ಮೈಸೂರು: ಸ್ವಾತಂತ್ರ್ಯಾ ನಂತರ ಕರ್ನಾಟಕದ ಅಭಿವೃದ್ಧಿಗೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಟಿಬದ್ಧವಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ವಿಶ್ವಾಸ ವ್ಯಕ್ತಪಡಿಸಿದರು.
ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಶುಕ್ರವಾರ ಆಯೋಜಿಸಿದ್ದ ಮೈಸೂರು ನಗರದ ಮೂರು ವಿಧಾನಸಭಾ ಕ್ಷೇತ್ರಗಳ ಬೂತ್ ಪ್ರಮುಖರ ನವಶಕ್ತಿ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ರಾಜ್ಯದ ಅಸ್ಮಿತೆಯನ್ನೇ ಬದಲಿಸಿದ್ದಾರೆ. ರಾಜ್ಯದ ಅಭಿವೃದ್ಧಿಗೆ ಮುನ್ನುಡಿಬರೆದ ಸರ್ ಎಂ.ವಿಶ್ವೇಶ್ವರಯ್ಯ, ನಾಡಗೀತೆ ರಚಿಸಿದ ಮಹಾ ಕವಿ ಕುವೆಂಪು ಅವರ ಜಯಂತಿ ಆಚರಿಸುವುದು ಬೇಕಿಲ್ಲ. ಟಿಪ್ಪು ಜಯಂತಿ ಮಾಡುತ್ತಾರೆ ಎಂದು ಟೀಕಿಸಿದರು.
ರಾಜ್ಯಕ್ಕೆ ಹೆಚ್ಚುವರಿ ಅನುದಾನ: ಸೋನಿಯಾಗಾಂಧಿ-ಮನಮೋಹನ್ ಸಿಂಗ್ ನೇತೃತ್ವದ ಹಿಂದಿನ ಯುಪಿಎ ಸರ್ಕಾರದಲ್ಲಿ 13ನೇ ಹಣಕಾಸು ಆಯೋಗದಿಂದ ಕರ್ನಾಟಕ್ಕೆ ಕೊಟ್ಟಿದ್ದು 88.583 ಕೋಟಿ ರೂ. ಮಾತ್ರ. ಆದರೆ, ಮೋದಿ ಸರ್ಕಾರ 14ನೇ ಹಣಕಾಸು ಆಯೋಗದ ಮೂಲಕ ರಾಜ್ಯಕ್ಕೆ 2.19.506 ಕೋಟಿ ಅನುದಾನ ನೀಡಿದೆ.
ಆದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿಗೆ ಬಂದು ಕೇಂದ್ರ ಸರ್ಕಾರ ನಮಗೆ ಯಾವ ಉಪಕಾರ ಮಾಡಿಲ್ಲ ಎಂದು ದೂರುತ್ತಾರೆ. 14ನೇ ಹಣಕಾಸು ಆಯೋಗದ 2 ಲಕ್ಷ ಕೋಟಿ ಅನುದಾನ ಹೊರತುಪಡಿಸಿ, ಬೇರೆ ಬೇರೆ ಯೋಜನೆಗಳಿಗೆ ಕೇಂದ್ರ ಸರ್ಕಾರ 79 ಸಾವಿರ ಕೋಟಿ ರೂಪಾಯಿ ಹೆಚ್ಚುವರಿ ಅನುದಾನ ನೀಡಿದೆ. ಕೇಂದ್ರ ಕೊಟ್ಟ ಅನುದಾನವನ್ನು ಏನು ಮಾಡಿದಿರಿ, ಇದನ್ನು ಕೇಳುವ ಹಕ್ಕು ರಾಜ್ಯದ ಜನತೆಗಿದೆ ಎಂದರು.
ಉದ್ಯೋಗ ಸೃಷ್ಟಿಯಲ್ಲಿ ವಿಫಲ: ಸಿದ್ದರಾಮಯ್ಯ ಸರ್ಕಾರ ಕಳೆದ ಐದು ವರ್ಷಗಳಲ್ಲಿ ಬೆಂಗಳೂರಿಗೆ ಮೂಲ ಸೌಕರ್ಯ ಕಲ್ಪಿಸಿಲ್ಲ. ಉದ್ಯೋಗ ಸೃಷ್ಟಿ ಮಾಡುವಲ್ಲಿ ವಿಫಲವಾಗಿದೆ. ಗ್ರಾಮೀಣ ಪ್ರದೇಶಗಳಿಗೆ ಸಮರ್ಪಕ ವಿದ್ಯುತ್ ಕೊಡಲಾಗುತ್ತಿಲ್ಲ. ನೀರಾವರಿ, ರಸ್ತೆ ಅಭಿವೃದ್ಧಿಯೂ ಆಗಿಲ್ಲ. ರಾಜ್ಯದ ಅಭಿವೃದ್ಧಿ ಬಗ್ಗೆ ಸಿದ್ದರಾಮಯ್ಯ ಅವರಿಗೆ ಕಳಕಳಿ ಇಲ್ಲ. ಈ ಬಾರಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಜಾಗ ಖಾಲಿ ಮಾಡಿ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಅನಂತಕುಮಾರ್, ಮಾಜಿ ಸಚಿವ ಸಿ.ಟಿ.ರವಿ, ಸಂಸದ ಪ್ರತಾಪ್ ಸಿಂಹ, ಮಾಜಿ ಸಚಿವ ಎಸ್.ಎ.ರಾಮದಾಸ್, ಮಾಜಿ ಶಾಸಕ ಇ.ಮಾರುತಿರಾವ್ ಪವಾರ್, ವಿಧಾನಪರಿಷತ್ ಮಾಜಿ ಸದಸ್ಯ ಡಿ.ಮಾದೇಗೌಡ, ಪಕ್ಷದ ನಗರಾಧ್ಯಕ್ಷ ಡಾ.ಬಿ.ಎಚ್.ಮಂಜುನಾಥ್, ಮುಖಂಡರಾದ ಎಲ್.ನಾಗೇಂದ್ರ, ರಘು ಕೌಟಿಲ್ಯ, ಫಣೀಶ್, ನಂದೀಶ್ ಪ್ರೀತಂ ಉಪಸ್ಥಿತರಿದ್ದರು.