ಹೊಸದಿಲ್ಲಿ: ಅಂತಾರಾಷ್ಟ್ರೀಯ ವಿಮಾನಯಾನಕ್ಕೆ ಭಾರತ ಮತ್ತೆ ಅವಕಾಶ ನೀಡಲಿದೆಯಾ? ಹೀಗೊಂದು ಊಹೆ ಹುಟ್ಟಿಕೊಂಡಿದೆ.
ಎಲ್ಲ ಲೆಕ್ಕಾಚಾರದ ಪ್ರಕಾರ ನಡೆದರೆ, ಆಗಸ್ಟ್ ಮೊದಲ ವಾರದಲ್ಲಿ ಭಾರತ ಅಂತಾರಾಷ್ಟ್ರೀಯ ವಿಮಾನಯಾನ ಆರಂಭಿಸಲಿದೆ.
ಆದರೆ ವಿಮಾನಗಳ ಹಾರಾಟ ಪ್ರಮಾಣ ಕಡಿಮೆಯಿರುತ್ತದೆ. ದೇಶೀಯ ವಿಮಾನಗಳ ಹಾರಾಟ ಮಾದರಿಯಲ್ಲೇ 3ರಲ್ಲಿ 1ರಷ್ಟು ಅಂತಾರಾಷ್ಟ್ರೀಯ ವಿಮಾನಗಳು ಮಾತ್ರ ಸಂಚರಿಸಬಹುದು.
ಜು. 31ರವರೆಗೆ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟಕ್ಕೆ ಸದ್ಯ ನಿಷೇಧವಿದೆ. ಇದೇ ವೇಳೆ ವಿದೇಶದಿಂದ ಭಾರತೀಯರನ್ನು ಕರೆದುಕೊಂಡು ಬರುವ ವಂದೇ ಭಾರತ್ ಮಿಷನ್ 4ನೇ ಹಂತದ ಕಾರ್ಯಾಚರಣೆ ಕೂಡಾ ಜು. 31ಕ್ಕೆ ಮುಗಿಯಲಿದೆ.
ಇಲ್ಲಿ ಎರಡು ಸಾಧ್ಯತೆಗಳಿವೆ, ಮೊದಲನೆಯದು- ಆಗಸ್ಟ್ ಮೊದಲ ವಾರದಿಂದ ವಂದೇ ಭಾರತ್ 5ನೇ ಹಂತದ ಕಾರ್ಯಾಚರಣೆ ಆರಂಭವಾಗಲಿದೆ. ಎರಡನೆಯದು- ಅಂತಾರಾ ಷ್ಟ್ರೀಯ ವಿಮಾನ ಯಾನಕ್ಕೆ ಭಾರತ ಮತ್ತೆ ಅವಕಾಶ ನೀಡಲಿದೆ.
ಮೇ 25ರಂದೇ ಕೇಂದ್ರ ವಿಮಾನಯಾನ ಸಚಿವ ಹರ್ದೀಪ್ ಪುರಿ, ಜುಲೈ ಮಧ್ಯಭಾಗದಿಂದ ಅಂತಾರಾಷ್ಟ್ರೀಯ ಹಾರಾಟಕ್ಕೆ ಅವಕಾಶ ಕೊಡುವ ಬಗ್ಗೆ ಚಿಂತನೆಯಿದೆ ಎಂದಿದ್ದರು. ಹಾಗೆಯೇ ಈ ಮಾಸಾಂತ್ಯಕ್ಕೆ ದೇಶೀಯ ವಿಮಾನಗಳ ಹಾರಾಟ ಪ್ರಮಾಣ ಶೇ.60ಕ್ಕೆ ಹೆಚ್ಚಾಗುವ ನಿರೀಕ್ಷೆಯಿದೆ. ಇವೆಲ್ಲ ಅಂತಾರಾಷ್ಟ್ರೀಯ ವಿಮಾನ ಯಾನ ಆರಂಭದ ಬಗ್ಗೆ ನಿರೀಕ್ಷೆ ಹುಟ್ಟಿಸಿವೆ.