Advertisement

ಜನಸಾಮಾನ್ಯರಿಗೂ ಕಾನೂನು ಜ್ಞಾನ ಅವಶ್ಯ 

05:11 PM May 17, 2018 | |

ಹುಬ್ಬಳ್ಳಿ: ದೇಶದಲ್ಲಿ ಮಹಿಳೆಯರು ಹಾಗೂ ಬಾಲಕಿಯರ ಮೇಲೆ ಅತ್ಯಾಚಾರ ನಡೆಯುತ್ತಿರುವುದು ಕಳವಳಕಾರಿ ಸಂಗತಿ ಎಂದು ಒಂದನೇ ಹೆಚ್ಚುವರಿ ಜಿಲ್ಲಾ, ಸತ್ರ ನ್ಯಾಯಾಲಯದ ನ್ಯಾಯಾಧೀಶ ಸಿದ್ದಪ್ಪ ಹೊಸಮನಿ ಹೇಳಿದರು.

Advertisement

ಇಲ್ಲಿನ ನ್ಯಾಯಾಲಯಗಳ ಸಂಕೀರ್ಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಅಭಿಯೋಜನಾ ಇಲಾಖೆ, ವಾರ್ತಾ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಂದಾಯ ಇಲಾಖೆ, ತಾಪಂ, ಶಿಕ್ಷಣ ಇಲಾಖೆ, ಕಾರ್ಮಿಕ ಇಲಾಖೆ, ಪೊಲೀಸ್‌ ಇಲಾಖೆ ಆಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾನೂನು ಸಾಕ್ಷರತಾ ರಥ ಹಾಗೂ ಜನತಾ ನ್ಯಾಯಾಲಯ ಉದ್ಘಾಟಿಸಿ ಅವರು ಮಾತನಾಡಿದರು.ಮಹಿಳೆಯರು ಹಾಗೂ ಮಕ್ಕಳ ಮೇಲೆ ದೌರ್ಜನ್ಯಗಳು ಹೆಚ್ಚಾಗುತ್ತಿದ್ದು. ಇವುಗಳನ್ನು ತಡೆಯುವಲ್ಲಿ ಜನಸಾಮಾನ್ಯರಿಗೆ ಕಾನೂನಿನ ಅರಿವು ನೀಡಬೇಕು. ಸರ್ವೋಚ್ಚ ನ್ಯಾಯಾಲಯದ ತೀರ್ಪಿನನ್ವಯ ಜನಸಾಮಾನ್ಯರಿಗೆ ಕಾನೂನು ನೆರವು ನೀಡುವ ಸಲುವಾಗಿ ತಾಲೂಕು ಕಾನೂನು ಸೇವಾ ಸಮಿತಿಯಿಂದ ಹಮ್ಮಿಕೊಳ್ಳಲಾದ ಕಾನೂನು ಸಾಕ್ಷರತಾ ರಥಾ ಕಾರ್ಯಕ್ರಮದ ಮೂಲಕ ಜನಸಾಮಾನ್ಯರಿಗೆ ಕಾನೂನಿನ ಜ್ಞಾನ ತಲುಪುವಂತಾಗಬೇಕು. ಜನರಿಗೆ ಕಾನೂನು ಮಾಹಿತಿ
ನೀಡಿದರೆ ಸಾಲದು. ನೊಂದವರಿಗೆ ಕಾನೂನು ಸಹಾಯ ದೊರಕುವಂತಾಗಬೇಕು. ಅಂದಾಗ ಕಾನೂನು ನೆರವು ಕಾರ್ಯವು ಸಾರ್ಥಕವಾಗುತ್ತದೆ ಎಂದರು.

ಪ್ರಧಾನ ಕಾರ್ಮಿಕ ನ್ಯಾಯಾಲಯದ ಅಧ್ಯಕ್ಷಾಧಿಕಾರಿ, ಜಿಲ್ಲಾ ನ್ಯಾಯಾಧೀಶ ಎಸ್‌.ಎನ್‌. ಕಲ್ಕಣಿ ಮಾತನಾಡಿ, ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ವಿವಿಧ ಇಲಾಖೆಗಳು ಕಳದೆ ಮೂರು ವರ್ಷಗಳಿಂದ ಉತ್ತಮ ರೀತಿಯಲ್ಲಿ ಜನಸಾಮಾನ್ಯರಗೆ ಕಾನೂನಿನ ಅರಿವು ಮೂಡಿಸುತ್ತಿವೆ. ಹೊಸದಾಗಿ ಹುಬ್ಬಳ್ಳಿ ವಕೀಲರ ಸಂಘಕ್ಕೆ ಆಯ್ಕೆಯಾದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮುಂದೆಯೂ ತಾಲೂಕು ಕಾನೂನು ಸೇವಾ ಸಮಿತಿಯೊಂದಿಗೆ ಉತ್ತಮ ರೀತಿಯಲ್ಲಿ ಕೈಜೋಡಿಸಲಿದ್ದಾರೆ ಎಂದು ಹೇಳಿದರು.

