ದೇವನಹಳ್ಳಿ: ಪ್ರತಿಯೊಬ್ಬರೂ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಪುಸ್ತಕ ಮತ್ತು ಸಾಹಿತ್ಯದಿಂದ ಸಮಾಜದ ಬದಲಾವಣೆಗೆ ಸಾಧ್ಯವಾಗುತ್ತದೆ ಎಂದು ತಾಪಂ ಸದಸ್ಯ ಕಾರಹಳ್ಳಿ ಶ್ರೀನಿವಾಸ್ ತಿಳಿಸಿದರು.
ನಗರದ ಗುರುಭವನದಲ್ಲಿ ಡಾ. ಸಿದ್ದ ಲಿಂಗಯ್ಯ ಪ್ರತಿಷ್ಠಾನದಿಂದ ಸುರವಿಸುತ ತಿಂಡ್ಲು ಅವರ “ಹೊಂಜರಿಯದ ಮಂಜು’ ಹಾಗೂ ಆ.ನಾ. ಕೃಷ್ಣಾ ನಾಯಕ್ ಅವರ “ಭಾವ ವೈಭವ’ ಪ್ರಥಮ ಸಂಕಲನ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದರು.
ಸಾಹಿತಿ ಸಿದ್ಧಲಿಂಗಯ್ಯ ಹೊಸ ರೀತಿಯ ವೈಚಾರಿಕ ಮನೋಭಾವನೆಯಿಂದ ಸಾಹಿತ್ಯ ಲೋಕದ ಧ್ವನಿಯಾಗಿದ್ದಾರೆ. ಹೊಸ ಆಲೋಚನೆಗಳಿಂದ ಸಮಾಜದ ಬದಲಾವಣೆ ತರಲು ಪುಸ್ತಕ ಹಾಗೂ ಸಾಹಿತ್ಯದಿಂದ ಪ್ರಯತ್ನ ಮಾಡುತ್ತಿದ್ದಾರೆ. ಡಾ.ಸಿದ್ದಲಿಂಗಯ್ಯ ಪ್ರತಿಷ್ಠಾನ ಇನ್ನೂ ಅತೀ ಹೆಚ್ಚಿನ ಪ್ರತಿಭೆಗಳನ್ನು ಗುರುತಿಸಿ, ಹೆಚ್ಚಿನ ಪುಸ್ತಕ ಬಿಡುಗಡೆಯಾಗಿ ಸಾಹಿತಿ ಮತ್ತು ಕವಿಗಳನ್ನು ಗುರುತಿಸುವ ಕಾರ್ಯವಾಗಬೇಕು ಎಂದರು.
ಡಾ. ಸಿದ್ದಲಿಂಗಯ್ಯ ಪ್ರತಿಷ್ಠಾನದ ಅಧ್ಯಕ್ಷ ಮುದಲ್ ವಿಜಯ್ ಮಾತನಾಡಿ, ಹಲವು ವರ್ಷಗಳ ಹಿಂದೆ ಸಿದ್ದಲಿಂಗಯ್ಯ ಪ್ರತಿಷ್ಠಾನವನ್ನು ಮಾಡಿ ಪ್ರತಿ ವರ್ಷ 5 ರಿಂದ 6 ಕಾರ್ಯಕ್ರಮ ಮಾಡಲಾಗುತ್ತಿದೆ. ಯುವ ಸಾಹಿತಿಗಳನ್ನು ಗುರುತಿಸಲಾಗುತ್ತಿದೆ. ಸಾಹಿತ್ಯ ಕ್ಷೇತ್ರ ನಶಿಸಿ ಹೋಗದಂತೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಬಹಳಷ್ಟು ಕಾರ್ಯಕ್ರಮ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಗುರುಗಳ ಸ್ಮರಣೆ ರಂಗ ಭೂಮಿ ನಾಟಕ ಮಾಡಲಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಹಲವಾರು ಪ್ರತಿಭೆಗಳು ಇದ್ದು ಸಮಾಜದ ಮುಖ್ಯ ವಾಹಿನಿಗೆ ಬರುವಂತೆ ಮಾಡಲಾಗುತ್ತಿದೆ ಎಂದು ಹೇಳಿದರು.
ಸಾಹಿತಿ ಡಾ.ಬ್ಯಾಡರಹಳ್ಳಿ ಶಿವರಾಜ್ ಮಾತನಾಡಿದರು. ಸಾಹಿತಿ ಭೈರಮಂಗಲ ರಾಮೇಗೌಡ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರು ವಿವಿ ಕನ್ನಡ ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ. ಬಿ.ಗಂಗಾಧರ್, ವಿಮರ್ಶಕ ಉದಂತ ಶಿವಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಗಾಯಿತ್ರಿ ದೇವಿ, ಉದ್ಯಮಿ ಶಶಿಕಾಂತ್‌ರಾವ್, ಚಲನ ಚಿತ್ರ ನಟ ಪ್ರಶಾಂತ್ ಸಿದ್ಧಿ , ಕೃತಿ ಕತೃಗಳಾದ ಸುರವಿಸುವ ತಿಂಡ್ಲು , ಆ.ನಾ. ಕೃಷ್ಣಾ ನಾಯಕ್, ರಂಗಭೂಮಿ ಕಲಾವಿದೆ ನಿರ್ಮಲಾ ನಾದನ್, ಸಾಹಿತಿ ಗುರುನಾಥ ಬೊರಗಿ ಇದ್ದರು.