Advertisement

ಬಿಬಿಎಂಪಿ ಘನತ್ಯಾಜ್ಯ ವಿಲೇವಾರಿಗೆ ಸಮಿತಿ ಮೆಚ್ಚುಗೆ

12:15 PM Oct 31, 2018 | |

ಬೆಂಗಳೂರು: ಘನತ್ಯಾಜ್ಯ ವಿಲೇವಾರಿ ಮಾಡುವಲ್ಲಿ ಪರಿಸರಕ್ಕೆ ಹಾನಿ ಮಾಡಿದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ (ಎನ್‌ಜಿಟಿ) ಬಿಬಿಎಂಪಿಗೆ 5 ಕೋಟಿ ರೂ. ದಂಡ ವಿಧಿಸಿದ ಬೆನ್ನಲ್ಲೇ ಎನ್‌ಜಿಟಿ ರಚಿಸಿರುವ ದಕ್ಷಿಣ ಭಾರತದ ಪ್ರಾದೇಶಿಕ ಮೇಲ್ವಿಚಾರಣಾ ಸಮಿತಿ ಬಿಬಿಎಂಪಿಯ ಘನ ತ್ಯಾಜ್ಯ ವಿಲೇವಾರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದೆ.

Advertisement

ವಿಧಾನಸೌಧದಲ್ಲಿ ಮಂಗಳವಾರ ನಡೆದ ಎನ್‌ಜಿಟಿ ದಕ್ಷಿಣ ಭಾರತದ ಪ್ರಾದೇಶಿಕ ಮೇಲ್ವಿಚಾರಣಾ ಸಮಿತಿಯ ಎರಡನೇ ಸಭೆಯ ಬಳಿಕ ಸಮಿತಿ ಅಧ್ಯಕ್ಷ ನ್ಯಾಯಮೂರ್ತಿ ಪಿ.ಜ್ಯೋತಿಮಣಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಘನತ್ಯಾಜ್ಯ ನಿರ್ವಹಣಾ ನಿಯಮ 2016ರ ಅಧಿಸೂಚನೆಯನ್ನು ಅನುಷ್ಠಾನಗೊಳಿಸುವಲ್ಲಿ ಬಿಬಿಎಂಪಿ ಮುಂಚೂಣಿಯಲ್ಲಿದೆ. ಬೆಂಗಳೂರಿನ ಹಲವು ಘನತ್ಯಾಜ್ಯ ನಿರ್ವಹಣಾ ಘಟಕಗಳಿಗೆ ನಾವೂ ಭೇಟಿ ನೀಡಿದ್ದು ವೈಜ್ಞಾನಿಕವಾಗಿ ಕಾರ್ಯ ನಿರ್ವಹಿಸುತ್ತಿವೆ ಎಂದು ಹೇಳಿದರು.

ಬಿಬಿಎಂಪಿಗೆ ದಂಡ ವಿಧಿಸಿರುವ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಘನ ತ್ಯಾಜ್ಯ ನಿರ್ವಹಣಾ ನಿಯಮದ ಅನುಸಾರ ವಿವಿಧ ಹಂತಗಳಲ್ಲಿ ತ್ಯಾಜ್ಯ ವಿಲೇವಾರಿ ಮಾಡಬೇಕಾಗುತ್ತದೆ. ತ್ಯಾಜ್ಯ ಸಂಗ್ರಹ, ಸಾಗಣೆ ಹಂತಗಳೇ ಬೇರೆ, ತ್ಯಾಜ್ಯಗಳ ಜೈವಿಕ ಗಣಿಗಾರಿಕೆಯೇ ಬೇರೆ ಎಂದು ಸ್ಪಷ್ಟಪಡಿಸಿದರು.

ಕೇಂದ್ರ ಸರ್ಕಾರ ಅನುಷ್ಠಾನಗೊಳಿಸಿರುವ ಘನತ್ಯಾಜ್ಯ ನಿರ್ವಹಣಾ ನಿಯಮ 2016ರ ಅನ್ವಯ ದೇಶದ ಎಲ್ಲ ರಾಜ್ಯಗಳು ಪ್ರತ್ಯೇಕ ಘನ ತ್ಯಾಜ್ಯ ನಿರ್ವಹಣಾ ನಿಯಮಗಳನ್ನು ರಚಿಸಿಕೊಳ್ಳಬೇಕು. ಗ್ರಾ.ಪಂಗಳಿಂದ ಹಿಡಿದು ಮಹಾನಗರ ಪಾಲಿಕೆಗಳವರೆಗೆ ಎಲ್ಲ ಸ್ಥಳೀಯ ಸಂಸ್ಥೆಗಳು ಈ ನೀತಿ ಅಳವಡಿಸಿಕೊಳ್ಳಬೇಕು. ಅದರ ಸಮರ್ಪಕ ಅನುಷ್ಠಾನ ಸಂಬಮಧ ಮೇಲುಸ್ತುವಾರಿ ಸಮಿತಿ ನೇಮಕ ಮಾಡಲಾಗಿದ್ದು, ಸಮಿತಿ ಕಾಲ ಕಾಲಕ್ಕೆ ಸಭೆ ನಡೆಸಿ, ಎನ್‌ಜಿಟಿಗೆ ಅಂತಿಮ ವರದಿ ನೀಡುತ್ತದೆ.