ವಕೀಲರ ಸಂಘದ ಅಧ್ಯಕ್ಷ ಅಶೋಕ ವಿ. ಬಳಿಗಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಾಲಾ-ಕಾಲೇಜುಗಳಲ್ಲಿ ಮಕ್ಕಳಿಗೆ ಕಾನೂನಿನ ಅರಿವು ನೀಡುವುದರ ಮೂಲಕ ಹೆಚ್ಚಿನ ರೀತಿಯ ಪರಿಣಾಮ ಕಾಣಬಹುದು. ಆ ಮೂಲಕ ಮಕ್ಕಳನ್ನು ಸಮಾಜದಲ್ಲಿ ಉತ್ತಮ ಪ್ರಜೆಗಳನ್ನಾಗಿ ಮಾಡಬಹುದು ಎಂದರು.

ಕಾರ್ಮಿಕ ಇಲಾಖೆಯ ಉಪವಿಭಾಗ-2ರ ಕಾರ್ಮಿಕ ಅಧಿಕಾರಿ ತರನಮ್‌ ಬೆಂಗಾಲಿ ಕಾರ್ಮಿಕ ಕಾಯ್ದೆಗಳ ಬಗ್ಗೆ ಉಪನ್ಯಾಸ ನೀಡಿದರು. ನ್ಯಾಯಾಧೀಶರಾದ ಎ.ಎನ್‌. ನಾಗರಾಜ್‌, ರವೀಂದ್ರ ಪಲ್ಲೇದ, ಅಪರ ತಹಶೀಲ್ದಾರ್‌ ಪ್ರಕಾಶ ನಾಶಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ಕೆ.ಎ. ಸನದಿ, ಎನ್‌.ಕೆ. ಸಾಹುಕಾರ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಎಫ್‌. ಹಿರೇಮಠ ಇನ್ನಿತರರಿದ್ದರು. ತಾಲೂಕಾ ಕಾನೂನು ಸೇವಾ ಸಮಿತಿ ಅಧ್ಯಕ್ಷ ವೆಂಕಟೇಶ ಆರ್‌. ಹುಲ್ಗಿ ಸ್ವಾಗತಿಸಿದರು. ಸದಸ್ಯ ಕಾರ್ಯದರ್ಶಿ ಮಹೇಶ ಪಾಟೀಲ ವಂದಿಸಿದರು.

Advertisement

ಎಲ್ಲೆಲ್ಲಿ ಕಾರ್ಯಕ್ರಮ?
ಕಾನೂನು ಸಾಕ್ಷರತಾ ರಥ ಹಾಗೂ ಜನತಾ ನ್ಯಾಯಾಲಯ ಕಾರ್ಯಕ್ರಮಗಳು ಮೇ 17ರಂದು ಬೆಳಗ್ಗೆ 10 ಗಂಟೆಗೆ ಅಂಚಟಗೇರಿ ಗ್ರಾಮದ ಕೆನ್‌ ಅಗ್ರಿಟೇಕ್‌, ಸಂಜೆ 5:30 ಗಂಟೆಗೆ ಹಳೇ ಹುಬ್ಬಳ್ಳಿಯ ನ್ಯೂ ಇಂಗಿಷ್‌ ಶಾಲೆಯ ಹತ್ತಿರದ ಮುಧೋಳ ಭವನ, 18ರಂದು ಬೆಳಗ್ಗೆ 10 ಗಂಟೆಗೆ ಅದರಗುಂಚಿ ಗ್ರಾಮದ ಗ್ರಾಪಂ ಸಭಾಭವನ, ಸಂಜೆ 5:30 ಗಂಟೆಗೆ ಘಂಟಿಕೇರಿಯ ಬಾಲಮಂದಿರ ಹಾಗೂ 19ರಂದು ಬೆಳಗ್ಗೆ 10 ಗಂಟೆಗೆ ಹೆಬಸೂರದ ಸಮುದಾಯ ಭವನ, 5:30 ಗಂಟೆಗೆ ಕಿರೇಸೂರು ಗ್ರಾಪಂನಲ್ಲಿ ನಡೆಯಲಿವೆ.

Advertisement

Udayavani is now on Telegram. Click here to join our channel and stay updated with the latest news.

Next