Advertisement

ಸ್ವಾತಂತ್ರ್ಯ ಹೋರಾಟಕ್ಕೆ ಜಾನಪದರ ಕೊಡುಗೆ ಅಪಾರ

12:58 PM Aug 17, 2022 | Team Udayavani |

ಬಾಗಲಕೋಟೆ: ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಕರ್ನಾಟಕದ ಜಾನಪದರ ಕೊಡುಗೆ ಅಪಾರವಿದೆ. ಸ್ವಾತಂತ್ರ್ಯ ಹೋರಾಟದ ದಿನಗಳಲ್ಲಿ ಜಾನಪದರು ತಮ್ಮ ಕಲೆಗಳ ಮೂಲಕ ಜನರನ್ನು ಸಂಘಟಿಸುವುದರ ಜತೆಗೆ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ದೇಶಪ್ರೇಮಿಗಳ ಜೀವನದ ಆದರ್ಶಗಳನ್ನು ತಮ್ಮ ಕಲೆಗಳಲ್ಲಿ ಕಟ್ಟಿಕೊಡುವ ಸಾಧನೆ ಮಾಡುವುದರೊಂದಿಗೆ ಜಾನಪದ ಸಾಹಿತ್ಯ ಶ್ರೀಮಂತಗೊಳಿಸಿದ್ದಾರೆ.

Advertisement

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಜಾನಪದರ ಕೊಡುಗೆ ಸ್ಮರಣೆ ಮಾಡುತ್ತಿರುವುದು ಸ್ವಾಗತಾರ್ಹವಾಗಿದೆ ಎಂದು ನಾಡಿನ ಹಿರಿಯ ಸಾಹಿತಿ ಡಾ| ವೈ.ಎಂ. ಯಾಕೊಳ್ಳಿ ಹೇಳಿದರು.

ನವನಗರದ ಕನ್ನಡ ಸಾಹಿತ್ಯ ಪರಿಷತ್‌ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಮತ್ತು ತಾಲೂಕ ಘಟಕ ಬಾಗಲಕೋಟೆ ಹಾಗೂ ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಮತ್ತು ತಾಲೂಕ ಘಟಕ ಹಾಗೂ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ಹಮ್ಮಿಕೊಂಡಿದ್ದ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಹಾಗೂ ಬಾಗಲಕೋಟೆ ಜಿಲ್ಲೆಯ ರಜತ ಮಹೋತ್ಸವ ನಿಮಿತ್ತ ಜಾನಪದ ಝೇಂಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜಾನಪದ ಲಾವಣಿ, ಡೊಳ್ಳಿನ ಪದ, ಚೌಡಕಿ ಪದ, ಏಕದಾರಿ, ಭಜನಾಪದ, ಹಲವಾರು ಜಾನಪದ ಪ್ರಕಾರಗಳಲ್ಲಿ ಸ್ವಾತಂತ್ರ್ಯ ಹೋರಾಟದ ಸಾಹಸವನ್ನು ಗಟ್ಟಿಗೊಳಿಸಿದ್ದಾರೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಮಾತನಾಡಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವಿನೂತನ ಕಾರ್ಯಕ್ರಮ ಆಯೋಜನೆ ಮಾಡುವುದರೊಂದಿಗೆ 75ನೆಯ ಸ್ವಾತಂತ್ರ್ಯ ಅಮೃತ ಮಹೋತ್ಸವ ಹಾಗೂ ಬಾಗಲಕೋಟೆ ಜಿಲ್ಲೆಯ ರಜತ ಮಹೋತ್ಸವ ಅಂಗವಾಗಿ ವರ್ಷಪೂರ್ಣ ನಿರಂತರ ಕಾರ್ಯಕ್ರಮ ನಡೆಯುವಂತೆ ಸಂಯೋಜನೆ ಮಾಡಿದ್ದೇವೆ ಎಂದು ಹೇಳಿದರು.

