Advertisement

ಆರ್ಥಿಕತೆಗೆ ಶಕ್ತಿ ತುಂಬುವ ಹಾದಿಯಲ್ಲಿ ಸವಾಲು ಅನೇಕ

02:27 AM Jun 04, 2020 | Sriram |

ಲಾಕ್‌ಡೌನ್‌ ಆರಂಭವಾದ ನಂತರದಿಂದ ದೇಶದ ಅರ್ಥವ್ಯವಸ್ಥೆ ದುರ್ಬಲವಾಗಿಬಿಟ್ಟಿದೆ. ಉದ್ಯೋಗ ಜಗತ್ತಿನಲ್ಲಿ ಮಡುಗಟ್ಟಿರುವ ಕಳವಳದ ವಾತಾವರಣ ಇನ್ನೂ ದೂರವಾಗುವ ಲಕ್ಷಣ ಕಾಣಿಸುತ್ತಿಲ್ಲ, ರೇಟಿಂಗ್‌ ಏಜೆನ್ಸಿಗಳು ಅಭಿವೃದ್ಧಿ ದರವನ್ನು ಇದುವರೆಗಿನ ಅತಿ ಕಡಿಮೆ ಪ್ರಮಾಣವೆಂದು ಹೇಳುತ್ತಿವೆ. ಆದರೆ, ಈಗ ಮತ್ತೆ ಆರ್ಥಿಕತೆಗೆ ವೇಗ ನೀಡುವ ಪ್ರಯತ್ನ ವೇಗ ಪಡೆದಿರುವುದು ಸ್ವಾಗತಾರ್ಹ. ಭಾರತೀಯ ಉದ್ಯಮ ಒಕ್ಕೂಟದ ವಾರ್ಷಿಕ ಅಧಿವೇಶನವನ್ನು ವೀಡಿಯೋ ಕಾನ್ಫರೆನ್ಸ್‌ ಮೂಲಕ ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ, ದೇಶದ ಆರ್ಥಿಕ ಬೆಳವಣಿಗೆಯು ಮರುವೇಗ ಪಡೆಯುವ ಬಗ್ಗೆ ಭರವಸೆಯ ಮಾತನಾಡಿದ್ದಾರೆ.

Advertisement

ದೇಶವು ಕೋವಿಡ್ -19 ಆರ್ಥಿಕ ಹೊಡೆತದಿಂದ ಹೊರಬರಲು ಶಕ್ತವಾಗಿದ್ದು, ಆತ್ಮನಿರ್ಭರ ಭಾರತವು ದೇಶದ ಆರ್ಥಿಕ ಬೆಳವಣಿಗೆಗೆ ವೇಗ ನೀಡಲಿದೆ ಎಂದಿದ್ದಾರೆ. ಅಲ್ಲದೇ, ನಮಗೆ ನಮ್ಮ ಕೌಶಲ್ಯ, ಪ್ರತಿಭೆ, ರೈತರು ಹಾಗೂ ಚಿಕ್ಕ-ದೊಡ್ಡ ಉದ್ಯಮಿಗಳ ಮೇಲೆ ನಂಬಿಕೆಯಿದ್ದು, ಭಾರತವು ವಿಕಾಸದ ಹೊಸ ಎತ್ತರವನ್ನು ಏರಲಿದೆ ಎಂದಿದ್ದಾರೆ. ಬಹುಮುಖ್ಯವಾಗಿ ಪ್ರಧಾನಿಗಳು ಅರ್ಥವ್ಯವಸ್ಥೆಯನ್ನು ಸಂಭಾಳಿಸಲು ಆತ್ಮನಿರ್ಭರತೆ/ಸ್ವಾವಲಂಬನೆಯ ಮಂತ್ರ ನುಡಿದಿದ್ದಾರೆ. ಇನ್ನು ಲಾಕ್‌ಡೌನ್‌ನಿಂದ ತತ್ತರಿಸಿರುವ ಆರ್ಥಿಕತೆಗೆ ಮರುಚಾಲನೆ ನೀಡಲು ರೈತರು, ಎಂಎಸ್‌ಎಂಇಗಳು ಸೇರಿದಂತೆ, ಬೃಹತ್‌ ಉದ್ಯೋಗವಲಯಕ್ಕಾಗಿಯೇ ಇತ್ತೀಚೆಗಷ್ಟೇ ಕೇಂದ್ರ ಸರಕಾರ ವಿಶೇಷ ಪ್ಯಾಕೇಜನ್ನೂ ಘೋಷಿಸಿದೆ.

