ಬೆಂಗಳೂರು: “ಗೂಬೆ’ ಮೂಲಕ ಬಾಡಿಗೆದಾರರನ್ನು ಮನೆಯಿಂದ ಖಾಲಿ ಮಾಡಿಸಲು ಸಂಚು ರೂಪಿಸಿದ್ದ ಐವರನ್ನು ಸಿಐಡಿ ಅರಣ್ಯ ಘಟಕದ ಅಧಿಕಾರಿಗಳು ಬಂಧಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಗೂಬೆ ರಕ್ಷಣೆ ಮಾಡಿ ಬನ್ನೆರುಘಟ್ಟ ಅರಣ್ಯಾಧಿಕಾರಿಗಳಿಗೆ ಒಪ್ಪಿಸಲಾಗಿದೆ. ಕೂಲಿ ಕೆಲಸ ಮಾಡುವ ಮನಮೋಹನ್ (24), ಸಹಚರರಾದ ಬಟ್ಟೆ ವ್ಯಾಪಾರಿ ಮುದಾಸೀರ್ (19), ಹೂ ವ್ಯಾಪಾರಿ ಸಲೀಂ (19), ಬಿಕಾಂ ವಿದ್ಯಾರ್ಥಿ ಮೊಹಮ್ಮದ್ ಬಷೀತ್, ವರ್ಕ್‌ಶಾಪ್‌ನಲ್ಲಿ ಕೆಲಸ ಮಾಡುವ ಜುಬೇರ್ ಬಂಧಿತರು.
ವನ್ಯಜೀವಿ ಸಂರಕ್ಷಣಾ ಕಾಯ್ದೆ ಹಾಗೂ ವಂಚನೆ ಆರೋಪದಡಿ ಜು.31ರಂದು ಕಾಟನ್‌ಪೇಟೆ ಠಾಣೆ ವ್ಯಾಪ್ತಿಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಸಿಐಡಿ ಪೊಲೀಸರು ತಿಳಿಸಿದ್ದಾರೆ. ಕಾಟನ್‌ಪೇಟೆಯಲ್ಲಿ ನೆಲೆಸಿರುವ ಬಾಡಿಗೆ ಮನೆ ಮಾಲೀಕ (ಮಾರ್ವಾಡಿ)ರೊಬ್ಬರು ತಮ್ಮ ಮನೆಯಲ್ಲಿ ಬಾಡಿಗೆಗೆ ಇದ್ದ ವ್ಯಕ್ತಿಗೆ ಮನೆ ಖಾಲಿ ಮಾಡುವಂತೆ ಸೂಚಿಸಿದ್ದರು. ಆದರೆ, ಆತ ಒಪ್ಪಂದದ ಅವಧಿ ಇನ್ನು ಮುಕ್ತಾಯವಾಗಿಲ್ಲ ಎಂದು ಮನೆ ಖಾಲಿ ಮಾಡಿರಲಿಲ್ಲ.
ಇದರಿಂದ ಬೇಸತ್ತ ಮಾಲೀಕ, ಆರೋಪಿ ಮನಮೋಹನ್‌ಗೆ ಮನೆ ಖಾಲಿ ಮಾಡಿಸಿದರೆ ಎರಡು ಲಕ್ಷ ರೂ. ನೀಡುವುದಾಗಿ ಆರೋಲಿ ಸುಪಾರಿ ಕೊಟ್ಟಿದ್ದ. ಇದೇ ವೇಳೆ ಕೆ.ಆರ್.ಮಾರುಕಟ್ಟೆಯ ಗೋಡೌನ್‌ಗಳಲ್ಲಿ ಆಗಾಗ್ಗೆ ಗಾಂಜಾ ಸೇವಿಸಲು ಸೇರುತ್ತಿದ್ದ ಇತರೆ ನಾಲ್ವರು ಆರೋಪಿಗಳಿಗೆ ಮನಮೋಹನ್ ಸುಪಾರಿ ವಿಚಾರ ಹೇಳಿಕೊಂಡಿದ್ದ. ಬಳಿಕ ಆರೋಪಿಗಳು ಗೂಬೆ ಮೂಲಕ ಮನೆ ಖಾಲಿ ಮಾಡಿಸಲು ಸಂಚು ರೂಪಿಸಿದ್ದರು.
ಸಾಮಾನ್ಯವಾಗಿ ಗೂಬೆ ಮನೆ ಅಥವಾ ಅಂಗಡಿಗಳಲ್ಲಿ ಕಾಣಿಸಿಕೊಂಡರೆ ಅಂತಹ ಸ್ಥಳಗಳಲ್ಲಿ ಮಾರ್ವಾಡಿಗಳು ಇರಲು ಬಯಸುವುದಿಲ್ಲ ಎಂದು ಯಾರೋ ಹೇಳಿದ್ದನ್ನು ನಂಬಿದ್ದ ಆರೋಪಿಗಳು, ಕೃತ್ಯವೆಸಗಲು ಸಂಚು ರೂಪಿಸಿದ್ದರು ಎಂದು ಸಿಐಡಿ ಅಧಿಕಾರಿಗಳು ತಿಳಿಸಿದ್ದಾರೆ. ಮೈಸೂರಿನ ಹೂಣಸೂರಿನಲ್ಲಿ ಗೂಬೆಯೊಂದನ್ನು ಹಿಡಿದು ತಂದಿದ್ದರು. ಬಳಿಕ ಬಾಡಿಗೆದಾರರು ಮನೆಯಲ್ಲಿ ಇಲ್ಲದಿರುವಾಗ ಅದನ್ನು ಬಿಟ್ಟು, ಎಲ್ಲಿಯೂ ಹೋಗದ್ದಂತೆ ಅದಕ್ಕೆ ಔಷಧಿ ಹಾಕಲು ನಿರ್ಧರಿಸಿದ್ದರು.
ಅದರಂತೆ ಪ್ರಮುಖ ಆರೋಪಿ ಮನಮೋಹನ್ ಹಾಗೂ ಇತರೆ ನಾಲ್ವರು ಆರೋಪಿಗಳು, ಗೂಬೆಯನ್ನು ಅಕ್ರಮವಾಗಿ ಹಿಡಿದು ತಂದು ಕಾಟನ್‌ಪೇಟೆಯ ನ್ಯೂ ಮೇಘಾ ಗೆಸ್ಟ್‌ಹೌಸ್‌ನ ರೂಂ 201ರಲ್ಲಿ ಸಾಕುತ್ತಿದ್ದರು. ಈ ಖಚಿತ ಮಾಹಿತಿ ಪಡೆದ ಸಿಐಡಿ ಪೊಲೀಸರು, ಗೆಸ್ಟ್‌ಹೌಸ್ ಮೇಲೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಹಾಗೇ ಕಬ್ಬಿಣದ ಪಂಜರದಲ್ಲಿದ್ದ ಗೂಬೆಯನ್ನು ರಕ್ಷಿಸಿ ಅರಣ್ಯಾಧಿಕಾರಿಗಳಿಗೆ ಒಪ್ಪಿಸಲಾಗಿದೆ ಎಂದು ಸಿಐಡಿ ಅರಣ್ಯ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಿಐಡಿಗೆ ಮಾಹಿತಿ
ಬೆಂಗಳೂರಿನ ಕೆಲವರು ಹುಣಸೂರು ಅರಣ್ಯ ಪ್ರದೇಶದಿಂದ ಗೂಬೆಯೊಂದನ್ನು ಹಿಡಿದುಕೊಂಡು ಹೋಗಿದ್ದಾರೆ ಎಂಬ ಮಾಹಿತಿ ಅಲ್ಲಿನ ಅರಣ್ಯ ಸಂರಕ್ಷಾಧಿಕಾರಿಯೊಬ್ಬರ ಗಮನಕ್ಕೆ ಬಂದಿತ್ತು. ಇವರಿಂದ ಮಾಹಿತಿ ಪಡೆದ ಸಿಐಡಿ ಡಿವೈಎಸ್‌ಪಿ ಬಲರಾಮೇಗೌಡ ಮಾರ್ಗದರ್ಶನದಲ್ಲಿ ಸಿಐಡಿ ಅರಣ್ಯಘಟಕದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ.
ಈ ಮಾಹಿತಿಯನ್ನಾಧರಿಸಿ ಸಾಮಾನ್ಯವಾಗಿ ಗೂಬೆಯನ್ನು ಮನೆಯಲ್ಲಿ ಯಾರೂ ಸಾಕುವುದಿಲ್ಲ. ಆದ್ದರಿಂದ ಅರೋಪಿಗಳು ಯಾವುದಾರೂ ಲಾಡ್ಜ್ನಲ್ಲಿ ಗೂಬೆ ಸಾಕುವ ವ್ಯವಸ್ಥೆ ಮಾಡಿರಬಹುದು ಎಂಬ ಶಂಕೆಯಲ್ಲಿ ಮೆಜೆಸ್ಟಿಕ್ ಸುತ್ತಮುತ್ತಲಿನ ಲಾಡ್ಜ್ಗಳಲ್ಲಿ ತಪಾಸಣೆ ನಡೆಸಿದಾಗ ಆರೋಪಿಗಳು ಬಲೆಗೆ ಬಿದಿದ್ದಾರೆ ಎಂದು ಅವರು ತಿಳಿಸಿದರು.