Advertisement
ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಶನಿವಾರ ರಾಜಧಾನಿ ಬೆಂಗಳೂರಿನಲ್ಲಿ ನಡೆದ ಮತದಾನವು ಕೆಲ ಹೊಸತನ, ಪ್ರಯೋಗಗಳಿಗೆ ಸಾಕ್ಷಿಯಾಯಿತು. ಇಷ್ಟಾದರೂ ಬೆಂಗಳೂರಿನಲ್ಲಿ ನಿರೀಕ್ಷೆಗಿಂತ ಮತದಾನ ಪ್ರಮಾಣ ಕುಸಿದಿದ್ದರಿಂದ ನಗರದ ಮತದಾರರ ನಿರಾಸಕ್ತಿ ಈ ಮತದಾನದಲ್ಲೂ ಮುಂದುವರಿದಿರುವುದು ಕಂಡುಬಂತು.
Related Articles
Advertisement
ಸರ್ವವು ಪಿಂಕ್‌ಮಯ: ಪಿಂಕ್ ಬಣ್ಣದ ಬಲೂನುಗಳು, ಪಿಂಕ್ ಬಣ್ಣದ ಪರದೆಗಳು, ಪಿಂಕ್ ಬಣ್ಣದ ವಸ್ತ್ರಧಾರಿಗಳು, ಪಿಂಕ್ ಬಣ್ಣದ ಸ್ವಾಗತ ಫಲಕಗಳು… ಹೀಗೆ ಸರ್ವವೂ ಪಿಂಕ್ ಮಯವಾಗಿದ್ದ “ಸಖೀ ಪಿಂಕ್ ಮತಗಟ್ಟೆ’ಗಳು ಗಮನ ಸೆಳೆದವು. ಆಯೋಗವು ಇದೇ ಮೊದಲ ಬಾರಿಗೆ ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವ ಮತಗಟ್ಟೆಗಳಿಗೆ ಮಹಿಳಾ ಸಿಬ್ಬಂದಿಯನ್ನೇ ನಿಯೋಜಿಸಿತ್ತು. ಇಡೀ ಮತಗಟ್ಟೆಯಲ್ಲಿ ಮಹಿಳೆಯರೇ ತೊಡಗಿಸಿಕೊಂಡಿದ್ದು, ಮಹಿಳಾ ಮತದಾರರು ಹುರುಪಿನಿಂದ ಮತ ಹಾಕಲು ಪ್ರೇರಣೆ ನೀಡಿತ್ತು.
ಕೆಲವೆಡೆ ಅಗತ್ಯ ಸಂಖ್ಯೆಯ ಮಹಿಳಾ ಸಿಬ್ಬಂದಿ ಲಭ್ಯವಿಲ್ಲದೇ ಪುರುಷ ಸಿಬ್ಬಂದಿಯನ್ನು ಪಿಂಕ್ ಮತಗಟ್ಟೆಗಳಿಗೆ ನಿಯೋಜಿಸಿದ್ದು ಕಂಡುಬಂತು. ಸಿ.ವಿ.ರಾಮನ್‌ನಗರ ಕ್ಷೇತ್ರದ ಚಿಕ್ಕಬಾಣಸವಾಡಿಯ ಮದರ್ ಮೇರಿ ಇಂಗ್ಲಿಷ್ ಶಾಲೆಯ ಸಖೀ ಪಿಂಕ್ ಮತಗಟ್ಟೆಯಲ್ಲಿ ಕೆಲ ಪುರುಷ ಸಿಬ್ಬಂದಿ ಕಾರ್ಯ ನಿರ್ವಹಿಸಿದರು. ಕೆ.ಆರ್.ಪುರ ಕ್ಷೇತ್ರದ ಭಟ್ಟರಹಳ್ಳಿಯ ಮತಗಟ್ಟೆ ಸಂಖ್ಯೆ 122 ಪಿಂಕ್ ಮತಗಟ್ಟೆಯೆಂದು ಗುರುತಿಸಿದ್ದರೂ ಆ ಬಗ್ಗೆ ಸಿಬ್ಬಂದಿಗೆ ಮಾಹಿತಿ ಇರಲಿಲ್ಲ. ಹಾಗಾಗಿ ಆ ಮತಗಟ್ಟೆಯಲ್ಲಿ ವಿಶೇಷತೆ ಕಂಡುಬರಲಿಲ್ಲ.
ಕುತೂಹಲ ಮೂಡಿಸಿದ ವಿವಿಪ್ಯಾಟ್: ಮತಯಂತ್ರದಲ್ಲಿ ಹಕ್ಕು ಚಲಾವಣೆಯ ಖಾತರಿಗಾಗಿ ಅಳವಡಿಸಲಾಗಿದ್ದ ವಿವಿಪ್ಯಾಟ್ ಮತದಾರರ ಗಮನ ಸೆಳೆದಿತ್ತು. ಮತದಾರರು ತಮ್ಮ ಹಕ್ಕು ಚಲಾಯಿಸುತ್ತಿದ್ದಂತೆ ವಿವಿಪ್ಯಾಟ್‌ನಲ್ಲಿ ಸಂಕೇತ ಮೂಡಿ ಏಳು ಸೆಕೆಂಡ್‌ಗಳ ಕಾಲ ಪ್ರದರ್ಶನಗೊಂಡ ಮರೆಯಾಗುತ್ತಿತ್ತು. ದೊಡ್ಡ ಬೀಪ್ ಶಬ್ಧ ಮುಗಿಯುತ್ತಿದ್ದಂತೆ ಬೆಳಕು ಕೂಡ ಬಂದ್ ಆಗುತ್ತಿತ್ತು. ಇದು ಮತದಾರರಲ್ಲಿ ಖಾತರಿ ಜತೆಗೆ ಸಂತಸ ಉಂಟು ಮಾಡಿದ್ದು ಕಂಡುಬಂತು.
