Advertisement

ರೈತರ ಕೈಹಿಡಿಯುತ್ತಾ ಕಡೆ ಕೇಂದ್ರ ಬಜೆಟ್

07:04 AM Feb 01, 2019 | Team Udayavani |

ರಾಮನಗರ: ಕೇಂದ್ರ ಸರ್ಕಾರ ಮಂಡಿಸುವ ಆಯವ್ಯಯಕ್ಕೆ ಜಿಲ್ಲೆಯಲ್ಲಿ ಹೆಚ್ಚಿನ ನಿರೀಕ್ಷೆಗಳು ಇಲ್ಲವಾಗಿದೆ. ಆದರೂ ಹಾಲಿ ಲೋಕಸಭೆಯ 5 ವರ್ಷದ ಅವಧಿ ಮುಕ್ತಾಯಗೊಳ್ಳುತ್ತಿದ್ದು, ಎದುರಾಗುವ ಚುನಾವಣೆಯ ಮೇಲೆ ದೃಷ್ಟಿ ನೆಟ್ಟಿರುವ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಜನ ಸಮುದಾಯದ ಗಮನ ಸೆಳೆಯುವ ಬಜೆಟ್ ಮಂಡನೆಯಾಗುತ್ತದೆ ಎಂಬ ಆಶಯ ಜನರಲ್ಲಿದೆ.

Advertisement

ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಾಲಮನ್ನಾ ಸೇರಿದಂತೆ, ಇನ್ನು ಮುಂದೆ ರೈತರು ಮಾಡುವ ಎಲ್ಲಾ ಸಾಲವನ್ನು ಸರ್ಕಾರಗಳೇ ಹೊರಬೇಕು. ಈ ವಿಚಾರಗಳಿಗೆ ಪೂರಕವಾದ ಅಂಶಗಳು ಕೇಂದ್ರ ಸರ್ಕಾರ ಫೆಬ್ರವರಿ 1ರಂದು ಮಂಡಿಸುವ ಬಜೆಟ್‌ನಲ್ಲಿ ವ್ಯಕ್ತವಾಗಬೇಕು ಎಂಬುದು ಜಿಲ್ಲೆಯ ರೈತರ ಆಗ್ರಹ.

ವೈಜ್ಞಾನಿಕ ಬೆಲೆ ನಿಗದಿಯಾಗಲಿ: ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಮಗದಷ್ಟು ಬೆಳೆಗಳಿಗೆ ವಿಸ್ತರಣೆಯಾಗುವ ನಿರೀಕ್ಷೆಯನ್ನು ರೈತ ಸಮುದಾಯ ವ್ಯಕ್ತಪಡಿಸಿದೆ. ಕೃಷಿ, ತೋಟಗಾರಿಕೆ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿಗೆ ಯಾವ ಸರ್ಕಾರಗಳು ಪ್ರಾಮಾಣಿಕ ಪ್ರಯತ್ನ ಪಡುತ್ತಿಲ್ಲ ಎಂಬ ನೋವನ್ನು ವ್ಯಕ್ತಪಡಿಸಿರುವ ರೈತರು, ಆಹಾರ ಉತ್ಪಾದನೆ ಕ್ಷೇತ್ರವನ್ನು ಕೇಂದ್ರ ಸರ್ಕಾರ ಬಲಗೊಳಿಸುವ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದಿದ್ದಾರೆ.