ಆ ಬಳಿಕ ನ್ಯಾಯಾಧೀಕರಣ ವಿಚಾರಣೆ ನಡೆಸಿ ಅಂತಿಮ ಆದೇಶ ಹೊರಡಿಸಲಿದೆ ಎಂದು ಹೇಳಿದರು. ಸಭೆಯಲ್ಲಿ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ ಹಾಗೂ ಗೋವಾ ರಾಜ್ಯಗಳ ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು, ಹಾಗೂ ನಗರಾಭಿವೃದ್ಧಿಗೆ ಸಂಬಂಧಿಸಿದ ವಿವಿಧ ಪ್ರಾಧಿಕಾರಗಳ ಮುಖ್ಯಸ್ಥರು ಸಭೆಯಲ್ಲಿ ಪಾಲ್ಗೊಂಡಿದ್ದರು. 

Advertisement

ಬಿಬಿಎಂಪಿ ಅಂಕಿ ಅಂಶಗಳ ಬಗ್ಗೆ ತಮಿಳುನಾಡು ಆಕ್ಷೇಪ: ಮಂಗಳವಾರ ನಡೆದ ದಕ್ಷಿಣ ಭಾರತದ ಎನ್‌ಜಿಟಿ ಸಭೆಯಲ್ಲಿ ಬಿಬಿಎಂಪಿ ಸಲ್ಲಿಸಿರುವ ಘನ ತ್ಯಾಜ್ಯ ನಿರ್ವಹಣೆಯ ಅಂಕಿ ಸಂಖೆಗಳ ಬಗ್ಗೆ ತಮಿಳುನಾಡು ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಬೆಂಗಳೂರಿನ ಜನಸಂಖ್ಯೆ 1.30 ಕೋಟಿ ಇದ್ದು, ಪ್ರತಿ ದಿನ 5700 ಮೆಟ್ರಿಕ್‌ ಟನ್‌ ಘನತ್ಯಾಜ್ಯ ನಿರ್ವಹಣೆ ಮಾಡಲಾಗುತ್ತಿದೆ ಎಂಬ ಬಿಬಿಎಂಪಿ ಅಧಿಕಾರಿಗಳ ವರದಿಗೆ ತಮಿಳುನಾಡು ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿ, ಚೆನೈ ನಗರದ ಜನಸಂಖ್ಯೆ 78 ಲಕ್ಷ ಇದ್ದು, ಪ್ರತಿ ದಿನ 5800 ಮೆಟ್ರಿಕ್‌ ಟನ್‌ ಘನ ತ್ಯಾಜ್ಯ ಸಂಗ್ರಹಿಸಲಾಗುತ್ತಿದೆ. ಆದರೆ, ಬೆಂಗಳೂರಿನ ಜನಸಂಖ್ಯೆಗೆ ಅನುಗುಣವಾಗಿ ತ್ಯಾಜ್ಯದ ಪ್ರಮಾಣ ಅಂದಾಜು ಮಾಡಿಲ್ಲ ಎಂದು ಹೇಳಿದ್ದಾರೆ.

ಚೆನೈನಲ್ಲಿ ಪ್ರತಿ ವ್ಯಕ್ತಿಯಿಂದ ದಿನವೊಂದಕ್ಕೆ 610 ಗ್ರಾಂ ಹಾಗೂ ಕೋಯಿಮತ್ತೂರಿನಲ್ಲಿ ಒಬ್ಬ ವ್ಯಕ್ತಿಯಿಂದ ಪ್ರತಿ ದಿನ 850 ಗ್ರಾಂ ತ್ಯಾಜ್ಯ ಉತ್ಪತ್ತಿಯಾಗುತ್ತದೆ. ಆದರೆ, ಬೆಂಗಳೂರಿನಲ್ಲಿ ಇದರ ಪ್ರಮಾಣ ಕೇವಲ 250 ಗ್ರಾಂ. ಇದೆ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ಪರಿಶೀಲಿಸಿ ಬಿಬಿಎಂಪಿಯಿಂದ ವಿವರಣೆ ಪಡೆಯುವುದಾಗಿ ಎನ್‌ಜಿಟಿಯ ಮೇಲುಸ್ತುವಾರಿ ಸಮಿತಿ ಭರವಸೆ ನೀಡಿದೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next