Advertisement

ಕ್ಯಾಂಟೀನ್‌ಗೆ ಆರಂಭದಲ್ಲೇ ಜಯ

11:14 AM Aug 19, 2017 | Team Udayavani |

ಬೆಂಗಳೂರು: ಬಡ ಜನರಿಗಾಗಿ ನಗರದಲ್ಲಿ ಆರಂಭಿಸಲಾಗಿರುವ ಇಂದಿರಾ ಕ್ಯಾಂಟೀನ್‌ಗಳಿಗೆ ನಿರೀಕ್ಷೆಗೂ ಮೀರಿ ಸಾರ್ವಜನಿಕರಿಂದ ಅಭೂತ ಪೂರ್ವ ಸ್ಪಂದನೆ ಸಿಕ್ಕಿದೆ. ಯೋಜನೆ ಆರಂಭದಲ್ಲೇ ಯಶಸ್ಸು ಸಾಧಿಸಿದೆ ಎಂದು ಮೇಯರ್‌ ಜಿ.ಪದ್ಮಾವತಿ ತಿಳಿಸಿದ್ದಾರೆ.

Advertisement

ಶುಕ್ರವಾರ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಕ್ಯಾಂಟೀನ್‌ಗಳು ಆರಂಭವಾಗಿ ಕೇವಲ ಎರಡು ದಿನಗಳು ಮಾತ್ರ ಕಳೆದಿವೆ. ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಮಯ ಬೇಕಾಗುತ್ತದೆ ಎಂದು ತಿಳಿಸಿದರು. 

ಪ್ರತಿ ಕ್ಯಾಂಟೀನ್‌ನಲ್ಲಿ ಒಂದು ಹೊತ್ತಿಗೆ 300-500 ಜನರಿಗೆ ಆಹಾರ ನಿಗದಿಗೊಳಿಸಲಾಗಿದೆ. ಆದರೆ, ಬಹುತೇಕ ಕ್ಯಾಂಟೀನ್‌ಗಳ ಬಳಿ 800-1000 ಜನರು ಬಂದಿರುವುದರಿಂದ ಅವರಿಗೆ ಆಹಾರ ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಯಾವ ಕ್ಯಾಂಟೀನ್‌ಗಳಿಗೆ ಎಷ್ಟು ಜನರು ಬರುತ್ತಾರೆ ಎಂಬುದನ್ನು ಮಾಹಿತಿ ಪಡೆದ ನಂತರದಲ್ಲಿ ಆಹಾರದ ಸಂಖ್ಯೆಯನ್ನು ಹೆಚ್ಚಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು. 

ಬಿಬಿಎಂಪಿ ವತಿಯಿಂದ ಕೇವಲ 60 ದಿನಗಳಲ್ಲಿ ನೂರು ಕ್ಯಾಂಟೀನ್‌ಗಳನ್ನು ನಿರ್ಮಿಸಲಾಗಿದೆ. ಇದೇ ಮೊದಲ ಬಾರಿಗೆ ಪಾಲಿಕೆಯಿಂದ ಆಹಾರ ಪೂರೈಕೆಯನ್ನು ಮಾಡುತ್ತಿರುವುದರಿಂದಾಗಿ ಕೆಲವೊಂದು ವ್ಯತ್ಯಾಸಗಳು ಕಂಡು ಬಂದಿರುವುದು ಸಹಜ. ಸಾರ್ವಜನಿಕರಿಂದ ಬರುವ ಸಲಹೆಗಳು ಹಾಗೂ ದೂರುಗಳನ್ನು ಪರಿಶೀಲಿಸಿ ಮುಂದಿನ ಕ್ರಮಕ್ಕೆ ಮುಂದಾಗುತ್ತೇವೆ ಎಂದು ತಿಳಿಸಿದರು. 

ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ , ಇದೇ ಮೊದಲ ಬಾರಿಗೆ ಪಾಲಿಕೆಯ ವತಿಯಿಂದ ಆಹಾರ ಪೂರೈಕೆ ಸೇವೆಯನ್ನು ಮಾಡಲಾಗುತ್ತಿದೆ. ಪಾಲಿಕೆಯ ಎಲ್ಲ ಅಧಿಕಾರಿಗಳಿಗೆ ಇದು ಹೊಸದು. ಆಹಾರ ಪೂರೈಕೆಯಲ್ಲಿ ತಡ, ಆಹಾರ ಕೊರತೆ ಸೇರಿದಂತೆ ಕೆಲವೊಂದು ವ್ಯತ್ಯಾಸಗಳು ಕಂಡು ಬಂದಿದ್ದು, ಶೀಘ್ರದಲ್ಲಿಯೇ ಅವುಗಳನ್ನು ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು. 

Advertisement

ಇಂದಿರಾ ಕ್ಯಾಂಟೀನ್‌ ಯೋಜನೆಗೆ ಸರ್ಕಾರ 200 ಕೋಟಿ ರೂ. ಅನುದಾನ ನೀಡಿದೆ. ಆಗಸ್ಟ್‌ 16ರಂದು ಆರಂಭವಾದ ಇಂದಿರಾ ಕ್ಯಾಂಟೀನ್‌ನಲ್ಲಿ ಈವರೆಗೆ 2.51 ಲಕ್ಷ ಜನರು ಆಹಾರ ಸೇವನೆ ಮಾಡಿದ್ದಾರೆ. ಆದರೆ, ನಿರೀಕ್ಷೆಗಿಂತ ಹೆಚ್ಚಿನ ಸಂಖ್ಯೆಯ ಜನರು ಕ್ಯಾಂಟೀನ್‌ಗಳಿಗೆ ಬರುತ್ತಿರುವುದರಿಂದ 15 ದಿನಗಳ ನಂತರ ಆಹಾರ ಸಂಖ್ಯೆಯನ್ನು ಹೆಚ್ಚಿಸುವ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಿ ಹೆಚ್ಚಿನ ಅನುದಾನ ಕೋರಲಾಗುವುದು ಎಂದರು. 

ಆಹಾರ ಪೂರೈಕೆಯನ್ನು ಉಪಗುತ್ತಿಗೆ ನೀಡಲಾಗಿದೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಆಹಾರ ಪೂರೈಕೆ ಗುತ್ತಿಗೆ ಪಡೆದಿರುವಂತಹ ಸಂಸ್ಥೆಗಳೊಂದಿಗೆ ಮಾಡಿಕೊಂಡಿರುವ ಗುತ್ತಿಗೆದಾರರೊಂದಿಗಿನ ಒಡಂಬಡಿಕೆಯಲ್ಲಿ ಉಪಗುತ್ತಿಗೆ ನೀಡಲು ಅನುಮತಿ ನೀಡಲಾಗಿದೆ. ಆದರೆ, ಯಾವುದೇ ತೊಂದರೆಯಾದರೂ ಸಹ ಅದಕ್ಕೆ ಗುತ್ತಿಗೆದಾರರನ್ನೇ ನೇರವಾಗಿ ಹೊಣೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು. 

ಬಿಬಿಎಂಪಿ ವತಿಯಿಂದ ನಿರ್ಮಿಸಲಾಗುತ್ತಿರುವ ಕೇಂದ್ರೀಕೃತ ಅಡುಗೆ ಮನೆಗಳ ಕಾಮಗಾರಿ ಪ್ರಗತಿಯಲ್ಲಿರುವ ಹಿನ್ನೆಲೆಯಲ್ಲಿ ತಾತ್ಕಾಲಿಕ ಅಡುಗೆ ಮನೆ ನಿರ್ಮಿಸಿಕೊಳ್ಳಲು ಗುತ್ತಿಗೆದಾರರಿಗೆ ಜಾಗ ನೀಡಲಾಗಿದೆ. ಅದರಂತೆ ಶೇಫ್ಟಾಕ್‌ ಸಂಸ್ಥೆಯವರು ಗುಂಜೂರು, ರಾಜಾಜಿನಗರ, ಜಯನಗರ ಮತ್ತು ಮಾದನಾಯಕನಹಳ್ಳಿ ಅಡುಗೆ ಮನೆಗಳನ್ನು ನಿರ್ಮಿಸಿದ್ದು, ರಿವಾರ್ಡ್ಸ್‌ ಸಂಸ್ಥೆಯವರು ಸಹಕಾರ ನಗರ, ಪ್ಯಾಲೇಸ್‌ ಮೈದಾನದ ತ್ರಿಪುರವಾಸಿನಿ, ವೈಟ್‌ಪೆಟಲ್ಸ್‌ ಹಾಗೂ ಕೋನೆನ ಅಗ್ರಹಾರದಲ್ಲಿ ಕ್ಯಾಂಟೀನ್‌ ನಿರ್ಮಿಸಿದ್ದಾರೆ ಎಂದು ಮಾಹಿತಿ ನೀಡಿದರು. 

