ಕಲಬುರಗಿ: ಲಾಕ್‌ಡೌನ್ ಸಡಿಲಿಕೆಗೊಂಡಿದ್ದರೂ ಬಟ್ಟೆ ವ್ಯಾಪಾರ ಚೇತರಿಸಿಕೊಂಡಿಲ್ಲ. ಜನತೆ ತಮ್ಮ ನಿತ್ಯದ ಕಾರ್ಯ, ವ್ಯಾಪಾರ-ವಹಿವಾಟಿನಲ್ಲಿ ತೊಡಗಿಕೊಂಡಿದ್ದಾರೆ. ಆದರೆ, ಬಟ್ಟೆ ಖರೀದಿಸಲು ಯಾರೂ ಮುಂದೆ ಬರುತ್ತಿಲ್ಲ.
ಮೇ-ಜೂನ್ ತಿಂಗಳು ಮದುವೆ ಸೀಜನ್ ಮತ್ತು ರಂಜಾನ್ ಹಬ್ಬಕ್ಕೆಂದು ದೊಡ್ಡ ವ್ಯಾಪಾರಿಗಳು, ಸಣ್ಣ ವ್ಯಾಪಾರಿಗಳು ಸಾಕಷ್ಟು ಪ್ರಮಾಣದ ಬಟ್ಟೆ ಸಂಗ್ರಹಿಸಿದ್ದರು. ಆದರೆ, ಸೀಜನ್ ಆರಂಭವಾಗುವ ವೇಳೆಗೆ ಲಾಕ್‌ಡೌನ್ ಜಾರಿ ಘೋಷಣೆಯಾಗಿ ಅಂಡಿಗಗಳು ಮುಚ್ಚುವಂತೆ ಆಗಿತ್ತು. ಈಗ ಲಾಕ್‌ಡೌನ್ ಸಡಿಲಿಕೆ ಮಾಡಿ ಒಂದು ತಿಂಗಳು ಕಳೆಯುತ್ತಿದ್ದರೂ ಬಟ್ಟೆ ವ್ಯಾಪಾರವಾಗುತ್ತಿಲ್ಲ. ಮೂರು ತಿಂಗಳು ಲಾಕ್ ಡೌನ್‌ದಿಂದಾಗಿ ಜನರ ಬಳಿ ಹಣವಿಲ್ಲದ ಕಾರಣ ಅಂಗಡಿಗಳತ್ತ ಸುಳಿಯುತ್ತಿಲ್ಲ. ಕಲಬುರಗಿ ಮಹಾನಗರದಲ್ಲೇ ಸಣ್ಣ ಪುಟ್ಟ ಮತ್ತು ದೊಡ್ಡ ಅಂಗಡಿಗಳು ಸೇರಿ ಅಂದಾಜು ನಾಲ್ಕು ಬಟ್ಟೆ ಅಂಗಡಿಗಳಿವೆ. ಸಣ್ಣ ಅಂಗಡಿಗಳಿಗೆ ಜನರು ಹೋಗುತ್ತಿದ್ದರೂ, ಅದು ಅಷ್ಟಕ್ಕಷ್ಟೆ. ದೊಡ್ಡ-ದೊಡ್ಡ ಅಂಗಡಿಗಳಿಗೆ ಬರುವವರ ಸಂಖ್ಯೆ ತೀರ ವಿರಾಳವಾಗಿದೆ.
ಕೆಲ ಕಡೆಗಳಲ್ಲಿ ಮದುವೆಗಳು ನಡೆಯುತ್ತಿದ್ದರೂ, ಸಮಾರಂಭದಲ್ಲಿ 50 ಜನ ಮಾತ್ರ ಭಾಗವಹಿಸಲು ಅವಕಾಶ ಇರುವುದರಿಂದ ಬಟ್ಟೆ ಖರೀದಿಸುವ ಗೋಜಿಗೆ ಯಾರೂ ಗೊತ್ತಿಲ್ಲ. ಶಾಲಾ-ಕಾಲೇಜುಗಳ ಆರಂಭ ಇನ್ನೂ ನಿರ್ಧಾರವಾಗದೇ ಇರುವುದರಿಂದ ಮಕ್ಕಳ ಸಮವಸ್ತ್ರಗಳನ್ನು ಕೇಳುವರಿಲ್ಲ ಎನ್ನುತ್ತಾರೆ ವ್ಯಾಪಾರಿಗಳು.
