“ಆ್ಯಕ್ಸಿಡೆಂಟ್’ ಚಿತ್ರದ ಮೂಲಕ ಬಂದು ಆ ನಂತರ “ಜಿಗರ್ ಥಂಡಾ’ ಚಿತ್ರ ನಿರ್ಮಿಸಿ, “ಹೆಬ್ಬುಲಿ’ಯಂತಹ ಯಶಸ್ವಿ ಚಿತ್ರ ನಿರ್ಮಾಣ ಮಾಡಿದ ಎಸ್‌ಆರ್‌ವಿ ಪ್ರೊಡಕ್ಷನ್ಸ್‌ನ ರಘುನಾಥ್ ಈಗೇನು ಮಾಡುತ್ತಿದ್ದಾರೆ, ಮುಂದೆ ಯಾವ ಸಿನಿಮಾ ಮಾಡುತ್ತಾರೆಂಬ ಪ್ರಶ್ನೆ ಸಹಜವೇ. ಸದ್ಯ ರಘುನಾಥ್ ಅವರು ಹೊಸ ಸಿನಿಮಾ ಮಾಡುವ ಬಗ್ಗೆ ಆಲೋಚಿಸುತ್ತಿದ್ದಾರೆ. ಹೌದು, ರಘುನಾಥ್ ಅವರು ಎರಡು ಹೊಸ ಸಿನಿಮಾಗಳನ್ನು ನಿರ್ಮಿಸುವ ಉತ್ಸಾಹದಲ್ಲಿದ್ದಾರೆ. ಹೊಸ ಸಿನಿಮಾಗಳು ಮುಂದಿನ ವರ್ಷ ಆರಂಭವಾಗುವ ಸಾಧ್ಯತೆಗಳಿವೆ.
“ನನಗೆ ಕೇವಲ ಸ್ಟಾರ್‌ಗಳ ಸಿನಿಮಾ ಮಾಡಬೇಕೆಂಬ ಆಸೆಯಿಲ್ಲ. ಹೊಸತದಿಂದ ಕೂಡಿರುವ ಹೊಸಬರ ಸಿನಿಮಾ ಮಾಡಲು ಸಿದ್ಧ. ಆದರೆ ಕತೆ ಇಷ್ಟವಾಗಬೇಕು. ಸಾಕಷ್ಟು ಮಂದಿ ಬಂದು ಕಥೆ ಹೇಳುತ್ತಾರೆ. ನನಗೆ ಒಳ್ಳೆಯ ಕಥೆಗಳನ್ನು ಸಿನಿಮಾ ಮಾಡುವ ಆಸೆ. ಆದರೆ, ಕೆಲವರಿಗೆ ತಾಳ್ಮೆ ಕಡಿಮೆ. ಇವತ್ತು ಕಥೆ ಹೇಳಿ, ನಾಳೇನೇ ಸಿನಿಮಾ ಕೆಲಸ ಆರಂಭಿಸಿ ಎಂದು ಕೂರುತ್ತಾರೆ. ಕಾಸು ಹಾಕುವ ನಿರ್ಮಾಪಕನಿಗೆ ಒಂದಷ್ಟು ಯೋಚಿಸಲು ಸಮಯ ಬೇಕಲ್ವಾ’ ಎನ್ನುವುದು ಅವರ ಮಾತು.
ರಘುನಾಥ್ ಅವರು ಸಿನಿಮಾ ಹೊರತಾಗಿ ತಮ್ಮದೇ ಬಿಝಿನೆಸ್‌ನಲ್ಲಿ ಬಿಝಿಯಾಗಿದ್ದಾರೆ. ಅದು ಆಹಾರೋದ್ಯಮ. ಓಗರ ಹೆಸರಿನಲ್ಲಿ ಆಹಾರೋತ್ಪನ್ನ ಕ್ಷೇತ್ರಕ್ಕೆ ಕಾಲಿಟ್ಟಿರುವ ರಘುನಾಥ್ ಅವರು ಸದ್ಯ, ಅದರಲ್ಲೂ ಬಿಝಿಯಾಗಿದ್ದಾರೆ. ಇದು ಕೂಡಾ ಅವರ ಡ್ರೀಮ್ ಪ್ರಾಜೆಕ್ಟ್. “ನನಗೆ ಸಿನಿಮಾ ಜೊತೆಗೆ ಬಿಝಿನೆಸ್‌ನಲ್ಲೂ ಆಸಕ್ತಿ ಇದೆ. ಆಹೋರೋದ್ಯಮಕ್ಕೆ ಕಾಲಿಟ್ಟಿದ್ದೇವೆ. ಓಗರ ಎಂಬ ಹೆಸರಿನಲ್ಲಿ ಜನರಿಗೆ ಶುಚಿ-ರುಚಿಯಾದ ಕ್ಯಾಟರಿಂಗ್ ವ್ಯವಸ್ಥೆ ಮಾಡೋದು ನಮ್ಮ ಉದ್ದೇಶ. ಇದು ತುಂಬಾ ದೊಡ್ಡ ಪ್ರಾಜೆಕ್ಟ್.