ಇದೇನೇ ಇದ್ದರೂ, ದೇಶದ ಕಿರು-ಮಧ್ಯಮ ಉದ್ಯಮಗಳಿಗೆ ದೊಡ್ಡ ಪೆಟ್ಟು ಬಿದ್ದಿರುವುದು ಸುಳ್ಳಲ್ಲ. ಈ ಕ್ಷೇತ್ರವು ಅತ್ಯಧಿಕ ಜನರಿಗೆ ಜೀವನಾಧಾರವಾಗಿದ್ದು, ಎಂಎಸ್‌ಎಂಇಗಳು ಚೇತರಿಸಿಕೊಳ್ಳದ ಹೊರತು ಆರ್ಥಿಕ ಚಕ್ರವು ಹಿಂದಿನ ವೇಗ ಪಡೆಯುವುದಕ್ಕೆ ಸಾಧ್ಯವಾಗದು. ಈ ಕಾರಣಕ್ಕಾಗಿಯೇ, ಸರಕಾರವು ಈ ಕ್ಷೇತ್ರದತ್ತ ಹೆಚ್ಚು ಗಮನಹರಿಸಿರುವುದು ಗೋಚರಿಸುತ್ತದೆ. ಹೂಡಿಕೆಯ ಸಾಧ್ಯತೆಗಳನ್ನು ಹೆಚ್ಚಿಸುವ ಪ್ರಯತ್ನಗಳನ್ನು, ಈ ಕ್ಷೇತ್ರದ ಜೊತೆ ಬೆಸೆದುಕೊಂಡಿರುವ ಶ್ರಮಿಕರ ಸ್ಥಿತಿ ಸುಧಾರಿಸುವಂಥ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಆದರೆ, ಈಗ ನೀಡಲಾಗುತ್ತಿರುವ ಸಹಾಯ ಮೊತ್ತವು ಮುಗಿದ ನಂತರ, ಈ ಕ್ಷೇತ್ರ ಸ್ವಂತ ಬಲದ ಮೇಲೆಯೇ ನಿಂತು ಮುನ್ನಡೆಯಬಲ್ಲದೇ ಅಥವಾ ಕುಸಿಯುವುದೇ ಎನ್ನುವ ಪ್ರಶ್ನೆಯೂ ಎದುರಾಗ‌ುತ್ತಿದೆ.

ಅರ್ಥವ್ಯವಸ್ಥೆಯು ಮಾರುಕಟ್ಟೆಯನ್ನು ಅವಲಂಬಿಸಿರುತ್ತದೆ. ಆದರೆ ಮಾರುಕಟ್ಟೆಯ ಬುನಾದಿಯೆಂದರೆ ಬೇಡಿಕೆ. ಪ್ರಸಕ್ತ ಬೇಡಿಕೆ ಪ್ರಮಾಣವು ಗಣನೀಯವಾಗಿ ಕುಸಿದಿದೆ. ಈಗಾಗಲೇ ಬಹುತೇಕ ಕ್ಷೇತ್ರಗಳು ಬಿಕ್ಕಟ್ಟಿನಲ್ಲಿರುವುದರಿಂದ ಭಾರೀ ಪ್ರಮಾಣದಲ್ಲಿ ಉದ್ಯೋಗ ನಷ್ಟಗಳಾಗುತ್ತಿವೆ, ಆಗುವ ಭೀತಿಯೂ ಇದೆ. ಪರಿಸ್ಥಿತಿ ಹೀಗೇ ಮುಂದುವರಿದರೆ, ಬೇಡಿಕೆಯಲ್ಲಿ ನಿರೀಕ್ಷಿತ ಹೆಚ್ಚಳವಾಗದು. ಆಗ ಮಾರುಕಟ್ಟೆಗೆ, ತನ್ಮೂಲಕ ಅರ್ಥವ್ಯವಸ್ಥೆ ಬಲಿಷ್ಠವಾಗುವುದು ಹೇಗೆ ಎಂಬ ಸವಾಲು ಎದುರಾಗುತ್ತದೆ. ಈ ಕಾರಣಕ್ಕಾಗಿಯೇ, ಸದ್ಯಕ್ಕೆ ಪೂರ್ಣವಾಗಿ
ಆತ್ಮನಿರ್ಭರತೆಯ ಮಂತ್ರವನ್ನು ಪಾಲನೆ ಮಾಡುವುದೂ ಸುಲಭವಲ್ಲ. ಏಕೆಂದರೆ, ಇದರಿಂದಾಗಿ ವಿವಿಧ ದೇಶಗಳ ಜತೆಗಿನ ವ್ಯಾಪಾರ ಒಪ್ಪಂದಗಳಿಗೂ ಬಾಧೆಯಾಗುವ ಸಾಧ್ಯತೆ ಇರುತ್ತದೆ.ಇದೇನೇ ಇದ್ದರೂ, ಕೆಲ ಸಮಯದಿಂದ ದೇಶದಲ್ಲಿ ಅನೇಕ ವಲಯಗಳು ಮತ್ತೆ ಬಾಗಿಲು ತೆರೆಯಲಾರಂಭಿಸಿರುವುದರಿಂದ, ಜತೆಗೆ ಸರಕಾರಗಳ ಸಹಕಾರದ ಭರವಸೆಯೂ ದೊರೆಯುತ್ತಿರುವುದರಿಂದ, ಅರ್ಥವ್ಯವಸ್ಥೆ ಸುಧಾರಿಸಬಹುದು ಎಂಬ ಆಶಾಕಿರಣವಂತೂ ಗೋಚರಿಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next