Advertisement

ಗೇರು ಉದ್ಯಮ ಬೆಳೆಯಬೇಕು ; ಗೇರು ಕೃಷಿಕರೂ ಬೆಳಗಬೇಕು

07:52 AM May 15, 2020 | Sriram |

ಗೇರು ಉದ್ಯಮ ಮತ್ತು ಗೇರು ಕೃಷಿ ಎರಡೂ ಸ್ಥಳೀಯ ಆರ್ಥಿಕತೆಗೆ ವಿಶೇಷವಾದ ಶಕ್ತಿಯನ್ನು ತುಂಬುವಂಥವು. ಕಾರಣವೆಂದರೆ, ಗೇರು ಉದ್ಯಮ ಸ್ಥಳೀಯ ಮಹಿಳೆಯರಿಗೆ ಉದ್ಯೋಗ ಕಲ್ಪಿಸಿದೆ. ಅದರಲ್ಲೂ ಗ್ರಾಮೀಣ ಭಾಗದಲ್ಲಿ . ಅವರೆಲ್ಲರೂ ಸ್ಥಳೀಯ ಆರ್ಥಿಕತೆಯ ಭಾಗವೇ. ಹಾಗಾಗಿ ಗೇರು ಉದ್ಯಮ ಮತ್ತು ಗೇರು ಕೃಷಿ ಎರಡನ್ನೂ ಸರಕಾರ, ಜಿಲ್ಲಾಡಳಿತ ಗಮನಿಸಿ ಶಕ್ತಿ ತುಂಬಬೇಕು. ಆಗ ಸ್ಥಳೀಯ ಆರ್ಥಿಕತೆಗೆ ಇನ್ನಷ್ಟು ಚೈತನ್ಯ ಬಂದೀತು.

Advertisement

ಉದಯವಾಣಿ ಅಧ್ಯಯನ ತಂಡ- ಉಡುಪಿ: ಜಿಲ್ಲೆಯ ಸ್ಥಳೀಯ ಆರ್ಥಿಕತೆ ಉಳಿದೆಲ್ಲ ಜಿಲ್ಲೆಗಳ ಆರ್ಥಿಕತೆಗಿಂತ ತೀರಾ ವೈವಿಧ್ಯವಾದುದು. ಒಂದೆಡೆ ಕೃಷಿ, ಮತ್ತೂಂದೆಡೆ ಸಣ್ಣ ಕೈಗಾರಿಕೆಗಳು, ಮಗದೊಂದೆಡೆ ಕೈಗಾರಿಕೆ-ಉದ್ಯಮ ಎರಡೂ ಸ್ವರೂಪ ಇರುವ ಕೆಲವು ವಲಯಗಳು. ಎಲ್ಲವೂ ಸ್ಥಳೀಯ ಆರ್ಥಿಕತೆಯನ್ನು ಚೈತನ್ಯಶೀಲ ವಾಗಿಡುತ್ತಲೇ ಬಂದಿದೆ.

ಇಂಥ ಕೆಲವೇ ವಲಯಗಳಲ್ಲಿ ಗೋಡಂಬಿ ಬೆಳೆ ಮತ್ತು ಮೀನುಗಾರಿಕೆ ಕ್ಷೇತ್ರಗಳು ಸೇರಿವೆ. ಗೇರು ಬೆಳೆ ಮತ್ತು ಗೇರು ಸಂಸ್ಕರಣ ಕೈಗಾರಿಕೆ/ಉದ್ಯಮವೆರಡೂ ಒಟ್ಟಿಗೇ ಬೆಳೆಯುತ್ತಿವೆ. ಕರ್ನಾಟಕ ಅತಿ ಹೆಚ್ಚು ಗೋಡಂಬಿ ಬೆಳೆಯುವ ರಾಜ್ಯಗಳ ಪೈಕಿ ಐದನೇ ಸ್ಥಾನ ಹೊಂದಿದೆ. ಪ್ರತಿ ವರ್ಷ ಜಿಲ್ಲೆಯಲ್ಲಿ ಸುಮಾರು 70 ಸಾವಿರ ಟನ್‌ ಗೇರುಬೀಜವನ್ನು ಬೆಳೆಗಾರರು ಬೆಳೆದರೆ, ಗೇರು ಬೀಜ ಸಂಸ್ಕರಣ ಘಟಕಗಳು ಸುಮಾರು 2-3 ಲಕ್ಷ ಮೆಟ್ರಿಕ್‌ ಟನ್‌ ಗೋಡಂಬಿಯನ್ನು ಸಂಸ್ಕರಿಸುತ್ತಿವೆ.

