Advertisement

ಸಮ್ಮಿಶ್ರ ಸರ್ಕಾರದ ಗೊಂದಲ: ಕಾರ್ಯಾಂಗಕ್ಕೆ ಗ್ರಹಣ

06:00 AM Sep 19, 2018 | |

ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಎಷ್ಟು ದಿನ ಇರುತ್ತೋ ಈ ಸರ್ಕಾರ ಎಂಬ ಪ್ರಶ್ನೆಯೂ ಇದೆ. ಈ ಮಾತಿಗೆ ಇಂಬುಕೊಡುವಂತೆ ಆಗ್ಗಾಗ್ಗೆ ಸರ್ಕಾರದಲ್ಲಿ ಗೊಂದಲ, ಪಾಲುದಾರ ಪಕ್ಷಗಳಾದ ಜೆಡಿಎಸ್‌-ಕಾಂಗ್ರೆಸ್‌ನಲ್ಲಿನ ಆಂತರಿಕ ಕಚ್ಚಾಟ, ಆಪರೇಷನ್‌ ಕಮಲ ಭೀತಿ ಪ್ರಹಸನಗಳು ಸರ್ಕಾರದ ಸ್ಥಿರತೆ ಬಗ್ಗೆ ಅನುಮಾನಗಳನ್ನೂ ಮೂಡಿಸಿದೆ. ಇದು ಸಹಜವಾಗಿ ಕಾರ್ಯಾಂಗದ ಮೇಲೂ ಪರಿಣಾಮ ಬೀರಿದ್ದು, ಸರ್ಕಾರ ಇದ್ದೂ ಇಲ್ಲದಂತೆ ಎಂದು ಬಿಂಬಿತವಾಗಿದೆ.

Advertisement

ಕಳೆದ 120 ದಿನಗಳಲ್ಲಿ ನಡೆದ ವಿದ್ಯಮಾನಗಳಿಂದ ಕಾರ್ಯಾಂಗದಲ್ಲೂ ಒಂದು ರೀತಿಯ ಜಡತ್ವ ಉಂಟಾಗಿ, ಸರ್ಕಾರ  ಎಷ್ಟು ದಿನ ಇರುತ್ತೋ ಏನೋ ಎಂಬ ಅನುಮಾನದಲ್ಲೇ ಅಧಿಕಾರಿ ವರ್ಗ ಸಹ ಕೆಲಸ ಮಾಡುವಂತಾಗಿದೆ. ಇದು ಸಹಜವಾಗಿ  ಒಂದು ಹಂತದಲ್ಲಿ ಆಡಳಿತದ ಯಂತ್ರ ಆಗ್ಗಾಗ್ಗೆ ಸ್ಥಗಿತವಾಗಲು ಕಾರಣವಾಗಿದೆ. ಅರಾಜಕತೆಗಿಂತ ದೊಡ್ಡ ಶತ್ರು ಇಲ್ಲ ಎನ್ನುವ ಮಾತಿದೆ. ಹಾಗಂತ ಕರ್ನಾಟಕದಲ್ಲಿ ಅರಾಜಕತೆ ಇದೆ ಎಂದಲ್ಲ. ಅನಿವಾರ್ಯ ಪರಿಸ್ಥಿತಿಯಲ್ಲಿ ಉದಯಿಸಿದ 37 ಶಾಸಕರ  ಜೆಡಿಎಸ್‌ ಮತ್ತು 79 ಶಾಸಕರ ಬಲ ಇರುವ ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರ ಆರಂಭದಲ್ಲೇ ಅದರ ಮುಂದುವರಿಕೆ ಕುರಿತಂತೆ ಪ್ರಶ್ನೆಗಳನ್ನು ಎಬ್ಬಿಸಿತ್ತು. 120 ದಿನಗಳ ಬಳಿಕವೂ ಆ ಪ್ರಶ್ನೆಗಳು ಮತ್ತೆ ಮತ್ತೆ ಜನಮಾನಸವನ್ನು ಕಾಡುತ್ತಲೇ ಇವೆ. 

