Advertisement

ಕೇಂಬ್ರಿಜ್‌ ಅನಾಲಿಟಿಕಾ ರಾದ್ಧಾಂತ

06:00 AM Mar 22, 2018 | Team Udayavani |

ಫೇಸ್‌ಬುಕ್‌ನಂತಹ ಸೋಷಿಯಲ್‌ ಮೀಡಿಯಾ ಬಳಕೆ ಎಷ್ಟು ಅಸುರಕ್ಷಿತ ಎನ್ನುವುದು ಕೇಂಬ್ರಿಜ್‌ ಅನಾಲಿಟಿಕಾ ಹಗರಣದಿಂದ ಸಾಬೀತಾಗಿದೆ. ಬ್ರಿಟನ್‌ ಮೂಲದ ಕೇಂಬ್ರಿಜ್‌ ಅನಾಲಿಟಿಕಾ ದತ್ತಾಂಶಗಳನ್ನು ವಿಶ್ಲೇಷಿಸುವ ಒಂದು ಕಂಪೆನಿ. 2016ರಲ್ಲಿ ನಡೆದ ಅಮೆರಿಕದ ಅಧ್ಯಕ್ಷೀಯ ಚುನಾವಣೆ ಸಂದರ್ಭದಲ್ಲಿ ಡೊನಾಲ್ಡ್‌ ಟ್ರಂಪ್‌ಗೆ ಅನುಕೂಲ ಮಾಡಿಕೊಡುವ ಸಲುವಾಗಿ ಈ ಕಂಪೆನಿ ಸುಮಾರು 50 ದಶಲಕ್ಷ ಫೇಸ್‌ಬುಕ್‌ ಖಾತೆಗಳ ಮಾಹಿತಿ ಚೋರಿ ಮಾಡಿದೆ ಎನ್ನಲಾಗಿದೆ. ಚಾನೆಲ್‌ 4 ಎಂಬ ಸುದ್ದಿವಾಹಿನಿಯೊಂದು ನಡೆಸಿದ ಕುಟುಕು ಕಾರ್ಯಾಚರಣೆ ವೇಳೆ ಕೇಂಬ್ರಿಜ್‌ ಅನಾಲಿಟಿಕಾದ ಸಿಇಒ ಅಲೆಕ್ಸಾಂಡರ್‌ ನಿಕ್ಸ್‌ ತನ್ನ ಸಂಸ್ಥೆಯ ಕಾರ್ಯವೈಖರಿಯ ಬಗ್ಗೆ ಕೊಚ್ಚಿಕೊಂಡಾಗ ಈ ರಹಸ್ಯ ಬಯಲಾಗಿದೆ. 

