ಬೆಂಗಳೂರು: ಚಿಲ್ಲರೆ ಕೊಡುವ ನೆಪದಲ್ಲಿ ಬಿಎಂಟಿಸಿ ಬಸ್ ಕಂಡಕ್ಟರ್ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ಸಾಮಾಜಿಕ ಜಾಲತಾಣ “ಫೇಸ್‌ಬುಕ್’ನ ತಮ್ಮ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಘಟನೆ ಕುರಿತು ಮಹಿಳೆ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವ ಹಿನ್ನೆಲೆ ಸುಬ್ರಹ್ಮಣ್ಯಪುರ ಠಾಣೆ ಪೊಲೀಸರು ಬಸ್ ಕಂಡಕ್ಟರ್ ಮತ್ತು ಚಾಲಕನನ್ನು ಠಾಣೆಗೆ ಕರೆದು ವಿಚಾರಣೆ ನಡೆಸಿದ್ದು, ಆರೋಪವನ್ನು ನಿರಾಕರಿಸಿದ್ದಾರೆ.
ಆದರೆ, ಈ ಬಗ್ಗೆ ಮಹಿಳೆ ಠಾಣೆಗೆ ಬಂದು ಯಾವುದೇ ದೂರು ನೀಡಿಲ್ಲ. ಮಹಿಳೆಯನ್ನು ಫೋನ್ ಮೂಲಕ ಸಂಪರ್ಕಿಸಲಾಗಿದ್ದು, ಠಾಣೆಗೆ ಬಂದು ದೂರು ನೀಡುವಂತೆ ಕೇಳಲಾಗಿದೆ. ಮಹಿಳೆ ಇದಕ್ಕೆ ಪ್ರತಿಕ್ರಿಯಿಸಿಲ್ಲ. ಮಹಿಳೆಯನ್ನು ಸಂಪರ್ಕಿಸಿದ ಬಳಿಕ ಅವರು ಪ್ರತಿಕ್ರಿಯೆಗೆ ಸಿಗುತ್ತಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೆಟ್ಟದಾಗಿ ಮಾತು: ಖಾಸಗಿ ಕಂಪನಿ ಉದ್ಯೋಗಿಯಾಗಿರುವ ನಾನು ಜನವರಿ 10ರಂದು ಕೆಲಸ ಮುಗಿಸಿ ರಾತ್ರಿ 8.10 ಸುಮಾರಿಗೆ ರಾಗಿಗುಡ್ಡ ಬಸ್ ನಿಲ್ದಾಣದಿಂದ ಉತ್ತರಹಳ್ಳಿಯ ಮನೆಗೆ ತೆರಳಲು ಬಿಎಂಟಿಸಿ (ಮಾರ್ಗ ಸಂಖ್ಯೆ 500 ಸಿ) ಬಸ್ ಹತ್ತಿದೆ. ನನ್ನ ಪಕ್ಕದ ಆಸನದಲ್ಲಿ ಕುಳಿತಿದ್ದ ಯುವತಿ ಬಳಿ ಕಂಡಕ್ಟರ್ ಅಸಭ್ಯವಾಗಿ ವರ್ತಿಸಿದ್ದ.
ಟಿಕೆಟ್ ನೀಡಿ ಚಿಲ್ಲರೆ ಹಣ ವಾಪಸ್ ಹಿಂದಿರುಗಿಸುವಾಗ ಆಕೆಯ ದೇಹವನ್ನು ಸ್ಪರ್ಶಿಸಲು ಯತ್ನಿಸಿದ. ಚಾಲಕ ಯುವತಿ ಬಳಿ ಕೆಟ್ಟದಾಗಿ ಮಾತನಾಡಿದ. ಇದಕ್ಕೆ ಪ್ರತಿಕ್ರಿಯಿಸದ ಯುವತಿ ಕದಿರೇನಹಳ್ಳಿ ಪೆಟ್ರೋಲ್ ಬಳಿ ಇಳಿದುಕೊಂಡರು. ಘಟನೆಯಿಂದ ಆತಂಕಗೊಂಡ ನಾನು ಹಿಂದೆ ತಿರುಗಿ ನೋಡಿದಾಗ ಮಹಿಳೆಯರು ಸೇರಿದಂತೆ ಕೆಲ ಪ್ರಯಾಣಿಕರು ಹಿಂದಿನ ಆಸನದಲ್ಲಿ ಕುಳಿತಿದ್ದರು. ಸ್ಪಲ್ಪ ಸಮಯದ ಬಳಿಕ ಎಲ್ಲರೂ ಬಸ್‌ನಿಂದ ಇಳಿದ್ದಿದ್ದರು.
ಆತಂಕಗೊಂಡು ಚಿಲ್ಲರೆ ಕೊಡುವಂತೆ ಕಂಡಕ್ಟರ್‌ನ ಕೇಳಿದೆ. ಲವ್ ಲೆಟರ್ ನೀಡಿದರೆ ಚಿಲ್ಲರೆ ಕೊಡುವುದಾಗಿ ಹೇಳಿದ. ತಮಾಷೆ ಮಾಡಬೇಡಿ ಚಿಲ್ಲರೆ ಕೊಡಿ ಎಂದು ಆತಂಕದಿಂದ ಕೇಳಿದೆ. ಹುಡುಗಿಯರೆಲ್ಲ ಏಕೆ ಕೋಪ ಮಾಡಿಕೊಳ್ಳುತ್ತಾರೆ ಎಂದು ವಿಚಿತ್ರವಾಗಿ ಕೇಳಿದ. ಚಿಲ್ಲರೆ ನೀನು ಇಟ್ಕೊ ಎಂದು ಜೋರಾಗಿ ಹೇಳಿದೆ. ಅದಕ್ಕೆ ಚಾಲಕ “ಮೇಡಂ ನಿಮ್ಮ ಮನೆ ಗೇಟ್ ಬಳಿಯೇ ಬಸ್ ನಿಲ್ಲಿಸುತ್ತೇನೆ’ ಪ್ರತಿಕ್ರಿಯಿಸಿದ.
ಗಾಬರಿಯಿಂದ ಬಸ್ ನಿಲ್ಲಿಸುವಂತೆ ಕಿರುಚಾಡಿದೆ. ಹಿಂದೆ ಆಸನದಲ್ಲಿ ಕುಳಿತಿದ್ದ ಪ್ರಯಾಣಿಕರು ನನ್ನ ಬಳಿ ಬಂದರು. ಈ ವೇಳೆ ಮಾರ್ಗ ಮಧ್ಯೆ ಆ್ಯಂಬುಲೆನ್ಸ್ ಬಂದಿದ್ದರಿಂದ ಬಸ್ ನಿಧಾನವಾಗಿ ಚಲಿಸುತ್ತಿತ್ತು. ಚಲಿಸುತ್ತಿದ್ದ ಬಸ್‌ನಿಂದ ಇಳಿದುಕೊಂಡೆ. ನಂತರ ಅಲ್ಲಿಯೇ ಇದ್ದ ಸಂಚಾರ ಪೊಲೀಸರಿಗೆ ತಿಳಿಸಿದೆ. ಕೂಡಲೇ ಸಂಚಾರ ಪೊಲೀಸರು ಬಸ್ ನಂಬರ್ ಬರೆದುಕೊಂಡರು. ದೆಹಲಿಯ ನಿರ್ಭಯ ಪ್ರಕರಣದ ನೆನೆದು ಭಯಗೊಂಡೆ ಎಂದು ಮಹಿಳೆ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.