ಬೆಂಗಳೂರು: ಎಚ್.ಡಿ.ಕುಮಾರಸ್ವಾಮಿಯವರು ಮುಖ್ಯ ಮಂತ್ರಿ ಕುರ್ಚಿ ಮೇಲೆ ಕುಳಿತಿರುವುದನ್ನು ನೋಡಲು ಕೆಲ ವರಿಗೆ ಆಗಲಿಲ್ಲ. ಹೀಗಾಗಿ, ಸಮ್ಮಿಶ್ರ ಸರ್ಕಾರ ಕೆಡವಿದರು ಎಂದು ಮಾಜಿ ಪ್ರಧಾನಿ ದೇವೇಗೌಡ ವಿಷಾದಿಸಿದ್ದಾರೆ.
ಪಕ್ಷದ ಕಚೇರಿಯಲ್ಲಿ ಮಾತನಾಡಿ, ಕುಮಾರಸ್ವಾಮಿಯವರ ಸರ್ಕಾರ ಬೀಳಿಸಲು ಕೆಲವು ಕಾಂಗ್ರೆಸ್ ನಾಯಕರು ಬಿಜೆಪಿ ಜತೆ ಕೈ ಜೋಡಿಸಿದರು ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಹಾಗೂ ಅನರ್ಹಗೊಂಡಿರುವ ಶಾಸಕರ ವಿರುದ್ಧ ಆಕ್ರೋಶ ಹೊರಹಾಕಿದರು.
ಮೈತ್ರಿ ಸರ್ಕಾರ ಬೀಳಿಸಲು ಕಾಂಗ್ರೆಸ್‌ನ ಕೆಲವು ಮಿತ್ರರು ಪ್ರಯತ್ನಿಸಿದರು. ಬಿಜೆಪಿ ಜತೆ ಕೈ ಜೋಡಿಸಿ ಸರ್ಕಾರ ಬೀಳಿಸಿದರು ಎಂದು ಯಾರ ಹೆಸರೂ ಹೇಳದೆ ಸೂಕ್ಷ್ಮವಾಗಿ ಹೇಳಿದರು. “ನಾನು ಯಾರಿಗೂ ಹೆದರಬೇಕಿಲ್ಲ, ದಾಕ್ಷಿಣ್ಯವೂ ಬೇಕಿಲ್ಲ. ವ್ಯಕ್ತಿಗತ ಟೀಕೆ ಮಾಡುವುದಿಲ್ಲ. ದೇವೇಗೌಡ ಸುಮ್ಮನೆ ಕೂರುವುದಿಲ್ಲ. ಪಕ್ಷ ಕಟ್ಟುವುದು ಹೇಗೆ ಎಂದು ನನಗೆ ಗೊತ್ತಿದೆ’ ಎಂದರು.
ಮುಖಂಡರ ಜೊತೆ ಸಭೆ: ಇದಕ್ಕೂ ಮುನ್ನ ಮೈಸೂರು, ಚಾಮರಾಜನಗರ, ಮಂಡ್ಯ ಭಾಗದ ಮುಖಂಡರ ಜತೆ ದೇವೇಗೌಡರು ಸಭೆ ನಡೆಸಿದರು. ಎಚ್.ವಿಶ್ವನಾಥ್ ಅವರ ಅನರ್ಹತೆಯಿಂದ ಖಾಲಿಯಾಗಿರುವ ಹುಣಸೂರು ಕ್ಷೇತ್ರದ ಉಪ ಚುನಾವಣೆಯ ಬಗ್ಗೆಯೂ ಚರ್ಚಿಸಿದರು. ಸಭೆಗೆ ಮಾಜಿ ಸಚಿವರಾದ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್ ಗೈರು ಹಾಜರಾಗಿದ್ದರು.
ಪ್ರವಾಹದಿಂದ ಸಾಕಷ್ಟು ಸಮಸ್ಯೆ ಉಂಟಾಗಿದೆ. ಕೇಂದ್ರ ಸರ್ಕಾರ ಒಂದೇ ಒಂದು ರೂ.ಕೊಟ್ಟಿಲ್ಲ. ನರೇಗಾ ಯೋಜನೆಯ ಬಾಕಿ 1,700 ಕೋಟಿ ರೂ.ಗಳನ್ನು ಉಳಿಸಿಕೊಂಡಿದೆ. ಕಡೆದು ಕಟ್ಟೆ ಹಾಕುತ್ತಾರೆ ಎಂದು 26 ಜನ ಗೆಲ್ಲಿಸಿ ದರು. ಏನ್ ಕಡಿದು ಕಟ್ಟೆ ಹಾಕಿದ್ರು? ಅದರ ಬಗ್ಗೆ ಈಗ ಮಾತನಾಡಲ್ಲ, ಕಾಯುತ್ತೇನೆ, ಹಾಲು ಕಾದಷ್ಟೂ ರುಚಿ ಆಗುತ್ತದೆ.
-ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