Advertisement

ತೈಲ ಬೆಲೆ ಕಡಿಮೆಯಾದರೂ ಗ್ರಾಹಕಗೆ ಲಾಭವಿಲ್ಲ

04:08 PM Sep 12, 2017 | Team Udayavani |

ಚಿಕ್ಕಬಳ್ಳಾಪುರ: ಇತ್ತೀಚೆಗೆ ತೈಲ ಉತ್ಪನ್ನಗಳ ಬೆಲೆ ಕಡಿಮೆಯಾಗಿ ಸರ್ಕಾರಕ್ಕೆ 4, 5 ಲಕ್ಷ ಕೋಟಿ ರೂ. ಉಳಿತಾಯವಾದರೂ ಅದರ ಲಾಭ ಗ್ರಾಹಕರಿಗೆ ಸಿಗಲಿಲ್ಲ. ಇರುವ ಸಹಾಯಧನವನ್ನು ಸಂಪೂರ್ಣ ಕಡಿತ ಮಾಡಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಕೇಂದ್ರದ ಮಾಜಿ ಪೆಟ್ರೋಲಿಯಂ ಸಚಿವ, ಸಂಸದ ವೀರಪ್ಪಮೊಯ್ಲಿ ಟೀಕಿಸಿದರು.

Advertisement

ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ಭವನದಲ್ಲಿ ಇಂಡಿಯನ್‌ ಅಯಿಲ್‌ ಕಾರ್ಪೊರೆಷನ್‌, ಭಾರತ್‌ ಪೆಟ್ರೋಲಿಯಂ ಹಾಗೂ ಹಿಂದೂಸ್ತಾನ್‌ ಪೆಟ್ರೋಲಿಯಂ ಕಂಪನಿಗಳ ಸಹಭಾಗಿತ್ವದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪ್ರಧಾನಮಂತ್ರಿ ಉಜ್ವಲ ಯೋಜನೆ ಎನ್‌ಸಿ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜನತೆಗೆ ಹೊರೆ: ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ಉತ್ಪನ್ನಗಳ ಬೆಲೆ ಕಡಿಮೆಯಾದಾಗ ಅದರ ಲಾಭ ಗ್ರಾಹಕರಿಗೆ ಸಿಗಬೇಕೆಂಬ ಮಹತ್ವಕಾಂಕ್ಷೆಯೊಂದಿಗೆ ಹಿಂದಿನ ಯುಪಿಎ ಸರ್ಕಾರ ರೂಪಿಸಿದ್ದ ಪೆಟ್ರೋಲಿಯಂ ನೀತಿಯನ್ನು ಕೇಂದ್ರದ ಬಿಜೆಪಿ ಸರ್ಕಾರ ನಿರ್ಲಕ್ಷ್ಯ ವಹಿಸಿರುವ ಪರಿಣಾಮ ತೈಲ ಉತ್ಪನ್ನಗಳು ದಿನೇ ದಿನೆ ಗ್ರಾಹಕರಿಗೆ ಹೆಚ್ಚಿನ ಆರ್ಥಿಕ ಹೊರೆ ಉಂಟು ಮಾಡುತ್ತಿವೆ. ಅತಿ ದುಬಾರಿ ಬೆಲೆಗೆ ತೈಲ ಉತ್ಪನ್ನಗಳನ್ನು ಖರೀದಿಸುತ್ತಿರುವ ರಾಷ್ಟ್ರಗಳ ಪೈಕಿ ಭಾರತ ಜಗತ್ತಿನಲ್ಲಿಯೇ ಮೊದಲ ಸ್ಥಾನದಲ್ಲಿದೆ. ಪೆಟ್ರೋಲಿಯಂ ನೀತಿ ಅನುಸರಿಸುವುದರಿಂದ ಗ್ರಾಹಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.