ಕಳೆದ ವಿಧಾನಸಭೆ ಚುನಾವಣೆಯ ಸಮಯದಲ್ಲಿ ಹಾವು-ಮುಂಗುಸಿಗಳಂತಿದ್ದ ಕಾಂಗ್ರೆಸ್‌-ಜೆಡಿಎಸ್‌ ಪಕ್ಷಗಳು ಸೇರಿ ಸರ್ಕಾರ ರಚಿಸಿದರೆ ಆ ದೋಸ್ತಿ ಬಗ್ಗೆ ಶಂಕೆ ಬಾರದೆ ಇರದು. ಎಚ್‌.ಡಿ. ಕುಮಾರ ಸ್ವಾಮಿ “ಅವರಪ್ಪನಾಣೆ ಮುಖ್ಯಮಂತ್ರಿ ಆಗಲಾರರು’ ಎಂದೇ ಪದೇ ಪದೇ ಹೇಳುತ್ತಿದ್ದ ನಿಕಟಪೂರ್ವ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ಪಕ್ಷವನ್ನು ಅಧಿಕಾರದಿಂದ ದೂರ ಇಡಲೋಸುಗ “ಕುಮಾರಸ್ವಾಮಿ ಅವರೇ ನಮ್ಮ ಮುಖ್ಯಮಂತ್ರಿ’ ಎಂದು ಘೋಷಿಸಿದ ಅನಿವಾರ್ಯತೆಯನ್ನು ಕರ್ನಾಟಕ ಕಂಡಿದೆ. 

ಈಗ ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ಸಿದ್ದರಾಮಯ್ಯ ಅವರೇ ದೋಸ್ತಿ ಸರ್ಕಾರದ ವಿರುದ್ಧ ತೊಡೆ ತಟ್ಟಿದ್ದಾರೆ ಎನ್ನುವ ವದಂತಿಯೂ ಇದೆ. ಪ್ರಾರಂಭದಲ್ಲಿ ಸಿದ್ದರಾಮಯ್ಯ ಅವರು ಸರ್ಕಾರಕ್ಕೆಸೆದ ಸಾಲು ಸಾಲು ಪತ್ರಗಳು, ಅನ್ನ ಭಾಗ್ಯದಂತಹ ಯೋಜನೆಗಳ ಆಗುಹೋಗುಗಳ ಬಗ್ಗೆ ಜೆಡಿಎಸ್‌-ಕಾಂಗ್ರೆಸ್‌ ನಡುವಿನ ಕೆಸರೆರಚಾಟ..ಹೀಗೆಯೇ ನಡೆದ ಶೀತಲ ಸಮರ  ಪಿಎಲ್‌ಡಿ ಬ್ಯಾಂಕಿನ ನಿರ್ದೇಶಕರ ಚುನಾವಣೆಯಲ್ಲಿ ಒಂದು ಹಂತಕ್ಕೆ ಬಂದು ನಿಂತಿತು. ಅಲ್ಲಿಂದ ಪುಟಿದೆದ್ದ ಸಮರ ನೇರ ಯುದ್ಧ ಭೂಮಿಯಲ್ಲೇ ನಡೆದಿದ್ದು, ಜಾರಕಿಹೊಳಿ ಮತ್ತು ಡಿಕೆ ಶಿವಕುಮಾರ್‌ ತಂಡಗಳ ನಡುವೆ. ಈ ನಡುವೆ ಬಿಜೆಪಿ ಸ್ವಂತಬಲದಲ್ಲಿ ಸರ್ಕಾರ ಮತ್ತೆ ತರಲು ನಡೆಸುತ್ತಿದೆ ಎನ್ನಲಾದ ಸರ್ಜರಿ ಯಾವ ಹಂತದಲ್ಲಿ ಬಂದು ನಿಲ್ಲುತ್ತದೋ ಎಂಬುದು ಮುಂದೆ ಗೊತ್ತಾಗಲಿದೆ. 

