ವಿಜಯಪುರ: ಜಿಲ್ಲೆಯ ಪ್ರಮುಖ ಬೆಳೆ ತೊಗರಿ ಈ ಬಾರಿ ಕೂಡ ಸಾಕಷ್ಟು ಹಾನಿ ಅನುಭವಿಸಿದೆ. ಕಳೆದ ಬಾರಿ ಬರಗಾಲದಿಂದ ರೈತರು ನಷ್ಟಕ್ಕೆ ಸಿಲುಕಿದ್ದರು. ಈ ಬಾರಿ ಒಳ್ಳೆಯ ಮಳೆಯಿಂದ ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದರು. ಆದರೆ, ಸರ್ಕಾರದಿಂದಲೇ ವಿತರಣೆ ಮಾಡಿದ ಬಿತ್ತನೆ ಬೀಜಗಳು ಕಾಯಿ ಕಟ್ಟುವಲ್ಲಿ ವಿಫಲವಾಗಿದೆ. ಇದರಿಂದ ಇಳುವರಿ ಕುಸಿತವಾಗಿ ಮತ್ತೆ ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ಜಿಲ್ಲಾದ್ಯಂತ 5,34,565 ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬಿತ್ತನೆ ಮಾಡಲಾಗಿದೆ. ಕೃಷಿ ಇಲಾಖೆಯು ವಿವಿಧ ಏಜೆನ್ಸಿಗಳ ಮೂಲಕ ಸಾವಿರಾರು ಕ್ವಿಂಟಾಲ್ ಟಿಎಸ್-3ಆರ್, ಜಿಆರ್ಜಿ-811, ಜಿಆರ್ಜಿ-152 ಬಿತ್ತನೆ ಬೀಜಗಳನ್ನು ವಿತರಿಸಲಾಗಿದೆ. ಇದೇ ಬೀಜಗಳನ್ನು ಬಿತ್ತಿದ ಹೊಲಗಳಲ್ಲಿ ಆರೇಳು ಅಡಿ ಎತ್ತರಕ್ಕೆ ತೊಗರಿ ಗಿಡ ಬೆಳೆದು ನಿಂತಿದೆ. ಈ ತಳಿಗಳು ಪ್ರತಿ ಎಕರೆಗೆ ಕನಿಷ್ಠ 5ರಿಂದ 8 ಕ್ವಿಂಟಲ್ ತೊಗರಿ ಇಳುವರಿ ಕೊಡಬೇಕಿತ್ತು. ಆದರೆ, ಕಾಯಿಯೂ ಕಟ್ಟದೆ ಫಸಲೇ ಬಂದಿಲ್ಲ. ಹೀಗಾಗಿಯೇ ಕೃಷಿ ಇಲಾಖೆಯ ಮನವಿ ಮೇರೆಗೆ ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳ ತಂಡವು ಕ್ಷೇತ್ರ ಅಧ್ಯಯನ ಮಾಡಿದೆ. ಜಿಲ್ಲೆಯ ಬಸವನಬಾಗೇವಾಡಿ, ಮುದ್ದೇಬಿಹಾಳ, ಸಿಂದಗಿ, ಆಲಮೇಲ ಮತ್ತು ಇಂಡಿ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ಕೊಟ್ಟು ತಾಂತ್ರಿಕ ವರದಿಯನ್ನು ಸಿದ್ಧಪಡಿಸಲಾಗಿದೆ.
ಬಿತ್ತಿದ ತೊಗರಿ ಬೀಜಗಳು ಮೊಳಕೆ ಒಡೆದಿವೆ. ಸಾಲಿನಿಂದ ಸಾಲಿನಿಂದ ಸರಿಯಾದ ಅಂತರದಲ್ಲಿ ಬಿತ್ತನೆಯನ್ನೂ ಮಾಡಲಾಗಿದೆ. ಆದರೆ, ಗಿಡದಿಂದ ಗಿಡಕ್ಕೆ ದಟ್ಟವಾಗಿ ಬಿತ್ತಲಾಗಿದೆ. ಇದರಿಂದ ಗಿಡಗಳು ಯಾವುದೇ ಕವಲುಗಳಿಲ್ಲದೆ ಎತ್ತರಕ್ಕೆ ಬೆಳೆದು ಎಲೆಗಳು ಸಂಪೂರ್ಣವಾಗಿ ಉದುರಿ, ಹೂ ಮತ್ತು ಕಾಯಿ ಕಟ್ಟಿಲ್ಲ. ಜತೆಗೆ ಅಕ್ಟೋಬರ್ ಮತ್ತು ನವೆಂಬರ್ನಲ್ಲಿ ಹವಾಮಾನ ವೈಪರೀತ್ಯದಿಂದ ಮಂಜಿನ ಬಾಧೆಗೆ ತೊಗರಿ ಬೆಳೆ ತುತ್ತಾಗಿದೆ. ಹೂವುಗಳ ಉದುರಿ ಕಡಿಮೆ ಪ್ರಮಾಣದಲ್ಲಿ ಕಾಯಿಗಳು ಕಟ್ಟಿವೆ. ಎಲೆ ಚುಕ್ಕೆ, ಗೊಡ್ಡು ರೋಗ ಭಾದೆಯೂ ಕಂಡುಬದಿದೆ. ಇದು ಇಳುವರಿ ಮೇಲೆ ಪರಿಣಾಮ ಬೀರಿದೆ ಎಂದು ವಿಜ್ಞಾನಿಗಳು ವರದಿ ನೀಡಿದ್ದಾರೆ. ಇದರ ಆಧಾರದ ಮೇಲೆ ತೊಗರಿ ಇಳುವರಿ ಕುಂಠಿತವಾಗಿದೆ ಎಂದು ಸರ್ಕಾರಕ್ಕೆ ಕೃಷಿ ಇಲಾಖೆಯು ವರದಿಯನ್ನೂ ಸಲ್ಲಿಸಿದೆ.
