Advertisement

ಕೈಗಾರಿಕೆಗಳಿಂದಲೇ ನಗರದ ಕೆರೆಗಳು ಕಲುಷಿತ

05:40 AM May 20, 2020 | Lakshmi GovindaRaj |

ಬೆಂಗಳೂರು: ನಗರದಲ್ಲಿ ಲಾಕ್‌ಡೌನ್‌ನಿಂದಾಗಿ ವೃಷಭಾವತಿ ನದಿಯಲ್ಲಿ ಕಲುಷಿತ ನೀರಿನ ಪ್ರಮಾಣ ಕಡಿಮೆಯಾಗಿರುವುದು ಸಂಶೋಧನೆಗಳಿಂದ ಸಾಬೀತಾಗಿದೆ. ಇದರಿಂದ ಕೈಗಾರಿಕೆಗಳ ತ್ಯಾಜ್ಯ ನೀರಿನಿಂದಲೇ ಕೆರೆಗಳು ಕಲುಷಿತವಾಗುತ್ತಿರುವುದು ಸ್ಪಷ್ಟವಾಗಿದೆ. ಲಾಕ್‌ಡೌನ್‌ ಘೋಷಣೆಯಾದ ಮೇಲೆ ವೃಷಭಾವತಿ ನದಿಯಲ್ಲಿನ ಕಲುಷಿತ ನೀರಿನ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿರುವುದು ಕಂಡು ಬಂದಿತ್ತು.

Advertisement

ಈ ಬಗ್ಗೆ ನಮಾಮಿ ವೃಷಭಾವತಿ ಟ್ರಸ್ಟ್‌, ಕೋಟಿ ವೃಕ್ಷ ಸೈನ್ಯ, ಸಿಟಿಜನ್ಸ್‌ ಫಾರ್‌ ಸಿಟಿಜನ್ಸ್‌, ಕೋಟಿ ವೃಕ್ಷ ಸೈನ್ಯ ಹಾಗೂ ಎಟ್ರಿ (ಪರಿಸರ ಸಂರಕ್ಷಣೆ ಹಾಗೂ ಸಂಶೋಧನಾ ಸಂಸ್ಥೆ)ಗಳು ಸಂಶೋಧನೆ ನಡೆಸಿದ್ದು, ಕೆಲವು ಕುತೂಹಲ ಮಾಹಿತಿ ಬೆಳಕಿಗೆಬಂದಿದೆ.  ಈ  ಸಂಬಂಧ ಉದಯವಾಣಿಯೊಂದಿಗೆ ಮಾತನಾಡಿದ ಎಟ್ರಿ ಸಂಸ್ಥೆಯ ಸಹಾಯಕ ವಿಜ್ಞಾನಿ ಪ್ರಿಯಾಂಕಾ ಜಮಾಲ್‌ ಅವರು, ಲಾಕ್‌ಡೌನ್‌ ಘೋಷಣೆ ಬಳಿಕ ವೃಷಭಾವತಿ ನದಿಗೆ ಸೇರುವ ಕಾರ್ಖಾನೆ ತ್ಯಾಜ್ಯ ಹಾಗೂ  ಕಲುಷಿತ ನೀರಿನ ಪ್ರಮಾಣದಲ್ಲಿ ಬದಲಾವಣೆಯಾಗಿದೆ.