ಉತ್ಪಾದನೆ ಮತ್ತು ಸಂಸ್ಕರಣೆಯ ಬಹುತೇಕ ಭಾಗ ವಿದೇಶಕ್ಕೆರಫ್ತಾಗುತ್ತದೆ. ಉದ್ಯಮ ವಲಯದ‌ ಪ್ರಕಾರ, ಸ್ಥಳೀಯವಾಗಿ ಬೆಳೆಯುವ ಗೋಡಂಬಿ ಪ್ರಮಾಣ ಸಾಲದು.

ಇದಕ್ಕೆ ಪೂರಕವಾಗಿ ಬೆಳೆಗಾರರು ಗೇರು ಕೃಷಿಯನ್ನು ಹೆಚ್ಚು ಪ್ರೋತ್ಸಾಹಿಸಬೇಕು ಎನ್ನುತ್ತಾರೆ. ಎರಡೂ ವಲಯಗಳಲ್ಲಿ ಸಮಸ್ಯೆಗಳಿವೆ, ಅವಕಾಶಗಳೂ ಇವೆ. ಹಾಗಾಗಿಯೇ ಇದು ವಿಶಿಷ್ಟವಾದುದು.

Advertisement

ಬೆಳೆಗಾರರು ಹೇಳುವುದೇನು?
ಜಿಲ್ಲೆಯಲ್ಲಿ ಅಂದಾಜು 15ರಿಂದ 20 ಸಾವಿರ ಮಂದಿ ಗೇರು ಕೃಷಿಕರಿದ್ದಾರೆ. ಒಟ್ಟು ಜಿಲ್ಲೆಯಲ್ಲಿ 18 ಸಾವಿರಕ್ಕೂ ಹೆಚ್ಚು ಹೆಕ್ಟೇರ್‌ ಪ್ರದೇಶದಲ್ಲಿ ಗೇರು ಕೃಷಿ ಮಾಡಲಾಗುತ್ತಿದೆ. ಇದರಲ್ಲಿ 9,936 ಹೆಕ್ಟೇರ್‌ ರೈತರದ್ದಾಗಿದ್ದರೆ, 8,800 ಹೆಕ್ಟೇರ್‌ ಗೇರು ನಿಗಮದ್ದಾಗಿದೆ.

ಇತ್ತೀಚಿನ ದಿನಗಳಲ್ಲಿ ಭೂಮಿಯ ಅಂತರ್ಜಲ ಮಟ್ಟದ ಇಳಿಕೆಯ ಜತೆ ಮಣ್ಣಿನ ಫಲವತ್ತತೆಯೂ ಕಡಿಮೆ ಯಾಗುತ್ತಿದ್ದು, ಗೇರು ಮರಕ್ಕೆ ಅಗತ್ಯವಿರುವಷ್ಟು ಪೋಷಕಾಂಶಗಳು ಲಭ್ಯವಾಗುತ್ತಿಲ್ಲ. ಹಾಗಾಗಿ ಇದಕ್ಕೆ ಸೂಕ್ತ ಪೋಷಕಾಂಶ ಹಾಗೂ ನೀರು ಕೊಡಲು ಉತ್ಪಾದನಾ ವೆಚ್ಚ ಕೊಂಚ ಹೆಚ್ಚಾಗುತ್ತದೆ ಎಂಬುದು ಬೆಳೆಗಾರರ ಅಭಿಪ್ರಾಯ.

ಇತ್ತೀಚಿನ ವರ್ಷಗಳಲ್ಲಿ ಮೋಡ, ಸರಿಯಾದ ಸಮಯದಲ್ಲಿ ಚಳಿ ಇಲ್ಲದಿರುವಂತಹ ಪ್ರತಿಕೂಲ ಹವಾಮಾನದಿಂದ ಗೇರು ಹೂವು ಬಿಡುವುದು ತಡವಾಗುತ್ತಿದೆ. ಇದರಿಂದ ಸರಿಯಾದ ಸಮಯಕ್ಕೆ ಫಸಲು ಸಿಗುತ್ತಿಲ್ಲ. ದರ ಕಡಿಮೆ ಇರುವ ಸಮಯದಲ್ಲಿ ಫಸಲು ಕೊಯ್ಲಿಗೆ ಬರುವುದರಿಂದ ನಷ್ಟ ಹೆಚ್ಚಾಗುತ್ತಿದೆ. ಇದರೊಂದಿಗೆ ಕೀಟ ಬಾಧೆ ಸೇರಿದಂತೆ ಇನ್ನಿತರ ರೋಗಗಳೂ ಕಾಡುತ್ತಿವೆ. ಮಾರುಕಟ್ಟೆಯಲ್ಲಿ ಮಧ್ಯವರ್ತಿಗಳ ಹಾವಳಿಯೂ ಇರುವ ಕಾರಣ ಅರ್ಹ ಬೆಲೆ ಸಿಗುತ್ತಿಲ್ಲ ಎನ್ನುತ್ತಾರೆ ಬೆಳೆಗಾರರು.

