ಬೆಂಗಳೂರು: ಸಾಹಸಿ ಗುಣ ಹೊಂದಿರುವ ಕರಾವಳಿ ಜನರು ಯಾವುದೇ ಉದ್ಯಮದಲ್ಲಿಯೂ ಯಶಸ್ಸು ಸಾಧಿಸುವ ಕಾರ್ಯಬದ್ಧತೆ ಛಲ ಹೊಂದಿರುತ್ತಾರೆ ಎಂದು ಗೃಹಸಚಿವ ಬಸವರಾಜ ಬೊಮ್ಮಾಯಿ ಬಣ್ಣಿಸಿದರು. ಬೆಂಗಳೂರು ಬಂಟರ ಸಂಘದ ವತಿಯಿಂದ ನಡೆದ ದೀಪಾವಳಿ ಸಂಭ್ರಮ ಮತ್ತು ಉದ್ಯಮಿ ಕೆ. ಪ್ರಕಾಶ್ ಶೆಟ್ಟಿಯವರ ಅಭಿನಂದನಾ ಗ್ರಂಥ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಉದ್ಯಮಿ ಪ್ರಕಾಶ ಶೆಟ್ಟಿಯವರ ತಮ್ಮ ಉದ್ಯಮಗಳ ಯಶಸ್ಸು, ಅವರ ಹಾದಿ ಯುವ ಉದ್ಯಮಿಗಳಿಗೆ ಸ್ಫೂರ್ತಿಯಾಗಬೇಕು ಎಂದರು.
ಪ್ರಕಾಶ್ ಶೆಟ್ಟಿಯವರು ಕೊಡುಗೆ ಕೇವಲ ತಮ್ಮ ಸಮುದಾಯಕ್ಕೆ ಮಾತ್ರವಲ್ಲದೆ, ಸಮಾಜಕ್ಕೂ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಉಡುಪಿ ಜಿಲ್ಲೆಯನ್ನು ಪ್ರವಾಸಿ ಜಿಲ್ಲೆಯನ್ನಾಗಿಸುವ ನಿಟ್ಟಿನಲ್ಲಿ ಸರ್ಕಾರದ ಜೊತೆ ಪ್ರಕಾಶ್ ಶೆಟ್ಟಿಯವರು ಕೂಡ ಸಾಥ್ ನೀಡುತ್ತಿದ್ದಾರೆ. ದೇಶದಲ್ಲಿ ಖ್ಯಾತಿ ಹೊಂದಿರುವ ಅವರ ಉದ್ಯಮ ಜಾಗತಿಕ ಮಟ್ಟದಲ್ಲಿ ಬೆಳೆಯಲಿ ಎಂದು ಹಾರೈಸಿದರು. ಕರಾವಳಿ ಜಿಲ್ಲೆಯ ನೆರೆ ಪೀಡಿತ ಪ್ರದೇಶಗಳಿಗೆ ಸರ್ಕಾರ ಸ್ಪಂದಿಸಲಿದೆ. ಇದೀಗ ಕರಾವಳಿಯಲ್ಲಿ ಮಳೆಯಿಂದಾಗಿ ಸಾಕಷ್ಟು ಹಾನಿಯಾಗಿದೆ. ಸರ್ಕಾರ ಎಲ್ಲಾ ರೀತಿಯಲ್ಲೂ ಸಹಾಯ ಮಾಡಲಿದೆ ಎಂದು ಅವರು ಭರವಸೆ ನೀಡಿದರು.
ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಮಾತನಾಡಿ, ಪ್ರಕಾಶ್ ಶೆಟ್ಟಿಯವರು ಹೋಟೆಲ್ ಉದ್ಯಮವನ್ನು ಅತೀ ಎತ್ತರಕ್ಕೆ ಬೆಳೆಸಿರುವುದರ ಹಿಂದೆ ಅವರ ಬದ್ಧತೆ, ಪರಿಶ್ರಮವಿದೆ. ಸಮುದಾಯ ಮತ್ತು ಸಮಾಜಕ್ಕೆ ಅವರ ಕೊಡುಗೆ ಅನನ್ಯ ಎಂದು ಹೇಳಿದರು. ತುಳು ಭಾಷೆಯಲ್ಲಿಯೇ ಮಾತು ಆರಂಭಿಸಿದ ಮಂಡ್ಯ ಸಂಸದೆ ಸುಮಲತಾ ಅಂಬರೀಷ್, ಪ್ರಕಾಶ್ ಶೆಟ್ಟಿ ಮತ್ತು ಅಂಬರೀಶ್ ಅವರ ನಡುವಿನ ಒಡನಾಟ ತುಂಬಾ ವರ್ಷಗಳದ್ದು ಎಂದು ಸ್ಮರಿಸಿದರು. ಪ್ರಕಾಶ್ ಶೆಟ್ಟಿಯವರು ಉದ್ಯಮದಲ್ಲಿ ಮತ್ತಷ್ಟು ಸಾಧಿಸಿ ಸಮಾಜಕ್ಕೆ ಕೊಡುಗೆ ನೀಡಲಿ ಎಂದು ಹಾರೈಸಿದರು.
ಬಂಟರ ಸಂಘದಿಂದ ಸನ್ಮಾನ ಹಾಗೂ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಪ್ರಕಾಶ ಶೆಟ್ಟಿ, ಬೆಂಗಳೂರು ಬಂಟರ ಸಂಘಕ್ಕೆ ಅಭಾರಿಯಾಗಿದ್ದೇನೆ. ಸಂಘಕ್ಕೆ, ಸಮಾಜಕ್ಕೆ ಮತ್ತು ಸಮುದಾಯಕ್ಕೆ ನನ್ನ ಕೊಡುಗೆಯನ್ನು ಪರಿಗಣಿಸಿ ಅಭಿನಂದನಾ ಗ್ರಂಥವನ್ನು ಹೊರತಂದಿರುವುದಕ್ಕೆ ನಾನು ಚಿರಋಣಿಯಾಗಿದ್ದೇನೆ ಎಂದರು. ಅಭಿನಂದನಾ ಗ್ರಂಥವನ್ನು ಆರ್.ಎನ್.ಎಸ್ ಸಮೂಹ ಸಂಸ್ಥೆಗಳ ಮುಖ್ಯಸ್ಥ ಆರ್ .ಎನ್. ಶೆಟ್ಟಿ ಬಿಡುಗಡೆಗೊಳಿಸಿದರು.ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಆರ್ .ಉಪೇಂದ್ರ ಶೆಟ್ಟಿ , ಸಂಘದ ಕಾರ್ಯದರ್ಶಿ ಮಧುಕರ್ ಶೆಟ್ಟಿ, ಮುರಳೀಧರ ಹೆಗ್ಡೆ, ಯೂನಿಯನ್ ಬ್ಯಾಂಕ್ ನ ನಿವೃತ್ತ ಎಕ್ಸಿ ಕ್ಯೂಟಿವ್ ಡೈರೆಕ್ಟರ್ ಕೆ. ರತ್ನಕರ ಹೆಗ್ಡೆ, ಸಂಘದ ಪದಾಧಿಕಾರಿಗಳಿದ್ದರು.