ಬೆಂಗಳೂರು: “ನಮ್ಮ 100’ಗೆ ಕರೆ ಮಾಡಿ ಕಬ್ಬನ್ ಪಾರ್ಕ್‌ನಲ್ಲಿ ಬಾಂಬ್ ಇಟ್ಟಿರುವುದಾಗಿ ಹೇಳಿ ಕೆಲ ಕಾಲ ಆತಂಕ ಸೃಷ್ಟಿಸಿದ್ದ ಮೂವರು ಸಹೋದರರನ್ನು ಕಬ್ಬನ್‌ಪಾರ್ಕ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ವಿಚಿತ್ರವೆಂದರೆ ಆರೋಪಿಗಳು ಕದ್ದ ಮೊಬೈಲ್ ಮತ್ತು ಸಿಮ್‌ಕಾರ್ಡ್ ಮೂಲಕ ನಮ್ಮ 100ಗೆ ಕರೆ ಮಾಡಿದ್ದರು! ರಾಮನಗರ ಮೂಲದ ಬಾಬ (24), ಜಾಕೀರ್ (22) ಹಾಗೂ ಖಾಜಾ (20) ಬಂಧಿತರು. ಮದ್ಯ ಕುಡಿದ ಅಮಲಿನಲ್ಲಿ ಕರೆ ಮಾಡಿದ್ದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ರೇಷ್ಮೆ ನೂಲು ತೆಗೆಯುವ ಘಟಕದದಲ್ಲಿ ಕಾರ್ಮಿಕರಾಗಿದ್ದು, ಜು.6 ರಂದು ಚಿಂತಾಮಣಿ ಬಳಿಯ ಮುರುಗ ಮೊಹಲ್ಲಾ ದರ್ಗಾಕ್ಕೆ ಭೇಟಿ ನೀಡಿದ್ದರು. ಬಳಿಕ ಹೊಸಕೋಟೆ ತಾಲೂಕಿನ ಸೂಲಿಬೆಲೆಯ ಸಂಬಂಧಿಕರೊಬ್ಬರ ಮನೆಯಲ್ಲಿ ಉಳಿದುಕೊಂಡಿದ್ದರು. ಜು.7 ರಂದು ಅರಿಶಿನ ಕುಂಟೆಯಲ್ಲಿರುವ ಅಂಗಡಿಯಲ್ಲಿ 2 ಮೊಬೈಲ್ ಮತ್ತು ಸಿಮ್‌ಕಾರ್ಡ್‌ಗಳನ್ನು ಕಳವು ಮಾಡಿದ್ದರು. ನಂತರ ಅದೇ ದಿನ ಹೊಸಕೋಟೆ ನಗರದ ಕುರುಬರ ಪೇಟೆಯ ಅಂಗಡಿಯಲ್ಲಿ ಮತ್ತೂಂದು ಮೊಬೈಲ್ ಕದ್ದು ಪರಾರಿಯಾಗಿದ್ದರು.
ಬಳಿಕ ನಗರದ ಬಾರ್ ಆ್ಯಂಡ್ ರೆಸ್ಟೋರೆಂಟ್‌ವೊಂದರಲ್ಲಿ ಮೂವರೂ ಕಂಠಪೂರ್ತಿ ಮದ್ಯ ಸೇವಿಸಿದ್ದು, ಈ ಅಮಲಿನಲ್ಲಿ ಆರೋಪಿ ಜಾಕೀರ್ ತಮಾಷೆ ಮಾಡಲು ಕರೆ ಮಾಡಿದ್ದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಕಳವು ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ. ಆರೋಪಿಗಳ ವಿರುದ್ಧ ರಾಮನಗರ ಹಾಗೂ ಇನ್ನಿತರ ಠಾಣೆಗಳಲ್ಲಿ ಪ್ರಕರಣಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಜು. 7ರಂದು ರಾತ್ರಿ 10 ಗಂಟೆ ಸುಮಾರಿಗೆ ಕಿಡಿಗೇಡಿಗಳು “ನಮ್ಮ 100′ ಕ್ಕೆ ಕರೆ ಮಾಡಿ ಕಬ್ಬನ್‌ಪಾರ್ಕ್‌ನಲ್ಲಿ ಬಾಂಬ್ ಇಟ್ಟಿದ್ದು, ಕೆಲವೇ ಕ್ಷಣಗಳಲ್ಲಿ ಸ್ಫೋಟಗೊಳ್ಳಲಿದೆ ಎಂದು ಕರೆ ಸ್ಥಗಿತಗೊಳಿಸಿದ್ದರು. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಶ್ವಾನದಳ ಸಿಬ್ಬಂದಿ ಜತೆ ಇಡೀ ಕಬ್ಬನ್‌ಪಾರ್ಕ್ ತಪಾಸಣೆ ನಡೆಸಿದರೂ ಯಾವುದೇ ಸ್ಫೋಟಕ ವಸ್ತು ಪತ್ತೆಯಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಕಬ್ಬನ್‌ಪಾರ್ಕ್ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.