Advertisement

ಶ್ರೀಕೃಷ್ಣಮಠದಲ್ಲಿ  ಸಂಭ್ರಮದ ಲಕ್ಷದೀಪೋತ್ಸವ ಆರಂಭ

12:35 PM Nov 21, 2018 | Team Udayavani |

ಉಡುಪಿ: ಶ್ರೀಕೃಷ್ಣಮಠದಲ್ಲಿ ಪರ್ಯಾಯ ಶ್ರೀಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರ ನೇತೃತ್ವದಲ್ಲಿ ಮಂಗಳವಾರ ಉತ್ಥಾನ ದ್ವಾದಶಿಯಂದು ನಾಲ್ಕು ದಿನಗಳ ಸಂಭ್ರಮದ ಲಕ್ಷದೀಪೋತ್ಸವ ಆರಂಭಗೊಂಡಿತು. 

Advertisement

ಸೋಮವಾರ ಏಕಾದಶಿಯಾದ ಕಾರಣ ಬೆಳಗ್ಗೆ ಬೇಗ ಮಹಾಪೂಜೆ ನಡೆಯಿತು. ತಿರುಮಲ ತಿರುಪತಿ ದೇವಸ್ಥಾನ ದಾಸ ಸಾಹಿತ್ಯ ಪ್ರಾಜೆಕ್ಟ್ ಮತ್ತು ಮಂತ್ರಾಲಯದ ಗುರುಸಾರ್ವಭೌಮ ದಾಸ ಸಾಹಿತ್ಯ ಪ್ರಾಜೆಕ್ಟ್ ಮತ್ತು ಜಿಲ್ಲಾ ಭಜನ ಮಂಡಳಿಗಳ ಒಕ್ಕೂಟದ ಭಜನ ಮಂಡಳಿಗಳ ಸದಸ್ಯರು ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡು ನಾಮ ಸಂಕೀರ್ತನೆ ನಡೆಸಿಕೊಟ್ಟರು. ಅಪರಾಹ್ನ ರಥಬೀದಿಯಲ್ಲಿ ನಿರ್ಮಿಸಿದ ಅಟ್ಟಣಿಗೆಗಳಲ್ಲಿ ಹಣತೆಗಳಿಗೆ ಮುಹೂರ್ತವನ್ನು (ಗೋಮಯದ ಮೇಲೆ ಹಣತೆ ಇಟ್ಟು) ಪರ್ಯಾಯ ಶ್ರೀಪಲಿಮಾರು, ಶ್ರೀಪೇಜಾವರ ಮತ್ತು ಶ್ರೀಅದಮಾರು ಕಿರಿಯ ಶ್ರೀಪಾದರು ನಡೆಸಿದರು. ಮಧ್ವ ಸರೋವರದಲ್ಲಿ ನಡೆದ ತುಳಸೀ ಪೂಜೆ, ಕ್ಷೀರಾಬ್ಧಿ ಪೂಜೆಯಲ್ಲಿ ಶ್ರೀಪಲಿಮಾರು, ಶ್ರೀಕೃಷ್ಣಾಪುರ, ಶ್ರೀಅದಮಾರು ಉಭಯ ಶ್ರೀಪಾದರು, ಶ್ರೀಪೇಜಾವರ ಕಿರಿಯ, ಶ್ರೀಕಾಣಿಯೂರು ಶ್ರೀಪಾದರು ಪಾಲ್ಗೊಂಡರು. ಈ ಸಂದರ್ಭ ಭಜನ ಮಂಡಳಿಗಳ ಸದಸ್ಯರು ಮಧ್ವ ಸರೋವರದ ಸುತ್ತಲೂ ಕುಳಿತು ಏಕಕಂಠದಲ್ಲಿ ಭಜನೆಗಳನ್ನು ಹಾಡಿದರು. 

ರಾತ್ರಿ ವೇಳೆ ಸಾವಿರಾರು ಮಣ್ಣಿನ ಹಣತೆಗಳಲ್ಲಿ ಬೆಳಕು ಕಾಣುವಾಗ ತೆಪ್ಪೋತ್ಸವ ಸಹಿತ ರಥೋತ್ಸವ ನಡೆಯಿತು. ರಥಬೀದಿ ಸುತ್ತಲೂ ಲಕ್ಷದೀಪೋತ್ಸವವನ್ನು ನೋಡಲು ಜನಜಂಗುಳಿ ಸೇರಿತ್ತು. 

Advertisement

ಮಂಗಳವಾರ ಲಕ್ಷ ದೀಪೋತ್ಸವದಲ್ಲಿ ಎರಡು ರಥಗಳಲ್ಲಿ ಉತ್ಸವ ಮೂರ್ತಿಗಳನ್ನು ಇಟ್ಟು ಪೂಜಿಸಲಾಯಿತು. ಒಂದು ರಥದಲ್ಲಿ ಶ್ರೀಕೃಷ್ಣ, ಮುಖ್ಯಪ್ರಾಣ ದೇವರ ಉತ್ಸವಮೂರ್ತಿ ಮತ್ತು ಇನ್ನೊಂದು ರಥದಲ್ಲಿ ಶ್ರೀಅನಂತೇಶ್ವರ ಮತ್ತು ಚಂದ್ರಮೌಳೀಶ್ವರ ಉತ್ಸವ ಮೂರ್ತಿಗಳನ್ನು ಇರಿಸಿ ಉತ್ಸವ ನಡೆಸಲಾಯಿತು. ಲಕ್ಷದೀಪೋತ್ಸವ ಇನ್ನು ಮೂರೂ ದಿನ ನಡೆಯಲಿದೆ. ಬ್ರಹ್ಮರಥ ಮಾತ್ರ ಸಪೊ¤àತ್ಸವದ ವೇಳೆ ಹೊರಬರಲಿದೆ. ಮಕರ ಸಂಕ್ರಾಂತಿಯಂದು ಬ್ರಹ್ಮರಥೋತ್ಸವ ಸಹಿತ ಮೂರು ರಥಗಳ ಉತ್ಸವ ನಡೆಯಲಿದೆ. 

ಚಾತುರ್ಮಾಸ್ಯ ಆಹಾರ ಕ್ರಮ ಮುಕ್ತಾಯ
ರವಿವಾರದವರೆಗೆ ಚಾತುರ್ಮಾಸ್ಯ ವ್ರತದ ಆಹಾರ ಕ್ರಮ ಕೃಷ್ಣಮಠದಲ್ಲಿ ನಡೆಯಿತು. ಚಾತುರ್ಮಾಸ್ಯದ ನಾಲ್ಕು ತಿಂಗಳ ಅವಧಿ ಮುಗಿದ ಬಳಿಕ ಮಂಗಳವಾರದಿಂದ ಸಹಜ ಆಹಾರ ಕ್ರಮ ಆರಂಭಗೊಂಡಿತು. 

Advertisement

Udayavani is now on Telegram. Click here to join our channel and stay updated with the latest news.

Next