Advertisement

Sidlaghatta: ಸ್ಥಳಾಂತರಕ್ಕೆ ಎದುರು ನೋಡುತ್ತಿದೆ ಬಸ್‌ ನಿಲ್ದಾಣ

04:41 PM Dec 12, 2024 | Team Udayavani |

ಶಿಡ್ಲಘಟ್ಟ:  ಬಿರುಕು ಬಿಟ್ಟಿರುವ ಗೋಡೆಗಳು, ಅವ್ಯವಸ್ಥೆ­ಯಿಂದ ಕೂಡಿದ ಶೌಚಾಲಯ, ಬಸ್‌ ನಿಲ್ದಾಣದಲ್ಲಿ ಖಾಸಗಿ ವಾಹನಗಳ ಕಾರುಬಾರು. ನಿಲ್ದಾಣಕ್ಕೆ ಬರುವ ಪ್ರಯಾಣಿಕರಿಗೆ ಕುಡಿಯುವ ನೀರು, ಮಹಿಳಾ ವಿಶ್ರಾಂತಿ ಕೊಠಡಿ, ಭದ್ರತೆ ಬರೀ ಕನಸಿನ ಮಾತು.

Advertisement

ಹೌದು, ಜಿಲ್ಲೆಯ ರೇಷ್ಮೆ ನಗರಿಯಾಗಿ ಗಮನ ಸೆಳೆದಿರುವ ಶಿಡ್ಲಘಟ್ಟ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಕ್ಕೆ ದಶಕಗಳ ಇತಿಹಾಸ ಇದ್ದರೂ, ಪ್ರಯಾಣಿಕರಿಗೆ ಮೂಲ ಸೌಕರ್ಯ ಬಿಡಿ , ಕನಿಷ್ಠ ಸಾರಿಗೆ ಬಸ್‌ ನಿಲ್ದಾಣಕ್ಕೆ ಕೆಎಸ್‌ಆರ್‌ಟಿಸಿ ನಾಮಫ‌ಲಕವೇ ಅಳವಡಿಸದಿರುವುದು ಎದ್ದು ಕಾಣುತ್ತದೆ.

ನಗರದ ಸಾರ್ವಜನಿಕ ಬಸ್‌ ನಿಲ್ದಾಣಕ್ಕೆ ಕಾಲಿಟ್ಟರೆ ಇದು ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣವೇ ಎನ್ನುವ ಅನುಮಾನ ಎಂತಹ­ವರಿಗೂ ಕಾಡುತ್ತದೆ. ಅಷ್ಟರ ಮಟ್ಟಿಗೆ ನಿಲ್ದಾಣ ಅವ್ಯವಸ್ಥೆಗಳ ಆಗರವಾಗಿ ಪ್ರಯಾಣಿಕರ ಪಾಲಿಗೆ ನಿಲ್ದಾಣ ಬದಲು ಹಳ್ಳಿಯ ಬಸ್‌ ತಂಗುದಾಣದಂತೆ ಭಾಸವಾಗುತ್ತದೆ.

ನಗರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಕ್ಕೆ ಹಲವು ದಶಕಗಳ ಇತಿಹಾಸ ಇದ್ದರೂ ಕೊರತೆಗಳು ಮಾತ್ರ ಇನ್ನೂ ನೀಗಿಲ್ಲ. ಕನಿಷ್ಠ ಪ್ರಯಾಣಿಕರಿಗೆ ಕುಡಿ­ಯುವ ನೀರು ಕೂಡ ಇಲ್ಲಿ ಮರೀಚಿಕೆ ಆಗಿದೆ. ಮೊದಲೇ ಕಿರಿದಾದ ಬಸ್‌ ನಿಲ್ದಾಣದೊಳಗೆ ಕೆಎಸ್‌ಆರ್‌ಟಿಸಿ ಬಸ್‌ಗಳು ಬರುವುದೇ ಅಪರೂಪ. ಶಿಡ್ಲಘಟ್ಟ ಮೂಲಕ ಚಿಂತಾಮಣಿ, ಚಿಕ್ಕಬಳ್ಳಾಪುರ ನಡುವೆ ಸಂಚರಿಸುವ ಬಹುತೇಕ ಬಸ್‌ಗಳಿಗೆ ನಗರದ ಸಾರ್ವಜನಿಕ ಬಸ್‌ ನಿಲ್ದಾಣ ಆಗಿದೆ. ನಿಲ್ದಾಣಕ್ಕೆ ಬರದೇ ಮುಖ್ಯ ರಸ್ತೆಯಲ್ಲಿ ಸಂಚರಿಸುವುದರಿಂದ ಪ್ರಯಾಣಿಕರು ಕಾಲ್ನಡಿಗೆಯಲ್ಲಿ ನಿಲ್ದಾಣಕ್ಕೆ ಬರಬೇಕು. ಇನ್ನೂ ನಿಲ್ದಾಣಕ್ಕೆ ಸಮರ್ಪಕವಾದ ಕಾಂಪೌಂಡ್‌ ಇಲ್ಲ. ಕಾರ್ಯನಿಮಿತ್ತ ನಿಲ್ದಾಣದಿಂದ ದೂರದ ಊರುಗಳಿಗೆ ಪ್ರಯಾಣ ಮಾಡುವ ಪ್ರಯಾಣಿಕರಿಗೆ ದ್ವಿಚಕ್ರ ವಾಹನ, ಕಾರು ಮತ್ತಿತರ ವಾಹನಗಳ ನಿಲುಗಡೆಗೂ ಪಾರ್ಕಿಂಗ್‌

ವ್ಯವಸ್ಥೆ ಇಲ್ಲ. ಶೌಚಾಲಯ ವ್ಯವಸ್ಥೆ ಇದ್ದರೂ ಸಮರ್ಪಕವಾಗಿ ಶುಚಿತ್ವದ ಕೊರತೆ ಎದ್ದು ಕಾಣುತ್ತಿದೆ. ನಗರ ಬೆಳೆದಂತೆ ನಗರಕ್ಕೆ ಬರುವ ಪ್ರಯಾಣಿಕರ ದಟ್ಟಣೆ ಹೆಚ್ಚಿದ್ದು, ಬಸ್‌ಗಳ ಓಡಾಟ ಕೂಡ ಅಧಿಕವಾಗಿದೆ. ಆದರೆ ದಶಕಗಳಿಂದ ಮಾತ್ರ ಬಸ್‌ ನಿಲ್ದಾಣ ಕಿರಿದಾದ ಜಾಗದಲ್ಲಿಯೆ ಕೊರತೆಗಳ ಮಧ್ಯೆ ಕಾರ್ಯ ನಿರ್ವಹಿಸುತ್ತಿದ್ದರೂ ಕ್ಷೇತ್ರದ ಜನಪ್ರತಿನಿಧಿಗಳು, ಅಧಿಕಾರಿಗಳು ಮಾತ್ರ ಬಸ್‌ ನಿಲ್ದಾಣವನ್ನು ಉತ್ತಮ ಪಡಿಸುವಲ್ಲಿ ಅಥವಾ ಸುಸಜ್ಜಿತ ಸ್ಥಳ ಹುಡುಕಿ ಸ್ಥಳಾಂತರ ಮಾಡುವಲ್ಲಿ ಕಾಳಜಿ ತೋರದೆ ಇರುವುದು ಎದ್ದು ಕಾಣುತ್ತಿದೆ.

Advertisement

ಭದ್ರತೆ ಇಲ್ಲ, ಮಹಿಳೆಯರಿಗೆ ವಿಶ್ರಾಂತಿ ಕೊಠಡಿಯೇ ಇಲ್ಲ

ರಾತ್ರಿ ಹೊತ್ತು ಪ್ರಯಾಣಿಕರಿಗೆ ಸುರಕ್ಷಿತ ಸೆಕ್ಯೂರಿಟಿ ಇಲ್ಲ. ವರ್ಷದ ಹಿಂದೆಯೇ ಹೊಸ ಸಿಸಿ ಟಿವಿ ವ್ಯವಸ್ಥೆ ಮಾಡಿಸಲಾಗಿದ್ದು ಎಲ್ಲಾ ಕಾರ್ಯ ನಿರ್ವಹಿಸುತ್ತಿದೆ. ನಿಲ್ದಾಣದಲ್ಲಿ ಸಾರ್ವಜನಿಕರಿಗೆ ವಿಶೇಷವಾಗಿ ಮಹಿಳಾ ಪ್ರಯಾಣಿಕರಿಗೆ ಅನುಕೂಲವಾದ ವಿಶ್ರಾಂತಿ ಕೊಠಡಿ ಇಲ್ಲ. ಲಗೇಜ್‌ ರೂಮ್ಸ್ ಸಹ ಇಲ್ಲ. ನಿಲ್ದಾಣದ ಹೊಳಗೆ ಖಾಸಗಿ ವಾಹನಗಳ ಪಾರ್ಕಿಂಗ್‌ ಮಾಡುವುದರಿಂದ ತೀವ್ರ ಸಮಸ್ಯೆ ಇದೆ. ನಿಲ್ದಾಣದಲ್ಲಿ ಅಳವಡಿಸಲು ಖರೀದಿಸಿ ತಂದಿರುವ ಶುದ್ಧ ನೀರಿನ ಘಟಕ ಅಳವಡಿಸದೇ ಹಾಗೆ ಇದೆ. ಸಮರ್ಪಕವಾದ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೇ ನಿಲ್ದಾಣಕ್ಕೆ ಬರುವ ಪ್ರಯಾಣಿಕರು, ಮಹಿಳೆಯರು, ಶಾಲಾ. ಕಾಲೇಜು ವಿದ್ಯಾರ್ಥಿಗಳು ತೀವ್ರ ಸಂಕಷ್ಟ ಅನುಭವಿಸಬೇಕಿದೆ. ಪೊಲೀಸ್‌ ಚೌಕಿ ಇದ್ದರೂ ಪೊಲೀಸರ ಭೇಟಿ ಅಪರೂಪವಾಗಿದೆ.

ಕೆಎಸ್‌ಆರ್‌ಟಿಸಿ ಘಟಕ ವ್ಯವಸ್ಥಾಪಕರು ಹೇಳಿದ್ದೇನು?:  ಶಿಡ್ಲಘಟ್ಟ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ತುಂಬ ಚಿಕ್ಕದಾಗಿದೆ. ಕ್ಷೇತ್ರದ ಚುನಾಯಿತ ಜನಪ್ರತಿನಿಧಿಗಳು ಕೈ ಜೋಡಿಸಿ ಪರ್ಯಾಯ ಜಾಗ ಒದಗಿಸಿದರೆ ಹೊಸ ಬಸ್‌ ನಿಲ್ದಾಣ ಮಾಡಬಹುದು. ಸದ್ಯ ಚಿಕ್ಕ ಬಸ್‌ ನಿಲ್ದಾಣ ಆಗಿರುವುದರಿಂದ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಸಮಸ್ಯೆ ಆಗಿದೆ. ಶುದ್ಧ ನೀರಿನ ಘಟಕ ಹೊಸದಾಗಿ ಖರೀದಿ ಮಾಡಿದ್ದು ಅಳವಡಿಸಬೇಕಿದೆ. ನಗರಸಭೆಯಿಂದ ನಮಗೆ ಸೂಕ್ತ ಸಹಕಾರ ಸಿಗುತ್ತಿಲ್ಲ. ಕುಡಿಯುವ ನೀರನ್ನು ನಾವು ನಿತ್ಯ ಖರೀದಿಸಬೇಕಿದೆ. ನಿಲ್ದಾಣದ ಸುತ್ತಲೂ ಚರಂಡಿಗಳು ಮಳೆಗಾಲದಲ್ಲಿ ಬ್ಲಾಕ್‌ ಆಗುವುದರಿಂದ ಸಮಸ್ಯೆ ಇದ್ದು, ಸ್ವತ್ಛತೆಗೆ ಹಲವು ಬಾರಿ ನಗರಸಭೆಗೆ ಪತ್ರ ಬರೆದಿದ್ದೇವೆ ಎನ್ನುತ್ತಾರೆ ಶಿಡ್ಲಘಟ್ಟ ಕೆಎಸ್‌ಆರ್‌ಟಿಸಿ ಘಟಕದ ವ್ಯವಸ್ಥಾಪಕ ಜೆ.ಗಂಗಾಧರ್‌.

– ಎನ್‌.ರಾಮದಾಸ್‌

 

Advertisement

Udayavani is now on Telegram. Click here to join our channel and stay updated with the latest news.

Next