ಬೆಂಗಳೂರು: 2 ವರ್ಷಕ್ಕೂ ಹೆಚ್ಚು ಅವಧಿಯಿಂದ ನೆನೆಗುದಿಗೆ ಬಿದ್ದಿದ್ದ ಕೋರಮಂಗಲದ ಎಲಿವೇಟೆಡ್ ಕಾರಿಡಾರ್ ನಿರ್ಮಾಣ ಯೋಜನೆಗೆ ರಾಜ್ಯ ಸರ್ಕಾರದಿಂದಲೇ ಚಾಲನೆ ನೀಡಲು ತೀರ್ಮಾನಿಸಲಾಗಿದೆ.
ಕೋರಮಂಗಲದ 100 ಅಡಿ ಒಳವರ್ತುಲ ರಸ್ತೆಯ ಜಂಕ್ಷನ್, ಸೋನಿ ವರ್ಲ್ಡ್ ಜಂಕ್ಷನ್ ಮತ್ತು ಕೇಂದ್ರೀಯ ಸದನ ಜಂಕ್ಷನ್‌ಗಳನ್ನು ಈಜೀಪುರ ಮುಖ್ಯರಸ್ತೆಗೆ ಸೇರಿಸುವ ನಿಟ್ಟಿನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಎಲಿವೇಟೆಡ್ ಕಾರಿಡಾರ್ ಕಾಮಗಾರಿಗೆ ಶುಕ್ರವಾರ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.
2014-15ನೇ ಸಾಲಿನಲ್ಲಿ ಜೆ-ನರ್ಮ್ ಯೋಜನೆಯಡಿ ಈ ಕಾಮಗಾರಿ ಕೈಗೊಳ್ಳಲು ನಿರ್ಧರಿಸಲಾಗಿತ್ತು. ಆದರೆ, ನಂತರದಲ್ಲಿ ನರ್ಮ್ ಯೋಜನೆ ರದ್ದುಗೊಂಡಿದ್ದರಿಂದ ನಗರೋತ್ಥಾನ ಯೋಜನೆ ಮೂಲಕ ರಸ್ತೆ ನಿರ್ಮಿಸಲು ತೀರ್ಮಾನಿಸಿ ಕಾಮಗಾರಿಗೆ ಟೆಂಡರ್ ಕೂಡ ಕರೆಯಲಾಗಿತ್ತು. ಆದರೆ, ಅದು ಕೂಡ ಸಾಧ್ಯವಾಗಿರಲಿಲ್ಲ.
ಹೀಗಾಗಿ ಇದೀಗ ಯೋಜನಾ ವೆಚ್ಚ ಪರಿಷ್ಕರಿಸಿ ಸುಮಾರು 204 ಕೋಟಿ ರೂ. ವೆಚ್ಚದಲ್ಲಿ ರಾಜ್ಯ ಸರ್ಕಾರದಿಂದಲೇ ಕಾಮಗಾರಿ ಆರಂಭಿಸಲು ಸಂಪುಟ ಸಭೆ ಯಲ್ಲಿ ಆಡಳಿತಾತ್ಮಕ ಅನುಮೋದನೆ ನೀಡ ಲಾಗಿದೆ. ಅಲ್ಲದೆ, ಈ ಕಾಮಗಾರಿಗಾಗಿ ಈಗಾಗಲೇ ಕರೆದಿರುವ ಟೆಂಡರ್‌ಗೆ ಘಟ ನೋತ್ತರ ಒಪ್ಪಿಗೆಯನ್ನೂ ಸೂಚಿಸಲಾಗಿದೆ.
ಇದೇ ರೀತಿ ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿರುವ ನೆಫೊÅà-ಯುರಾಲಜಿ ಸಂಸ್ಥೆಗೆ ಹೊಂದಿಕೊಂಡಂತೆ 16 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಅನೆಕ್ಸ್ ಕಟ್ಟಡ ನಿರ್ಮಾಣ ಮತ್ತು 4.15 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಉಪಕರಣ, ಪೀಠೊಪಕರಣ ಖರೀದಿ ಮತ್ತು ಮೂಲ ಸೌಕರ್ಯ ಕಲ್ಪಿಸುವುದು.
ನಗರದಲ್ಲಿ 55.29 ಕೋಟಿ ರೂ. ವೆಚ್ಚದಲ್ಲಿ ನಡೆಯುತ್ತಿರುವ ಬಿ-ಟ್ರ್ಯಾಕ್ ಯೋಜನೆಗೆ 2016-17ನೇ ಸಾಲಿನಲ್ಲಿ ಲಭ್ಯವಿರುವ 10.96 ಕೋಟಿ ರೂ. ಬಳಸಿಕೊಳ್ಳುವುದು ಮತ್ತು ಮೇಯೋಹಾಲ್‌ನಲ್ಲಿರುವ ದಕ್ಷಿಣ ಅಗ್ನಿಶಾಮಕ ಠಾಣೆ ಆವರಣದಲ್ಲಿ 12.93 ಕೋಟಿ ರೂ. ವೆಚ್ಚದಲ್ಲಿ 6ನೇ ಅಗ್ನಿಶಾಮಕ ಠಾಣೆ ಕಟ್ಟಡ ಮತ್ತು ನಿರ್ವಹಣಾ ಕೇಂದ್ರ ಸ್ಥಾಪಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.