ಈ ಪ್ರಾಜೆಕ್ಟ್‌ನಲ್ಲಿ ನಮ್ಮ ಸಾಕಷ್ಟು ಮಂದಿ ಸ್ನೇಹಿತರು ಪ್ರೋತ್ಸಾಹ ನೀಡುತ್ತಿದ್ದಾರೆ. ಅದರಲ್ಲೂ ಸತ್ಯನಾರಾಯಣ್ ಅವರು ನಮಗೆ ದೊಡ್ಡ ಪ್ರೇರಣೆ. ಸಂಸ್ಥೆಯ ಪ್ರತಿ ಕೆಲಸಗಳಿಗೂ ಅವರು ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಅವರ ಬೆಂಬಲವನ್ನು ಮರೆಯುವಂತಿಲ್ಲ’ ಎನ್ನುತ್ತಾರೆ ರಘುನಾಥ್. ಮುಂದಿನ ದಿನಗಳಲ್ಲಿ ಇನ್ನಷ್ಟು ಚಿತ್ರಗಳನ್ನು ನಿರ್ಮಿಸುವ ಕುರಿತು ಹೇಳುವ ಅವರು, “ನನಗೆ ಸಿನಿಮಾ ಅಂದರೆ ಪ್ರೀತಿ. ಯಾವ ಕಾರಣಕ್ಕೂ ಈ ಕ್ಷೇತ್ರ ಬಿಟ್ಟು ಹೋಗುವ ಮಾತೇ ಇಲ್ಲ. ನಾನು ಪ್ರತಿ ಸಿನಿಮಾವನ್ನು ಪ್ರೀತಿಯಿಂದ ಮಾಡುತ್ತೇನೆ.
ಒಂದು ಸಿನಿಮಾ ನಿರ್ದೇಶಕನ ಕಲ್ಪನೆ. ಅದು ಸಾಕಾರಗೊಳ್ಳಲು ಏನು ಬೇಕೋ ಅದನ್ನು ನೀಡುತ್ತಾ ಬಂದಿದ್ದೇನೆ. ಸಿನಿಮಾವನ್ನು ಜನರಿಗೆ ತಲುಪಿಸೋದು ಕೂಡಾ ನಮ್ಮ ಕರ್ತವ್ಯ. ಹಾಗಾಗಿ, ನಮ್ಮ ಪ್ರೊಡಕ್ಷನ್ಸ್‌ನ ಸಿನಿಮಾ ಪಬ್ಲಿಸಿಟಿಯಲ್ಲಿ ಯಾವತ್ತೂ ಹಿಂದೆ ಬಿದ್ದಿಲ್ಲ’ ಎನ್ನುತ್ತಾರೆ ರಘುನಾಥ್. ಇನ್ನು, “ಹೆಬ್ಬುಲಿ’ ಚಿತ್ರದ ಬಗ್ಗೆ ಮಾತನಾಡುವ ಅವರು, “ಆ ಚಿತ್ರದಿಂದ ನಾನು ಖುಷಿಯಾಗಿದ್ದೇನೆ. ಒಳ್ಳೆಯ ಹೆಸರು ತಂದುಕೊಟ್ಟಿತು. ಅದಕ್ಕಿಂತ ಹೆಚ್ಚಾಗಿ ಸುದೀಪ್‌ರಂತಹ ಒಬ್ಬ ಒಳ್ಳೆಯ ಸ್ನೇಹಿತ, ಹಿತೈಷಿಯನ್ನು ಕೊಟ್ಟಿತು. ಸುದೀಪ್ ಅವರು ಪ್ರತಿ ಹಂತದಲ್ಲೂ ನನಗೆ ಬೆಂಬಲವಾಗಿದ್ದಾರೆ.
ಅವರಂತಹ ಹಿತೈಷಿ ಸಿಕ್ಕಿದ್ದು ಈ ಚಿತ್ರರಂಗದಿಂದಲೇ. ಮುಂದೆಯೂ ಅವರ ಜೊತೆ ಸಿನಿಮಾ ಮಾಡುತ್ತೇನೆ’ ಎಂದು ಖುಷಿಯಿಂದ ಮಾತನಾಡುತ್ತಾರೆ. ಚಿತ್ರರಂಗದ ಸೋಲು-ಗೆಲುವಿನ ಬಗ್ಗೆ ಮಾತನಾಡುವ ರಘುನಾಥ್, “ಚಿತ್ರರಂಗದಲ್ಲಿ ಸೋಲು-ಗೆಲುವು ಸಹಜ. ಆದರೆ, ಸಿನಿಮಾ ಸೋತರೆ ಅಂತಿಮವಾಗಿ ಏಕಾಂಗಿಯಾಗಿ ನಿಲ್ಲುವವ ನಿರ್ಮಾಪಕ ಒಬ್ಬನೇ. ಆತ ಕಷ್ಟದಲ್ಲಿದ್ದಾಗ ಸಹಾಯಕ್ಕೆ ಬರುವಂತಹ ಕಾರ್ಪೋರೇಟ್ ಶೈಲಿಯ ವ್ಯವಸ್ಥೆ ನಮ್ಮಲ್ಲಿ ಬರಬೇಕು’ ಎನ್ನುತ್ತಾರೆ ರಘುನಾಥ್.