ಪೀಣ್ಯ ಕೈಗಾರಿಕ ಪ್ರದೇಶ, ಸುಮ್ಮನಹಳ್ಳಿ ಬ್ರಿಡ್ಜ್, ಬೆಂವಿವಿ ಹೊರವಲಯ, ಮೈಸೂರು ರಸ್ತೆ ಮೆಟ್ರೋ ನಿಲ್ದಾಣ,  ಕೆಂಗೇರಿ (ಕೊಳಚೆ ನೀರು ಶುದ್ಧೀಕರಣ ಘಟಕದ ಸಮೀಪ),  ಬೈರಮಂಗಲ ಒಳ ಮತ್ತು ಹೊರ ವರ್ತುಲದ ಭಾಗದಲ್ಲಿ ಹರಿಯುವ ನೀರನ್ನು ಸಂಗ್ರಹಿಸಿ ಸಂಶೋಧನೆ ಮಾಡಲಾಗಿದ್ದು, ಇದರಲ್ಲಿ ಹಾನಿಕಾರಕ ಅಂಶಗಳು ಹಾಗೂ ಕಲುಷಿತ ಪ್ರಮಾಣ ಕಡಿಮೆಯಾಗಿರುವುದು ಕಂಡುಬಂದಿದೆ. ಆದರೆ, ಸಾರ್ವಜನಿಕರು ಬಳಸಿ, ಬಿಡುವ ನೀರಿನ ಪ್ರಮಾಣದಲ್ಲಿ ಯಾವುದೇ ಬದಲಾವಣೆಗಳು ಆಗಿಲ್ಲ. ಜತೆಗೆ ಕೊಳಚೆ ನೀರು ಶುದ್ಧೀಕರಣ ಘಟಕದ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಅವಶ್ಯಕತೆ ಇದೆ
ಎಂದು ಅಭಿಪ್ರಾಯಪಟ್ಟರು.

ವ್ಯಾಲಿಗಳಿಗೆ ಕಲುಷಿತ ನೀರು, ತಡೆಗೆ ಕ್ರಮ: ಲಾಕ್‌ಡೌನ್‌ನಿಂದ ನಗರದ ಹಲವು ಕೆರೆಗಳಿಗೆ ಸೇರುತ್ತಿದ್ದ ಮಾಲಿನ್ಯದಲ್ಲಿ ಗಣನೀಯ ಪ್ರಮಾಣದ ಇಳಿಕೆ ಕಂಡುಬಂದಿದ್ದು, ಇದೇ ಮಾದರಿಯಲ್ಲಿ ನಗರದ ಕೆರೆಗಳ ಸ್ವಚ್ಛತೆ ಕಾಪಾಡಿ  ಕೊಳ್ಳಬೇಕು ಎಂದು ಮೇಯರ್‌ ಎಂ. ಗೌತಮ್‌ಕುಮಾರ್‌ ಹೇಳಿದರು. ನಗರದಲ್ಲಿನ ಕೆರೆಗಳಿಗೆ ವ್ಯಾಲಿಗಳು ಹಾಗೂ ರಾಜಕಾಲುವೆಗಳ ಮೂಲಕ ಅಪಾಯಕಾರಿ ತ್ಯಾಜ್ಯದ ಅಂಶ ಸೇರ್ಪಡೆಯಾಗುತ್ತಿದ್ದು, ಇದನ್ನು ತಡೆಯುವುದಕ್ಕೆ ಯೋಜನೆ  ರೂಪಿಸುವ ನಿಟ್ಟಿನಲ್ಲಿ ಮೇಯರ್‌ ಅಧ್ಯಕ್ಷತೆಯಲ್ಲಿ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಯಿತು.

ಸಭೆ ಬಳಿಕ ಸುದ್ದಿಗಾರರ ಜತೆ ಮಾತ  ನಾಡಿದ ಮೇಯರ್‌, “ವೃಷಭಾವತಿ, ಹೆಬ್ಟಾಳ,  ಚೆಲ್ಲಘಟ್ಟ, ಕೋರಮಂಗಲ ವ್ಯಾಲಿ ಸೇರಿದಂತೆ ರಾಜಕಾಲುವೆಗಳಿಗೆ ಕೈಗಾರಿಕಾ ತ್ಯಾಜ್ಯ ಸೇರುತ್ತಿತ್ತು. ಲಾಕ್‌ ಡೌನ್‌ನಿಂದ ಕೈಗಾರಿಕೆಗಳು ಸ್ಥಗಿತಗೊಳಿಸಿದ ಪರಿಣಾಮ ಕೆರೆ ಮತ್ತು ರಾಜಕಾಲುವೆಗಳ ನೀರು ಸ್ವಚ್ಛವಾಗಿವೆ. ಜತೆಗೆ ಕೊಳಚೆ  ನೀರಿನ ಪ್ರಮಾಣವೂ ಇಳಿಕೆಯಾಗಿದೆ ಎಂದರು. “ಮುಂದಿನ ದಿನಗಳಲ್ಲೂ ಕೆರೆ, ಕಾಲುವೆಗಳಿಗೆ ಕಾರ್ಖಾನೆಗಳ ತ್ಯಾಜ್ಯ ನೀರನ್ನು ಬಿಡದಂತೆ ಎಲ್ಲ ಇಲಾಖೆಯ ಅಧಿಕಾರಿಗಳು ಸಮನ್ವಯತೆಯಿಂದ ಕೆಲಸ ಮಾಡಬೇಕಿದೆ.

