Advertisement
ಜೆ.ಸಿ.ರಸ್ತೆಯ ಮಿನರ್ವ ವೃತ್ತದ ಬಳಿ ಬರುವಾಗ ಡೀಸೆಲ್ ಖಾಲಿಯಾಗಿ ಕಾರು ನಿಂತಿದೆ. ಈ ಸಂದರ್ಭದಲ್ಲಿ ಪಕ್ಕದಲ್ಲಿದ್ದ ನೀಲಗಿರಿ ಮರ ಕಾರಿನ ಮೇಲೆಯೇ ಬಿದ್ದಿದ್ದು, ಪರಿಣಾಮ ಸುಂಕದಕಟ್ಟೆಯ ಭಾರತಿ (38), ಜಗದೀಶ್ (46), ರಮೇಶ್ (42) ಮೃತರು. ಕಾರು ಚಾಲನೆ ಮಾಡುತ್ತಿದ್ದ ರೋಹಿತ್ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮತ್ತೂಂದೆಡೆ ಕಿನೋವ್ ಥಿಯೇಟರ್ ಸಮೀಪದ ರೈಲ್ವೆ ಅಂಡರ್‌ಪಾಸ್ ಬಳಿ ಅರುಣ್ ಎಂಬಾತ ಕೊಚ್ಚಿಹೋಗಿದ್ದಾನೆ.
Related Articles
ಶುಕ್ರವಾರದ ರಾತ್ರಿ ಮಳೆಗೆ ಸಾವುನೋವಿನ ಜತೆಗೆ ಹಲವು ಅವಾಂತರಗಳನ್ನೂ ಸೃಷ್ಟಿಸಿದೆ. ಹತ್ತಾರು ರಸ್ತೆಗಳು, ಅಂಡರ್‌ಪಾಸ್‌ಗಳು, ಜಂಕ್ಷನ್‌ಗಳು ಜಲಾವೃತಗೊಂಡವು. 70ಕ್ಕೂ ಹೆಚ್ಚು ಮರಗಳು ಧರೆಗುರುಳಿದವು. ಟೌನ್‌ಹಾಲ್ ಬಳಿ ಸರ್ಕಾರಿ ಶಾಲೆಯೊಂದರ ಗೋಡೆ ಕುಸಿದಿದೆ. ಮಳೆ ಪರಿಣಾಮ ನಗರದ ಜನಜೀವನ ಅಸ್ತವ್ಯಸ್ತಗೊಂಡಿತು.
Advertisement
ಹಲಸೂರು, ಜೆ.ಪಿ.ನಗರ, ಕೋರಮಂಗಲ 80 ಅಡಿ ರಸ್ತೆ ಒಳಗೊಂಡಂತೆ ಹತ್ತಾರು ಪ್ರಮುಖ ರಸ್ತೆಗಳು ಜಲಾವೃತಗೊಂಡವು. ತಗ್ಗುಪ್ರದೇಶಗಳಲ್ಲಿ ನೀರು ನುಗ್ಗಿದ ಬಗ್ಗೆಯೂ ವರದಿಯಾಗಿದೆ. ಸುಮಾರು ಒಂದು ತಾಸು ಮಳೆ ಸುರಿದಿದ್ದು, ಕೆಎಸ್‌ಎನ್‌ಡಿಎಂಸಿ ಪ್ರಕಾರ ಗರಿಷ್ಠ 79.5 ಮಿ.ಮೀ. ದಾಖಲಾಗಿದೆ.
ರಸ್ತೆಯಲ್ಲಿ 2-3 ಅಡಿಗಳಷ್ಟು ನೀರು ಹರಿಯುತ್ತಿದ್ದುದರಿಂದ ಗುಂಡಿಗಳಾವು ಮತ್ತು ರಸ್ತೆ ಯಾವುದು ಎಂಬುದೇ ಗೊತ್ತಾಗುತ್ತಿರಲಿಲ್ಲ. ಇದರಿಂದ ವಾಹನ ಸವಾರರು ಪರದಾಡಿದರು. ಕೆಲವೆಡೆ ಆಯತಪ್ಪಿ ರಸ್ತೆ ಗುಂಡಿಗಳಲ್ಲಿ ಬಿದ್ದು, ಬಿಬಿಎಂಪಿಗೆ ಹಿಡಿಶಾಪ ಹಾಕಿದರು. ಮಧ್ಯಾಹ್ನ ಸುರಿದ ವಿರಾಮ ನೀಡಿದ್ದ ಮಳೆ, ರಾತ್ರಿ ಮತ್ತೆ ಧಾರಾಕಾರವಾಗಿ ಸುರಿಯಿತು. ಕಿ.ಮೀ. ಗಟ್ಟಲೆ ವಾಹನಗಳು ನಿಂತಿದ್ದವು. ಬೈಕ್ ಸವಾರರು ತೊಯ್ದುತೊಪ್ಪೆಯಾದರು.
ಮರ ಉರುಳಿ ಮನೆ, ಕಾರು ಜಖಂಗಾಳಿಸಹಿತ ಮಳೆಯ ಹೊಡೆತಕ್ಕೆ ಚಾಮರಾಜಪೇಟೆಯಲ್ಲಿ ಕಾರೊಂದರ ಮೇಲೆ ಬೃಹದಾಕಾರದ ಮರ ಬಿದ್ದು ಕಾರು ಸಂಪೂರ್ಣವಾಗಿ ಜಖಂಗೊಂಡಿದೆ. ಕಲಾಸಿಪಾಳ್ಯದ ಜಲಕಂಠೇಶ್ವರ ದೇವಸ್ಥಾನದ ಬಳಿ ಬೃಹತ್ ಗಾತ್ರದ ಮರವೊಂದು ಉರುಳಿದರಿಂದಾಗಿ ಕೆಲ ಮನೆಗಳು ಕುಸಿದಿದ್ದು, ನಿವಾಸಿಗಳಲ್ಲಿ ಆತಂಕದ ವಾತಾವರಣ ಮನೆ ಮಾಡಿತ್ತು. ಅದೃಷ್ಟವಶಾತ್ ಯಾವುದೇ ಸಾವು-ನೋವು ಸಂಭವಿಸಿಲ್ಲ. ಮರಗಳು ಎಲ್ಲೆಲ್ಲಿ?
ಜೆಪಿ ನಗರ, ಇನ್‌ಫ್ಯಾಂಟ್ರಿ ರಸ್ತೆ, ಅಲಿಅಸ್ಕರ್ ರಸ್ತೆ, ಸುಬ್ಬಣ್ಣ ಗಾರ್ಡನ್, ಜಯನಗರ, ಬಾಣಸವಾಡಿ, ಮಾರುತಹಳ್ಳಿ, ಚಾಮರಾಜಪೇಟೆ, ವಿಲ್ಸನ್ ಗಾರ್ಡನ್, ಬಸವನಗುಡಿ ಸೇರಿದಂತೆ ಹಲವು ಕಡೆಗಳಲ್ಲಿ 70ಕ್ಕೂ ಹೆಚ್ಚು ಮರಗಳು ಉರುಳಿವೆ. ಇದರೊಂದಿಗೆ ಕೋರಮಂಗಲ, ಸರ್ವಜ್ಞನಗರ ಜಾನಕಿ ನಗರ ಸೇರಿದಂತೆ ಹಲವಾರು ಭಾಗಗಳಲ್ಲಿ ಮನೆಗಳಿಗೆ ನೀರು ನುಗ್ಗಿರುವ ಬಗ್ಗೆ ದೂರುಗಳು ಬಂದಿವೆ. * ಬಿಬಿಎಂಪಿಯ ಕೇಂದ್ರ ಕಚೇರಿಯಲ್ಲಿರುವ ನಿಯಂತ್ರಣ ಕೊಠಡಿಗೆ ತಡರಾತ್ರಿವರೆಗೆ 43 ದೂರುಗಳು ಬಂದಿವೆ. ಮರಗಳಿಗೆ ಸಂಬಂಧಿಸಿದಂತೆ 80 ಕರೆಗಳು ಬಂದಿವೆ. ಎನ್‌ಡಿಆರ್‌ಎಫ್ ಶೋಧ
ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ (ಎನ್‌ಡಿಆರ್‌ಎಫ್) ಮತ್ತು ಅಗ್ನಿಶಾಮಕ ದಳದ ತಂಡವು ಕೊಚ್ಚಿಹೋದ ಯುವಕನ ಶೋಧಕಾರ್ಯ ನಡೆದಿದೆ. ಇದಲ್ಲದೆ, ಮತ್ತೂಂದು ಎನ್‌ಡಿಆರ್‌ಎಫ್ ತಂಡ ನಗರದ ವಿವಿಧೆಡೆ ಮರಗಳ ತೆರವು ಮತ್ತಿತರ ಕಾರ್ಯದಲ್ಲಿ ನಿರತವಾಗಿದೆ. ಎಲ್ಲೆಲ್ಲಿ ಎಷ್ಟು ಮಳೆ?
ನಗರದ ಪೂರ್ವದಲ್ಲಿರುವ ಸಂಪಂಗಿರಾಮನಗರದಲ್ಲಿ ಅತಿ ಹೆಚ್ಚು 79.5 ಮಿ.ಮೀ. ಮಳೆ ದಾಖಲಾಗಿದೆ. ಉಳಿದಂತೆ ಪ್ರಮುಖ ಕಡೆಗಳಲ್ಲಿ ಬಿದ್ದ ಮಳೆ ವಿವರ ಹೀಗಿದೆ. ಕಲ್ಯಾಣನಗರದ ಕಮ್ಮನಹಳ್ಳಿಯಲ್ಲಿ 70, ಕುಶಾಲನಗರದಲ್ಲಿ 66.5, ದೊಡ್ಡಬನಹಳ್ಳಿ 48, ಕೆ.ಆರ್. ಪುರ 40.5, ಬಸವನಪುರ 37.5, ಶೀಗೇಹಳ್ಳಿ 35.5, ಹೊರಮಾವು 42, ಲಕ್ಕಸಂದ್ರ 57, ಬಸವನಗುಡಿ 47, ಬಿಳೇಕಹಳ್ಳಿ 50.5, ಸಾರಕ್ಕಿ 44, ಬಸವನಗುಡಿ 47, ರಾಜಮಹಲಗುಟ್ಟಹಳ್ಳಿ 56, ಹೆಗ್ಗನಹಳ್ಳಿ 54, ಪೀಣ್ಯ ಕೈಗಾರಿಕಾ ಪ್ರದೇಶ 36.5, ರಾಧಾಕೃಷ್ಣನಗರ 26, ದೊಡ್ಡಬೊಮ್ಮಸಂದ್ರ 41, ಆರ್.ಆರ್. ನಗರ 22, ಸಿಂಗಸಂದ್ರ 28, ಮಂಡೂರು 19, ಎಚ್‌ಬಿಆರ್ ಲೇಔಟ್ 25, ಗರುಚಾರ್‌ಪಾಳ್ಯ 36, ಕಾಡುಗೋಡಿ 28.5 ಮಿ.ಮೀ. ಮಳೆ ದಾಖಲಾಗಿದೆ. ಕಾರಲ್ಲೇ ಕೊನೆಯುಸಿರು
ಹೆಬ್ಟಾಳ ಠಾಣೆ ವ್ಯಾಪ್ತಿಯಲ್ಲಿ ಗೃಹರಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಭಾರತಿ ಈಚೆಗೆ ಎಸ್ಟೀಮ್ ಕಾರು ಖರೀದಿಸಿದ್ದರು. ಕಾರಿನ ಗಾಜು ದುರಸ್ತಿಗಾಗಿ ಶುಕ್ರವಾರ ಮಿನರ್ವ್ ವೃತ್ತದ ಬಳಿಯ ಗ್ಯಾರೇಜ್‌ಗೆ ತೆರಳಿದ್ದರು. ನಂತರ ಅಲ್ಲಿಂದ ವಾಪಾಸ್ ತೆರಳುವಾಗ ಡೀಸೆಲ್ ಖಾಲಿಯಾಗಿದೆ. ಈ ವೇಳೆ ಪಕ್ಕದಲ್ಲೇ ಇದ್ದ ಮರದ ಕೆಳಗೆ ನಿಲ್ಲಿಸಿದ್ದಾರೆ. ಅದೇ ಮರ ಹೊರಳಿಬಿದ್ದ ಪರಿಣಾಮ ಸಾವನ್ನಪ್ಪಿದರು. ಮರ ಇದ್ದುದರಿಂದ ಆ ಜಾಗದಲ್ಲಿ ಕಾರು ನಿಲ್ಲಿಸುವುದು ಬೇಡ ಎಂದರು. ಆದಾಗ್ಯೂ ಅಲ್ಲಿಯೇ ನಿಲ್ಲಿಸಿದರು. ಸುಮಾರು 20-30 ವರ್ಷ ಹಳೆಯ ನೀಲಗಿರಿ ಮರ ಕಾರ ಮೇಲೆ ಬಿದ್ದ ಪರಿಣಾಮ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಮೂವರು ಹೊರಗೆ ಬರಲಾರದೆ ಸುಮಾರು 45 ನಿಮಿಷ ಒದ್ದಾಡಿ ಜೀವಬಿಟ್ಟರು ಎಂದು ಪ್ರತ್ಯಕ್ಷದರ್ಶಿ ಮಹಾಂತೇಶ್ ತಿಳಿಸಿದರು. ಸ್ಥಳೀಯರ ಸಾಹಸ
ಮುಂದಿನ ಸೀಟಿನಲ್ಲಿದ್ದ ಇಬ್ಬರು ಕಾರಿನ ಗಾಜು ಒಡೆದು ಹೊರಗೆ ಬಂದಿದ್ದಾರೆ. ಒಳಗಿದ್ದ ಮೂವರನ್ನು ಬದುಕಿಸಲು ಸಾಕಷ್ಟು ಪ್ರಯತ್ನಿಸಿದೆವು, ಅಗ್ನಿಶಾಮಕ ದಳದವರು ಬರುವುದು ಸ್ವಲ್ಪ ತಡವಾಯಿತು. ಅಷ್ಟರಲ್ಲಿ ಮೂವರ ಪ್ರಾಣಪಕ್ಷಿ ಹಾರಿಹೋಗಿತ್ತು ಮಹಂತೇಶ್ ಬೇಸರ ವ್ಯಕ್ತಪಡಿಸಿದರು. ಮಿನರ್ವ್ ವೃತ್ತದಲ್ಲಿ ಕಾರಿನ ಮೇಲೆ ಮರ ಬೀಳುತ್ತಿದ್ದಂತೆ ಸ್ಥಳೀಯರು ಒಟ್ಟಾಗಿ, ಕಾರಿನ ಮೇಲಿನ ಮರವನ್ನು ತೆರವಗೊಳಿಸಲು ಹರಸಾಹಸ ನಡೆಸಿದರು. ಆದರೂ ಬದುಕಿಸಲು ಸಾಧ್ಯವಾಗಿಲ್ಲ. ಕೊಚ್ಚಿಹೋದ ಯುವಕ
ಮಳೆಗೆ ನಗರದ ಶೇಷಾದ್ರಿಪುರಂ ರೈಲ್ವೇ ಕೆಳಸೇತುವೆ ಬಳಿ ಮಳೆ ನೀರು ಹರಿಯುವ ಚರಂಡಿ ಮೂಲಕ 19 ವರ್ಷದ ಪ್ಯಾಲೀಸ್ ಗುಟ್ಟಳ್ಳಿಯ ಅರುಣ್ ಎಂಬ ಯುವಕ ಕೊಚ್ಚಿ ಹೋಗಿದ್ದು, ಸ್ಥಳೀಯರ ಹಾಗೂ ಬಿಬಿಎಂಪಿ ಸಿಬ್ಬಂದಿ ವರ್ಗ ಸತತ ಶೋಧ ಕಾರ್ಯಚರಣೆ ನಡೆಸಿದರೂ ಯುವಕನ ಸುಳಿವು ಲಭ್ಯವಾಗಿಲ್ಲ.
ಮೋರಿಯಲ್ಲಿ ಶೋಧ
ಯುವಕ ಮೋರಿಯೊಳಗೆ ಬಿದ್ದಿದ್ದಾನೆ ಎಂದು ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ಆಗಮಿಸಿ ಅಗ್ನಿ ಶಾಮಕ ಹಾಗೂ ಬಿಬಿಎಂಪಿ ಸಿಬ್ಬಂದಿ ವರ್ಗ ಕಾರ್ಯಚರಣೆಗೆ ಇಳಿದಿದ್ದಾರೆ. ಶೇಷಾದ್ರಿಪುರದ ರೈಲ್ವೇ ಕೆಳಸೇತುವೆಯಿಂದ ಕಿನೋ ಥಿಯೇಟರ್ ವರೆಗಿನ 7 ಮ್ಯಾನ್‌ಹೋಲ್ ಓಪನ್ ಮಾಡಿ, ಸುಮಾರು ಒಂದುವರೆ ಕಿ.ಮೀ. ನಷ್ಟು ಹುಡುಕಾಟ ನಡೆಸಿದ್ದಾರೆ. ಅಲ್ಲಿಂದಾಚೆ ಇರುವ ತೆರೆದ ರಾಜಕಾಲವೆಯಲ್ಲೂ ಶೋಧ ನಡೆಸಿದ್ದು, ಯುವಕನ ಸುಳಿವು ಸಿಕ್ಕಿಲ್ಲ. ಮೃತರಿಗೆ ಪರಿಹಾರ
ಇದೊಂದು ಆಕಸ್ಮಿಕ ಘಟನೆ. ಮರ ಬಿದ್ದು ಸಾವನ್ನಪ್ಪಿದ ಒಂದೇ ಕುಟುಂಬದ ಮೂವರಿಗೆ ತಲಾ 5 ಲಕ್ಷದ್ದಂತೆ 15 ಲಕ್ಷ ಪರಿಹಾರ ನೀಡುತ್ತೇವೆ. ಕೆಲಸ ಮತ್ತು ಶಿಕ್ಷಣ ಕೊಡಿಸುವ ವಿಚಾರ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಶನಿವಾರ ಮತ್ತೂಮ್ಮೆ ಚರ್ಚಿಸಿ ಹೆಚ್ಚಿನ ಪರಿಹಾರ ಕೊಡಿಸಲು ತೀರ್ಮಾನಿಸುತ್ತೇವೆ ಎಂದು ಜಾರ್ಜ್ ಹೇಳಿದರು. ಆಸ್ಪತ್ರೆಗೆ ಸಚಿವರ ಭೇಟಿ
ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿದ್ದು, ಮರ ಬಿದ್ದು ಸಾವನ್ನಪ್ಪಿದ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಈ ವೇಳೆ ಮಾತನಾಡಿದ ಅವರು, ಅಲ್ಪಾವಧಿಯಲ್ಲಿ ಹೆಚ್ಚು ಮಳೆ ಬಿದಿದ್ದೆ. ಬೆಂಗಳೂರಿನಲ್ಲಿ ರಸ್ತೆಗಳಲ್ಲಿ ಒಮ್ಮೆ ಜೋರು ಮಳೆ ಬಂದರೆ ರಸ್ತೆಯಲ್ಲಿ ಬಾರಿ ಪ್ರಮಾಣದಲ್ಲಿ ನೀರು ಹರಿಯುತ್ತದೆ. ಸಾಮಾನ್ಯವಾಗಿ ಎರಡು ರೀತಿಯಲ್ಲಿ ನೀರು ಚರಂಡಿ ಸೇರಬೇಕು. ಮಾಧ್ಯಮಿಕ ಕಾಲುವೆಯಿಂದ ಪ್ರಾಥಮಿಕ ಕಾಲುವೆಯಲ್ಲಿ ಹೆಚ್ಚು ನೀರು ಹರಿಯುವಾಗ ಸೇರುವುದಿಲ್ಲ. ಹೀಗಾಗಿ ಮಧ್ಯಮಿಕ ಕಾಲುವೆಯಲ್ಲಿ ನೀರು ಹಿಮ್ಮುಖವಾಗಿ ಹರಿಯುತ್ತದೆ. ನಗರಾದ್ಯಂತ 846 ಕಿ.ಮಿಟರ್ ವಿಸ್ತೀರ್ಣವಿದ್ದು, 7,300 ಕೋಟಿ ಕೊಟ್ಟಿದ್ದೇವೆ. ಈ ಪೈಕಿ 2,300 ಕೋಟಿ ರೂ. ಕೆಲಸ ಆರಂಭವಾಗಿದೆ. ಮಳೆಗಾಲವಾದ್ದರಿಂದ ಕೆಲಸ ಸ್ಥಗಿತವಾಗಿದೆ. ನಂತರ ಕೆಲಸ ಆರಂಭವಾಗಲಿದೆ. ಇನ್ನುಳಿದ ಮೊತ್ತದ ಕಾರ್ಯವೂ ಶೀಘ್ರ ಶುರುವಾಗಲಿದೆ. ಚಿಕ್ಕಮಗಳೂರು, ಕೊಡಗಿನಿಂದ ವಿಶೇಷ ತಜ್ಞರನ್ನು ಕರೆಸಿ ಯಾವ ಮರ ಬಿಳುವ ಸ್ಥಿತಿಯಲ್ಲಿ ಗುರುತಿಸಿ ತೆರವು ಮಾಡುತ್ತೇವೆ. ತೆರವಿಗೆ ಮುಂದಾದರೆ, ಎನ್‌ಜಿಒಗಳು ಗಲಾಟೆ ಮಾಡುತ್ತಾರೆ. ಹೀಗಾಗಿ, ಬೀಳುವ ಹಂತದಲ್ಲಿರುವ ಮತ್ತು ಅಪಾಯದ ಅಂಚಿನಲ್ಲಿರುವ ಮರಗಳನ್ನು ತೆರವಿಗೆ ಕ್ರಮಕೈಗೊಳ್ಳುತ್ತೇವೆ ಎಂದು ಜಾರ್ಜ್ ತಿಳಿಸಿದರು. ಮರ ಟೊಳ್ಳಾಗಿದ್ದು 20-30 ವರ್ಷದ ಹಳೆಯದಾಗಿದೆ. ಇದನ್ನು ಕಡಿಯಲು ಸಿದ್ಧತೆ ನಡೆಸಿತ್ತಾದರೂ ಕೆಲವರು ಮರ ತೆರವುಗೊಳಿಸಲು ವಿರೋಧಿಸಿದ್ದರು. ಹೀಗಾಗಿ ತೆರವುಗೊಳಿಸಲಾಗಿರಲಿಲ್ಲ. ಇದೀಗ ಇಂತಹ ದುರ್ಘಟನೆ ನಡೆದಿದೆ.
-ಆರ್.ವಿ. ದೇವರಾಜ್, ಶಾಸಕ ಮರ ಯಾವಕಡೆ ಬೀಳುತ್ತೇ ಅಂತಾನೆ ಗೊತ್ತಾಗಿಲ್ಲ. ಮರ ಕಾರ ಮೇಲೆ ಬಿದ್ದ ಕೂಡಲೇ ಸ್ಥಳೀಯರೆಲ್ಲ ಒಟ್ಟಾಗಿ ಕಾರಿನ ಮೇಲಿದ್ದ ಮರ ತೆರವು ಮಾಡಲು ಪ್ರಯತ್ನಿಸಿದೆವು. ಏನೇ ಮಾಡಿದರು ಮರವನ್ನು ಸ್ವಲ್ಪವೂ ಅಲ್ಲಾಡಿಸಲು ಸಾಧ್ಯವಾಗಿಲ್ಲ. ಮಳೆಯ ಜತೆಗೆ ಗಾಳಿಯೂ ಇರುವುದರಿಂದ ಮರ ನೆಲಕ್ಕೆ ಉರುಳಿದೆ. ನಮ್ಮಿಂದ ಏನೂ ಮಾಡಲು ಸಾಧ್ಯವಾಗಿಲ್ಲ ಎಂಬ ಕೊರಗು ಇದೆ.
-ಶರತ್ ಸ್ಥಳೀಯ ನಿವಾಸಿ. ಮಳೆಯ ತೀವ್ರತೆಗೆ ಆಶ್ರಯದ ಪಡೆಯಲು ನೀಲಗಿರಿ ಮರದ ಕೆಳಗೆ ನಿಂತಿದ್ದ ಕಾರಿನ ಮೇಲೆ ಮರ ಬಿದ್ದು ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತೂಬ್ಬನ ಸ್ಥಿತಿ ಗಂಭೀರವಾಗಿದೆ. ಇದೊಂದು ಆಕಸ್ಮಿಕ ಘಟನೆ. ಗ್ಯಾರೇಜಿಂದ ವಾಪಾಸ್ ಬರುವಾಗ ಈ ಘಟನೆ ಸಂಭವಿಸಿದೆ. ಶೇಷಾದ್ರಿಪುರಂ ಬಳಿ ಮೊರಿಯಲ್ಲಿ ಯುವಕ ಕೊಚ್ಚಿ ಹೋಗಿದ್ದಾನೆ ಎಂದು ಹೇಳಾಗುತ್ತದೆ. ಈ ಸಂಬಂಧ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದಾಗ ಮ್ಯಾನ್‌ಹೋಲ್‌ನಲ್ಲಿ ವ್ಯಕ್ತಿಹೋಗುವಷ್ಟು ಜಾಗ ಕಂಡುಬಂದಿಲ್ಲ. ಸುಮಾರು 30 ಕಡೆಗಳಲ್ಲಿ ಮರ ಉರುಳಿದೆ.
-ಮೇಯರ್ ಜಿ. ಪದ್ಮಾವತಿ