Advertisement

ಪ್ರೀತಿ ಗೆದ್ದ ಜೋಡಿ ಬದುಕು ಗೆಲ್ಲಲಾಗಲಿಲ್ಲ

01:35 PM Dec 26, 2017 | Team Udayavani |

ಬೆಂಗಳೂರು: ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದ ಆ ಜೋಡಿ, ಈಚೆಗೆ ಎರಡು ತಿಂಗಳ ಹಿಂದಷ್ಟೇ ತಮ್ಮ ಮನೆಯವರನ್ನೆಲ್ಲಾ ಒಪ್ಪಿಸಿ ಸರ್ವರ ಸಮ್ಮತಿಯೊಂದಿಗೆ ಸಂತೋಷದಿಂದಲೇ ಸಪ್ತಪದಿ ತುಳಿದಿದ್ದರು. ಹಣಕಾಸಿನ ತೊಂದರೆಯೂ ಇರಲಿಲ್ಲ. ಆದರೂ ಆ ಜೋಡಿ ಆತ್ಮಹತ್ಯೆಗೆ ಶರಣಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

Advertisement

ಪ್ರೀತಿ ಗೆದ್ದ ಯುವ ಜೋಡಿಯೊಂದು ಬದುಕು ಗೆಲ್ಲಲಾಗದೆ ಆತ್ಮಹತ್ಯೆಗೆ ಶರಣಾದ ಆ ಘಟನೆ ನಡೆದಿರುವುದು ಕೆಂಗೇರಿಯ ಮೈಲಸಂದ್ರದಲ್ಲಿ. ದಾಂಪತ್ಯ ಜೀವನಕ್ಕೆ ಕಾಲಿಟ್ಟ ಎರಡೇ ತಿಂಗಳಲ್ಲಿ ಮಂಡ್ಯ ಜಿಲ್ಲೆಯ ಚನ್ನಸಂದ್ರ ಮೂಲದ ಪ್ರವೀಣ್‌ (24) ಹಾಗೂ ಪ್ರಿಯಾ (19) ಒಟ್ಟಿಗೆ ಭಾನುವಾರ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದು, ಕಾರಣ ತಿಳಿಯದೆ ಪ್ರಕರಣ ನಿಗೂಢವಾಗಿದೆ.

ಪರಸ್ಪರ ಪ್ರಿತೀಸಿದ್ದ ಪ್ರವೀಣ್‌ ಹಾಗೂ ಪ್ರಿಯಾ ಎರಡೂ ಕುಟುಂಬಗಳನ್ನು ಒಪ್ಪಿಸಿ ಮದುವೆ ಆಗಿದ್ದರು. ಎರಡು ತಿಂಗಳು ಅನ್ಯೋನ್ಯವಾಗಿ ಸಂಸಾರ ಸಹ ನಡೆಸಿದರು. ಆದರೆ, ಬದುಕು ಕಟ್ಟಿಕೊಳ್ಳುವ ಹಾದಿಯಲ್ಲಿ ಕೈಚೆಲ್ಲಿ ಸಾವನ್ನು ಅಪ್ಪಿಕೊಂಡಿದ್ದಾರೆ. ತಾವು ವಾಸವಿದ್ದ ಬಾಡಿಗೆ ಮನೆಯಲ್ಲಿ ಇಬ್ಬರೂ ನೇಣಿಗೆ ಶರಣಾಗಿದ್ದಾರೆ.

ಕೆಲ ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಉತ್ತರಹಳ್ಳಿಯಲ್ಲಿ ನೆಲೆಸಿದ್ದ ಪ್ರವೀಣ್‌, ಆರಂಭದಲ್ಲಿ ಪೀಣ್ಯ ಕೈಗಾರಿಕಾ ಪ್ರದೇಶದ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಇದೇ ವೇಳೆ ಅರ್ಧಕ್ಕೆ ವಿದ್ಯಾಭ್ಯಾಸ ಮೊಟಕುಗೊಳಿಸಿದ್ದ ಉತ್ತರಹಳ್ಳಿ ನಿವಾಸಿ ಪ್ರಿಯಾ ಪರಿಚಯವಾಗಿದ್ದು, ಇಬ್ಬರ ನಡುವೆ ಪ್ರೇಮಾಂಕುರವಾಗಿದೆ. ಆರಂಭದಲ್ಲಿ ಇಬ್ಬರ ಪೋಷಕರು ಮದುವೆಗೆ ನಿರಾಕರಿಸಿದ್ದರು.

ನಂತರ ಮಕ್ಕಳ ಹಠಕ್ಕೆ ಸೋತ ಎರಡು ಕುಟುಂಬದ ಸದಸ್ಯರು, ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಆತ್ಮಲಿಂಗೇಶ್ವರ ದೇವಾಲಯದಲ್ಲಿ ಮದುವೆ ಮಾಡಿಸಿದ್ದರು. ಮದುವೆ ಬಳಿಕ ಪ್ರವೀಣ್‌ ಕಾರ್ಖಾನೆಯ ಕೆಲಸ ಬಿಟ್ಟು ಗೋಬಿ ಮಂಚೂರಿ ಅಂಗಡಿ ಇಟ್ಟುಕೊಂಡು ಮೈಲಸಂದ್ರದ ಬಾಡಿಗೆ ಮನೆಯಲ್ಲಿ ಪತ್ನಿಯೊಂದಿಗೆ ವಾಸವಿದ್ದ.

