ಹುಣಸೂರು: ಪ್ಲಾಸ್ಟಿಕ್ ಕವರ್ ಅನ್ನೇ ಮೇಲ್ಛಾವಣಿ ರೀತಿ ಮಾಡಿಕೊಂಡು ಬಿಸಿಲು, ಗಾಳಿ, ಮಳೆಯಿಂದ ರಕ್ಷಿಸಿಕೊಳ್ಳಲಾಗುತ್ತಿದೆ. ಇದನ್ನು ಯಾವುದೋ ಕುಗ್ರಾಮದ ನಿರಾಶ್ರಿತರ ಗುಡಿಸಲು ಅಥವಾ ಶೆಡ್ ಇರಬಹುದು ಎಂದು ಊಹಿಸಬಹುದು. ಆದರೆ, ಇದು ಶೆಡ್ ಅಲ್ಲ, ಗುಡಿಸಲು ಅಲ್ಲವೇ ಅಲ್ಲ, ರಾಷ್ಟ್ರೀಯ ಹೆದ್ದಾರಿ ಸನಿಹ 5 ಸಾವಿರ ಜನಸಂಖ್ಯೆಯಿರುವ, ಗ್ರಾಪಂ ಕೇಂದ್ರ ಸ್ಥಾನವಿರುವ ಗ್ರಾಮದಲ್ಲಿ ಜನರೇ ನಿರ್ಮಿಸಿಕೊಂಡಿರುವ ತಂಗುದಾಣ.!
ಹೌದು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯಿಂದ ಬೇಸತ್ತ ಚಿಲ್ಕುಂದ ಗ್ರಾಮಸ್ಥರು ಪ್ಲಾಸ್ಟಿಕ್ ಹೊದಿಕೆಯಿಂದ ತಾತ್ಕಾಲಿಕವಾಗಿ ಬಸ್ ತಂಗುದಾಣ ನಿರ್ಮಿಸಿಕೊಂಡಿದ್ದಾರೆ.
ತೆರವು: ಕಳೆದ ಎರಡು ವರ್ಷಗಳ ಹಿಂದೆ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಸಂದರ್ಭದಲ್ಲಿ ಈ ಹಿಂದೆ ನಿರ್ಮಿಸಿದ್ದ ತಂಗುದಾಣವನ್ನು ತೆರವುಗೊಳಿಸಲಾಗಿತ್ತು. ಕಾಮಗಾರಿ ಪೂರ್ಣಗೊಂಡ ಬಳಿಕ ಮತ್ತೆ ತಂಗುದಾನ ನಿರ್ಮಿಸಲು ಯಾರೊಬ್ಬರೂ ಕಾಳಜಿ ವಹಿಸಲಿಲ್ಲ. ಹೀಗಾಗಿ ಪ್ರಯಾಣಿಕರು, ಶಾಲಾ ವಿದ್ಯಾರ್ಥಿಗಳು ಬಿಸಿಲು, ಮಳೆ, ಗಾಳಿಯಲ್ಲೇ ಬಸವಳಿದು ಬಸ್‌ಗಾಗಿ ಕಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.
ಕ್ಯಾರೆ ಎನ್ನದ ಆಡಳಿತ: ಹಲವಾರು ಬಾರಿ ಶಾಸಕರು ಸೇರಿದಂತೆ ಇಲ್ಲಿನ ಸ್ಥಳೀಯ ಜನಪ್ರತಿನಿಧಿಗಳಿಗೂ ಮನವಿ ಮಾಡಿದ್ದರೂ ತಂಗುದಾಣ ನಿರ್ಮಾಣಕ್ಕೆ ಮುಂದಾಗಿಲ್ಲ. ಈ ಅವ್ಯವಸ್ಥೆಯಿಂದ ದಿಕ್ಕು ತೋಚದಂತಾದ ಗ್ರಾಮಸ್ಥರು ಸ್ವಂತ ಖರ್ಚಿನಿಂದ ಪ್ಲಾಸ್ಟಿಕ್ ಹೊದಿಕೆಯ ತಂಗುದಾಣವನ್ನು ನಿರ್ಮಿಸಿಕೊಂಡಿದ್ದಾರೆ.
ಗ್ರಾಪಂ ಕೇಂದ್ರ ಸ್ಥಾನ: 5 ಸಾವಿರ ಜನಸಂಖ್ಯೆಯುಳ್ಳ ಚಿಲ್ಕುಂದ ಗ್ರಾಮದ ಮೂಲಕವೇ ಹಬ್ಬನಕುಪ್ಪೆ, ಮಾಕೋಡು, ಬೋರೆಹೊಸಹಳ್ಳಿ, ಶೆಟ್ಟಳ್ಳಿ, ಹೊಸಕೊಪ್ಪಲು, ಅತ್ತಿಗುಪ್ಪೆ, ನಾಗಮಂಗಲ, ಮುತ್ತುರಾಯನಹೊಸಹಳ್ಳಿ, ಕಣಗಾಲು, ಜವನಿಕುಪ್ಪೆ ಸೇರಿದಂತೆ ವಿವಿಧ ಹಳ್ಳಿಗಳ ಗ್ರಾಮಸ್ಥರು ಹಾಗೂ ನೂರಾರು ವಿದ್ಯಾರ್ಥಿಗಳು ಹುಣಸೂರು, ಪಿರಿಯಾಪಟ್ಟಣ, ಮೈಸೂರು, ಕೊಡಗು, ಮಂಗಳೂರು, ಕೇರಳ ಕಡೆಗೆ ತೆರಳಬೇಕಿದೆ. ಈ ಎಲ್ಲಾ ಊರುಗಳ ಜನರು ಕೇಂದ್ರ ಸ್ಥಾನ ಚಿಲ್ಕುಂದಕ್ಕೆ ಬರಲೇಬೇಕಿದೆ. ಇಲ್ಲಿ ತಂಗುದಾಣದ ಅತ್ಯವಶ್ಯವಿದ್ದರೂ ಕ್ರಮ ಕೈಗೊಂಡಿಲ್ಲ.
ಗ್ರಾಮಸ್ಥರ ಆಕ್ರೋಶ: ಉಳ್ಳವರು ಕಾರಿನಲ್ಲಿ ಓಡಾಡುವುದರಿಂದ ಅವರಿಗೆ ತಂಗುದಾಣದ ಕೊರತೆಯ ಬಿಸಿ ತಟ್ಟುವುದಿಲ್ಲ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಗ್ರಾಮಗಳ ಸಮಸ್ಯೆ ಅರಿವಿಲ್ಲದಿರುವುದರಿಂದ ಇಂತಹ ಪರಿಸ್ಥಿತಿ ಎದುರಾಗಿದೆ. ಆದರೆ, ಜನಸಮಾನ್ಯರಿಗೆ ಇದರ ಅವಶ್ಯಕತೆ ತುರ್ತಾಗಿ ಇದೆ. ಮಳೆ, ಬಿಸಿಲು, ಗಾಳಿಗೆ ಸಿಲುಕಿ ಬಸ್‌ಗಾಗಿ ಕಾಯುವಂತಾಗಿದೆ. ಹೀಗಾಗಿ ನಾವೇ ಪ್ಲಾಸ್ಟಿಕ್ ಹೊದಿಕೆ ಮೂಲಕ ತಾತ್ಕಾಲಿಕ ತಂಗುದಾಣ ನಿರ್ಮಿಸಿಕೊಂಡಿದ್ದೇವೆ ಎಂದು ಚಿಲ್ಕುಂದ ಗ್ರಾಮಸ್ಥರು ಆಕ್ರೋಶಭರಿತರಾಗಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಚಿಲ್ಕುಂದ ಗ್ರಾಮ ಹೆದ್ದಾರಿ ಸನಿಹವಿದ್ದರೂ ಪ್ರಯಾಣಿಕರ ಅನುಕೂಲಕ್ಕಾಗಿ ಕನಿಷ್ಠ ಬಸ್ ತಂಗುದಾಣವಿಲ್ಲ. ನಮ್ಮೂರಿನವರೇ ಕಳೆದ 15 ವರ್ಷಗಳಿಂದ ಜಿಲ್ಲಾ ಪಂಚಾಯ್ತಿ ಸದಸ್ಯರಾಗಿದ್ದರೂ ಯಾವುದೇ ಪ್ರಯೋಜವಿಲ್ಲ. ಗ್ರಾಪಂನವರು ಸಹ ತಲೆಕೆಡಿಸಿಕೊಂಡಿಲ್ಲ, ಹಿಂದಿನ ಹಾಗೂ ಈಗಿನ ಶಾಸಕರಿಗೆ ತಿಳಿಸಿದ್ದೆವು. ಆದರೂ ಕ್ರಮ ಕೈಗೊಂಡಿಲ್ಲ. ಹಾಲಿ ಶಾಸಕರು ರಾಜಿನಾಮೆ ನೀಡಿ ರೆಸಾರ್ಟ್‌ನಲ್ಲಿದ್ದಾರೆ.
-ರಮೇಶ, ಚಿಲ್ಕುಂದ ನಿವಾಸಿ
ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯಷ್ಟೆ ನಮ್ಮ ಜವಾಬ್ದಾರಿಯಾಗಿದೆ. ರಸ್ತೆ ಬದಿ ತಂಗುದಾಣ ನಿರ್ಮಿಸುವ ಜವಾಬ್ದಾರಿ ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಈ ಬಗ್ಗೆ ಸಂಬಂಧಿಸಿದ ಇಲಾಖೆಗೆ ಮಾಹಿತಿ ನೀಡಲಾಗುವುದು.
-ಯೋಗಾನಂದ್, ಹೆದ್ದಾರಿ ಅಭಿವೃದ್ಧಿ ವಿಭಾಗದ ಸಹಾಯಕ ಎಂಜಿನಿಯರ್
* ಸಂಪತ್‌ಕುಮಾರ್ ಹುಣಸೂರು