ರೇಷ್ಮೆ ಉದ್ಯಮಕ್ಕೆ ಯೋಜನೆ ರೂಪಿಸಿ: ನಿರಂತರ ಬರಗಾಲದಿಂದ ತುತ್ತಾಗಿರುವ ಜಿಲ್ಲೆಯ ರೈತರ ಕೈಹಿಡಿದಿದ್ದು, ಸಿಲ್ಕ್ ಮತ್ತು ಮಿಲ್ಕ್ (ರೇಷ್ಮೆ ಮತ್ತು ಹೈನೋದ್ಯಮ). ದೇಶಿ ರೇಷ್ಮೆಗೆ ಬೇಡಿಕೆ ಹಲವು ವರ್ಷಗಳಿಂದ ಹೆಚ್ಚಳ ಕಾಣುತ್ತಲೇ ಇಲ್ಲ. ಆಮದು ರೇಷ್ಮೆಯ ದರಗಳನ್ನು ಏರಿಸುವುದು, ಅಂತಾರಾಷ್ಟ್ರೀಯ ಗುಣಮಟ್ಟದ ರೇಷ್ಮೆಗೆ ಹಾಲಿ ಪದ್ಧತಿಯಲ್ಲಿ ಸುಧಾರಣೆ ತರುವುದು ಅಥವಾ ನೂತನ ಪದ್ಧತಿಯನ್ನು ಅಳವಡಿಸಿಕೊಳ್ಳಲು ನಿಪುಣರಿಂದ ಸಹಕಾರ, ಸರ್ಕಾರದಿಂದ ಪ್ರೋತ್ಸಾಹಕ್ಕೆ ರೇಷ್ಮೆ ಬೆಳೆಗಾರರು ಒತ್ತಾಯಿಸಿದ್ದಾರೆ.

ಇನ್ನೊಂದೆಡೆ ರೇಷ್ಮೆ ನೂಲು ತೆಗೆಯಲು ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ್ಕ ತರಬೇತಿ ಮತ್ತು ಸರ್ಕಾರದ ಸಹಕಾರ ಬೇಕಾಗಿದೆ. ಅಲ್ಲದೆ, ನೂತನ ಪಿಂಚಣಿ ಯೋಜನೆ (ಎನ್‌ಪಿಎಸ್‌) ಬದಲಿಗೆ ಹಳೆಯ ಪಿಂಚಣಿ ಯೋಜನೆಯನ್ನೇ ಜಾರಿಗೆಗೊಳಿಸುವ ಬಗ್ಗೆ ತಮ್ಮ ಹೋರಾಟಕ್ಕೆ ಕೇಂದ್ರ ಸರ್ಕಾರ ಸ್ಪಂದಿಸುತ್ತದೆ ಎಂಬ ನಿರೀಕ್ಷೆಯನ್ನು ಸರ್ಕಾರಿ ನೌಕರರು ಇಟ್ಟುಕೊಂಡಿದ್ದಾರೆ.

Advertisement

ಆದಾಯ ತೆರಿಗೆ ಇಳಿಕೆಗೆ ಆಗ್ರಹ: ಆದಾಯದ ಮೇಲಿನ ತೆರಿಗೆ ವಿಧಿಸುವ ಮಿತಿಯನ್ನು 4 ಲಕ್ಷಕ್ಕೆ ಏರಿಸಬೇಕು ಎಂಬ ಕೂಗು ಕಳೆದ ವರ್ಷವೂ ಕೇಳಿಸಿತ್ತು. ಇದೇ ಕೂಗ ಮತ್ತೂಮ್ಮ ಪ್ರತಿಧ್ವನಿಸಿದೆ. ಪೆಟ್ರೋಲ್‌, ಡೀಸಲ್‌ ಸೇರಿದಂತೆ ಅಗತ್ಯವಸ್ತುಗಳ ಬೆಲೆಗಳು ಹೊರೆಯಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಮನೆ ನಿರ್ಮಿಸಿಕೊಳ್ಳಲು, ದುರಸ್ತಿಗೊಳಿಸಲು ಸುಲಭ ಬೆಲೆಗಳಲ್ಲಿ ಸಾಲ ದೊರೆಯುವ ವ್ಯವಸ್ಥೆಯನ್ನು ಸರ್ಕಾರಗಳು ಪ್ರಾಮಾಣಿಕವಾಗಿ ಜಾರಿ ಮಾಡಬೇ ಕಾಗಿದೆ. ಈ ವಿಚಾರದಲ್ಲಿ ಬ್ಯಾಂಕುಗಳು ಸಹಕರಿಸಬೇಕಾಗಿದೆ.

