ಹಾಸನ: ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸು ಕುಸಿದಿದೆ. ಇದಕ್ಕೆ ಗೋಹತ್ಯೆ ನಿಷೇಧ ಕಾಯ್ದೆಯನ್ನು ವಾಪಸ್ ತೆಗೆದುಕೊಳ್ಳುವ ಘೋಷಣೆಯೇ ಸಾಕ್ಷಿ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅಭಿಪ್ರಾಯಪಟ್ಟಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಉಡುಪಿಯಲ್ಲಿ ಇತ್ತೀಚೆಗೆ ನಡೆದ ಧರ್ಮ ಸಂಸದ್‌ನಲ್ಲಿ ಗೋಹತ್ಯೆ ನಿಷೇಧ ಕಟ್ಟುನಿಟ್ಟಾಗಿ ಜಾರಿಯಾಗಬೇಕೆಂಬ ನಿರ್ಣಯ ತೆಗೆದುಕೊಂಡಿದ್ದರೂ ಪ್ರಧಾನಿ ನರೇಂದ್ರ ಮೋದಿಯವರು ಗೋಹತ್ಯೆ ನಿಷೇಧ ಕಾಯ್ದೆಯನ್ನು ವಾಪಸ್ ಪಡೆಯುವ ಘೋಷಣೆ ಮಾಡಿದ್ದಾರೆ. ಕಳೆದ ಮೂರೂವರೆ ವರ್ಷದಿಂದ ಘೋಷಣೆ ಮಾಡಿಕೊಂಡು ಬಂದಿದ್ದ ಅಭಿವೃದ್ಧಿ ಘೋಷಣೆ ಈಗ ಸವಕಲು ನಾಣ್ಯ ಎಂಬುದು ಮೋದಿಯವರಿಗೆ ಮನವರಿಕೆಯಾಗಿದೆ. ಅವರ ವರ್ಚಸ್ಸು ಕುಸಿದಿದೆ. ಹೀಗಾಗಿ, ಗೋಹತ್ಯೆ ನಿಷೇಧ ವಾಪಸ್ ತೆಗೆದುಕೊಳ್ಳುವ ಹಂತಕ್ಕೆ ಬಂದಿದ್ದಾರೆ. ಗುಜರಾತ್ ಚುನಾವಣೆಯ ಗೆಲುವಿಗೆ ಈಗ ಮೋದಿ ಇದನ್ನು ಕೊನೆಯ ಅಸ್ತ್ರವನ್ನಾಗಿ ಬಳಸಿದ್ದಾರೆ ಎಂದರು.
ಗುಜರಾತಿನ ಬಂದರುಗಳ ಮೂಲಕವೇ ವಿದೇಶಗಳಿಗೆ ಗೋಮಾಂಸ ರಫ್ತಾಗುತ್ತದೆ. ಕಳೆದ 22 ವರ್ಷಗಳಿಂದ ಗುಜರಾತ್‌ನಲ್ಲಿ ಆಡಳಿತ ನಡೆಸಿದ್ದ ಬಿಜೆಪಿಯವರೇ ಗೋಮಾಂಸ ರಫ್ತಿಗೆ ಲೈಸೆನ್ಸ್ ಕೊಟ್ಟಿದ್ದಾರೆ. ಅಂದಮೇಲೆ, ಗೋಹತ್ಯೆ ನಿಷೇಧ ಕಾಯ್ದೆ ರೂಪಿಸುವಾಗ ಗೋಮಾಂಸ ರಫ್ತಿಗೆ ಲೈಸೆನ್ಸ್ ಕೊಟ್ಟಿದ್ದು ಗೊತ್ತಿರಲಿಲ್ಲವೇ ಎಂದು ಅವರು ವ್ಯಂಗ್ಯವಾಡಿದರು.
ಪ್ರಜ್ವಲ್‌ಗೆ ಹುದ್ದೆ ಕೊಟ್ಟಿದ್ದು ನಾನೇ:
ಪ್ರಜ್ವಲ್ ಅಲ್ಲಿ, ಇಲ್ಲಿ ಒಂದೊಂದು ಹೇಳಿಕೆ ನೀಡಿ ವಿವಾದಕ್ಕೀಡಾಗುವುದು ನಿಲ್ಲಲಿ. ಆತ ಜವಾಬ್ದಾರಿಯಿಂದ ಪಕ್ಷ ಸಂಘಟನೆಯಲ್ಲಿ ತೊಡಗಲಿ ಎಂದು ನಾನೇ ಕರೆದು ಪ್ರಧಾನಿ ಕಾರ್ಯದರ್ಶಿ ಹುದ್ದೆಗೆ ನೇಮಕ ಮಾಡಿದ್ದೇನೆ. ಆತ ಪಕ್ಷ ಸಂಘಟನೆ ಮಾಡಲಿ. ಅವರ ಅಪ್ಪ, ಚಿಕ್ಕಪ್ಪ ಅವರ ಆಶೀರ್ವಾದ ಯಾವಾಗ ಸಿಗುತ್ತೋ ಆಗ ಚುನಾವಣೆಗೆ ಸ್ಪರ್ಧಿಸಲಿ ಎಂದರು.
ಲೋಕಸಭಾ ಚುನಾವಣೆಗೆ ಪ್ರಜ್ವಲ್‌ನನ್ನು ನಿಲ್ಲಿಸಬೇಕೆಂದು ಪ್ರೊಜೆಕ್ಟ್ ಮಾಡುವ ಪ್ರಯತ್ನವನ್ನು ನಾನು ಮಾಡುತ್ತಿದ್ದೇನೆ. ಅದರಲ್ಲಿ ಮುಚ್ಚುಮರೆ ಏನೂ ಇಲ್ಲ. ಹಾಸನ ಲೋಕಸಭಾ ಚುನಾವಣೆಯಲ್ಲಿ ಇನ್ನು ನಾನು ನಿಲ್ಲುವುದಿಲ್ಲ. ಪ್ರಜ್ವಲ್‌ನನ್ನೇ ನಿಲ್ಲಿಸೋಣ ಎಂದು ಹಾಸನ ಜಿಲ್ಲೆಯ ಎಲ್ಲಾ ಜೆಡಿಎಸ್ ಶಾಸಕರು, ಪಕ್ಷದ ಮುಖಂಡರ ಬಳಿ ಪ್ರಸ್ತಾಪ ಮಾಡಿದ್ದೇನೆ. ಹಾಗೆಂದು ಚುನಾವಣೆಗೆ ನಮ್ಮ ಕುಟುಂಬದವರು ನಿಲ್ಲಬೇಕು ಎಂಬ ಸಂಪ್ರದಾಯವೂ ಅಲ್ಲ. ಆದರೆ, ಬಹುಪಾಲು ಮುಖಂಡರು ನೀವೇ ನಿಲ್ಲಬೇಕು ಎಂದು ಒತ್ತಾಯಿಸುತ್ತಿದ್ದಾರೆ. ನನಗೆ ಈಗ 86 ವರ್ಷ ಆಗಿದೆ. ದೈಹಿಕ ಶಕ್ತಿ ಕುಂದುತ್ತಿದೆ. ಹಾಗಾಗಿ ಆಸಕ್ತಿ ಇಲ್ಲ ಎಂದರು.