Advertisement

ಕೊರೊನಾ ಭೀತಿ; ಕೆಎಸ್ಸಾರ್ಟಿಸಿ ಆದಾಯಕ್ಕೆ ಭಾರೀ ಹೊಡೆತ

09:36 AM Mar 19, 2020 | mahesh |

ಮಹಾನಗರ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಕರಾವಳಿ ಭಾಗದಲ್ಲಿ ವರ್ಷದಿಂದೀಚೆಗೆ ಸರಮಾಲೆಯಂತೆ ಸಮಸ್ಯೆ ಎದುರಾಗುತ್ತಿದ್ದು, ಆ ಮೂಲಕ ಆದಾಯಕ್ಕೆ ಬಹು ದೊಡ್ಡ ಹೊಡೆತವುಂಟು ಮಾಡುತ್ತಿವೆ. ಇದೀಗ ಕೊರೊನಾ ಭೀತಿಯಿಂದಾಗಿ ನಿಗಮವನ್ನು ಮತ್ತಷ್ಟು ನಷ್ಟದ ಸುಳಿಗೆ ಸಿಲುಕಿಸಿದೆ.

Advertisement

ಎಪ್ರಿಲ್‌ ತಿಂಗಳಿನಿಂದ ಜೂನ್‌ ಮತ್ತು ಅಕ್ಟೋಬರ್‌ ತಿಂಗಳಲ್ಲಿ ಹಬ್ಬ, ರಜಾ ದಿನಗಳಿರುವ ಕಾರಣ ಹೆಚ್ಚಿನ ಪ್ರಯಾಣಿಕರು ಪ್ರಯಾಣಿಸುವ ತಿಂಗಳು ಎಂಬ ನಿಟ್ಟಿನಲ್ಲಿ “ಸಾರಿಗೆ ಆದಾಯ ಕ್ರೋಢಿ ಕರಿಸುವ ತಿಂಗಳು’ ಎಂದು ಕೆಎಸ್ಸಾರ್ಟಿಸಿ ಘೋಷಿಸಿದೆ. ಈ ಸಂದರ್ಭ ಪ್ರಯಾಣಿಕರಿಗೆ ಸಮರ್ಪಕ ಸಾರಿಗೆ ಸೌಲಭ್ಯ ಕಲ್ಪಿಸಿ ಗರಿಷ್ಠ ಆದಾಯ ಗಳಿಸುವುದು ಸಂಸ್ಥೆಯ ಉದ್ದೇಶವಾಗಿದೆ. ಆದರೆ, ಇದೀಗ ಕೊರೊನಾ ಭೀತಿಯಿಂದ ಕೆಎಸ್ಸಾರ್ಟಿಸಿ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ.

ಸಾಮಾನ್ಯ ದಿನಗಳಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ಪ್ರತೀ ದಿನ ಸರಾಸರಿ 3,000ಕ್ಕೂ ಹೆಚ್ಚಿನ ಮಂದಿ ಪ್ರಯಾಣಿಸುತ್ತಿದ್ದರೆ ವೀಕೆಂಡ್‌ಗಳಲ್ಲಿ ಈ ಸಂಖ್ಯೆ ಮತ್ತಷ್ಟು ಹೆಚ್ಚಳವಾಗುತ್ತಿತ್ತು. ಆದರೆ ಸದ್ಯ ಪ್ರಯಾಣಿಕರ ಸಂಖ್ಯೆ 1,500ಕ್ಕೆ ಇಳಿದಿದೆ. ಅದೇ ರೀತಿ ಮೈಸೂರು ಮಾರ್ಗವಾಗಿ ಈ ಹಿಂದೆ ಸುಮಾರು 2,000 ಪ್ರಯಾಣಿಕರು ಸಂಚರಿಸುತ್ತಿದ್ದು, ಸದ್ಯ 1,000 ಮಂದಿ ಪ್ರಯಾಣಿಕರೂ ಸಂಚರಿಸುತ್ತಿಲ್ಲ ಎನ್ನುತ್ತಾರೆ ಕೆಎಸ್ಸಾರ್ಟಿಸಿ ಅಧಿಕಾರಿಗಳು.