ಅಡುಗೆ ಮನೆ ಪ್ರವೇಶ ನಿರ್ಬಂಧ
ಇಂದಿರಾ ಕ್ಯಾಂಟೀನ್‌ಗಳ ಆಹಾರ ಪೂರೈಕೆ ಮಾಡುವಂತಹ ಅಡುಗೆ ಮನೆಗಳ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಕಾರಣ ಯಾರಾದರೂ ಆಹಾರಕ್ಕೆ ಏನನ್ನಾದರೂ ವಿಷಯುಕ್ತ ಅಂಶವನ್ನು ಸೇರಿಸಿದರೆ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗುತ್ತದೆ. ಆ ಹಿನ್ನೆಲೆಯಲ್ಲಿ ಸುರಕ್ಷತಾ ದೃಷ್ಟಿಯಿಂದ ಅಡುಗೆ ಮನೆಗಳಿಗೆ ಪ್ರವೇಶವನ್ನು ನಿಷೇಧಿಸಲಾಗಿದೆ ಎಂದು ಆಯುಕ್ತರು ಉತ್ತರಿಸಿದರು. 

ನೆಗೆಟೀವ್‌ ಹುಡುಕಬೇಡಿ
ನಗರದಲ್ಲಿನ ಬಡವರಿಗಾಗಿ ಇಂದಿರಾ ಕ್ಯಾಂಟೀನ್‌ಗಳನ್ನು ಆರಂಭಿಸಲಾಗಿದ್ದು, ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಇಂತಹ ಜನಪರ ಕಾರ್ಯಕ್ರಮಕ್ಕೆ ಮಾಧ್ಯಮಗಳು ಸಹಕಾರ ನೀಡಬೇಕು. ಯೋಜನೆಯಲ್ಲಿ ನೆಗೆಟೀವ್‌ (ನಕಾರಾತ್ಮಕ) ಅಂಶಗಳನ್ನು ಹುಡುಕಬೇಡಿ ಎಂದು ಮೇಯರ್‌ ಜಿ.ಪದ್ಮಾವತಿ ಮನವಿ ಮಾಡಿದರು. 

ಕಳೆದ ಮೂರು ದಿನಗಳಿಂದ ತಿಂಡಿ-ಆಹಾರ ಸೇವಿಸಿದವರ ಸಂಖ್ಯೆ 
-ಆಗಸ್ಟ್‌ 16ರ ರಾತ್ರಿ    49,400
-ಆಗಸ್ಟ್‌ 17ರ ಬೆಳಗ್ಗೆ    37,200
-ಆಗಸ್ಟ್‌ 17ರ ಮಧ್ಯಾಹ್ನ    39,500
-ಆಗಸ್ಟ್‌ 17ರ ರಾತ್ರಿ    42,100
-ಆಗಸ್ಟ್‌ 18ರ ಬೆಳಗ್ಗೆ    40,500
-ಆಗಸ್ಟ್‌ 18ರ ಮಧ್ಯಾಹ್ನ    43,000

Advertisement

Udayavani is now on Telegram. Click here to join our channel and stay updated with the latest news.

Next