Advertisement

ಕೈಗಾರಿಕೆಗಳ ರಾಸಾಯನಿಕ, ಚರಂಡಿ ನೀರು ಕೆರೆಪಾಲು

11:46 AM Dec 13, 2017 | Team Udayavani |

ಪಣಂಬೂರು: ಮಂಗಳೂರು ಮಹಾನಗರ ಪಾಲಿಕೆಯ 9ನೇ ಕ್ಷೇತ್ರವಾಗಿರುವ ಕುಳಾಯಿ ಪರಿಸರದಲ್ಲಿರುವ ನೈಸರ್ಗಿಕವಾಗಿ ನಿರ್ಮಿತವಾದ ಬಗ್ಗುಂಡಿ ಕೆರೆಯಲ್ಲಿ ವರ್ಷಪೂರ್ತಿ ಒರತೆಯಿದೆ. ಆದರೆ ಅಭಿವೃದ್ಧಿ ಮತ್ತು ಕೈಗಾರಿಕೀರಣದ ಒತ್ತಡಕ್ಕೆ ಸಿಲುಕಿರುವ ಇದರ ನೀರು ಬಳಕೆಗೆ ಆಯೋಗ್ಯವಾದಂತಿದೆ.

Advertisement

ಚರಂಡಿ ನೀರು ಕೆರೆಪಾಲು
ಈ ಕೆರೆಯನ್ನು ಉತ್ತಮ ಸ್ಥಿತಿಯಲ್ಲಿ ಉಳಿಸಿಕೊಂಡಿದ್ದರೆ ಸುತ್ತ ಮುತ್ತಲಿನ ಗ್ರಾಮಕ್ಕೊಂದು ನೀರಿನ ಮೂಲವಾಗುತ್ತಿತ್ತು. ಆದರೆ ಸುರತ್ಕಲ್‌ ಆಸುಪಾಸಿನ ಹೊಸಬೆಟ್ಟು, ಕುಳಾಯಿ ಪ್ರದೇಶದ ರೇಚಕ ಸ್ಥಾವರ ಕೆಲಸ ಸ್ಥಗಿತಗೊಳಿಸಿ ಸರಿಸುಮಾರು ಎರಡು ವಾರಗಳಾಗಿವೆ. ಇಲ್ಲಿರುವ ಮೂರು
ಪಂಪ್‌ಗ್ಳು ಕೆಟ್ಟಿರುವುದರ ಜತೆಗೆ ವಿದ್ಯುತ್‌ ಉಪಕರಣಗಳು ಸುಟ್ಟು ಹೋಗಿವೆ. ಈಗ ಒಳಚರಂಡಿ ನೀರು ಸಂಸ್ಕರಣೆಗೊಳ್ಳದೆ ನೇರವಾಗಿ ತೋಡು ಸೇರುತ್ತಿದ್ದು, ಸಮೀಪದ ಬಾವಿ ಹಾಗೂ ಬಗ್ಗುಂಡಿ ಕೆರೆ ಮಲಿನವಾಗುತ್ತಿದೆ. ಜತೆಗೆ ಕೈಗಾರಿಕ ಪ್ರದೇಶದಿಂದ ಹರಿಯುವ ರಾಸಾಯನಿಕಯುಕ್ತ ನೀರೂ ಕೆರೆಯ ಒಡಲು ಸೇರುತ್ತಿದೆ.

ಮಲಿನದ ನಡುವೆ ಮೀನು ಹಿಡಿಯುವ ಜಾತ್ರೆ?
ಪ್ರತಿ ವರ್ಷವೂ ಮಾರ್ಚ್‌ 14ರಂದು ಮೀನ ಸಂಕ್ರಮಣದದಂದು ಕೋಟೆದ ಬಬ್ಬು ಸ್ವಾಮಿಯ ವಾರ್ಷಿಕ ನೇಮೋತ್ಸವದ ಸಂದರ್ಭ ಮೀನು ಹಿಡಿಯುವ ಜಾತ್ರೆ ಈ ಕೆರೆಯಲ್ಲಿ ನೆರವೇರುತ್ತದೆ. ಅಂದು ಜನರು ಸಾಮೂಹಿಕವಾಗಿ ಮೀನು ಹಿಡಿಯುತ್ತಾರೆ. ಕಳೆದ ಮಾರ್ಚ್‌ನಲ್ಲಿ ಮಲಿನ ನೀರಿನಲ್ಲೇ ಮೀನು ಹಿಡಿಯುವ ಸಂಪ್ರದಾಯ ನೆರವೇರಿಸಲಾಗಿತ್ತು. ಸುಮಾರು 15 ಎಕರೆ ವಿಸ್ತೀರ್ಣದ ಕೆರೆಯೊಂದಕ್ಕೆ ಈ ದುಃಸ್ಥಿತಿ ಎದುರಾಗಿರುವುದು ಆಡಳಿತದ ನಿರ್ಲಕ್ಷ್ಯವನ್ನು ಎತ್ತಿ ತೋರಿಸುತ್ತದೆ.