ಜಿಎಸ್‌ಟಿ ಇಳಿಸಲು ಒತ್ತಾಯ: ಜಿಎಸ್‌ಟಿ ತೆರಿಗೆ ಪದ್ಧತಿಗೆ ವರ್ತಕರು ಮತ್ತು ಸಾಮಾನ್ಯ ನಾಗರಿಕರು ಒಗ್ಗಿಕೊಳ್ಳಲು ಆರಂಭಿಸಿದ್ದಾರೆ. ಆದರೆ, ಜಿಎಸ್‌ಟಿ ದರದ ಹಂತಗಳನ್ನು ಕೇವಲ ಒಂದಕ್ಕೆ ಅಥವಾ ಗರಿಷ್ಠ ಮೂರಕ್ಕೆ ಇಳಿಸಬೇಕಾಗಿದೆ. ಪದಾರ್ಥಗಳು ಮತ್ತು ಸೇವೆಗಳು ಶೂನ್ಯ ಅಥವಾ ಶೇ. 5ರಷ್ಟು ತೆರಿಗೆ ವಿಧಿಸುವ ಎರಡು ಹಂತಗಳು ಇರಲಿ ಎಂಬುದು ಬಹು ಜನರ ಅಪೇಕ್ಷೆ. ಕೆಲವರು ಶೇ.5 ಮತ್ತು ಶೇ.12 ಹಂತಗಳು ಇದ್ದರೂ ಓಕೆ ಎನ್ನುವವರು ಇದ್ದಾರೆ.

ಎಟಿಎಂಗಳು ಇರಲಿ: ಡಿಜಿಟಲ್‌ ಪೇಮೆಂಟ್ಸ್‌ ಮತ್ತು ಬ್ಯಾಂಕಿಂಗ್‌ ಪದ್ಧತಿಗೂ ಜನ ಒಗ್ಗಿಕೊಳ್ಳಲಾರಂಭಿಸಿದ್ದಾರೆ. ಆದರೆ, ಎಟಿಎಂಗಳನ್ನು ಹಂತ, ಹಂತವಾಗಿ ತೆಗೆದು ಹಾಕುವ ಉದ್ದೇಶವನ್ನು ನಾಗರಿಕರು ವಿರೋಧಿಸಿದ್ದಾರೆ. ಎಟಿಎಂಗಳು ಇರಲಿ, ಸುರಕ್ಷತೆಯೂ ಹೆಚ್ಚಾಗಲಿ ಎಂದು ಸಾಮಾನ್ಯ ಜನತೆ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ನುಡಿದಂತೆ ನಡೆಯಲಿಲ್ಲ: 2018-19ನೇ ಸಾಲಿನ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ಟೊಮೆಟೋ, ಈರುಳ್ಳಿ ಮತ್ತು ಆಲೂಗಡ್ಡೆ ಬೆಲೆ ರಕ್ಷಣೆಗೆ ಆಪರೇಷನ್‌ ಗ್ರೀನ್‌ ವ್ಯವಸ್ಥೆ ಜಾರಿಗೆ ತರುವುದಾಗಿ ಹೇಳಿ 500 ಕೋಟಿ ನಿಗದಿಪಡಿಸಿತ್ತು. ಈ ಕಾರ್ಯಕ್ರಮ ಜಿಲ್ಲೆಯಲ್ಲಿ ಪಾಲನೆಯಾಗುತ್ತಿಲ್ಲ. ರೈತರ ನೇರ ಮಾರುಕಟ್ಟೆ ಅನುಷ್ಠಾನದ ವಿಚಾರದಲ್ಲಿ ಸ್ಪಷ್ಟತೆ ಕಾಣುತ್ತಿಲ್ಲ ಎಂದು ರೈತರು ಪ್ರತಿಕ್ರಿಯಿಸಿದ್ದಾರೆ.