ಈ ಎಲ್ಲಾ ಜಂಜಾಟಗಳ ನಡುವೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಆಗಾಗ ತಮ್ಮ ಅಧಿಕಾರಿಗಳನ್ನು ಎಚ್ಚರಿಸುತ್ತಿರುವುದು ಕಂಡುಬರುತ್ತಲೇ ಇದೆ. ಕುಮಾರಸ್ವಾಮಿ ತಮ್ಮ ಜನಪ್ರಿಯ ಯೋಜನೆ “ರೈತರ ಸಾಲಮನ್ನಾ’ ಜಾರಿಗೆ ತರಲು ಅಧಿಕಾರಿಗಳ ತಾತ್ವಿಕ ಒಪ್ಪಿಗೆ ಇರಲಿಲ್ಲ. ಆದರೂ ಅವರು ಹಠ ಹಿಡಿದು ಆರ್ಥಿಕವಾಗಿ ಏನೇ ಸವಾಲು ಎದುರಾದರೂ ನಿಭಾಯಿಸಲು ಸಿದ್ಧ ಎಂದು ಒಪ್ಪಿಸಿದರು. ಆದರೆ, ಅವರು ಕೈಗೊಂಡ ಉತ್ತಮ ತೀರ್ಮಾನಗಳು ಸಮ್ಮಿಶ್ರ ಸರ್ಕಾರದ ಗೊಂದಲದಿಂದ ಮರೆಯಾಗುತ್ತಿವೆ. 

Advertisement

ಶಾಸಕಾಂಗದಲ್ಲಿ ಸಂಕಷ್ಟ ಇದ್ದಾಗಲೂ, ಕಾರ್ಯಾಂಗ ಸದಾ ಕಾರ್ಯಗತವಾಗಿರುತ್ತದೆ. ಅದು ನಮ್ಮ ಸಂವಿಧಾನ ಕಲ್ಪಿಸಿದ ಅತ್ಯುತ್ತಮ ಸಂಪ್ರದಾಯ. ಆದರೂ, ಬಹುತೇಕ ಅಧಿಕಾರಿ ವರ್ಗಕ್ಕೂ ರಾಜಕೀಯಕ್ಕೂ ನೇರವಾಗಿ ನಂಟು ಇರುವುದರಿಂದ ರಾಜಕೀಯ ಅಸ್ಥಿರತೆ ಸಂದರ್ಭಗಳಲ್ಲಿ ಅವರಾಡಿದ್ದೇ ಆಟ. ಕೆಲ ಅಧಿಕಾರಿಗಳಂತೂ ಜಾತಿ ಪ್ರೇರಿತರಾಗಿ ತಮಗಿಷ್ಟವಾದ ರಾಜಕೀಯ ಪಕ್ಷಗಳತ್ತ ವಾಲುವುದೂ ಕಂಡುಬಂದಿದೆ. ಆದರೂ ಸಾಮಾನ್ಯವಾಗಿ ಯಾವುದೇ ಸರ್ಕಾರ ಇದ್ದರೂ ಅದರತ್ತ ವಾಲುತ್ತಲೇ ತಮ್ಮ ಬೇಳೆ ಬೇಯಿಸುವುದರಲ್ಲಿ ತೊಡಗುವುದು ಅಸಾಮಾನ್ಯ ಏನಲ್ಲ.  

ಕರ್ನಾಟಕದಲ್ಲಿ ಜನರೇ ಆಯ್ಕೆ ಮಾಡಿದ ಸರ್ಕಾರ ಇರದಿದ್ದರೂ, ಸಂಖ್ಯಾ ಬಲ ಇರುವ ಸಮ್ಮಿಶ್ರ ಸರ್ಕಾರ ಇದೆ. ಈ ಸಂಖ್ಯೆ ಯಾವಾಗ ಕುಸಿದು ದೋಸ್ತಿ ಸರ್ಕಾರ ಬೀಳುತ್ತದೆ ಎಂಬುದು ಗೊತ್ತಿಲ್ಲ. ಆದರೆ, ಅಧಿಕಾರಿ ವರ್ಗವೂ ರಾಜಕೀಯ ನಡೆಸಿದರೆ, ಕಾರ್ಯಾಂಗದ ಚಟುವಟಿಕೆಗೆ ಕಡಿವಾಣ ಹಾಕಿದಂತೆ. ಅಧಿಕಾರಿಗಳ ಜತೆ ಅವರ ನೌಕರ ವರ್ಗವೂ ಅದೇ ನಿಟ್ಟಿನಲ್ಲಿ ತೊಡಗಿದರೆ ಜನಸಾಮಾನ್ಯರ ಪಾಡು ಕಷ್ಟ.  

Advertisement

Udayavani is now on Telegram. Click here to join our channel and stay updated with the latest news.

Next