ಉದ್ಯಮಗಳ ಕಥೆ ಹೇಗೆ?
ಉದ್ಯಮ ಸದ್ಯಕ್ಕೆ ನೆಮ್ಮದಿಯಿಂದ ಇದೆ. ಆದರೆ ಈ ಕೊರೊನಾ ಸಮಸ್ಯೆ ದೀಪಾವಳಿವರೆಗೂ ಹೋದರೆ ಮಾತ್ರ ಕೈಸುಟ್ಟಿàತು ಎಂಬುದು ಉದ್ಯಮ ವಲಯದ ಮಾತು.

ಜಿಲ್ಲೆಯಲ್ಲಿ 200ರಷ್ಟು ಗೇರುಬೀಜ ಫ್ಯಾಕ್ಟರಿಗಳಿದ್ದು, ರಾಜ್ಯ ಗೋಡಂಬಿ ಉತ್ಪಾದಕರ ಸಂಘದಡಿ ಮಾನ್ಯತೆ ಪಡೆದು ಕಾರ್ಯ ನಿರ್ವಹಿಸುತ್ತಿವೆ. ಸುಮಾರು 50 ಸಾವಿರ ಮಂದಿ ಕಾರ್ಮಿಕರಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ಅಂದಾಜು 100 ರಿಂದ 200 ಕೋಟಿ ರೂ. ನಷ್ಟವಾಗಿರಬಹುದು. ವರ್ಷ ವೊಂದಕ್ಕೆ 2 ಸಾವಿರ ಕೋಟಿ ರೂ. ವರೆಗೂ ನಡೆಯುವ ವಹಿವಾಟಿನ ಪೈಕಿ ಶೇ. 15 ರಷ್ಟಿರಬಹುದು ಎಂಬುದು ಅಸೋಸಿಯೇಶನ್‌ ಲೆಕ್ಕಾಚಾರ.

ಗೋಡಂಬಿಗೆ ಹೆಚ್ಚಿನ ಬೇಡಿಕೆ ಇರು ವುದು ದೀಪಾವಳಿ ಅವಧಿಯಲ್ಲಿ. ಆಗ ಬಹುಪಾಲು ಉತ್ಪನ್ನಗಳಿಗೆ ಬೇಡಿಕೆ ಬರುತ್ತದೆ. ಆದ ಕಾರಣ ಇದೇ ಪರಿಸ್ಥಿತಿ ಡಿಸೆಂಬರ್‌ ತನಕವೂ ಮುಂದುವರಿದರೆ ಉದ್ಯಮ ಭಾರೀ ನಷ್ಟಕ್ಕೆ ಒಳಗಾಗಲಿದೆ.

ಶೇ.25 ಸಾಮರ್ಥ್ಯದಲ್ಲಿ ಕೆಲಸ
ಲಾಕ್‌ಡೌನ್‌ನಿಂದ ಶೇ.25 ಮಂದಿ ಕಾರ್ಮಿಕರನ್ನು ಬಳಸಿ ಪಾಳಿಯಲ್ಲಿ ಕೆಲಸ ಮಾಡಲಾಗುತ್ತಿದೆ. ಸಾಮಾಜಿಕ ಅಂತರ, ನೈರ್ಮಲ್ಯಕೀಕರಣಕ್ಕೆ ಒತ್ತು ನೀಡಲಾಗುತ್ತಿದೆ. ಕಾರ್ಮಿಕರ ಸಮಸ್ಯೆ, ಮಾರುಕಟ್ಟೆ  , ಕಚ್ಚಾ ಸಾಮಗ್ರಿ ಕೊರತೆ, ಪ್ರವಾಸೋದ್ಯಮ ಸ್ಥಗಿತ, ವಿಮಾನಯಾನ ಕೊರತೆ, ಸಾಗಾಟ ಸಾಧ್ಯವಾಗದಿರುವುದು ಉದ್ಯಮದ ಮೇಲೆ ಬಿದ್ದಿರುವ ಪರಿಣಾಮಗಳಾಗಿವೆ. ಇವುಗಳೆಲ್ಲದರ ನಡುವೆ ಉದ್ಯಮವನ್ನು ಲಾಭದ ಹಾದಿಗೆ ತರುವ ಹೊಣೆ ಉದ್ಯಮಿಗಳ ಮೇಲಿದೆ.

