2013ರಲ್ಲಿ ನಗರ ಜಿಲ್ಲೆಯ ವಿವಿಧ ವಿಧಾನಸಭೆ ಕ್ಷೇತ್ರಗಳಿಂದ ಗೆದ್ದ ಐವರು ಶಾಸಕರು, ಪ್ರಸ್ತುತ ರಾಜ್ಯ ಸಚಿವ ಸಂಪುಟದಲ್ಲಿ ಪ್ರಮುಖ ಖಾತೆಗಳಲ್ಲಿದ್ದಾರೆ. ಇವರೆಲ್ಲರ ಮೂಲಕ ನಗರದ ಮೇಲೆ ಪ್ರಭುತ್ವ ಸಾಧಿಸಲು ಕಾಂಗ್ರೆಸ್ ತಂತ್ರ ರೂಪಿಸುತ್ತಿದೆ.
ನಗರ ಜಿಲ್ಲೆಯಲ್ಲಿ 13 ಸ್ಥಾನ ಹೊಂದಿರುವ ಕಾಂಗ್ರೆಸ್, ಈ ಬಾರಿ 16ರಿಂದ 18ಸ್ಥಾನ ಗಳಿಸುವ ಗುರಿ ಹೊಂದಿದೆ. ನಗರ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್, ನಗರಾಭಿವೃದ್ಧಿ ಸಚಿವ ರೋಷನ್‌ಬೇಗ್, ಗೃಹ ಸಚಿವ ರಾಮಲಿಂಗಾರೆಡ್ಡಿ, ಕೃಷಿ ಸಚಿವ ಕೃಷ್ಣಭೈರೇಗೌಡ, ವಸತಿ ಸಚಿವ ಎಂ.ಕೃಷ್ಣಪ್ಪ ಅವರೊಂದಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ಗುಂಡೂರಾವ್ ಅವರಿಗೆ ನಗರದಲ್ಲಿ ಪಕ್ಷಕ್ಕೆ ಪ್ರಚಂಡ ಜಯ ತಂದು ಕೊಡುವ ಹೊಣೆಯನ್ನು ಸಿಎಂ ನೀಡಿದ್ದಾರೆ.
ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಬರಲಿರುವ ಏಳು ಬಂಡಾಯ ಶಾಸಕರ ಪೈಕಿ ಜಮೀರ್ ಅಹಮದ್ ಹಾಗೂ ಅಖಂಡ ಶ್ರೀನಿವಾಸಮೂರ್ತಿ ನಗರದ ಕ್ಷೇತ್ರಗಳಿಗೆ ಸೇರಿರುವುದರಿಂದ ಆ ಎರಡೂ ಕ್ಷೇತ್ರಗಳು ಕಾಂಗ್ರೆಸ್ ವಶವಾಗಲಿವೆ ಎಂಬುದು ಕಾಂಗ್ರೆಸ್ ಲೆಕ್ಕಾಚಾರ.
ಈಗ ಕಾಂಗ್ರೆಸ್ ಶಾಸಕರು ಇರುವ ಕ್ಷೇತ್ರಗಳ ಜತೆಗೆ ಜಯನಗರ, ಹೆಬ್ಟಾಳ, ಸಿ.ವಿ.ರಾಮನ್‌ನಗರ, ಬೊಮ್ಮನಹಳ್ಳಿ ಕ್ಷೇತ್ರಗಳ ಗೆಲುವಿಗೂ ಹೆಚ್ಚು ಒತ್ತು ನೀಡಲಾಗುತ್ತಿದೆ. ಕಳೆದ ಒಂದು ತಿಂಗಳಿಂದ ನಗರ ಕ್ಷೇತ್ರಗಳಲ್ಲಿ ಹತ್ತು ಹಲವು ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ನೆರವೇರಿಸುವಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ನಿರತರಾಗಿದ್ದಾರೆ.
ನಗರದ ಮತದಾರರ ಮನವೊಲಿಸಲು ಇಂದಿರಾ ಕ್ಯಾಂಟೀನ್, ವೈಟ್ ಟಾಪಿಂಗ್, ಟೆಂಡರ್ ಶ್ಯೂರ್ ರಸ್ತೆ ಅಭಿವೃದ್ಧಿ ಪ್ರಮುಖವಾಗಿ ಪುಸ್ತಕದಲ್ಲಿ ಪ್ರಸ್ತಾಪಿಸಲು ಉದ್ದೇಶಿಲಾಗಿದೆ. ಈ ಮಧ್ಯೆ, ಶಾಂತಿನಗರ ಶಾಸಕ ಎನ್.ಹ್ಯಾರಿಸ್ ಪುತ್ರನ ಪ್ರಕರಣ, ಕೆ.ಆರ್.ಪುರಂನಲ್ಲಿ ಕಾಂಗ್ರೆಸ್ ಮುಖಂಡನ ಪ್ರಕರಣದಿಂದ ಪಕ್ಷಕ್ಕೆ ಆಗಿರುವ ಡ್ಯಾಮೇಜ್ ಕಂಟ್ರೋಲ್ ಮಾಡಲು ಪಕ್ಷದ ನಾಯಕರು ಹರಸಾಹಸ ಪಡುತ್ತಿದ್ದಾರೆ.
* ಶಂಕರ ಪಾಗೋಜಿ