ಆದರೆ, ಈ ವರದಿ ಬಗ್ಗೆಯೂ ರೈತರು ಹಾಗೂ ಮುಖಂಡರು ಅನುಮಾನ ವ್ಯಕ್ತಪಡಿಸಿದ್ದಾರೆ. ರೈತರು ತಾವೇ ಸಂಸ್ಕರಿಸಿದ ಬಿತ್ತನೆ ಮಾಡಿದ ಬೀಜ ಬೆಳೆ ತುಂಬಾ ಚೆನ್ನಾಗಿ ಬಂದಿದೆ. ಸರ್ಕಾರದಿಂದ ಏಜೆನ್ಸಿಗಳ ಮೂಲಕ ಬಿತ್ತನೆ ಮಾಡಿದ ಬೀಜವು ಕೇವಲ ಶೇ.10ರಿಂದ 20ರಷ್ಟು ಮಾತ್ರ ಕಾಯಿ ಕಟ್ಟಿದೆ. ಆದ್ದರಿಂದ ಬೀಜದ ಬಗ್ಗೆ ತನಿಖೆಯಾಗಬೇಕು. ಮೇಲಾಗಿ ರೈತರು ಕಡಿಮೆ ಅಂತರದಲ್ಲಿ ಬಿತ್ತನೆ ಮಾಡಿದ್ದರಿಂದ ಬೆಳೆಯು ಕವಲು ಒಡೆದಿಲ್ಲ ಎಂಬ ಸಬೂಬನ್ನು ವಿಜ್ಞಾನಿಗಳ ಮೂಲಕ ಹೇಳಿಸಲಾಗಿದೆ. ತೊಗರಿ ಹೂ ಗಿಡದ ಕೆಳಗೆ ಬಿಡುತ್ತದೋ, ಮೇಲ್ಭಾಗದಲ್ಲಿ ಬಿಡುತ್ತದೋ?, ರೈತರಿಗೆ ಹೇಗೆ ಬಿತ್ತನೆ ಮಾಡಬೇಕೆಂದು ಗೊತ್ತಿಲ್ಲವೇ ಎಂದು ಬಿಜೆಪಿ ರೈತ ಮೋರ್ಚಾದ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ್ ನಡಹಳ್ಳಿ ಖಾರವಾಗಿ ಪ್ರಶ್ನಿಸುತ್ತಾರೆ.
ಜಿಲ್ಲೆಯಲ್ಲಿ ಅನುಮೋದಿತ ಸುಮಾರು 10 ಏಜೆನ್ಸಿಗಳ ಮೂಲಕ ತೊಗರಿ ಬೀಜ ಪೂರೈಕೆಯಾಗಿದೆ. ಹವಾಮಾನ ವೈಪರೀತ್ಯದಿಂದ ತೊಗರಿ ಹೂವು ಉದುರುವಿಕೆಯಿಂದ ಇಳುವರಿ ಮೇಲೆ ಪರಿಣಾಮ ಬೀರಿದೆ. ಈ ಬಗ್ಗೆ ಅಧ್ಯಯನ ನಡೆಸಿ, ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಇದೀಗ ಕಟಾವು ಆರಂಭವಾಗಿದ್ದು, ಜನವರಿಯವರೆಗೂ ರಾಶಿ ಕಾರ್ಯ ನಡೆಯುತ್ತಿದೆ. ಬೆಳೆ ಕಟಾವು ಪ್ರಯೋಗದ ನಂತರ ಎಷ್ಟು ಪ್ರಮಾಣದ ಇಳುವರಿ ಕುಂಠಿತವಾಗಿದೆ ಎಂಬ ನಿಖರವಾದ ಮಾಹಿತಿ ಸಿಗಲಿದೆ- ರೂಪಾ ಎಲ್., ಜಂಟಿ ನಿರ್ದೇಶಕಿ, ಕೃಷಿ ಇಲಾಖೆ, ವಿಜಯಪುರ