Advertisement

ಫೇಸ್‌ಬುಕ್‌ ಬಳಕೆದಾರರ ಖಾತೆಗಳಿಗೆ ಲಗ್ಗೆ ಹಾಕಿ ಅವರಿಗೆ ಅರಿವಿಗೆ ಬರದಂತೆ ಅವರ ಹವ್ಯಾಸ, ಆಸಕ್ತಿ, ಅಭಿರುಚಿ, ಸ್ನೇಹಿತರು ಮತ್ತು ಬಂಧುಗಳ ಮಾಹಿತಿ, ಚಿಂತನೆ, ಒಲವು ಇತ್ಯಾದಿ ಖಾಸಗಿ ಮಾಹಿತಿಯನ್ನು ಸಂಗ್ರಹಿಸುವುದು ಅನಂತರ ಇವುಗಳ ಆಧಾರದಲ್ಲಿ ಅವರ ಮನಸ್ಸಿಗೆ ಒಂದು ನಿರ್ದಿಷ್ಟ ವಿಚಾರಧಾರೆಯನ್ನು ತುಂಬುತ್ತಾ ಹೋಗುವುದು ಮೊದಲ ಹಂತ. ಅನಂತರ ತನಗೆ ಅಗತ್ಯವಿರುವ ಜನಾಭಿಪ್ರಾಯ ರೂಪಿಸಿ ಆ ಮೂಲಕ ಪ್ರಚಾರ ಮಾಡುವುದು ಇದು ಕೇಂಬ್ರಿಜ್‌ ಅನಾಲಿಟಿಕಾ ಅನುಸರಿಸಿದ ತಂತ್ರ. ಒಂದು ರೀತಿಯಲ್ಲಿ ಇದು ಬ್ರೈನ್‌ವಾಶ್‌ ಮಾಡುವ ಮೈಂಡ್‌ಗೆàಮ್‌ ತಂತ್ರದಂತೆ. ಬಳಕೆದಾರ ತನಗರಿವಿಲ್ಲದಂತೆ ಒಂದು ನಿರ್ದಿಷ್ಟ ವಿಚಾರವನ್ನು ಒಪ್ಪಿಕೊಳ್ಳುತ್ತಾ ಹೋಗುತ್ತಾನೆ ಹಾಗೂ ಅನಂತರ ಅದರ ಪರವಾಗಿ ಅಭಿಪ್ರಾಯ ವ್ಯಕ್ತಪಡಿಸಲು ತೊಡಗುತ್ತಾನೆ. ಡೊನಾಲ್ಡ್‌ ಟ್ರಂಪ್‌ ಚುನಾವಣೆಯ ಪ್ರಚಾರದ ಹೊಣೆಯನ್ನು ಈ ಸಂಸ್ಥೆ ವಹಿಸಿ ಕೊಂಡಿತ್ತು. ಅಮೆರಿಕದಂತಹ ದೇಶದಲ್ಲಿ ಜನರು ಸೋಷಿಯಲ್‌ ಮೀಡಿ ಯಾಗಳಲ್ಲಿ ಹೆಚ್ಚು ಸಕ್ರಿಯರಾಗಿರುತ್ತಾರೆ. ಹೀಗಾಗಿ ಕೇಂಬ್ರಿಜ್‌ ಅನಾಲಿಟಿಕಾ ಈ ತಂತ್ರವನ್ನು ಅನುಸರಿಸಿ ಅದರಲ್ಲಿ ಯಶಸ್ವಿಯಾಗಿದೆ. ಇದರ ಜತೆಗೆ ಬ್ರಿಟನ್‌ ಯುರೋಪ್‌ ಒಕ್ಕೂಟದಿಂದ ಹೊರಬೀಳಲು ನಿರ್ಧರಿಸಿದಾಗ ಹೊರ ಹೋಗುವ ಬ್ರೆಕ್ಸಿಟ್‌ ಪರವಾಗಿ ಜನಾಭಿಪ್ರಾಯ ಸಂಗ್ರಹಿಸಿದ್ದು ತಾವೇ ಎಂದು ನಿಕ್ಸ್‌ ಹೇಳಿಕೊಂಡಿದ್ದಾರೆ. 2013ರಲ್ಲಿ ಅಸ್ತಿತ್ವಕ್ಕೆ ಬಂದಿರುವ ಈ ಕಂಪೆನಿ ಜಗತ್ತಿನಾದ್ಯಂತ 200ಕ್ಕೂ ಚುನಾವಣೆಗಳಲ್ಲಿ ಈ ತಂತ್ರವನ್ನು ಅನುಸರಿಸಿದೆಯಂತೆ. ತಾನು ಪ್ರಚಾರ ಮಾಡುವ ರಾಜಕೀಯ ಪಕ್ಷದ ಪರವಾಗಿ ಜನಾಭಿಪ್ರಾಯ ರೂಪುಗೊಳ್ಳಲು ಹಣ, ಕರೆವೆಣ್ಣುಗಳು ಹಾಗೂ ಇನ್ನಿತರ ಅಡ್ಡಮಾರ್ಗವನ್ನು ಬಳಸಿಕೊಳ್ಳಲು ನಾವು ಹಿಂದೇಟು ಹಾಕುವುದಿಲ್ಲ ಎಂದು ನಿಕ್ಸ್‌ ಹೆಮ್ಮೆಯಿಂದ ಹೇಳಿಕೊಂಡಿರುವುದನ್ನು ಚಾನೆಲ್‌ 4 ವರದಿಗಾರರು ದಾಖಲಿಸಿಕೊಂಡಿದ್ದಾರೆ. 