ಕಳೆದ ಬಾರಿ ಮಳೆ ಚೆನ್ನಾಗಿ ಫಸಲು ಬಂದು ರೈತರು, ಜನರ ಕೈಯಲ್ಲಿ ಹಣವಿತ್ತು. ಮಧ್ಯಮ ವರ್ಗ, ಮೇಲ್ವರ್ಗದವರೂ ನೋಟ್‌ಬ್ಯಾನ್ ನಂತರದ ಮೂರು ವರ್ಷಗಳ ಬಳಿಕ ಸುಧಾರಣೆ ಹಂತಕ್ಕೆ ಬಂದಿದ್ದರು. ಹಲವರ ಕೈಯಲ್ಲಿ ಹಣವು ಹರಿದಾಡುತ್ತಿತ್ತು. ಹೀಗಾಗಿ ಈ ವರ್ಷ ಉತ್ತಮ ವ್ಯಾಪಾರವಾಗಲಿದೆ ಎಂಬ ಆಶಾಭಾವ ಜಾಸ್ತಿ ಇತ್ತು. ಮದುವೆ ಹಾಗೂ ರಂಜಾನ್ ಸೀಜನ್‌ಗೆಂದು ಮೊದಲೇ ಬಟ್ಟೆಗಳನ್ನು ಸಂಗ್ರಹಿಸಲಾಗಿತ್ತು. ಆದರೆ, ಅಷ್ಟರಲ್ಲೇ ಲಾಕ್ ಡೌನ್ ಘೋಷಣೆಯಾಗಿತ್ತು. ಇದರಿಂದ ಸಾಕಷ್ಟು ಬಟ್ಟೆಗಳ ಸಂಗ್ರಹ ಉಳಿದಿದೆ. ದೊಡ್ಡ ಪ್ರಮಾಣದ ಬಂಡವಾಳ ಹೂಡಿ ಬಟ್ಟೆ ತರಿಸಲಾಗಿದೆ. ಲಾಕ್‌ಡೌನ್ ಸಡಿಲಿಕೆಗೊಂಡ ಬಳಿಕವೂ ವ್ಯಾಪಾರ ನಿಂತು ಹೋಗಿದೆ ಎಂದು ವ್ಯಾಪಾರಿಗಳು ಪೇಚಾಡುತ್ತಿದ್ದಾರೆ.
ಪ್ರತಿಷ್ಠಿತ ಬ್ರ್ಯಾಂಡ್‌ಗಳ ಬಟ್ಟೆಗಳನ್ನು ಆರು ತಿಂಗಳ ಮೊದಲೇ ಅರ್ಡರ್ ಕೊಟ್ಟು ತರಿಸಿಕೊಳ್ಳಬೇಕು. ಲಾಕ್ ಡೌನ್‌ಗಿಂತ ಮುಂಚೆ ಆರ್ಡರ್ ನೀಡಿದ ವಸ್ತಗಳು ಈಗ ಬರಲು ಶುರು ಆಗಿವೆ. ಆದರೆ, ಈ ಹಿಂದೆ ತರಿಸಿಕೊಂಡ ಬಟ್ಟೆಗಳು ಮಾರಾಟವಾಗದೆ ಉಳಿದುಕೊಂಡಿವೆ. ನಷ್ಟದಲ್ಲೇ ಕೆಲಸಗಾರರ ಸಂಬಳ ನೀಡುತ್ತಿದ್ದೇವೆ. ಅಲ್ಲದೇ ವಿದ್ಯುತ್ ಬಿಲ್ ಕಟ್ಟುತ್ತಿದ್ದೇವೆ.
–ರಾಮಕೃಷ್ಣ ಸುತ್ರಾವೆ, ಮಾಲೀಕರು, ಬಟ್ಟೆ ಅಂಗಡಿ