Advertisement

ಅಷ್ಟೇ ಅಲ್ಲದೆ, ಪ್ರವೀಣ್‌ ತಂದೆ ವಾರದ ಹಿಂದೆ ಪುತ್ರನ ಮನೆಗೆ ಬಂದು ವ್ಯಾಪಾರಕ್ಕೆ ಒಂದಿಷ್ಟು ಹಣ ಕೊಟ್ಟು ಹೋಗಿದ್ದರು. ಇತ್ತ ಪ್ರಿಯಾ ಪೋಷಕರು ಸಹ ದಂಪತಿಗೆ ಆರ್ಥಿಕ ಸಹಾಯ ಮಾಡಿದ್ದರು. ಈ ಮಧ್ಯೆಯೂ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದರು.

ಗೊತ್ತಾಗಿದ್ದು ಹೇಗೆ?: ಭಾನುವಾರ ಬೆಳಗ್ಗೆ ಪ್ರವೀಣ್‌ ತಂದೆ ಮಗನಿಗೆ ಐದಾರು ಬಾರಿ ಫೋನ್‌ ಮಾಡಿದ್ದಾರೆ. ಆದರೆ, ಪ್ರವೀಣ್‌ ಕರೆ ಸ್ವೀಕರಿಸಿಲ್ಲ. ಗಾಬರಿಗೊಂಡ ಅವರು, ಕೂಡಲೇ ಪ್ರಿಯಾಳ ದೊಡ್ಡಮ್ಮನಿಗೆ ಕರೆ ಮಾಡಿ ವಿಷಯ ತಿಳಿಸಿದ್ದು, ದೊಡ್ಡಮ್ಮ, ಪ್ರಿಯಾ ತಾಯಿಗೆ ಹೇಳಿದ್ದಾರೆ. ಆತಂಕಗೊಂಡ ಪ್ರಿಯಾ ತಾಯಿ ಸಂಜೆ 7ಗಂಟೆ ಸುಮಾರಿಗೆ ಮೈಲಸಂದ್ರದ ಪುತ್ರಿಯ ಮನೆಗೆ ಹೋಗಿದ್ದಾರೆ.

ಸಾಕಷ್ಟು ಬಾರಿ ಬಾಗಿಲು ಬಡಿದರೂ ಪ್ರತಿಕ್ರಿಯೆ ಬಂದಿಲ್ಲ. ನಂತರ ಕಿಟಕಿಯಲ್ಲಿ ಇಣುಕಿ ನೋಡಿದಾಗ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಕೂಡಲೇ ಪೊಲೀಸರಿಗೆ ವಿಷಯ ತಿಳಿಸಿದ್ದು, ಸ್ಥಳಕ್ಕೆ ಬಂದ ಪೊಲೀಸರು ದಂಪತಿ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಹಣದ ಸಮಸ್ಯೆ ಇರಲಿಲ್ಲ: ಮದುವೆಯಾದ ದಿನದಿಂದ ನಮ್ಮ ಮಕ್ಕಳು (ಪ್ರವೀಣ್‌ ಮತ್ತು ಪ್ರಿಯಾ) ಬಹಳ ಅನ್ಯೋನ್ಯವಾಗಿಯೇ ಇದ್ದರು. ಅವರಿಗೆ ಯಾವುದೇ ಆರ್ಥಿಕ ಸಮಸ್ಯೆ ಇರಲಿಲ್ಲ. ನಮಗೆ ಯಾರ ಮೇಲೂ ಸಂದೇಹವಿಲ್ಲ. ಮಕ್ಕಳ ಇಚ್ಛೆಗೆ ಅನುಗುಣವಾಗಿ ಮದುವೆ ಕೂಡ ಮಾಡಿಸಿದ್ದೆವು.

ಇದೀಗ ಆತ್ಮಹತ್ಯೆ ಮಾಡಿಕೊಂಡಿರುವುದು ಎರಡು ಕುಟುಂಬದವರಿಗೂ ಆಘಾತ ತಂದಿದೆ ಎಂದು ಪ್ರವೀಣ್‌ ಮತ್ತು ಪ್ರಿಯಾ ಪೋಷಕರು ಹೇಳಿದ್ದಾರೆ. ಹೀಗಾಗಿ ದಂಪತಿ ಮೊಬೈಲ್‌ ಕರೆಗಳ ವಿವರ ಪಡೆದು ತನಿಖೆ ನಡೆಸಲಾಗುವುದು. ಅವರ ಮೊಬೈಲ್‌ ಕರೆಗಳನ್ನು ಆಧರಿಸಿ  ತನಿಖೆ ನಡೆಸಿದರೆ ನಿಖರ ಕಾರಣ ತಿಳಿಯುವ ಸಾಧ್ಯತೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next