ಬೆಂಗಳೂರು: ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿರುವ ಸರ್ಕಾರಗಳಿಗೆ ಜನಸಾಮಾನ್ಯರ ಕಷ್ಟ ಅರ್ಥವಾಗುತ್ತಿಲ್ಲ ಎಂದು ಸಿಐಟಿಯು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತಪನ್‌ಸೇನ್ ಆಕ್ರೋಶ ವ್ಯಕ್ತಪಡಿಸಿದರು. ನಗರದ ಫ್ರೀಡಂಪಾರ್ಕ್‌ನಲ್ಲಿ ಭಾನುವಾರ ಏರ್ಪಡಿಸಿದ್ದ ಅಖೀಲ ಭಾರತ ಅಂಚೆ ನೌಕರರ ಸಂಘದ ಸಿ ದರ್ಜೆ ನೌಕರರ 31ನೇ ಅಧಿವೇಶನದ ಬಹಿರಂಗ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಮಿಕರ ಜೀವನ ಸಂಕಷ್ಟಗಳು ಸರ್ಕಾರಗಳ ಗಮನಕ್ಕೆ ಬರುತ್ತಿದ್ದರೂ ನಿರ್ಲಕ್ಷ್ಯ ತೋರುತ್ತಿವೆ. ನಿರುದ್ಯೋಗ ಸಮಸ್ಯೆ ನಿವಾರಿಸಿ, ಉದ್ಯೋಗಾವಕಾಶಗಳು ಹೆಚ್ಚುವಂತೆ ಮಾಡಬೇಕಾದ ಜವಾಬ್ದಾರಿ ಇದ್ದರೂ ಉದ್ಯೋಗಗಳಿಗೆ ಮಾರಕವಾದ ಯೋಜನೆಗಳನ್ನು ಕೇಂದ್ರ ಸರ್ಕಾರ ರೂಪಿಸುತ್ತಿದೆ ಎಂದು ಆರೋಪಿಸಿದರು.
ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಮುನ್ನ ದೇಶಾದ್ಯಂತ ಸುಮಾರು 2.50 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಭರವಸೆ ನೀಡಿದ್ದ ಬಿಜೆಪಿ ಸರ್ಕಾರ, ಮೂರು ವರ್ಷಗಳಲ್ಲಿ 2 ಲಕ್ಷಕ್ಕೂ ಕಡಿಮೆ ಉದ್ಯೋಗ ಸೃಷ್ಟಿಸಿ ಕಾರ್ಮಿಕರ ವಿರೋಧಿಧೋರಣೆ ನಡೆಸುತ್ತಿದೆ. ಇದು ದೇಶದ ಆರ್ಥಿಕ ವ್ಯವಸ್ಥೆಯನ್ನು ಕುಸಿಯುವಂತೆ ಮಾಡುವ ಸಾಧ್ಯತೆ ಇದ್ದು, ಇದಕ್ಕೆ ಕೇಂದ್ರವೇ ನೇರ ಹೊಣೆ ಎಂದು ಹೇಳಿದರು.
ಸಾರ್ವಜನಿಕರ ಸೇವೆಯಲ್ಲಿ ತೊಡಗಿರುವ ಸರ್ಕಾರಿ ನೌಕರರಿಗೆ ಅಗತ್ಯ ಮೂಲಸೌಕರ್ಯ ಒದಗಿಸುವಲ್ಲಿ ಸರ್ಕಾರ ವಿಫಲವಾಗಿದೆ. ಇದಕ್ಕೆ ಹೋರಾಟದಿಂದಲೇ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ. ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧವಾಗಿ ಮುಂದಿನ ದಿನಗಳಲ್ಲಿ ಸಿಐಟಿಯು ಬೃಹತ್ ಹೋರಾಟ ಸಂಘಟಿಸಲಿದೆ ಎಂದು ಎಚ್ಚರಿಸಿದರು.
ವಸತಿ ಸಚಿವ ಎಂ.ಕೃಷ್ಣಪ್ಪ, ಈ ಹಿಂದೆ ಫೋಸ್ಟ್‌ಮನ್‌ಗಳು ಮನೆಗಳನ್ನು ಹುಡುಕಿಕೊಂಡು ಬಂದು ಕಾಗದ, ಪತ್ರಗಳನ್ನು ತಲುಪಿಸುತ್ತಿದ್ದರು. ಇದೀಗ ಆಧುನಿಕ ತಂತ್ರಜ್ಞಾನ ಬಂದಿದ್ದು, ಅನೇಕ ಮಾಧ್ಯಮಗಳು ಕ್ಷಣದಲ್ಲಿ ಮಾಹಿತಿಯನ್ನು ತಲುಪಿಸುತ್ತಿವೆ. ಆದರೂ. ಅಂಚೆ ಇಂದಿಗೂ ಪ್ರಸ್ತುತವಾಗಿದೆ ಎಂದ ಅವರು, ಅಂಚೆ ಇಲಾಖೆ ನೌಕರರಿಗೆ ಬೆಂಗಳೂರು ಹಾಗೂ ಮಂಡ್ಯ ನಗರಗಳಲ್ಲಿ ನಿವೇಶನ ಸೌಕರ್ಯ ಕಲ್ಪಿಸಿಕೊಡಲು ಸರ್ಕಾರದೊಂದಿಗೆ ಚರ್ಚಿಸಿ ತೀರ್ಮಾನಿಸುವುದಾಗಿ ಭರವಸೆ ನೀಡಿದರು.
ಸಮಾರಂಭದಲ್ಲಿ ಅಂಚೆ ಇಲಾಖೆ ಕಾರ್ಯದರ್ಶಿ ಎ.ಎನ್.ನಂದಾ, ಸಂಘದ ಕಾರ್ಯಾಧ್ಯಕ್ಷ ಎನ್.ಚಂದ್ರಶೇಖರ್, ವಿಚಾರಣಾ ಸಮಿತಿ ಅಧ್ಯಕ್ಷ ಪಿ.ಶ್ರೀಧರ್ ರೆಡ್ಡಿ, ಮುಖ್ಯ ಅಂಚೆ ಅಧಿಕಾರಿ ಚಾರ್ಲ್ಸ್ ಲೋಬೋ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸಂಘದ ಬೇಡಿಕೆಗಳಿವು
ಕಾರ್ಮಿಕರಿಗೆ ಕನಿಷ್ಠ ವೇತನ ಜಾರಿಗೊಳಿಸಬೇಕು. ಜನಸೇವೆಗೆ ಅಗತ್ಯವಿರುವ ಮೂಲಸೌಲಭ್ಯ ನೀಡಬೇಕು. ಸೇವಾನಿರತ ಸರ್ಕಾರಿ ನೌಕರರಿಗೆ ಅಗತ್ಯ ಸೌಕರ್ಯ ಒದಗಿಸಬೇಕು. 7ನೇ ವೇತನ ಆಯೋಗದ ಶಿಫಾರಸ್ಸನ್ನು ತಿದ್ದುಪಡಿ ಮಾಡಬೇಕು. ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ರದ್ದುಪಡಿಸಬೇಕು ಎಂಬುದು ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಸಂಘ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಲಾಯಿತು.