Advertisement

2 ತಿಂಗಳಾದರೂ ಅಸ್ತಿತ್ವಕ್ಕೆ ಬಾರದ ಗೋರಕ್ಷಣ ಸಮಿತಿ

02:00 AM Apr 06, 2022 | Team Udayavani |

ಮಂಗಳೂರು: ರಾಜ್ಯದಲ್ಲಿ ಗೋವುಗಳ ಕಳವು ತಡೆಯುವುದಕ್ಕಾಗಿ “ಗೋ ರಕ್ಷಣ ಸಮಿತಿ’ ರಚಿಸಬೇಕು ಎಂದು ಪಶು ಸಂಗೋಪನ ಸಚಿವರು ಆದೇಶ ಹೊರಡಿಸಿ ಎರಡು ತಿಂಗಳು ಕಳೆದರೂ ಅನುಷ್ಠಾನಕ್ಕೆ ಬಂದಿಲ್ಲ.

Advertisement

ಕರಾವಳಿ ಭಾಗದಲ್ಲಿ ಗೋವುಗಳ ಕಳವು, ಅಕ್ರಮ ಸಾಗಾಟ ನಿರಂತರವಾಗಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು/ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯವರ ನೇತೃತ್ವದಲ್ಲಿ ಗೋರಕ್ಷಣ ಸಮಿತಿ ರಚಿಸಬೇಕು. ಗೋವುಗಳನ್ನು ಅಕ್ರಮವಾಗಿ ಸಾಗಿಸುವ ವಾಹನಗಳ ಮೇಲೆ ಹದ್ದಿನ ಕಣ್ಣಿಡಬೇಕು, ರಾತ್ರಿ ಮತ್ತು ಹಗಲು ಪಾಳಿಗಳಲ್ಲಿ ಪೊಲೀಸರ ಬೀಟ್‌ ಹೆಚ್ಚಿಸಬೇಕು, ಚೆಕ್‌ಪೋಸ್ಟ್‌/ನಾಕಾಬಂದಿಗಳನ್ನು ಪರಿಣಾಮಕಾರಿಯಾಗಿ ಬಲಗೊಳಿಸಿ ತಪಾಸಣೆ ಮಾಡಬೇಕು ಎಂದು ಸಚಿವ ಪ್ರಭು ಬಿ. ಚವ್ಹಾಣ್‌ ಫೆ. 3ರಂದು ಆದೇಶ ಹೊರಡಿಸಿದ್ದರು.

ಜಿಲ್ಲಾಡಳಿತಗಳಿಗೆ ಗೊಂದಲ?
ಈಗಾಗಲೇ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಪ್ರಾಣಿದಯಾ ಸಂಘ ಅಸ್ತಿತ್ವದಲ್ಲಿದೆ. ಇದರಲ್ಲಿ ಎಸ್‌ಪಿ, ಪಶುಸಂಗೋಪನ ಇಲಾಖೆಯ ಉಪನಿರ್ದೇಶಕರು, ಪ್ರಾಣಿಗಳ ಸಂರಕ್ಷಣೆಯಲ್ಲಿ ತೊಡಗಿರುವ ಸರಕಾರೇತರ ಸಂಸ್ಥೆಗಳ ಪ್ರತಿನಿಧಿಗಳ ಸಹಿತ ಹಲವರು ಪದಾಧಿಕಾರಿ/ ಸದಸ್ಯರಾಗಿದ್ದಾರೆ. ಈಗಿನ ಆದೇಶದಿಂದಾಗಿ ಮತ್ತೂಂದು ಸಮಿತಿ ರಚಿಸಿದಂತೆ ಆಗಲಿದೆ ಎಂಬ ಗೊಂದಲ ಜಿಲ್ಲಾಡಳಿತಗಳಿಗೆ ಇದೆ. ಈ ಹಿನ್ನೆಲೆಯಲ್ಲಿ ಸಮಿತಿ ಸದ್ಯ ಅಸ್ತಿತ್ವಕ್ಕೆ ಬಂದಿಲ್ಲ ಎನ್ನಲಾಗಿದೆ.

ಸೂಕ್ತ ಕ್ರಮಕ್ಕೆ ಪತ್ರ
ಸಚಿವರ ಆದೇಶದ ಹಿನ್ನೆಲೆಯಲ್ಲಿ ಜಿಲ್ಲಾಡಳಿತದಿಂದ ಪತ್ರ ಬಂದಿದ್ದು, ಅದನ್ನು ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಕಳುಹಿಸಿ ಸೂಕ್ತ ಕ್ರಮ ಕೈಗೊಳ್ಳಲು ತಿಳಿಸಲಾಗಿದೆ ಎಂದು ಪಶುಸಂಗೋಪನ ಇಲಾಖೆಯ ಉಪನಿರ್ದೇಶಕ ಡಾ| ಪ್ರಸನ್ನ ಕುಮಾರ್‌ “ಉದಯವಾಣಿ’ಗೆ ತಿಳಿಸಿದ್ದಾರೆ.

ಅಗತ್ಯ ಕ್ರಮ
ಗೋವುಗಳ ಕಳವು, ಅಕ್ರಮ ಸಾಗಾಟ ತಡೆಗಟ್ಟಲು ಈಗಾಗಲೇ ಪೊಲೀಸ್‌ ಠಾಣಾ ಹಂತಗಳಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಚೆಕ್‌ಪೋಸ್ಟ್‌ಗಳನ್ನು ಕೂಡ ತೆರೆಯಲಾಗಿದೆ ಎಂದು ದ.ಕ. ಜಿಲ್ಲಾ ಎಸ್‌ಪಿ ಋಷಿಕೇಶ್‌ ಸೋನಾವಣೆ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next