ಬೆಂಗಳೂರು: “ಟಿಪ್ಪು ಜಯಂತಿ ಸೇರಿ ಸರ್ಕಾರದ ವತಿಯಿಂದ ಆಚರಿಸಲಾಗುವ ಜಯಂತಿಗಳಿಗೆ ಸಾರ್ವಜನಿಕರ ತೆರಿಗೆ ಹಣವನ್ನು ಹೇಗೆ ಖರ್ಚು ಮಾಡಲಾಗುತ್ತದೆಂಬ ವಿವರಣೆ ನೀಡುವಂತೆ ರಾಜ್ಯಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ.
ನ.10ರಂದು ಟಿಪ್ಪುಜಯಂತಿ ಆಚರಣೆ ಮಾಡುವಂತೆ ರಾಜ್ಯಸರ್ಕಾರ ಹೊರಡಿಸಿರುವ ಸುತ್ತೋಲೆ ರದ್ದು ಕೋರಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಶುಕ್ರವಾರ ನಡೆಸಿದ ಹಂಗಾಮಿ ಮುಖ್ಯನ್ಯಾಯಮೂರ್ತಿ ಎಚ್.ಜಿ.ರಮೇಶ್ ಹಾಗೂ ನ್ಯಾ. ಪಿ.ಎಸ್. ದಿನೇಶ್‌ಕುಮಾರ್ ಅವರಿದ್ದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿತು.
ಅರ್ಜಿದಾರರು ಎತ್ತಿರುವ ಸಾರ್ವಜನಿಕ ತೆರಿಗೆ ಹಣವನ್ನು ಜಯಂತಿಗಳಿಗೆ ವಿನಿಯೋಗಿಸಲಾಗುತ್ತಿದೆಂಬ ಆಕ್ಷೇಪ ಸಂಬಂಧ ಪ್ರತಿಕ್ರಿಯಿಸಿದ ನ್ಯಾಯಪೀಠ, ಸರ್ಕಾರದ ವತಿಯಿಂದ ಆಚರಿಸಲಾಗುತ್ತಿರುವ ಜಯಂತಿಗಳಿಗೆ ಬಜೆಟ್‌ನಲ್ಲಿ ಪ್ರತ್ಯೇಕ ಅನುದಾನ ಮೀಸಲಿಡಲಾಗಿದೆಯೇ? ತೆರಿಗೆ ಹಣವನ್ನು ಜಯಂತಿಗಳಿಗೆ ಯಾವ ರೀತಿ ಖರ್ಚು ಮಾಡಲಾಗುತ್ತದೆ. ಟಿಪ್ಪು ಜಯಂತಿ ಆಚರಣೆ ಆದೇಶಕ್ಕೆ ಅನುಮೋದನೆ ಪಡೆದುಕೊಳ್ಳಲಾಗಿದೆ ಎಂಬ ಮಾಹಿತಿಯನ್ನು ಮುಂದಿನ ವಿಚಾರಣೆ ವೇಳೆ ನೀಡುವಂತೆ ಅಡ್ವೋಕೇಟ್ ಜನರಲ್ ಮಧೂಸೂದನ್ ಆರ್.ನಾಯಕ್‌ಗೆ ನಿರ್ದೇಶಿಸಿ ವಿಚಾರಣೆ ಯನ್ನು ನ.7ಕ್ಕೆ ವಿಚಾರಣೆ ಮುಂದೂಡಿತು. ಇದಕ್ಕೂ ಮುನ್ನ ನಡೆದ ವಿಚಾರಣೆ ವೇಳೆ ಅರ್ಜಿದಾರ ಕೊಡಗಿನ ಕೆ.ಪಿ.ಮಂಜುನಾಥ್ ಪರ ವಕೀಲರು ವಾದಿಸಿ, ಟಿಪ್ಪು ಸುಲ್ತಾನ್ ಧಾರ್ಮಿಕ ಮತಾಂಧನಾಗಿದ್ದು ತನ್ನ ಆಡಳಿತಾವಧಿಯಲ್ಲಿ ಸುಮಾರು 70 ಸಾವಿರ ಕೊಡವರನ್ನು ಕೊಂದಿದ್ದಾನೆ. ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರ ಗೊಳಿಸಿರುವ ಬಗ್ಗೆ ದಾಖಲೆಗಳಿವೆ. ಹೀಗಿದ್ದರೂ ರಾಜ್ಯಸರ್ಕಾರ ಒಂದು ವರ್ಗದ ಓಲೈಕೆಗಾಗಿ ಟಿಪ್ಪು ಜಯಂತಿ ಆಚರಣೆಗೆ ಆದೇಶ ಹೊರಡಿಸಿದೆ.