ಮಿಲೇನಿಯಂ ಮತದಾರರು: 2000ನೇ ವರ್ಷದಲ್ಲಿ ಜನಿಸಿದವರಿಗೆ ಈ ಬಾರಿ ಮತದಾನ ಮಾಡಲು ಅವಕಾಶ ದೊರಕಿತ್ತು. ಅದರಂತೆ ಮೊದಲ ಬಾರಿಗೆ ತಮ್ಮ ಹಕ್ಕು ಚಲಾಯಿಸಿದ ಮಿಲೇನಿಯಂ ಮತದಾರರು ಪ್ರಜಾತಂತ್ರದ ಹಬ್ಬಕ್ಕೆ ಸಾಕ್ಷಿಯಾದರು.
ಎರಡು ಕ್ಷೇತ್ರದಲ್ಲಿ ಸ್ತಬ್ಧ: ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳ ಪೈಕಿ 26 ಕ್ಷೇತ್ರಗಳಲ್ಲಿ ಮತದಾನ ಪ್ರಕ್ರಿಯೆ ನಡೆದರೆ ಎರಡು ಕ್ಷೇತ್ರಗಳಲ್ಲಿ ಮತದಾನ ಸ್ತಬ್ಧವಾಗಿತ್ತು. ಬಿಜೆಪಿ ಅಭ್ಯರ್ಥಿಯಾಗಿದ್ದ ಶಾಸಕ ಬಿ.ಎನ್.ವಿಜಯಕುಮಾರ್ ನಿಧನದಿಂದ ಜಯನಗರ ಕ್ಷೇತ್ರದ ಚುನಾವಣೆ ಮುಂದೂಡಿಕೆಯಾಗಿದೆ. ಖಾಸಗಿ ಅಪಾರ್ಟ್‌ಮೆಂಟ್‌ನಲ್ಲಿ ಸಾವಿರಾರು ಮತದಾರರ ಗುರುತಿನ ಚೀಟಿ ಪತ್ತೆ ಹಿನ್ನೆಲೆಯಲ್ಲಿ ರಾಜರಾಜೇಶ್ವರಿನಗರ ಕ್ಷೇತ್ರದ ಮತದಾನ ಮೇ 28ಕ್ಕೆ ಮುಂದೂಡಿಕೆಯಾಗಿದೆ.
ಗಾಲಿಕುರ್ಚಿಯಿಲ್ಲದೆ ಪರದಾಟ: ಗಾಯಾಳುಗಳು, ವಿಕಲಚೇತನರು ತಮ್ಮ ಹಕ್ಕು ಚಲಾಯಿಸಲು ಅನುಕೂಲವಾಗುವಂತೆ ಮತಗಟ್ಟೆಗಳಲ್ಲಿ ಅಗತ್ಯ ಸೌಲಭ್ಯ ಕಲ್ಪಿಸುವುದಾಗಿ ಆಯೋಗ ತಿಳಿಸಿತ್ತು. ಆದರೆ ಬಹುತೇಕ ಮತಗಟ್ಟೆಗಳಲ್ಲಿ ಗಾಲಿಕುರ್ಚಿ ವ್ಯವಸ್ಥೆ ಇರಲಿಲ್ಲ.
ಇದರಿಂದ ಗಾಯಾಳು, ವಯೋವೃದ್ಧರು ಮತದಾನ ಮಾಡಲು ಸಂಬಂಧಿಕರು, ಸಿಬ್ಬಂದಿಯೇ ನೆರವು ನೀಡುತ್ತಿದ್ದುದು ಕಂಡುಬಂತು. ಹಂಪಿನಗರದ ಹೋಲಿ ಏಂಜಲ್ಸ್ ಹೈಸ್ಕೂಲ್‌ನಲ್ಲಿ ತಳಮಹಡಿಯಲ್ಲಿ ಮತಗಟ್ಟೆ ರಚಿಸಿದ್ದರಿಂದ ಕಾಂಕ್ರಿಟ್ ಇಳಿಜಾರಿನಲ್ಲಿ ನಡೆಯಲಾಗದೆ ವಯೋವೃದ್ಧರು ಪರದಾಡುವಂತಾಗಿತ್ತು.
ಹಾಗೆಯೇ ಪದ್ಮನಾಭನಗರ ಕ್ಷೇತ್ರ ವ್ಯಾಪ್ತಿಯ ಸಹಕಾರ ನಿರ್ವಹಣಾ ಪ್ರಾದೇಶಿಕ ಸಂಸ್ಥೆಯಲ್ಲಿ ಗಾಲಿಕುರ್ಚಿ ಬಳಕೆಗೆ ರ್‍ಯಾಂಪ್ ವ್ಯವಸ್ಥೆಯಿದ್ದರೂ ಗಾಲಿಕುರ್ಚಿ ಇರಲಿಲ್ಲ. ಕರೀಸಂದ್ರ ವಾರ್ಡ್‌ನ ಸಮುದಾಯ ಭವನವು ರಸ್ತೆಯಿಂದ ಸುಮಾರು 15 ಅಡಿ ಎತ್ತರದಲ್ಲಿದ್ದು, ಹತ್ತಿಳಿಯಲು ಹಿರಿಯ ನಾಗರಿಕರು ತೊಂದರೆ ಅನುಭವಿಸಿದರು. ಇಲ್ಲಿಯೂ ಇಳಿಜಾರಿನ ವ್ಯವಸ್ಥೆಯಿದ್ದರೂ ಗಾಲಿಕುರ್ಚಿ ಇರಲಿಲ್ಲ.