ಶೇ. 40ರಷ್ಟು ಕಡಿಮೆ
ಕೊರೊನಾ ಭೀತಿ ಇರುವ ಕಾರಣ ಮಂಗಳೂರು ಕೆಎಸ್ಸಾರ್ಟಿಸಿ ವಿಭಾಗದಲ್ಲಿ ಒಂದು ವಾರದಲ್ಲಿ ಶೇ.40ರಷ್ಟು ಪ್ರಯಾ ಣಿಕರ ಸಂಖ್ಯೆ ಕಡಿಮೆಯಾಗಿದೆ. ಇದೇ ಕಾರಣಕ್ಕೆ ಹೆಚ್ಚಿನ ಟ್ರಿಪ್‌ ಹೊಂದಿರುವ ಧರ್ಮಸ್ಥಳ, ಬೆಂಗಳೂರು, ಕಾಸರಗೋಡು ಸಹಿತ ಇನ್ನಿತರ ಕಡೆಗಳಿಗೆ ತೆರಳುವ ಬಸ್‌ ಸಂಚಾರದಲ್ಲಿ ವ್ಯತ್ಯಯ ಮಾಡಲಾಗಿದೆ.

ಕರಾವಳಿ ಭಾಗದಲ್ಲಿ ಪ್ರವಾಸಿ ತಾಣಗಳು ಹೆಚ್ಚಿದ್ದು, ಸಾಮಾನ್ಯವಾಗಿ ವಿವಿಧ ಜಿಲ್ಲೆ, ರಾಜ್ಯಗಳಿಂದ ಪ್ರವಾಸಿಗರು ಇಲ್ಲಿಗೆ ಆಗಮಿ ಸುತ್ತಾರೆ. ಒಂದಡೆ ರಾಜ್ಯ ಸರಕಾರದ ಆದೇಶ ಮತ್ತು ಕೊರೊನಾ ಭೀತಿ ಯಿಂದಾಗಿ ಹೆಚ್ಚಿನ ಮಂದಿ ತಮ್ಮ ಪ್ರವಾಸಗಳನ್ನು ಕೂಡ ಮುಂದೂಡಿದ್ದಾರೆ.

Advertisement

ಕರಾವಳಿಗೆ ಸಾಲು ಸಾಲು ಸವಾಲು
ಈ ಹಿಂದೆ ಪ್ರಾಕೃತಿಕ ವಿಕೋಪದಿಂದಾಗಿ ಚಾರ್ಮಾಡಿ ಮತ್ತು ಶಿರಾಡಿ ಘಾಟ್‌ನಲ್ಲಿ ಭೂಕುಸಿತ ಉಂಟಾದ ಕಾರಣ ಬೆಂಗಳೂರು, ಮೈಸೂರಿಗೆ ತೆರಳುವ ಬಸ್‌ ಸಂಚಾರ ಸ್ಥಗಿತಗೊಂಡಿತ್ತು. ಇದರಿಂದ ಕೇವಲ ನಾಲ್ಕು ದಿನಗಳಲ್ಲಿ ಕೆಎಸ್ಸಾರ್ಟಿಸಿ ಮಂಗಳೂರು ಮತ್ತು ಬೆಂಗಳೂರು ವಿಭಾ ಗಕ್ಕೆ ಒಟ್ಟಾರೆ 1.10 ಕೋಟಿ ರೂ.ಗೂ ಹೆಚ್ಚಿನ ನಷ್ಟ ಉಂಟಾಗಿತ್ತು. ಮಂಗಳೂರಿನಲ್ಲಿ ಈ ಹಿಂದೆ ವಿಧಿಸಲಾದ ಕರ್ಫ್ಯೂ ನಿಂದಾಗಿಯೂ ಕೋಟ್ಯಂತರ ರೂಪಾಯಿ ನಷ್ಟ ಉಂಟಾಗಿತ್ತು. ಕಳೆದ ವರ್ಷಾರಂಭದಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೆಲವು ಕಾರ್ಮಿಕ ಸಂಘಟನೆಗಳು ಎರಡು ದಿನ ಕರೆ ನೀಡಿದ್ದ ಬಂದ್‌ನಿಂದಾಗಿ ಉಭಯ ಜಿಲ್ಲೆಯಲ್ಲಿ ಕೆಎಸ್ಸಾರ್ಟಿಸಿಗೆ ಸುಮಾರು 1.20 ಕೋಟಿ ರೂ. ನಷ್ಟ ಉಂಟಾಗಿತ್ತು.

