Advertisement
ಋಷಿಮುನಿಗಳು ಯಾಗಯಜ್ಞಗಳನ್ನು ಪರ್ಣ ಕುಟಿಗಳಲ್ಲಿ ನಡೆಸುತ್ತಿದ್ದರು ಎನ್ನುತ್ತವೆ ಪುರಾಣಗಳು. ಅವುಗಳನ್ನು ನೆನಪಿಸುವಂತಿ ರುವ ಕುಟೀರಗಳ ಒಳಗೆ ಸುಂದರ ಮಂಟಪ ವಿದ್ದು, ಪೂಜಾವಿಧಿಗಳು ಇಲ್ಲಿ ನೆರವೇರಲಿವೆ.
ಬಿದಿರು ಹಾಗೂ ಕಂಗಿನ ಸಲಾಕೆಗಳಿಂದ ನಿರ್ಮಾಣಗೊಂಡಿರುವ ಪರ್ಣಕುಟೀರದ ಮೇಲ್ಛಾವಣಿಗೆ ಮುಳಿಹುಲ್ಲನ್ನು ಆಚ್ಛಾದಿಸ ಲಾಗಿದೆ. ಗೋಡೆಗಳಲ್ಲಿ ಸುಂದರ ರೇಖಾಚಿತ್ರ ಗಳು ಕಂಗೊಳಿಸುತ್ತಿವೆ. 70 ಅಡಿ ಉದ್ದ, 29 ಅಡಿ ಅಗಲವಿರುವ ಪರ್ಣಕುಟಿ ಒಟ್ಟು 2,030 ಚದರಡಿ ವಿಸ್ತೀರ್ಣ ಹೊಂದಿದೆ. ಪೂರ್ವಾಭಿಮುಖೀ ಕುಟೀರದ ಪ್ರವೇಶ ದ್ವಾರದ ಎರಡೂ ಬದಿಗಳಲ್ಲಿ ಬೋಧಿಗೆಗಳಿವೆ. ಕೊಕ್ಕಡ ಹಾಗೂ ಧರ್ಮಸ್ಥಳ ಭಾಗಗಳಿಂದ ಮುಳಿಹುಲ್ಲನ್ನು ಸಂಗ್ರಹಿಸಲಾಗಿದೆ. ಒಳಗಿನ ಮಂಟಪದಲ್ಲಿ 3 ಹಂತಗಳಿದ್ದು, 21 ಅಡಿ ಎತ್ತರವಿದೆ. ಅಂತರ ಮಾಡು ಮಾದರಿಯಲ್ಲಿ ಇದರ ರಚನೆಯಾಗಿರುವುದು ವಿಶೇಷ.
Related Articles
ಅದ್ದೂರಿಯ ಉತ್ಸವಕ್ಕೆ ಧರ್ಮಸ್ಥಳ ಸಿಂಗಾರ ಗೊಂಡಿದೆ. ಉಜಿರೆ ಪೇಟೆಯಿಂದಲೇ ಸ್ವಾಗತ ಕಮಾನು, ವಿಶೇಷ ಅಲಂಕಾರಗಳು ಗಮನ ಸೆಳೆ ಯುತ್ತಿವೆ. ಕ್ಷೇತ್ರವನ್ನು ಸಂಪರ್ಕಿಸುವ ರಸ್ತೆಗಳಲ್ಲಿ 16 ಸ್ವಾಗತ ಗೋಪುರಗಳು ನಿರ್ಮಾಣ ಗೊಂಡಿವೆ. ಆಕರ್ಷಣೆಯಲ್ಲಿ ಒಂದನ್ನೊಂದು ಮೀರಿಸುವಂತಿದೆ ಇವುಗಳ ವಿನ್ಯಾಸ.