ರೇಚಕ ಸ್ಥಾವರ ದುರಸ್ತಿ ಅಗತ್ಯ
ರೇಚಕ ಸ್ಥಾವರದ ತಲಾ 35 ಲ. ರೂ. ಬೆಲೆಯ ಪಂಪ್‌ಗ್ಳು ಹೊಸಬೆಟ್ಟಿನಲ್ಲಿ ಕಾರ್ಯಸ್ಥಗಿತವಾಗಿದ್ದು, ಕುಳಾಯಿಯ ಒಂದು ಪಂಪ್‌ ಕಾರ್ಯನಿರ್ವಹಿಸುತ್ತಿದೆ. ಸುರತ್ಕಲ್‌, ಹೊಸಬೆಟ್ಟು ಪ್ರದೇಶಗಳ ಒಳ ಚರಂಡಿ ನೀರು ಮುಂಚೂರಿನ ಸಂಸ್ಕರಣ ಸ್ಥಾವರ ಸೇರದೆ ಮಧ್ಯದಲ್ಲಿಯೇ ಮಳೆ ನೀರಿನ ತೋಡು ಸೇರಿ ಪರಿಸರ ಮಲಿನವಾಗುತ್ತಿದೆ. ತತ್‌ಕ್ಷಣ ಸರಿಪಡಿಸದೆ ಹೋದಲ್ಲಿ ಆರೋಗ್ಯ ಸಮಸ್ಯೆಯೂ ಸ್ಥಳೀಯರಿಗೆ ಕಾಡುವ ಆತಂಕ ಎದುರಾಗಿದೆ.

ಪಕ್ಷಿಗಳ ನೆಲೆ
ಬಗ್ಗುಂಡಿ ಕೆರೆ ವಿಶಾಲವಾಗಿರುವುದರಿಂದ ಇದು ವಿವಿಧ ಜಾತಿಗಳ ಪಕ್ಷಿಗಳಿಗೂ ನೆಲೆಯಾಗಿದೆ. ಅಪರೂಪಕ್ಕೆಂಬಂತೆ ವಿದೇಶಿ ಜಾತಿಯ ದೊಡ್ಡ ಕೊಕ್ಕಿನ ಪಕ್ಷಿಗಳೂ ಕಾಣಸಿಗುತ್ತವೆ.

Advertisement

ಪರಿಹಾರ ಅಗತ್ಯ
ರೇಚಕ ಸ್ಥಾವರದಿಂದ ಆಗುವ ಸಮಸ್ಯೆ ಕುರಿತು ಸದನದಲ್ಲಿ ಕೌನ್ಸಿಲ್‌ನಲ್ಲಿ ಗಮನ ಸೆಳೆದಿದ್ದೇನೆ. ಅ ಧಿಕಾರಿಗಳು ವೀಕ್ಷಿಸಿ ಹೋಗಿದ್ದಾರೆ. ಸುರತ್ಕಲ್‌ ವಿಭಾಗದ ಒಳಚರಂಡಿ ವ್ಯವಸ್ಥೆಯೇ ವಿಫಲವಾಗಿದೆ. ಪಂಪ್‌ ಹಾಳಾಗಿರುವ ಕಾರಣ ಮಲಿನ ನೀರು ಬಾವಿ, ಕೆರೆ ಸೇರಿ ಅಂತರ್ಜಲವೂ ಕಲುಷಿತವಾಗಿದೆ. ಸಮಸ್ಯೆ ಪರಿಹಾರಕ್ಕೆ ಮೇಯರ್‌ ತತ್‌ಕ್ಷಣ ಮುಂದಾಗಬೇಕು.
– ಗಣೇಶ್‌ ಹೊಸಬೆಟ್ಟು, ಮಾಜಿ ಮೇಯರ್‌, ಮನಪಾ

ಕೆರೆಗೆ ಚರಂಡಿ ನೀರು ಹರಿಯುತ್ತಿಲ್ಲ
ಶಾಕ್‌ ಸರ್ಕ್ನೂಟ್‌ ಆಗಿ ಹೊಸಬೆಟ್ಟು ಪಂಪಿಂಗ್‌ ಆಗುತ್ತಿರಲಿಲ್ಲ. ದುರಸ್ತಿಗೆ ಬೇಕಾದ ಕ್ರಮ ಕೈಗೊಳ್ಳಲಾಗಿದೆ. ವೈಫಲ್ಯದ ಸಂದರ್ಭ ಜೆಟ್‌ ಸಕ್ಕಿಂಗ್‌ ಮೂಲಕ ಡ್ರೈನೇಜ್‌ ನೀರನ್ನು ತೆಗೆದು ವಿಲೇವಾರಿ ಮಾಡಲಾಗಿದೆ. ಬಗ್ಗುಂಡಿ ಕೆರೆಗೆ ಡ್ರೈನೇಜ್‌ ನೀರು ಹರಿದಿಲ್ಲ. ಈ ಮೊದಲೇ ಕೆರೆ ಸ್ವಲ್ಪ ಮಟ್ಟಿಗೆ ಎಲ್ಲ ಕಡೆಗಳಿಂದ ಹರಿದು ಬರುವ ನೀರಿನಿಂದ ಮಲೀನವಾಗಿದೆ ಎಂಬುದು ಮಾಧ್ಯಮಗಳಲ್ಲೇ ಸುದ್ದಿಯಾಗಿದೆ. ಹೀಗಾಗಿ ಡ್ರೈನೇಜ್‌ ನೀರು ತೋಡುಗಳಲ್ಲಿ ಹರಿಯದಂತೆ ಎಚ್ಚರಿಕೆ ವಹಿಸಲಾಗುತ್ತದೆ.
-ಮಹಮ್ಮದ್‌ ನಝೀರ್‌, ಆಯುಕ್ತರು ಮನಪಾ 

Advertisement

Udayavani is now on Telegram. Click here to join our channel and stay updated with the latest news.

Next