ಸರಕಾರದಿಂದ ಏನನ್ನು ನಿರೀಕ್ಷಿಸುತ್ತಿದ್ದೇವೆ ?
ಉದ್ಯಮ
1.ಗೋಡಂಬಿ ಉದ್ಯಮಕ್ಕೆ ಸರಕಾರದಿಂದ
ಮತ್ತು ಬ್ಯಾಂಕ್‌ಗಳಿಂದ ಬೆಂಬಲ ಬೇಕು.
2.ಹೊಸ ಉದ್ಯಮಕ್ಕೆ ಅವಕಾಶ ನೀಡುವುದಕ್ಕಿಂತ 1 ಅಥವಾ 2 ವರ್ಷಗಳವರೆಗೆ ಈಗಿನ ಗೋಡಂಬಿ ರಫ್ತುದಾರರಿಗೆ ವಿಶೇಷ ಪ್ಯಾಕೇಜ್‌ ನೀಡಬೇಕು.
3.ರಫ್ತು ಆಧಾರಿತ ಗೋಂಡಂಬಿ ಉದ್ಯಮದ ರಕ್ಷಣೆಗೆ ಸರಕಾರ ಮುಂದಾಗಬೇಕು.
4.ಸಣ್ಣ ಕೈಗಾರಿಕೆಗಳಡಿ ಗೋಡಂಬಿ ಉದ್ಯಮಗಳ ಪುನಶ್ಚೇತನಕ್ಕೆ ಆರ್ಥಿಕ ಸಂಸ್ಥೆಗಳು ಸಹಕರಿಸಬೇಕು.
5.ಅತಿ ಹೆಚ್ಚಿನ ಗೋಡಂಬಿ ರಫ್ತುದಾರ ರಾಷ್ಟ್ರವಾಗಿ ರೂಪಿಸಲು ಉದ್ಯಮಕ್ಕೆ ಆದ್ಯತೆ ನೀಡಬೇಕು.

ಗೇರು ಕೃಷಿಕರು
1.ಕೆ.ಜಿ. ಗೇರುಬೀಜಕ್ಕೆ ಕನಿಷ್ಠ 150 ರೂ. ಬೆಂಬಲ ಬೆಲೆಯನ್ನು ನೀಡಬೇಕು.
2.ಗೇರು ಕೃಷಿಕರನ್ನೂ ಬೆಳೆ ವಿಮೆಯ ವ್ಯಾಪ್ತಿಯಲ್ಲಿ ಪರಿಗಣಿಸಬೇಕು.
3.ದೇಶೀ ಗೇರುಬೀಜಕ್ಕಿಂತ ಕಳಪೆ ಗುಣಮಟ್ಟದ ಆಫ್ರಿಕಾ, ವಿಯೆಟ್ನಾಂ ದೇಶಗಳ ಗೇರುಬೀಜದ ಆಮದು ತಡೆಯಬೇಕು. ವಿದೇಶಿ ಕಚ್ಚಾ ಗೇರು ಬೀಜಕ್ಕೆ ಶೇ. 8ರಷ್ಟು ಸುಂಕವನ್ನು ವಿಧಿಸಿ ದೇಶೀ ಗೇರುಬೀಜಕ್ಕೆ ಮನ್ನಣೆ ಸಿಗುವಂತೆ ಮಾಡಬೇಕು.
4.ಕ್ಯಾಂಪ್ಕೋ ಚಾಕಲೇಟಿನಿಂದಾಗಿ ಕೊಕ್ಕೊ ಬೆಳೆಗೆ ಉತ್ತಮ ಧಾರಣೆ ಬಂದಿದ್ದು, ಅದರಂತೆ ಗೇರು ಹಣ್ಣನ್ನು ವಿವಿಧ ರೀತಿಯಲ್ಲಿ ಮೌಲ್ಯವರ್ಧನೆಗೆ ಸರಕಾರ ಗಮನಹರಿಸಬೇಕು.