ಬಸ್‌ ಟ್ರಿಪ್‌ ಕಡಿಮೆ ಮಾಡಲಾಗಿದೆ
ಕೊರೊನಾ ಭೀತಿಯಿಂದಾಗಿ ಕೆಎಸ್ಸಾರ್ಟಿಸಿ ಬಸ್‌ಗಳಲ್ಲಿ ಸಂಚರಿಸುವ ಪ್ರಯಾಣಿಕರ ಸಂಖ್ಯೆ ಕಡಿಮೆ ಇದೆ. ಇದೇ ಕಾರಣಕ್ಕೆ ಕೆಲವು ಕಡೆಗಳಲ್ಲಿ ಬಸ್‌ ಟ್ರಿಪ್‌ ಕೂಡ ಕಡಿಮೆ ಮಾಡಿದ್ದೇವೆ. ಮಂಗಳೂರು ವಿಭಾಗದಲ್ಲಿ ಸುಮಾರು ಶೇ.40ರಷ್ಟು ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ.
-ಎಸ್‌.ಎನ್‌. ಅರುಣ್‌, ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗ ನಿಯಂತ್ರಣಾಧಿಕಾರಿ

15 ದಿನದಲ್ಲಿ 70 ಲಕ್ಷ ನಷ್ಟ
ಕೊರೊನಾ ಆತಂಕದಿಂದಾಗಿ ಮಾ. 1ರಿಂದ 15ರ ವರೆಗೆ ಉಭಯ ಜಿಲ್ಲೆಗಳಲ್ಲಿ ಒಟ್ಟು ಸುಮಾರು 70 ಲಕ್ಷದಷ್ಟು ಆದಾಯ ನಷ್ಟ ಉಂಟಾಗಿದೆ. ಕೆಎಸ್ಸಾರ್ಟಿಸಿ ಮಾಹಿತಿಯಂತೆ ಮಂಗಳೂರು ಕೆಎಸ್ಸಾರ್ಟಿಸಿ ವಿಭಾಗದಲ್ಲಿ 55.8 ಲಕ್ಷ ರೂ. ನಷ್ಟವಾಗಿದೆ. ಒಟ್ಟು 76 ಶೆಡ್ನೂಲ್‌ ಮತ್ತು 28,384 ಕಿ.ಮೀ. ಸಂಚಾರ ರದ್ದಾಗಿದೆ. ಅದೇ ರೀತಿ, ಪುತ್ತೂರು ವಿಭಾಗದಲ್ಲಿ 13.12 ಲಕ್ಷ ರೂ. ಆದಾಯ ನಷ್ಟ ಉಂಟಾಗಿದೆ. 34 ಶೆಡ್ನೂಲ್‌ ಮತ್ತು 12198 ಕಿ.ಮೀ. ಸಂಚಾರ ರದ್ದಾಗಿದೆ. ಕೆಎಸ್ಸಾರ್ಟಿಸಿಗೆ ಒಟ್ಟಾರೆ ರಾಜ್ಯದಲ್ಲಿ 3 ಕೋಟಿ ರೂ.ಗೂ ಮಿಕ್ಕಿ ನಷ್ಟ ಉಂಟಾಗಿದೆ.

ಆದಾಯದಲ್ಲಿ ನಷ್ಟ
ಮಂಗಳೂರು ಕೆಎಸ್ಸಾರ್ಟಿಸಿ ನಿಲ್ದಾಣದಿಂದ ರಾಜ್ಯದ ಮೂಲೆ ಮೂಲೆಗೂ ಸಂಪರ್ಕಕ್ಕೆ ಬಸ್‌ ವ್ಯವಸ್ಥೆ ಇದ್ದು, ಮಂಗಳೂರು ವಿಭಾಗದಿಂದ (ಮಂಗಳೂರಿನಲ್ಲಿ-3, ಕುಂದಾಪುರ, ಉಡುಪಿ) ಸೋಮವಾರ ಮತ್ತು ವೀಕೆಂಡ್‌ನ‌ಲ್ಲಿ ಪ್ರತೀ ದಿನ ಸರಾಸರಿ 70 ಲಕ್ಷ ರೂ.ನಷ್ಟು ಆದಾಯ ಬರುತ್ತದೆ. ಆದರೆ ಕೊರೊನಾ ಭೀತಿ ಎದುರಾದ ದಿನಗಳಿಂದ ಪ್ರತೀ ದಿನ ಸುಮಾರು 20 ಲಕ್ಷ ರೂ.ನಷ್ಟು ಆದಾಯದಲ್ಲಿ ನಷ್ಟ ಉಂಟಾಗಿದೆ.

– ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next