ರೈಲು ಸಂಚಾರ ಹೆಚ್ಚಳಕ್ಕೆ ಒತ್ತಾಯ: ಬೆಂಗಳೂರು- ಮೈಸೂರು ನಡುವೆ ರಾಮನಗರ, ಚನ್ನಪಟ್ಟಣ ಮುಂತಾದ ಪ್ರಮುಖ ಪಟ್ಟಣಗಳಲ್ಲಿ ನಿಲುಗಡೆ ಅವಕಾಶವಿರುವ ರೈಲುಗಳ ಸಂಖ್ಯೆಯಲ್ಲಿ ಹೆಚ್ಚಿಸಬೇಕು. ರೈಲು ಪ್ರಯಾಣ ದರವನ್ನು ಕಡಿಮೆ ಮಾಡಬೇಕು. ಬೆಂಗಳೂರಿನಿಂದ ಸಮೀಪದ ನಗರಗಳಿಗೆ ಸಬ್‌ಅರ್ಬನ್‌ ರೈಲು ವ್ಯವಸ್ಥೆಗೆ ಕೇಂದ್ರ ಸರ್ಕಾರ ಕಳೆದ ಬಜೆಟ್‌ನಲ್ಲಿ 17 ಕೋಟಿ ರೂ., ಮೀಸಲಿಟ್ಟಿತ್ತು. ಈ ಯೋಜನೆಯಲ್ಲಿ ರಾಮನಗರ ಮತ್ತು ಚನ್ನಪಟ್ಟಣ ನಗರಗಳನ್ನು ಒಳಗೊಂಡಿದೆ. ವರ್ಷ ಕಳೆದರೂ ಈ ಯೋಜನೆ ಸದ್ದು ಮಾಡಿಲ್ಲ. ಬೆಂಗಳೂರು – ಹೆಜ್ಜಾಲ- ಕನಕಪುರ- ಚಾಮರಾಜನಗರ ರೈಲು ಮಾರ್ಗದ ವಿಚಾರ ಏನಾಯ್ತು ಎಂಬ ಪ್ರಶ್ನೆ ನಾಗರಿಕರನ್ನು ಕಾಡುತ್ತಿದೆ.

ಆರೋಗ್ಯ ಕರ್ನಾಟಕ ಯೋಜನೆ ಕಾರ್ಡ್‌ ಸಿಕ್ಕಿಲ್ಲ: ಕಳೆದ ಬಜೆಟ್‌ನಲ್ಲಿ ಪ್ರಧಾನಿ ಮೋದಿ ಸರ್ಕಾರ ಆಯುಷ್ಮಾನ್‌ ಭಾರತ್‌ ಯೋಜನೆಯನ್ನು ಜಾರಿಗೆ ತಂದಿದೆ. 5 ಲಕ್ಷ ರೂ.,ವರೆಗಿನ ವೈದ್ಯಕೀಯ ವೆಚ್ಚದ ಈ ಯೋಜನೆಗೆ ಸಾರ್ವಜನಿಕರು ಮುಕ್ತವಾಗಿ ಸ್ವಾಗತಿಸಿದ್ದಾರೆ. ಇದೇ ಯೋಜನೆಯನ್ನು ರಾಜ್ಯ ಸರ್ಕಾರ ತನ್ನ ಯೋಜನೆ ಆರೋಗ್ಯ ಕರ್ನಾಟಕವನ್ನು ಅಳವಡಿಸಿಕೊಂಡು ಆಯುಷ್ಮಾನ್‌ ಭಾರತ- ಆರೋಗ್ಯ ಕರ್ನಾಟಕ ಯೋಜನೆಯನ್ನು ಜಾರಿಗೆ ತಂದಿದೆ. ಯೋಜನೆ ಜಾರಿಯಾಗಿದೆಯಾದರೂ ಸಾರ್ವಜನಿಕರಿಗೆ ಯೋಜನೆಯ ಕಾರ್ಡ್‌ ಇನ್ನೂ ಸಿಕ್ಕಿಲ್ಲ ಎಂಬ ಅಸಮಾಧಾನ ಜನರಲ್ಲಿದೆ.

* ಬಿ.ವಿ.ಸೂರ್ಯ ಪ್ರಕಾಶ್‌

Advertisement

Udayavani is now on Telegram. Click here to join our channel and stay updated with the latest news.

Next