ಪ್ರತಿಯೊಬ್ಬರಿಗೂ ಅನಿಲ: ಹೊಗೆ ಮುಕ್ತ ಸಮಾಜ ನಿರ್ಮಾಣ ಆಗಬೇಕೆಂಬ ಉದ್ದೇಶದಿಂದ ದೇಶದ ಪ್ರತಿಯೊಬ್ಬ ಬಡವನಿಗೂ ಅಡುಗೆ ಅನಿಲ ಸಂಪರ್ಕ ಸಿಗಬೇಕೆಂದು 2011ರಲ್ಲಿ ತಾನು ಪೆಟ್ರೋಲಿಯಂ ಸಚಿವರಾಗಿದ್ದಾಗ ಕೆವೈಸಿ ಸರ್ವೆ ಮೂಲಕ ಬಡತನ ರೇಖೆ ಕೆಳಗಿರುವ ಕುಟುಂಬಗಳನ್ನು ಗುರುತಿಸಿ ಉಜ್ವಲ ಯೋಜನೆಯನ್ನು ರೂಪಿಸಿದೆ. ಅದನ್ನು ಮೋದಿ ಸರ್ಕಾರ ಮುಂದುವರಿಸಿಕೊಂಡು ಹೋಗುತ್ತಿರುವುದಕ್ಕೆ ಕೇಂದ್ರ ಸರ್ಕಾರಕ್ಕೆ ಅಭಿನಂಧನೆ ಸಲ್ಲಿಸುತ್ತೇನೆ ಎಂದರು. 

ದುರ್ಬಳಕೆಗೆ ಕಡಿವಾಣ: ಆಧಾರ್‌ ನೊಂದಣಿ ಆರಂಭಿಸಿದಾಗ ಮೊದಲ ಬಾರಿಗೆ ಪೆಟ್ರೋಲಿಯಂ ಇಲಾಖೆ ಅದರ ಅನುಷ್ಠಾನಕ್ಕೆ ದಿಟ್ಟ ನಿರ್ಧಾರ ತೆಗೆದುಕೊಂಡಿತು. ಪರಿಣಾಮ ಶ್ರೀಮಂತರ ಅನಿಲ ಸಿಲಿಂಡರ್‌ ದುರ್ಬಳಕೆಗೆ ಕಡಿವಾಣ ಬಿದ್ದು ಅದರ ಲಾಭ ಬಡವರಿಗೆ ಸಿಗುವಂತಾಗಿದೆ.

Advertisement

ರಾಷ್ಟ್ರದ ಅಯಿಲ್‌ ಕಂಪನಿಗಳು ಜಗತ್ತಿನದಲ್ಲಿ ಅತ್ಯಂತ ಸುರûಾ ಹಾಗೂ ದಕ್ಷತೆಯಿಂದ ಕೂಡಿವೆ. ತಾನು ಪೆಟ್ರೋಲಿಯಂ ಸಚಿವನಾಗಿದ್ದಾಗ ಹಗಲು ರಾತ್ರಿ ಕೆಲಸ ಮಾಡಿ ಇಲಾಖೆಗೆ ಗೌರವ, ಕೀರ್ತಿ ತರುವ ಕೆಲಸ ಮಾಡಿದ್ದೇನೆ. ಪೆಟ್ರೋಲಿಯಂ ಇಲಾಖೆ ಅಧಿಕಾರಿಗಳು ಸಹ ಪ್ರಾಮಾಣಿಕವಾಗಿ ದಕ್ಷತೆಯಿಂದ ಕೆಲಸ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಹೊಗೆ ಮುಕ್ತ ಭಾರತ ಗುರಿ: ಸಂಸದ ಕೆ.ಎಚ್‌.ಮುನಿಯಪ್ಪ ಮಾತನಾಡಿ, ಆರೋಗ್ಯವಂತ ಸಮಾಜ ನಿರ್ಮಾಣದ ದೃಷ್ಟಿಯಿಂದ ಭಾರತ ಸಂಪೂರ್ಣ ಹೊಗೆ ಮುಕ್ತವಾಗಬೇಕಾಗಿದೆ. ಹಾವಮಾನ ವೈಪರೀತ್ಯದಿಂದ ದೇಶದ ಕೃಷಿ, ಆರೋಗ್ಯ ಮತ್ತಿತರ ಕ್ಷೇತ್ರಗಳ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಸಮರ್ಪಕ ಮಳೆ, ಬೆಳೆ ಆಗುತ್ತಿಲ್ಲ.