Advertisement

ಅಲ್ಲದೆ, ತ್ಯಾಜ್ಯ ನೀರನ್ನು ಸಂಸ್ಕರಿಸದೆ ಕೆರೆಗಳಿಗೆ ಬಿಟ್ಟರೆ ಅಂತಹ ಕಾರ್ಖಾನೆಗಳ ಮೇಲೆ ಕಠಿಣ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಎಚ್ಚರಿಸಿದರು. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ವಿಜಯ್‌ ಕುಮಾರ್‌ ಗೋಗಿ ಮಾತನಾಡಿ,  ನಗರದಲ್ಲಿ ಉದ್ದಿಮೆ ಪರವಾನಗಿ ಪಡೆಯದೆ ಕಾನೂನು  ಬಾಹಿರ ವಾಗಿ ಕಾರ್ಯ ನಿರ್ವಹಿಸುತ್ತಿ ರುವ ಕೈಗಾರಿಕೆಗಳು ಕಲುಷಿತ ನೀರನ್ನು ರಾಜಕಾಲುವೆಗೆ ಬಿಡುತ್ತಿವೆ. ಇಂತಹ ಉದ್ದಿಮೆಗಳಿಗೆ ಕಡಿವಾಣ ಹಾಕಲಾಗುವುದು. ಅದೇ ರೀತಿ,  ಕೆರೆಗಳ ಬಫ‌ರ್‌ಝೋನ್‌ ಪ್ರದೇಶಗಳಲ್ಲಿ ಕಟ್ಟಡ ನಿರ್ಮಾಣ ಮಾಡಲು ಪಾಲಿಕೆಯಿಂದ ಅನುಮತಿ ನೀಡಬಾರದು ಎಂದರು.

ಈಗಾಗಲೇ ಕೆರೆಗಳಿಗೆ ನೇರವಾಗಿ ವಿಷಕಾರಿ ತ್ಯಾಜ್ಯ ನೀರನ್ನು ಬಿಡುತ್ತಿದ್ದ ಆರೋಪದ ಮೇಲೆ 496 ಕಾರ್ಖಾನೆಗಳ ವಿರುದ್ಧ ಸದ್ಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದೂರು ನೀಡಲಾಗಿದೆ ಎಂದು ರಾಜಕಾಲುವೆ ವಿಭಾಗ ಮುಖ್ಯ ಎಂಜಿನಿಯರ್‌ ಪ್ರಹ್ಲಾದ್‌ ತಿಳಿಸಿದರು. ಉಪ ಮೇಯರ್‌ ರಾಮ್‌ಮೋಹನ ರಾಜು, ಆಡಳಿತ ಪಕ್ಷದ ನಾಯಕ  ಮುನೀಂದ್ರ ಕುಮಾರ್‌, ವಿರೋಧ ಪಕ್ಷದ ನಾಯಕ ಅಬ್ದುಲ್‌ ವಾಜಿದ್‌, ಜೆಡಿಎಸ್‌ ಪಕ್ಷದ ನಾಯಕಿ ನೇತ್ರಾನಾರಾಯಣ್‌, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಆಯುಕ್ತ ಡಾ.ಜಿ.ಸಿ ಪ್ರಕಾಶ್‌, ಘನತ್ಯಾಜ್ಯ ವಿಶೇಷ ಆಯುಕ್ತ  ಡಿ.  ರಂದೀಪ್‌ ಇತರರಿದ್ದರು.

