುನಾವಣೆಯನ್ನೂ ನಡೆಸಬೇಕಾಗಿರುವುದರಿಂದ, ಎರಡನ್ನೂ ಏಕಕಾಲಕ್ಕೆ ನಡೆಸುವ ಬಗ್ಗೆ ಚುನಾವಣಾ ಆಯೋಗ ನಿರ್ಧರಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next