Advertisement

ಸಮ್ಮಿಶ್ರ ಸರ್ಕಾರದ ಗೊಂದಲ ಬಿಜೆಪಿಗೆ ಲಾಭ

01:46 PM Jun 05, 2018 | Team Udayavani |

ತಿ.ನರಸೀಪುರ: ರಾಜ್ಯದ ಆಡಳಿತಾರೂಢ ಸಮ್ಮಿಶ್ರ ಸರ್ಕಾರದಲ್ಲಿರುವ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಅಭ್ಯರ್ಥಿಗಳಲ್ಲಿ ಸ್ಪರ್ಧೆ ಬಗ್ಗೆ ಗೊಂದಲ ಇರುವುದರಿಂದ ವಿಧಾನ ಪರಿಷತ್‌ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಿ.ನಿರಂಜನಮೂರ್ತಿ ಗೆಲುವಿಗೆ ಸಹಾಯವಾಗಲಿದೆ ಎಂದು ಮೃಗಾಲಯ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಂ.ನಂಜುಂಡಸ್ವಾಮಿ ಹೇಳಿದರು.

Advertisement

ಪಟ್ಟಣದ ದ್ಯೋದಯ ಬಾಲಿಕ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಕ ಮತದಾರರನ್ನು ಭೇಟಿ ಮಾಡಿ ವಿಧಾನ ಪರಿಷತ್‌ ಚುನಾವಣೆಯ ಬಿಜೆಪಿ ಅಭ್ಯರ್ಥಿ ಬಿ.ನಿರಂಜನಮೂರ್ತಿ ಪರ ಮತಯಾಚಿಸಿ ಮಾತನಾಡಿದ ಅವರು, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಎರಡೂ ಪಕ್ಷಗಳು ಸರ್ಕಾರ ರಚನೆಯಲ್ಲಿ ಪಾಲುದಾರರು. ಚುನಾವಣೆಯಲ್ಲಿ ಅವೆರಡು ಪಕ್ಷಗಳು ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವುದು ಮತದಾರರಲ್ಲಿ ಗೊಂದಲಕ್ಕೆ ಕಾರಣವಾಗಿದೆ. ಬಿಜೆಪಿ ಅಭ್ಯರ್ಥಿ ಬಗ್ಗೆ ಒಮ್ಮತ ಇರುವುದರಿಂದ ಈ ಬಾರಿ ಗೆಲ್ಲಲು ಸಹಕಾರಿಯಾಗಲಿದೆ ಎಂದರು.

ಉಪನ್ಯಾಸಕ ಬಿ.ನಿರಂಜನಮೂರ್ತಿ ಅವರಿಗೆ ಸಮಸ್ಯೆಗಳ ಅರಿವಿದೆ. ಸಮಾನ ವೇತನ ಸೇರಿದಂತೆ ಶಿಕ್ಷಣ ನೀತಿ ಹಾಗೂ ನಿವೃತ್ತಿ ವೇತನದ ತಾರತಮ್ಯದ ಬಗ್ಗೆ ಹೋರಾಟ ಮಾಡುವ ಬದ್ಧತೆಯನ್ನು ಹೊಂದಿದ್ದಾರೆ. ಶಿಕ್ಷಕರ ಕ್ಷೇತ್ರದ ಪ್ರತಿನಿಧಿಯಾಗಿರುವ ಮರಿತಿಬ್ಬೇಗೌಡರು ಯಾವುದೇ ಕೆಲಸವನ್ನು ಮಾಡಿಲ್ಲ. ಈ ಬಾರಿ ಬದಲಾವಣೆಯ ನಿರೀಕ್ಷೆಯಲ್ಲಿ ಪ್ರಜ್ಞಾವಂತ ಮತದಾರರಿದ್ದಾರೆ. ಕಮಲದ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಮೂಲಕ ಹೊಸದೊಂದು ದಾಖಲೆ ಬರೆಯಲಿದ್ದಾರೆ ಎಂದು ನಂಜುಂಡಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಜಿಲ್ಲಾಧ್ಯಕ್ಷ ವೆಂಕಟರಮಣಶೆಟ್ಟಿ, ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ ರಂಗನಾಯಕ, ಪ್ರಕೋಷ್ಠಗಳ ಜಿಲ್ಲಾ ಸಂಚಾಲಕ ವರಕೋಡು ಪ್ರಕಾಶ, ಮುಖಂಡರಾದ ರಾಮಸ್ವಾಮಿ, ವರುಣಾ, ತ್ಯಾಗರಾಜು, ಸೋಮಶೇಖರ್‌, ತಿರುಮಲ್ಲೇಶ್‌, ಸಿದ್ದು ಹಾಗೂ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next