ಸಂಶೋಧನೆ ನಡೆದಿದ್ದು ಹೀಗೆ: ವೃಷಭಾವತಿ ನದಿಯಲ್ಲಿನ ನೀರನ್ನು ಬಯೋಲಾಜಿಕಲ್‌ ಆಕ್ಸಿಜನ್‌ ಡಿಮ್ಯಾಂಡ್‌ ಹಾಗೂ ಕೆಮಿಕಲ್‌ ಆಕ್ಸಿಜನ್‌ ಡಿಮ್ಯಾಂಡ್‌ನ‌ಂತಹ ನೀರು ಪರಿಶೀಲನೆ ಮಾಡುವ ಮಾನದಂಡಗಳಲ್ಲಿ ಸಂಶೋಧನೆಗೆ ಒಳಪಡಿಸಲಾಗಿದೆ. ಬಯೋಲಾಜಿಕ್‌ ಆಕ್ಸಿಜನ್‌ ಡಿಮ್ಯಾಂಡ್‌ (ಬಿಒಡಿ)(ನೀರಿನಲ್ಲಿರುವ ಜಲಜೀವಿಗಳೇ ನೀರಿನಲ್ಲಿನ ಕೆಟ್ಟ ಅಂಶಗಳನ್ನು ಶುದ್ಧಪಡಿಸುತ್ತವೆ) ಹಾಗೂ ಕೆಮಿಕಲ್‌ ಆಕ್ಸಿಜನ್‌ ಡಿಮ್ಯಾಂಡ್‌ (ಸಿಒಡಿ) (ರಾಸಾಯನಿಕ ಬಳಸಿ  ಶುದ್ಧ ಮಾಡಬೇಕಾಗುತ್ತದೆ). ಇವೆರಡು ಮಾನದಂಡಗಳಲ್ಲಿ ವೃಷಭಾವತಿ ನದಿ ನೀರನ್ನು ಸಂಶೋಧನೆ ಮಾಡಲಾಗಿದೆ. ಇದರಲ್ಲಿ ಲಾಕ್‌ಡೌನ್‌ ಮುನ್ನ ಮತ್ತು ನಂತರದಲ್ಲಿ ವೃಷಭಾವತಿಯಲ್ಲಿ ಹರಿಯುತ್ತಿದ್ದ ನೀರನ್ನು ಸಿಒಡಿ  ಹಾಗೂ ಬಿಒಡಿ ಪ್ರಮಾಣದಲ್ಲಿ ಏರಿಳಿತವಾಗಿದ್ದು, ಮಾಲಿನ್ಯ ಪ್ರಮಾಣ ಹಾಗೂ ಕಲುಷಿತ ಅಂಶಗಳು ಕಡಿಮೆಯಾಗಿರುವುದು ಕಂಡು ಬಂದಿದೆ.

ಜನತೆಯ ವಿಶ್ವಾಸ ಮುಖ್ಯ: ನಗರದ ಕೆರೆಗಳಿಗೆ ಹಾಗೂ ವೃಷಭಾವತಿ ನದಿಯ ಬಗ್ಗೆ ಹಲವು ಸ್ವಯಂ ಸೇವಾ ಸಂಸ್ಥೆಗಳು ಲಾಕ್‌ಡೌನ್‌ ಸಂದರ್ಭದಲ್ಲಿ ಸಂಶೋಧನೆ ಮಾಡಿರುವ ವರದಿಗಳನ್ನು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ  ಎಂದು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ವಿಜಯ್‌ಕುಮಾರ್‌ ಗೋಗಿ ಹೇಳಿದರು. ಈ ಸಂಬಂಧ ಉದಯವಾಣಿಯೊಂದಿಗೆ ಮಾತನಾಡಿದ ಅವರು, ಮೊದಲಿಗೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಮೇಲೆ  ಜನಕ್ಕೆ ವಿಶ್ವಾಸ ಬರುವಂತೆ ಕೆಲಸ ಮಾಡಬೇಕಾಗಿದೆ. ನಿರ್ದಿಷ್ಟ ಅವಧಿಯಲ್ಲಿ ಅರ್ಜಿಗಳನ್ನು ವಿಲೇವಾರಿ ಮಾಡದೆ ಇರುವುದರಿಂದ ಜನರಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಯ ಮೇಲೆ ವಿಶ್ವಾಸ ಕಡಿಮೆಯಾಗಿದೆ. ವಿಶ್ವಾಸ ಗಳಿಸುವ  ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಾಗುವುದು ಎಂದರು.

* ಹಿತೇಶ್‌ ವೈ

Advertisement

Udayavani is now on Telegram. Click here to join our channel and stay updated with the latest news.

Next