ಬೆಂಗಳೂರು: ಕಾಂಗ್ರೆಸ್ ಪಕ್ಷ ವಿಶ್ವಕರ್ಮ ಸಮುದಾಯವನ್ನು ನಿರ್ಲಕ್ಷ್ಯ ಮಾಡಿರುವುದರಿಂದ ಸಮುದಾಯದ ಸಂಘಟನೆ ಇನ್ನಷ್ಟು ಪ್ರಬಲವಾಗುತ್ತಿದೆ ಎಂದು ವಿಶ್ವಕರ್ಮ ಮಹಾಸಭಾದ ಅಧ್ಯಕ್ಷ ಕೆ.ಪಿ.ನಂಜುಂಡಿ ಹೇಳಿದರು.
ಅಖೀಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಮತ್ತು ವಿಶ್ವಕರ್ಮ ಸಮುದಾಯ ಸಂಘದಿಂದ ಭಾನುವಾರ ಬನ್ನೇರುಘಟ್ಟ ರಸ್ತೆಯ ಅಪ್ಪಿ ಜೆ.ಜೆ. ಆಟದ ಮೈದಾನದಲ್ಲಿ ಹಮ್ಮಿಕೊಂಡಿದ್ದ 4ನೇ ವರ್ಷದ ವಿಶ್ವಕರ್ಮ ಜಯಂತ್ಯೋತ್ಸವದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ವಿಶ್ವಕರ್ಮ ಸಮುದಾಯವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಇದರ ಪರಿಣಾಮವಾಗಿ ಸಮುದಾಯದ ಸಂಘಟನೆ ಇನ್ನಷ್ಟು ವೇಗವಾಗಿ ಬೆಳೆಯುತ್ತಿದೆ. ಬಿಜೆಪಿಯಿಂದ ನಮ್ಮ ಸ್ವಾಭಿಮಾನಕ್ಕೆ ತಕ್ಕಂತೆ ಮನ್ನಣೆ ಸಿಕ್ಕಿದೆ ಎಂದರು.
ವಿಶ್ವಕರ್ಮ ಜಯಂತಿಗೆ ಅಮಿತ್ ಶಾ: ಅ.8ರಂದು ನಗರದ ಅರಮನೆ ಮೈದಾನದಲ್ಲಿ 9ನೇ ವಿಶ್ವಕರ್ಮ ಜಯಂತಿಯನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮುಂದಾಳತ್ವದಲ್ಲಿ ನಡೆಸಲಿದ್ದೇವೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಕೇಂದ್ರ ಗೃಹ ಸಚಿವ ರಾಜನಾಥ್‌ಸಿಂಗ್, ಕೌಶಲಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗಡೆ ಮೊದಲಾದ ಗಣ್ಯರು ಭಾಗವಹಿಸಲಿದ್ದಾರೆ. ಜಯಂತ್ಯೋತ್ಸವದಲ್ಲಿ ವಿಶ್ವಕರ್ಮ ಸಮುದಾಯ ಶಕ್ತಿ ಪ್ರದರ್ಶನ ಮಾಡಲಿದ್ದೇವೆ ಎಂದು ಹೇಳಿದರು.
ಪ್ರಮುಖ ಮೂರು ಬೇಡಿಕೆಯನ್ನು ಈಡೇರಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸುವ ನಿಟ್ಟಿನಲ್ಲಿ ವಿಶ್ವಕರ್ಮ ಜಯಂತೋತ್ಸವ ನಡೆಯಲಿದೆ. ಕೇಂದ್ರ ಸರ್ಕಾರದಿಂದ ವಿಶ್ವಕರ್ಮ ಅಭಿವೃದ್ಧಿ ನಿಗಮ ಆರಂಭಿಸಿ, ಅಗತ್ಯ ಅನುದಾನ ನೀಡಬೇಕು. ವಿಶ್ವಕರ್ಮ ಜಯಂತೋತ್ಸವನ್ನು ಕೇಂದ್ರ ಸರ್ಕಾರದಿಂದಲೇ ದೇಶಾದ್ಯಂತ ಆಚರಿಸಬೇಕು ಮತ್ತು ಚಿನ್ನಾಬೆಳ್ಳಿ ವ್ಯಾಪಾರಿಗಳ ಮೇಲೆ ಪೊಲೀಸರು ನಡೆಸುತ್ತಿರುವ ದೌರ್ಜನ್ಯ ತಡೆಗೆ ಸೂಕ್ತ ಕಾಯ್ದೆಯೊಂದನ್ನು ಜಾರಿ ಮಾಡುವಂತೆ ಮನವಿ ಸಲ್ಲಿಸಲಿದ್ದೇವೆ ಎಂದರು.
ವಿಶ್ವಕರ್ಮ ಜಯಂತ್ಯೋತ್ಸವದಂದು ಐವರು ಗಣ್ಯರಿಗೆ ನೀಡುವ ವಿಶ್ವಕರ್ಮ ಪ್ರಶಸ್ತಿಯ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದು, ಒಂದೆರೆಡು ದಿನದಲ್ಲಿ ಪ್ರಕ್ರಿಯೆ ಪೂರ್ಣಗೊಳಿಸಲಿದ್ದೇವೆ. ರಾಜ್ಯಾದ್ಯಂತ ಸಮುದಾಯದ ಸಂಘಟನೆ ಕಾರ್ಯ ನಡೆಯುತ್ತಿದೆ. ವಿಶ್ವಕರ್ಮ ಸಮುದಾಯ ನಾಡಿಗೆ ನೀಡಿದ ಕೊಡುಗೆಯನ್ನು ಎಲ್ಲರಿಗೂ ತಿಳಿಸುವ ಪ್ರಯತ್ನ ಮಾಡಲಿದ್ದೇವೆ ಎಂದು ಹೇಳಿದರು.
ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಅಖೀಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಅಧ್ಯಕ್ಷ ಜೆ.ಲೋಕೇಶ್, ವಿಶ್ವಕರ್ಮ ಮುಖಂಡರಾದ ಕನ್ನಡ ಸೋಮು, ಶ್ಯಾಮ್ ಸುಂದರ್, ಎಸ್.ಲೋಕನಾಥಾಚಾರಿ ಮೊದಲಾದವರು ಉಪಸ್ಥಿತರಿದ್ದರು.