ಉದ್ಯಮಕ್ಕೆ ಆದ್ಯತೆ ನೀಡಿ
ಈಗ ಪ್ರವಾಸೋದ್ಯಮ, ವಿಮಾನ ಯಾನ, ಸಾಗಾಟ, ಸಮಾರಂಭಗಳು ಸ್ಥಗಿತಗೊಂಡ ಕಾರಣ ಸಮಸ್ಯೆ ಯಾಗಿದೆ. ಈ ಪರಿಸ್ಥಿತಿ ಸುದೀರ್ಘ‌ ಅವಧಿಗೆ ಮುಂದು ವರಿದರೆ ಉದ್ಯಮ ಸಂಕಷ್ಟಕ್ಕೆ ಸಿಲುಕಲಿದೆ. ಇದನ್ನು ಸರಕಾರ ಗಮನಿಸಬೇಕು.
-ಪಿ. ಸುಬ್ರಾಯ ಪೈ, ಅಧ್ಯಕ್ಷರು,ರಾಜ್ಯ ಗೋಡಂಬಿ ಉತ್ಪಾದಕರ ಸಂಘ

ಬೆಳೆಗಾರರು ಹೇಳುವ ಪ್ರಕಾರ, ಸ್ಥಳೀಯ ಕಾರ್ಖಾನೆಗಳು ಒಳ್ಳೆಯ ಗುಣಮಟ್ಟದ ಗೇರುಬೀಜಕ್ಕೆ ಸೂಕ್ತ ಬೆಲೆ ನೀಡುವುದಿಲ್ಲ. ಖರೀದಿಸದ ಸಂದರ್ಭಗಳೂ ಇವೆ. ಉದ್ಯಮ ಆರಂಭಿಸುವಾಗ ಸ್ಥಳೀಯ ಬೆಳೆಗಾರರ ಹಿತ ಕಾಯುವುದಾಗಿ ಹೇಳುವ ವರು ಅನಂತರ ಮರೆತು ವಿದೇಶದಿಂದ ಆಮದು ಕಳಪೆ ಗೇರು ಬೀಜಗಳನ್ನು ತರಿಸುತ್ತಾರೆ ಎಂದು ಆರೋಪಿಸುತ್ತಾರೆ. ಇದಕ್ಕೆ ಪ್ರತಿಯಾಗಿ ಉದ್ಯಮದವರು, ದೇಶದಲ್ಲಿ ಗೋಡಂಬಿ ಉತ್ಪಾದನೆ ಕಡಿಮೆ. ವರ್ಷಕ್ಕೆ 20 ಲಕ್ಷ ಟನ್‌ ಗೇರುಬೀಜ ಅಗತ್ಯವಿದ್ದು, ಕೇವಲ 6ರಿಂದ 7 ಲಕ್ಷ ಟನ್‌ ಸಿಗುತ್ತಿದೆ. ಉಳಿದ ಪ್ರಮಾಣವನ್ನು ಆಮದು ಮಾಡಿಕೊಳ್ಳಲೇಬೇಕು. ರಾಜ್ಯದಲ್ಲಿ 3 ಲಕ್ಷ ಟನ್‌ ಅಗತ್ಯವಿದ್ದು, ಕೇವಲ ಶೇ. 10ರಷ್ಟು ಅಂದರೆ ಸುಮಾರು 40 ಸಾವಿರ ಟನ್‌ ಮಾತ್ರ ಉತ್ಪಾದಿಸಲಾಗುತ್ತಿದೆ. ಇದಲ್ಲದೆ, ಹೆಚ್ಚಿನ ಹೂಡಿಕೆ, ಕಚ್ಛಾ ಸಾಮಗ್ರಿ ದರ, ತೆರಿಗೆ, ಸಾಗಣೆ ವೆಚ್ಚ, ನಿರ್ವಹಣ ವೆಚ್ಚವೆಲ್ಲವನ್ನೂ ನಿಭಾಯಿಸಬೇಕಿದ್ದು, ಹೆಚ್ಚಿನ ಕ್ರಯ ನೀಡುವುದು ಕೊಂಚ ಕಷ್ಟ ಎಂದು ಹೇಳುತ್ತಾರೆ.

ಈ ನಡುವೆಯೇ ಮಧ್ಯವರ್ತಿಗಳ ಹಾವಳಿಯೂ ಹೆಚ್ಚಿದೆ. ಆಮದು ತರಿಸುವ ಮತ್ತು ಸ್ಥಳೀಯ ಗೇರು ಬೀಜಗಳನ್ನು ಕಡಿಮೆ ಬೆಲೆಗೆ ಖರೀದಿಸಿ ಲಾಭ ಗಿಟ್ಟಿಸುವ ದಂಧೆಯೂ ಚಾಲ್ತಿಯಲ್ಲಿರುವುದು ಸುಳ್ಳಲ್ಲ.

Advertisement

Udayavani is now on Telegram. Click here to join our channel and stay updated with the latest news.

Next