Advertisement
ಧರ್ಮಸ್ಥಳ ನೇತ್ರಾವತಿ ಸೇತುವೆ ಬಳಿ ತ್ರಿನೇತ್ರ ದ್ವಾರ, ಶಾಂತಿವನದ ಬಳಿ ಬ್ರಾಹ್ಮಿ ದ್ವಾರ, ಕೊಕ್ಕಡ ಭಾಗದಿಂದ ಸಂಪರ್ಕಿಸುವ ಕಲ್ಲೇರಿಯಲ್ಲಿ ಯಕ್ಷದ್ವಾರ, ಪೆರಿಯಶಾಂತಿ ಯಲ್ಲಿ ಅಮರಾವತಿ ದ್ವಾರ, ಬಾಹುಬಲಿ ಬೆಟ್ಟದ ತಿರುವಿನಲ್ಲಿ ಸುಮೇದು ದ್ವಾರ, ಮಂಜುನಾಥಸ್ವಾಮಿ ದೇಗುಲದ ಬಳಿ ನಂದೀಶ್ವರ ದ್ವಾರ, ಮಹೋತ್ಸವದ ಬಳಿ ಬೋಧಿ ದ್ವಾರ, ಪಂಚಮಹಾವೈಭವದ ಸಭಾಂಗಣದ ಬಳಿ ಅಧೀಶ್ವರ ದ್ವಾರ ಹಾಗೂ ಉಜಿರೆ ಕಾಲೇಜು ಸಮೀಪ ಶ್ರೀ ಜನಾರ್ದನ ಸ್ವಾಮಿ ದ್ವಾರ – ಹೀಗೆ ಒಂದೊಂದು ದ್ವಾರಕ್ಕೂ ವಿಶಿಷ್ಟ ಹೆಸರು.
ಕ್ಷೇತ್ರದ ಎಲ್ಲ ಬೀದಿಗಳಲ್ಲೂ ವಿದ್ಯುತ್ ದೀಪಾಲಂಕಾರ ಕಂಗೊಳಿಸುತ್ತಿದೆ. ಉಜಿರೆ ಯಿಂದ ನೇತ್ರಾವತಿ ಸ್ನಾನ ಘಟ್ಟದ ವರೆಗಿನ 9 ಕಿ.ಮೀ. ದೂರದ ರಸ್ತೆಯ ಇಕ್ಕೆಲಗಳಲ್ಲಿ ಬಾಹುಬಲಿಯ ಜೀವನ ಸಾರುವ ಚಿತ್ರ, ಬ್ಯಾನರ್ ಅಳವಡಿಸಲಾಗುತ್ತಿದೆ.
ಬೆಟ್ಟದ ದಾರಿಯಲ್ಲಿ 3 ಅಂತಸ್ತಿನ ಬಟ್ಟೆಯ ಡೂಮ್‌ಗಳ ಅಲಂಕಾರ, ಬಣ್ಣದ ಕೊಡೆಗಳು, ತಿರುಪತಿ ಮಾದರಿಯ ಕೊಡೆಗಳು, ವಿವಿಧ ಕಲಾಕೃತಿಗಳ ಶೃಂಗಾರ ವಿಶೇಷವಾಗಿದೆ. ರತ್ನಗಿರಿ ಬೆಟ್ಟಕ್ಕೆ ಹೋಗುವ ಮೆಟ್ಟಿಲುಗಳಿಗೆ 6 ಕಡೆಗಳಲ್ಲಿ ಸ್ವಾಗತ ಗೋಪುರಗಳು, ಬಾಹುಬಲಿಯ ಕುರಿತು ನುಡಿಮುತ್ತುಗಳನ್ನು ಅಳವಡಿಸಲಾಗಿದೆ.
ಪ್ರತ್ಯೇಕ ಅನ್ನಛತ್ರಮಹಾಮಸ್ತಕಾಭಿಷೇಕಕ್ಕೆ ಆಗಮಿಸುವ ಭಕ್ತರಿಗೆ ಅನ್ನಪ್ರಸಾದ ವಿತರಣೆ ಸುಲಲಿತವಾಗಿ ನಡೆಯಬೇಕು ಎಂಬ ಉದ್ದೇಶದಿಂದ ಪ್ರತ್ಯೇಕ ಅನ್ನಛತ್ರ ನಿರ್ಮಿಸಲಾಗಿದೆ. ಕ್ಷೇತ್ರದ ಅನ್ನಪೂರ್ಣ ಎಂದಿನಂತೆ ಕಾರ್ಯಾಚರಿಸಲಿದ್ದು, ನೂತನ ಅನ್ನಛತ್ರದಲ್ಲೂ ಊಟದ ವ್ಯವಸ್ಥೆ ಇರುತ್ತದೆ. 19,200 ಚದರಡಿ ವಿಸ್ತೀರ್ಣ ಹಾಗೂ 9,600 ಚದರಡಿ ವಿಸ್ತೀರ್ಣ ಹೊಂದಿರುವ ಎರಡು ಅಂಗಣಗಳು ಸಿದ್ಧಗೊಂಡಿವೆ. ಬೇಯಿಸಲು 9 ಬೃಹತ್ ಒಲೆಗಳು, ಉಗಿ ವ್ಯವಸ್ಥೆ, ಗ್ಯಾಸ್ ಒಲೆ, ಅಡುಗೆ ಇರಿಸಲು ಕೊಠಡಿ, ದಾಸ್ತಾನು ಕೊಠಡಿ ಅಚ್ಚುಕಟ್ಟಾಗಿವೆ. ಎಲ್ಲೆಡೆ ಸ್ವತ್ಛತೆಗೆ ಅಗ್ರ ಗಮನ ನೀಡಲಾಗಿದೆ. ಉದಯಿಸದ ಕೇವಲ ಜ್ಞಾನ
ಬಾಹುಬಲಿಯು ಕಾಯೋತ್ಸರ್ಗ ಭಂಗಿಯಲ್ಲಿ ತಪಸ್ಸನ್ನಾಚರಿಸುತ್ತ ನಿಂತು ವರ್ಷವೊಂದು ಕಳೆಯಿತು.