ಅಮೆರಿಕ ಸೇರಿದಂತೆ ಭಾರತದ ಪೂರ್ವಭಾಗದಲ್ಲಿ ಸೈಕ್ಲೋನ್‌ ಉಂಟಾಗಿ ಅಪಾರ ಸಾರ್ವಜನಿಕರ ಆಸ್ತಿ, ಪಾಸ್ತಿ ನಷ್ಟವಾಗಿದೆ. ಹಾವಮಾನ ವೈಪರೀತ್ಯ ತಡೆಯುವ ನಿಟ್ಟಿನಲ್ಲಿ ಉಜ್ವಲ ಯೋಜನೆ ದಿಟ್ಟ ಹೆಜ್ಜೆಯಾಗಿದ್ದು, ಎಂ.ವೀರಪ್ಪಮೊಯ್ಲಿ ಕೇಂದ್ರದ ಯುಪಿಎ ಸರ್ಕಾರದಲ್ಲಿ ಪೆಟ್ರೋಲಿಯಂ ಸಚಿವರಾಗಿದ್ದ ಸಂದರ್ಭದಲ್ಲಿ ರೂಪಿಸಿದ ಈ ಮಹತ್ವಕಾಂಕ್ಷೆ ಉಜ್ವಲ ಯೋಜನೆಯ ಲಾಭವನ್ನು ಪ್ರತಿಯೊಬ್ಬರೂ ಪಡೆಯಬೇಕೆಂದರು.

ಹಸಿರು ಕ್ರಾಂತಿ ಅವಶ್ಯ: ಶಾಸಕ ಡಾ.ಕೆ.ಸುಧಾಕರ್‌ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಹಸಿರು ಕ್ರಾಂತಿ ಅವಶ್ಯಕವಾಗಿದೆ. ಹೆಚ್ಚು ಹೆಚ್ಚು ಗ್ಯಾಸ್‌ ಉಪಯೋಗಿಸಿದಂತೆ ಅರಣ್ಯ ಸಂರಕ್ಷಣೆ ಸಾಧ್ಯವಾಗುತ್ತದೆ. ಜಾಗತಿಕ ಮಟ್ಟದಲ್ಲಿ ಹವಮಾನ ವೈಪರೀತ್ಯ ಅಭಿವೃದ್ಧಿಗೆ ಅಡ್ಡಗಾಲಾಗಿದ್ದು, ಪ್ರತಿಯೊಬ್ಬ ನಾಗರಿಕರಿಗೂ ಹಸಿರೇ ಉಸಿರಾಗಿರುವುದರಿಂದ ಅರಣ್ಯ ಉಳಿಸಿ ಬೆಳೆಸಲು ಹೊಗೆ ಮುಕ್ತ ಸಮಾಜ ನಿರ್ಮಾಣ ಅಗತ್ಯವಿದೆ.

ಉಜ್ವಲ ಯೋಜನೆಯ ಬಗ್ಗೆ ಗ್ರಾಮೀಣ ಜನರಲ್ಲಿ ವ್ಯಾಪಕ ಅರಿವು ಮೂಡಿಸುವ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಯೋಜನೆಯಡಿ ಉಚಿತವಾಗಿ ಗ್ಯಾಸ್‌ ಸಂಪರ್ಕ ಸಿಗಬೇಕು ಎಂದು ತಿಳಿಸಿದರು. ಶಿಡ್ಲಘಟ್ಟ ಶಾಸಕ ಎಂ.ರಾಜಣ್ಣ ಮಾತನಾಡಿ, ಕಡುಬಡವರಿಗೆ ಉಚಿತ ಗ್ಯಾಸ್‌ ಸಂಪರ್ಕ ಕಲ್ಪಿಸುವ ಪ್ರಧಾನಮಂತ್ರಿ ಉಜ್ವಲ ಯೋಜನೆಯು ಗ್ರಾಮೀಣ ಮಹಿಳೆಯರ ಸಬಲೀಕರಣ ಹಾಗೂ ಆರೋಗ್ಯದ ಹಿತದೃಷ್ಟಿಯಿಂದ ಮಹತ್ವದಾಗಿದ್ದು, ಗ್ಯಾಸ್‌ ವಿತರಕರು ಗ್ರಾಮೀಣ ಭಾಗದ ಕಟ್ಟಕಡೆಯ ವ್ಯಕ್ತಿಗೂ ಗ್ಯಾಸ್‌ ಸಂಪರ್ಕ ಒದಗಿಸಿ ಯೋಜನೆಯನ್ನು ಯಶಸ್ವಿಗೊಳಿಸಬೇಕೆಂದರು.