ಇದೇನೋ ಅಮೆರಿಕಕ್ಕೆ ಸಂಬಂಧಿಸಿದ ವಿಚಾರ ಎಂದು ಭಾವಿಸಿ ಸುಮ್ಮನಾಗಬಹುದಿತ್ತು. ಆದರೆ ಈ ಗುಮ್ಮ ಈಗ ನಮ್ಮ ಮನೆ ಬಾಗಿಲಿಗೂ ಬಂದಿದೆ. ಭಾರತದ ಕೆಲ ರಾಜಕೀಯ ಪಕ್ಷಗಳು ಕೇಂಬ್ರಿಜ್‌ ಅನಾಲಿಟಿಕಾ ಸಂಪರ್ಕದಲ್ಲಿದ್ದವು ಎಂಬ ಮಾಹಿತಿ ದೇಶದ ರಾಜಕೀಯದಲ್ಲಿ ಆರೋಪ ಮತ್ತು ಪ್ರತ್ಯಾರೋಪಗಳಿಗೆ ಕಾರಣವಾಗಿದೆ. ಈ ಮಾಹಿತಿ ಹೊರಬಿದ್ದ ಕೂಡಲೇ ಕಾಂಗ್ರೆಸ್‌ ಸಮಗ್ರ ತನಿಖೆಯಾಗಲಿ ಎಂದು ಚುನಾವಣಾ ಆಯೋಗವನ್ನು ಆಗ್ರಹಿಸಿದರೆ 2019ರ ಸಾರ್ವತ್ರಿಕ ಚುನಾವಣೆಯ ಪ್ರಚಾರಕ್ಕೆ ಕಾಂಗ್ರೆಸ್‌ ಕೇಂಬ್ರಿಜ್‌ ಅನಾಲಿಟಿಕಾದ ಜತೆಗೆ ಒಪ್ಪಂದ ಮಾಡಿಕೊಂಡಿದೆ ಎಂದು ಬಿಜೆಪಿ ಬಹಿರಂಗವಾಗಿ ಆರೋಪಿಸಿದೆ. ಕಂಪೆನಿಯೇ ತನ್ನ ವೆಬ್‌ಸೈಟಿನಲ್ಲಿ 2010ರ ಬಿಹಾರ ಚುನಾವಣೆಯಲ್ಲಿ ಒಂದು ಪಕ್ಷ ಇಲ್ಲವೆ ಕೆಲವು ಪಕ್ಷಗಳ ಒಂದು ಗುಂಪಿಗೆ ಸಹಾಯ ಮಾಡಿದ್ದೇವೆ ಎಂದು ಹೇಳಿಕೊಂಡಿದೆ. ಅಂದರೆ ಬಹಳ ವರ್ಷಗಳಿಂದ 
ನಮ್ಮ ರಾಜಕೀಯ ಪಕ್ಷಗಳು ಚುನಾವಣೆ ಗೆಲ್ಲಲು ಈ ಆಧುನಿಕ ಶಕುನಿ ತಂತ್ರವನ್ನು ಅನುಸರಿಸುತ್ತಿವೆ ಎಂದಾಯಿತು. ಕೆದಕುತ್ತಾ ಹೋದರೆ ಕೇಂಬ್ರಿಜ್‌ ಅನಾಲಿಟಿಕಾದ ಬೇರುಗಳು ಇನ್ನೂ ಆಳಕ್ಕಿಳಿದಿರುವುದು ಪತ್ತೆಯಾಗಬಹುದು. 

ಫೇಸ್‌ಬುಕ್‌ ಮತ್ತು ವಾಟ್ಸಪ್‌ ಸೋಷಿಯಲ್‌ ಮೀಡಿಯಾ ಆ್ಯಪ್‌ಗ್ಳ ಯಶಸ್ಸು ಮತ್ತು ಜನಪ್ರಿಯತೆಯಿಂದ ಪ್ರೇರಿತವಾಗಿ ಈ ಮಾದರಿಯ ಹತ್ತಾರು ಆ್ಯಪ್‌ಗ್ಳು ತಯಾರಾಗಿವೆ. ಆದರೆ ಈ ಆ್ಯಪ್‌ಗ್ಳು ಎಷ್ಟು ಸುರಕ್ಷಿತ ಎನ್ನುವ ಪ್ರಶ್ನೆ ಹಿಂದಿನಿಂದಲೂ ಇದೆ. ಒಂದು ರೀತಿಯಲ್ಲಿ ಖಾಸಗಿ ಮಾಹಿತಿ ಬಯಸುವವರಿಗೆ ಇಂತಹ ಅಸುರಕ್ಷಿತ ಆ್ಯಪ್‌ಗ್ಳು ಮಾಹಿತಿಯ ಕಣಜವಿದ್ದಂತೆ. ಖಾಸಗಿ ಮಾಹಿತಿ ಸಂರಕ್ಷಿಸಿದವರಲ್ಲಿ ತನ್ನನ್ನು ಮೀರಿಸುವವರಿಲ್ಲ ಎಂದು ಹೇಳಿಕೊಳ್ಳುತ್ತಿದ್ದ ಫೇಸ್‌ಬುಕ್‌ ಪ್ರತಿಷ್ಠೆಗೆ ಈ ಹಗರಣದಿಂದ ಭಾರೀ ಹಾನಿಯಾಗಿದೆ. ಅಂತೆಯೇ ಸೋಷಿಯಲ್‌ ಮೀಡಿ ಯಾಗಳಿಗೆ ತಮ್ಮ ಖಾಸಗಿ ಮಾಹಿತಿಗಳನ್ನು ಬೇಕಾಬಿಟ್ಟಿಯಾಗಿ ಅಪ್‌ಲೋಡ್‌ ಮಾಡುವವರಿಗೂ ಇದು ಒಂದು ಎಚ್ಚರಿಕೆಯಿದ್ದಂತೆ.

Advertisement

Udayavani is now on Telegram. Click here to join our channel and stay updated with the latest news.

Next