ಬೆಂಗಳೂರು: ಖಾಸಗಿ ಶಾಲೆಗೆ ಮಕ್ಕಳನ್ನು ಸೇರಿಸಿ, ಶುಲ್ಕ ಪಾವತಿಸದ ಪಾಲಕರ ವಿರುದ್ಧ ಕ್ರಮ ತೆಗೆದುಕೊಳ್ಳಲು ಕಾನೂನು ರಚಿಸಲು ಮತ್ತು ಸಾಮಾಜಿಕ ಕಾರ್ಯಕರ್ತರ ಹೆಸರಿನಲ್ಲಿ ಖಾಸಗಿ ಶಾಲೆಗಳ ವಿರುದ್ಧ ಕೆಲವರು ನಡೆಸುತ್ತಿರುವ ದೌರ್ಜನ್ಯ ತಡೆಗೆ ಆಗ್ರಹಿಸಿ ಶುಕ್ರವಾರ ಖಾಸಗಿ ಅನುದಾನ ರಹಿತ ಶಾಲೆಗಳ ಸಂಘಟನೆ (ಕ್ಯಾಮ್ಸ್) ನಿಯೋಗ ಶುಕ್ರವಾರ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ.
ಖಾಸಗಿ ಶಾಲೆಗೆ ಸೇರುವ ಆರ್‌ಟಿಇ ಮಕ್ಕಳಿಗೆ ಸರ್ಕಾರ ಉಚಿತವಾಗಿ ಪಠ್ಯಪುಸ್ತಕ ವಿತರಣೆ ಮಾಡುವ ಕ್ರಮ ಸರಿಯಲ್ಲ. ಹಾಗೆಯೇ ಶಾಲೆಯಿಂದಲೇ ಸಮವಸ್ತ್ರ ಪಠ್ಯಪುಸ್ತಕ ವಿತರಣೆ ಮಾಡಬಾರದು ಎಂಬ ನಿಯಮ ಹಿಂದಕ್ಕೆ ಪಡೆಯಬೇಕು. ಸರ್ಕಾರ ನೀಡುವ ಪಠ್ಯಪುಸ್ತಕಕ್ಕೆ ಪಾಲಕರಿಂದ ಹಣ ಪಡೆದು ಸರ್ಕಾರ ಕಟ್ಟುವುದು ವ್ಯಾಪಾರ ಆಗುವುದಿಲ್ಲವೇ ಎಂದು ಸಂಘಟನೆ ವತಿಯಿಂದ ಸಚಿವರನ್ನು ಪ್ರಶ್ನಿಸಿದ್ದಾರೆ.
ಆರ್‌ಟಿಇ ಮಕ್ಕಳ ಪ್ರವೇಶ ಹಾಗೂ ಪಠ್ಯಪುಸ್ತಕ ವಿತರಣೆ ಸಂಬಂಧ ಶಿಕ್ಷಣ ಇಲಾಖೆಯ ದ್ವಂದ್ವ ನೀತಿ ವಿರೋಧಿಸಿ ಸಚಿವರನ್ನು ಭೇಟಿ ಮಾಡಿದ ಸಂಘಟನೆಯ ಸದಸ್ಯರು, ನ್ಯಾಯಬದ್ಧವಾಗಿ ಶುಲ್ಕ ಪಾವತಿಸದೇ ಇರುವುದನ್ನು ಬಂಡವಾಳ ಮಾಡಿಕೊಂಡು ಕೆಲ ಕಿಡಿಗೇಡಿಗಳು ಶಾಲೆಗಳಿಂದ ವಸೂಲಿ, ದಬ್ಟಾಳಿಕೆ, ಶಾಲೆಯ ಮಾನನಷ್ಟ ಮಾಡುತ್ತಿದ್ದಾರೆ. ಸರ್ಕಾರ, ಮಾಧ್ಯಮ ಹಾಗೂ ಸಾರ್ವ ಜನಿಕರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂಬ ದೂರು ನೀಡಿದ್ದಾರೆ.
ಖಾಸಗಿ ಅನುದಾನರಹಿತ ಶಾಲೆಗಳ ಸಾಮಾನ್ಯ ಹಕ್ಕಿಗೆ ಧಕ್ಕೆಯಾಗುತ್ತಿದೆ. ಒಪ್ಪಂದದ ಶುಲ್ಕವೂ ಕಟ್ಟದೇ ಇದ್ದ ಸಂದರ್ಭದಲ್ಲಿ ಯಾವ ಕ್ರಮ ಕೈಗೊ ಳ್ಳಬೇಕೆಂದು ಸರ್ಕಾರ ತಕ್ಷಣ ಸುತ್ತೋಲೆ ಹೊರಡಿಸಬೇಕು. ಶಿಕ್ಷಣ ಸಂಸ್ಥೆಗಳ ಹಕ್ಕನ್ನು ರಕ್ಷಿಸಬೇಕು, ಆರ್‌ಟಿಇ ಅಡಿಯಲ್ಲಿ ದಾಖಲಾದ ಮಕ್ಕಳಿಗೆ ಉಚಿತ ಪಠ್ಯಪುಸ್ತಕ ಹಾಗೂ ಇತರೆ ಸೌಲಭ್ಯ ವಿತರಿಸಲು ಸಾಧ್ಯವಿಲ್ಲ.
ನರ್ಸರಿ ವಿದ್ಯಾರ್ಥಿಗಳಿಗಾಗಲಿ ಅಥವಾ ಸಿಬಿಎಸ್‌ಇ, ಐಸಿಎಸ್‌ಇ ಶಾಲೆಯ ಪಠ್ಯಪುಸ್ತಕ ಮರುಪಾವತಿ ಹೇಗೆ ಮಾಡಲು ಸಾಧ್ಯ? ಈ ಬೇಧಭಾವ ಹಾಗೂ ಗೊಂದಲ ಸರಿಪಡಿಸಿ ಅಥವಾ ನೇರವಾಗಿ ಮಕ್ಕಳ ಪಾಲಕರಿಗೆ ಸರ್ಕಾರ ದಿಂದಲೇ ಪಠ್ಯಪುಸ್ತಕ ನೀಡಿ ಎಂಬ ಮನವಿ ಮಾಡಿದರು. ರಾಜ್ಯ ಪಠ್ಯಕ್ರಮ ಶಾಲೆಗಳಿಂದ ಈಗಾಗಲೇ ಪುಸ್ತಕಗಳ ಬೇಡಿಕೆ ಹಾಗೂ ಪೂರೈಕೆಗೆ ಪುಸ್ತಕ ಸರಬರಾಜುದಾರರು ಹಣ ಕಟ್ಟಿಸಿಕೊಂಡಿದ್ದು, ಪುಸ್ತಕಗಳನ್ನು ಮಾರುಕಟ್ಟೆಯಲ್ಲಿ ತರಿಸುವುದಾಗಿ ಭರವಸೆ ನೀಡಿದ್ದಾರೆ.
ಹಿಂದಿನ ವರ್ಷ ಪುಸ್ತಕದಿಂದ ಲಕ್ಷಾಂತರ ರೂ. ನಷ್ಟವಾಗಿದೆ. ಸಮವಸ್ತ್ರ, ಪಠ್ಯಪುಸ್ತಕ ಶಾಲೆಯಲ್ಲಿ ಮಾರಾಟ ಮಾಡಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದರು. ಸಂಘಟನೆಯ ಎಲ್ಲಾ ಬೇಡಿಕೆಯನ್ನು ಪರಿಶೀಲಿಸಿದ ಸಚಿವರು, ಅಧಿಕಾರಿಗಳಿಂದ ವರದಿ ತರಿಸಿಕೊಂಡು, ಈ ಸಂಬಂಧ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದ್ದೇವೆ ಎಂಬ ಭರವಸೆ ನೀಡಿದ್ದಾರೆ.