300 ಮಂದಿಗೆ ಮಂಜೂರಾಗಿ ಪತ್ರ: ಕಾರ್ಯಕ್ರಮದಲ್ಲಿ ಸಂಕೇತಿಕವಾಗಿ 300 ಮಂದಿ ಫ‌ಲಾನುಭವಿಗಳಿಗೆ ಉಚಿತವಾಗಿ ಅಡುಗೆ ಅನಿಲ್‌ ಸಿಲಿಂಡರ್‌ ಸಂಪರ್ಕದ ಮಂಜೂರಾತಿ ಪ್ರತಿಗಳನ್ನು ಸಂಸದರಾದ ಎಂ.ವೀರಪ್ಪ ಮೊಯ್ಲಿ, ಕೆ.ಎಚ್‌.ಮುನಿಯಪ್ಪ, ಶಾಸಕ ಡಾ.ಕೆ.ಸುಧಾಕರ್‌ ಮತ್ತಿತರರು ವಿತರಿಸಿದರು. ಈ ವೇಳೆ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಯಲುವಹಳ್ಳಿ ರಮೇಶ್‌,

ಮಾಜಿ ಶಾಸಕ, ಚಿಕ್ಕಬಳ್ಳಾಪುರದ ಮಹೇಶ್ವರಿ ಗ್ಯಾಸ್‌ ವಿತರಕ ಎಂ.ಶಿವಾನಂದ್‌, ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ನಾಗೇಂದ್ರಪ್ಪ, ಇಂಡಿಯನ್‌ ಆಯಿಲ್‌ ಕಾಪೋರೆಷನ್‌ ಬಿಜಿಎಂ ಸ್ವಾಮಿನಾಥನ್‌, ಭಾರತ್‌ ಪೆಟ್ರೋಲಿಯಂ ಹಿಂದೂಸ್ತಾನ್‌ ಪೆಟ್ರೋಲಿಯಂ ಕಂಪನಿಗಳ ಅಧಿಕಾರಿಗಳಾದ ಪ್ರದೀಪ್‌ ನಾಯರ್‌, ಮುಗ್ಧಾ ತಂಡನ್‌, ವಿವೇಕ್‌ ಅಯ್ಯರ್‌, ಅಭಿಷೇಕ್‌ ಶ್ರೀವಸ್ತವ್‌, ವಿನೋದ್‌ ಕುಮಾರ್‌, ಅಕಾಲ್‌, ನೂರು ಫಾತೀಮಾ ಇತರರಿದ್ದರು.

ನರೇಗಾ, ಆಧಾರ್‌ ಬಗ್ಗೆ ಮೋದಿ ಅಪಹಸ್ಯ: ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ಹಿಂದಿನ ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರಗಳು ರೂಪಿಸಿದ ಯೋಜನೆಗಳು ಜನಪರವಾಗಿದ್ದರೆ ಅವುಗಳನ್ನು ಮುಂದುವರಿಸಬೇಕು. ಯುಪಿಎ ಸರ್ಕಾರ ರೂಪಿಸಿದ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಹಾಗೂ ಆಧಾರ್‌ ಯೋಜನೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಈ ಹಿಂದೆ ಅಪಹಾಸ್ಯ ಮಾಡಿದ್ದರು.

ಆದರೆ, ಈಗ ಅವರದೇ ಸರ್ಕಾರ ಅದನ್ನು ಮುಂದುವರಿಸಿಕೊಂಡು ಹೋಗುತ್ತಿದೆ. ಯುಪಿಎ ಸರ್ಕಾರದ ಹಲವು ಯೋಜನೆಗಳನ್ನು ಬಿಜೆಪಿ ಸರ್ಕಾರ ಕೈ ಬಿಟ್ಟು ಅನಾಹುತ ಹಾಗೂ ವ್ಯಾತ್ಯಾಸ ಅನುಭವಿಸಿದೆ ಎಂದು ಸಂಸದ ಎಂ.ವೀರಪ್ಪಮೊಯ್ಲಿ ಟೀಕಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next