Advertisement

ಕರ್ನಾಟಕ ಬಯಲಾಟ ಅಕಾಡೆಮಿ ನೂತನ ಅಧ್ಯಕ್ಷ ಅಜಿತ ಬಸಾಪುರ ಮತ್ತು ಕರ್ನಾಟಕ ಜಾನಪದ ಅಕಾಡೆಮಿ ನೂತನ ಸದಸ್ಯ ಡಾ|ಸಣ್ಣವೀರಣ್ಣ ದೊಡ್ಡಮನಿ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಸಾಹಿತಿ ಡಾ| ವೈ.ಎಂ. ಯಾಕೋಳ್ಳಿ, ಬಿಟಿಡಿಎ ಅಭಿಯಂತರ ಎನ್‌. ಎನ್‌. ಪಾಟೀಲ ಅವರಿಗೆ ಸನ್ಮಾನಿಸಲಾಯಿತು. ಜಿಲ್ಲಾ ವಾರ್ತಾಧಿಕಾರಿಗಳಾದ ಮಂಜುನಾಥ ಸುಳ್ಳೊಳ್ಳಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ ಜೈನಾಪುರ ಪಾಲ್ಗೊಂಡಿದ್ದರು.

ಜಾನಪದ ಝೇಂಕಾರದಲ್ಲಿ ಯಳ್ಳಗುತ್ತಿಯ ರಂಗಪ್ಪ ಹಲಕುರ್ಕಿಯವರ ತತ್ವಪದ ತಂಡ, ಕುಂಚನೂರ ಶ್ರೀಶೈಲ ಜಕನೂರವರ ಡೊಳ್ಳಿನ ಹಾಡಿನ ತಂಡ, ಬುದ್ನಿ ಪಿ.ಎಂ ಬೋರವ್ವ ಭಾಗನ್ನವರವರ ಚೌಡಕಿ ಪದ ತಂಡದವರು ಪಾಲ್ಗೊಂಡು ಸ್ವಾತಂತ್ರ್ಯ ಹೋರಾಟಗಾರರ ಜೀವನ ಆದರ್ಶ ಕುರಿತಾದ ಜಾನಪದ ಹಾಡುಗಳನ್ನು ಹಾಡುವ ಮೂಲಕ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಲ್ಲಿಸಿದರು. ಹಿರಿಯ ಕಲಾವಿದರ ತಂಡದವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ನಿರ್ದೇಶಕ ಸಿದ್ದರಾಮ ಮನಹಳ್ಳಿ, ಜಿಲ್ಲಾ ಗೌರವ ಕಾರ್ಯದರ್ಶಿ ಡಾ|ಚಂದ್ರಶೇಖರ ಕಾಳನ್ನವರ, ಕರ್ನಾಟಕ ಜಾನಪದ ಜಿಲ್ಲಾ ಗೌರವ ಕಾರ್ಯದರ್ಶಿ ಸಿ.ಎನ್‌. ಬಾಳಕ್ಕನವರ, ಜಿಲ್ಲಾ ಕಜಾಪ ಕೋಶಾಧ್ಯಕ್ಷ ಆರ್‌.ಸಿ. ಚಿತ್ತವಾಡಗಿ, ಕಸಾಪ ಮಾಧ್ಯಮ ಕಾರ್ಯದರ್ಶಿ ಸಂಗಮೇಶ ಬಡಿಗೇರ ಉಪಸ್ಥಿತರಿದ್ದರು. ಕಸಾಪ ಬಾಗಲಕೋಟೆ ತಾಲೂಕ ಅಧ್ಯಕ್ಷ ಪಾಂಡುರಂಗ ಸಣ್ಣಪ್ಪನವರ ಸ್ವಾಗತಿಸಿದರು. ಜಿಲ್ಲಾ ಗೌರವ ಕಾರ್ಯದರ್ಶಿ ಸಿದ್ಧರಾಮ ಶಿರೋಳ ನಿರೂಪಿಸಿದರು. ಕರ್ನಾಟಕ ಜಾನಪದ ಪರಿಷತ್ತು ಬಾಗಲಕೋಟೆ ತಾಲೂಕು ಘಟಕದ ಅಧ್ಯಕ್ಷ ಶಾಂತಲಿಂಗಯ್ಯ ಎಮ್ಮಿಮಠ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next