ಜೊತೆಗೆ 2015ರಲ್ಲಿ ಕೊಡಗಿನಲ್ಲಿ ಟಿಪ್ಪುಜಯಂತಿ ಆಚರಣೆ ವೇಳೆ ಒಬ್ಬರ ಕೊಲೆಯಾಗಿದೆ. ಹೀಗಿದ್ದರೂ ರಾಜಕೀಯ ಪ್ರೇರಿತವಾಗಿ ಸರ್ಕಾರಿ ಕಚೇರಿಗಳಲ್ಲಿ ಟಿಪ್ಪು ಜಯಂತಿ ಆಚರಿಸುವಂತೆ ಆದೇಶ ಹೊರಡಿಸಿದೆ. ಪರಿಣಾಮ ಕೋಮು ಸಾಮರಸ್ಯಕ್ಕೆ ಧಕ್ಕೆಯಾಗಲಿದೆ ಎಂದು ತಿಳಿಸಿದರು ಸಾರ್ವಜನಿಕ ತೆರಿಗೆ ಹಣ ವಿನಿಯೋಗಿಸಿ ಟಿಪ್ಪು ಜಯಂತಿ ಆಚರಣೆಗೆ ಅ.24ರಂದು ಹೊರಡಿಸಿರುವ ಆದೇಶ ರದ್ದುಪಡಿಸಬೇಕು. ಹಾಗೂ ಕೊಡಗು ಜಿಲ್ಲೆಯಲ್ಲಿ ಟಿಪ್ಪು ಜಯಂತಿ ಆಚರಣೆ ನಿರ್ಬಂಧಿಸುವಂತೆ ನ್ಯಾಯ ಪೀಠಕ್ಕೆ ಕೋರಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಎಜಿ ಮಧುಸೂಧನ್ ಆರ್.ನಾಯಕ್, ಇದೊಂದು ಪ್ರಚಾರ ಪ್ರೇರಿತ ಪಿಐಎಲ್ ಆಗಿದೆ. ಪ್ರತಿ ಬಾರಿ ಟಿಪ್ಪು ಜಯಂತಿ ಆಚರಣೆ ವೇಳೆ ಪ್ರಚಾರಕ್ಕಾಗಿ ಕೆಲವರು ಅರ್ಜಿ ಸಲ್ಲಿಸುತ್ತಾರೆ. ಕಳೆದ ವರ್ಷವೂ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ನಡೆಸಿದ
ನ್ಯಾಯಾಲಯ ಇದು ಸರ್ಕಾರದ ಆಡಳಿತಾತ್ಮಕ ವಿಚಾರ ಎಂದು ಹೇಳಿದೆ.
ಹೀಗಾಗಿ ಇಂತಹ ಅರ್ಜಿಗಳನ್ನು ಮಾನ್ಯ ಮಾಡಬಾರದು ನ್ಯಾಯಪೀಠಕ್ಕೆ ಕೋರಿದರು. ನ್ಯಾಯಪೀಠ, ನ.7ಕ್ಕೆ ವಿಚಾರಣೆ ಮುಂದೂಡಿತು.