Advertisement

ಸಮಾಜಕ್ಕೆ ವಿಶ್ವಕರ್ಮರ ಕೊಡುಗೆ ಅನನ್ಯ

03:26 PM Sep 18, 2017 | |

ಪುತ್ತೂರು : ವಿಶ್ವಕರ್ಮರ ಜತೆಯಲ್ಲಿ ಬದುಕದ ಮನುಷ್ಯ ಜಗತ್ತಿನಲ್ಲಿ ಇಲ್ಲ. ಸಮಾಜಕ್ಕೆ ದೊಡ್ಡ ಕೊಡುಗೆಯನ್ನು ನೀಡಿದ ವಿಶ್ವಕರ್ಮರನ್ನು ನೆನಪಿಸುವ ಕಾರ್ಯ ಜಯಂತಿಯ ಮೂಲಕ ನಡೆಯುವುದು ಉತ್ತಮ ಬೆಳವಣಿಗೆ ಎಂದು ಕೆನರಾ ಬ್ಯಾಂಕ್‌ ನಿವೃತ್ತ ಮ್ಯಾನೇಜರ್‌ ನಲ್ಕ ಗೋಪಾಲಕೃಷ್ಣ ಆಚಾರ್ಯ ಹೇಳಿದರು.

Advertisement

ರವಿವಾರ ಪುತ್ತೂರು ತಾ.ಪಂ. ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ವಿಶ್ವಕರ್ಮ ಸಂಘಟನೆಗಳ ಸಹಯೋಗದಲ್ಲಿ ನಡೆದ ವಿಶ್ವಕರ್ಮ ಜಯಂತಿಯಲ್ಲಿ ಅವರು ಸಂಸ್ಮರಣೆ ಉಪನ್ಯಾಸ ಮಾಡಿದರು.

ವಿಶ್ವಕರ್ಮ ದೇವಶಿಲ್ಪಿ ಎಂದು ಕೆಲವು ವಿದ್ವಾಂಸರು ಹೇಳಿದರೆ ಜಗತ್ತಿನ ಸರ್ವ ಸೃಷ್ಟಿಗೂ ವಿಶ್ವಕರ್ಮ ಕರ್ತೃ ಎಂದು ಅನೇಕ ವಿದ್ವಾಂಸರು ದೃಢಪಡಿಸಿ ದ್ದಾರೆ. ಪುರಾಣದಲ್ಲಿ ಪುಷ್ಪಕವಿಮಾನ, ದ್ವಾರಕೆಯ ನಿರ್ಮಾಣದಿಂದ ಹಿಡಿದು ವಿಶ್ವಕರ್ಮರು ಅನೇಕ ನಿರ್ಮಾಣಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರು.

ವಿವಿಗಳಲ್ಲಿ ಸೇರ್ಪಡೆಗೊಳ್ಳಬೇಕು
41 ಉಪವರ್ಗ, 40 ಲಕ್ಷ  ಜನ ಸಂಖ್ಯೆಯ ವಿಶ್ವಕರ್ಮ ಸಮಾಜ ರಾಜ್ಯದ ಲ್ಲಿದ್ದು, ದೇಶದಲ್ಲಿ 13 ಕೋಟಿ ವಿಶ್ವಕರ್ಮ ಸಮುದಾಯದವರಿದ್ದಾರೆ. ರಾಜ್ಯದ ಕೆಲವು ವಿಶ್ವ ವಿದ್ಯಾನಿಲಯಗಳಲ್ಲಾದರೂ ವಿಶ್ವಕರ್ಮರ ಸಾಧನೆ ತಿಳಿಸುವ, ಸಂಶೋಧನೆಗಳನ್ನು ಹೊರತರುವ ಕೆಲಸ ಆಗಬೇಕು ಎಂದು ಅವರು ಅಭಿಪ್ರಾಯಿಸಿದರು.