ನಿಶ್ಚಲನಾಗಿ ನಿಂತ ಆ ಪುಣ್ಯಪುರುಷನ ಪಾದಮೂಲಗಳಲ್ಲಿ ಲತೆಗಳು ಮೊಳೆತು ಬೆಳೆದವು. ಅವನ ಸದೃಢವಾದ ಕಾಲುಗಳನ್ನು ಅವು ವೃಕ್ಷಗಳೆಂದು ಬಗೆದು ಹಬ್ಬಿದವು. ಓಲಗ-ಅಂತಃಪುರದಲ್ಲಿ ನಡೆದಾಡಬೇಕಿದ್ದ ಮೃದು ಪಾದಪದ್ಮಗಳನ್ನು ವಲ್ಮೀಕಗಳು ಆವರಿಸಿದವು. ಬಾಹುಬಲಿಯ ತಪೋಜ್ವಾಲೆಯೋ ಎಂಬಂತೆ ಆ ಹುತ್ತಗಳೊಳಗಿನಿಂದ ವಿಷಸರ್ಪಗಳು ಹೆಡೆಗಳನ್ನು ಹೊರಚಾಚಿ ಫೂತ್ಕರಿಸಿದವು. ಬಿಲ್ಲಿನ ಹೆದೆಯನ್ನೇರಿಸಿ ಕಪ್ಪಗಾಗಿದ್ದ ಅವನ ಬಾಹು ಮೂಲಗಳನ್ನು ಸರ್ಪಗಳು ಬಳಸಿ ಇನ್ನಷ್ಟು ಕಪ್ಪಾಗಿಸಿದವು. ನೀಳವಾಗಿ ಬೆಳೆದಿದ್ದ ಜಡೆಗೆ ಲತೆಗಳು ಹೆಣಿಕೆ ಹಾಕಿದವು. ಆಗೀಗೊಮ್ಮೆ ಖೇಚರಿಯರು ಬಂದು ಮೈಗಡರಿದ್ದ ಬಳ್ಳಿಗಳ ತೊಡರನ್ನು ಬಿಡಿಸುತ್ತಿದ್ದರು. ಇಂತಹ ಉಗ್ರ ತಪಸ್ಸಿನಲ್ಲಿ ತೊಡಗಿದ್ದರೂ ಬಾಹುಬಲಿಗೆ ಕೇವಲಜ್ಞಾನ ಒದಗಲಿಲ್ಲ. ಅದು ಅವನಣ್ಣ ಚಕ್ರವರ್ತಿ ಭರತನಿಗೆ ವಿಸ್ಮಯವನ್ನುಂಟು ಮಾಡಿತು. ಆತ ಆದಿತೀರ್ಥಂಕರನ ಬಳಿಗೆ ಧಾವಿಸಿ ಕಾರಣವನ್ನು ಕೇಳಿದನು. “ನಿನ್ನ ನೆಲದಲ್ಲಿ ನಿಂತು ತಪಸ್ಸು ಮಾಡುತ್ತಿರುವೆನಲ್ಲ’ ಎಂಬ ಮನಃಕ್ಲೇಶ ಬಾಹುಬಲಿಯ ಮನಸ್ಸಿನಲ್ಲಿ ಕೊರೆಯುತ್ತಿದೆ’ ಎಂದು ಹೇಳಿ, ಬಾಹುಬಲಿಯ ಪಾದಪೂಜೆ ಮಾಡು ಎಂದು ಮಾರ್ಗದರ್ಶನ ಮಾಡಿದರವರು. -ಚಾರು