ಮೂಲ ಕಸುಬು ಉಳಿಸಿ
ಅಧ್ಯಕ್ಷತೆ ವಹಿಸಿದ ತಾ.ಪಂ. ಅಧ್ಯಕ್ಷೆ ಭವಾನಿ ಚಿದಾನಂದ ಅವರು ಮಾತನಾಡಿ, ವಿಶ್ವಕರ್ಮ ಸಮಾಜದ ಮೂಲ ಕಸುಬು ಗಳನ್ನು ಉಳಿಸಿಕೊಂಡು ಹೋಗುವ ಕೆಲಸ ಆಗಬೇಕು. ಹಿಂದಿನ ಕಾಲದ ವಸ್ತು ಗಳ ಕಲಾತ್ಮಕತೆಯನ್ನು ಉಳಿಸಿಕೊಂಡು ಹೋಗುವ ಜತೆಗೆ ತಂತ್ರಜ್ಞಾನದ ಬಳಕೆಯ ಸಂದರ್ಭದಲ್ಲೂ ಹಿಂದಿನ ವಿಶಿಷ್ಟತೆಯನ್ನು ಉಳಿಸಬೇಕು ಎಂದು ಹೇಳಿದರು. 

Advertisement

ಸಮ್ಮಾನ
ಈ ಸಂದರ್ಭ ವಿಶ್ವಕರ್ಮ ಸಮುದಾ ಯದ ಸಾಧಕರಾದ ನಿವೃತ್ತ ಸುಬೇದಾರ್‌ ಮೇ| ಎಂ. ಸುರೇಶ್‌ ಆಚಾರ್ಯ, ಕಬ್ಬಿಣದ ಕೆಲಸಗಾರ ಜನಾರ್ದನ ಆಚಾರ್ಯ, ಶಿಲ್ಪಿ ವಾಸುದೇವ ಆಚಾರ್ಯ ಹಾಗೂ ಎಂ. ದಿವಾಕರ ಆಚಾರ್ಯ, ಚಿನ್ನದ ಶಿಲ್ಪಿ ಜನಾರ್ದನ ಆಚಾರ್ಯ ಕರ್ಮಲ ಅವರನ್ನು ಸಮ್ಮಾನಿಸಲಾಯಿತು.

ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಅಧ್ಯಕ್ಷ ಹಾಗೂ ತಹಶೀಲ್ದಾರ್‌ ಅನಂತ ಶಂಕರ್‌ ವಿಶ್ವಕರ್ಮ ಜ್ಯೋತಿ ಪ್ರಜ್ವಲನೆ  ಮಾಡಿದರು. ವಿಶ್ವಕರ್ಮ ಯುವ ಮಿಲನ್‌ ಜಿಲ್ಲಾಧ್ಯಕ್ಷ ಹರೀಶ್‌ ಆಚಾರ್ಯ ಉಪಸ್ಥಿತರಿದ್ದರು. ವಿವಿಧ ಇಲಾಖೆಗಳ ಅಧಿಕಾರಿಗಳು, ವಿಶ್ವಕರ್ಮ ಸಂಘಗಳ ಪದಾಧಿಕಾರಿಗಳು, ಸಮಾಜ ಬಾಂಧವರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಹಿಂದುಳಿದ ವರ್ಗಗಳ ಮೆಟ್ರಿಕ್‌ ಪೂರ್ವ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಉಪತಹಶೀಲ್ದಾರ್‌ ಶ್ರೀಧರ್‌ ಕೆ. ಸ್ವಾಗತಿಸಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಿಸ್ತರಣಾಧಿಕಾರಿ ಎಸ್‌. ಕುಮಾರ್‌ ವಂದಿಸಿದರು. ಉಪ ತಹಶೀಲ್ದಾರ್‌ ನಾಗೇಶ್‌ ನಿರೂಪಿಸಿದರು.

ಸೈನ್ಯಕ್ಕೆ ಪ್ರೋತ್ಸಾಹಿಸಿ
ಸಮ್ಮಾನ ಸ್ವೀಕರಿಸಿ ಮಾತನಾಡಿದ ಮೇ| ಎಂ. ಸುರೇಶ್‌ ಆಚಾರ್ಯ, ಭಾರತೀಯ ಸೇನೆಯಲ್ಲಿ ಶೇ. 99ರಷ್ಟು ಉತ್ತರ ಭಾಗದವರೇ ಕಾರ್ಯನಿರ್ವಹಿಸುತ್ತಿದ್ದಾರೆ. ನಮ್ಮ ಮಕ್ಕಳಿಗೂ ದೇಶಸೇವೆಗೆ ಪ್ರೋತ್ಸಾಹ ನೀಡಬೇಕು. ಪ್ರಸ್ತುತ ಸೈನಿಕರಿಗೆ ಎಲ್ಲ  ಸೌಲಭ್ಯ, ಸವಲತ್ತುಗಳನ್ನೂ ನೀಡಲಾಗುತ್ತಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next