Advertisement

ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ದಲ್ಲಾಳಿಗಳ ಆಟ-ಜನರಿಗೆ ಪ್ರಾಣಸಂಕಟ

05:54 PM Apr 13, 2018 | |

ಮಾನ್ವಿ: ಪಟ್ಟಣದ ಉಪ ನೋಂದಣಾಧಿಕಾರಿ ಕಚೇರಿ ಅವ್ಯವಸ್ಥೆ ಆಗರವಾಗಿದ್ದು, ದಲ್ಲಾಳಿಗಳು, ಖಾಸಗಿ ವ್ಯಕ್ತಿಗಳು ಆಡಿದ್ದೇ ಆಟವಾಗಿದ್ದು, ಇದರಿಂದ ವಿವಿಧ ಕೆಲಸ-ಕಾರ್ಯಗಳಿಗೆ ಆಗಮಿಸುವ ಜನರ ಕೆಲಸಗಳು ಸಕಾಲಕ್ಕೆ ಆಗದೇ ಪರದಾಡುವಂತಾಗಿದೆ.

Advertisement

ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಯಾವುದೇ ವ್ಯವಸ್ಥೆ ಸರಿಯಾಗಿಲ್ಲ. ಕಚೇರಿಯಲ್ಲಿ ಸಾರ್ವಜನಿಕರ ಮಾಹಿತಿಗೆ ಯಾವುದೇ ಫಲಕಗಳನ್ನು ಹಾಕಿಲ್ಲ. ಇರುವ ಫಲಕವನ್ನೂ ಕೂಡ ಕೋಣೆಯೊಂದರ ಮೂಲೆಯಲ್ಲಿಡಲಾಗಿದೆ. ದೊರೆಯುವ ಸೇವೆಗಳಿಗೆ ಅನುಗುಣವಾಗಿ ಪ್ರತ್ಯೇಕ ಕೌಂಟರ್‌ಗಳನ್ನು ತೆರೆದಿಲ್ಲ. ಸಾರ್ವಜನಿಕರು ನೋಂದಣಿಗೆ ನೀಡಿದ ದಾಖಲೆಪತ್ರಗಳನ್ನು ವ್ಯವಸ್ಥಿತವಾಗಿ ಸಂಗ್ರಹಿಸಿಡದೇ ಕೋಣೆ ಯೊಂದರಲ್ಲಿ ಎಲ್ಲೆಂದರಲ್ಲಿಡಲಾಗಿದೆ. ದಾಖಲೆಗಳ ರೂಮ್‌ನಲ್ಲಿ ಸಿಬ್ಬಂದಿ ಹೊರತುಪಡಿಸಿ ಖಾಸಗಿ ವ್ಯಕ್ತಿಗಳಿಗೆ ಪ್ರವೇಶ ನಿಷಿದ್ಧವಿದ್ದರೂ ದಲ್ಲಾಳಿಗಳು, ಪ್ರಭಾವಿ ಖಾಸಗಿ ವ್ಯಕ್ತಿಗಳು ತೆರಳುತ್ತಾರೆ. ಅವ್ಯವಸ್ಥೆಯ ಬಗ್ಗೆ ಮಾಹಿತಿ ಇದ್ದರೂ ಮೇಲಾಧಿಕಾರಿಗಳು ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ದಲ್ಲಾಳಿಗಳ ಹಾವಳಿ: ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ದಲ್ಲಾಳಿಗಳ ಹಾವಳಿ ಮಿತಿ ಮೀರಿದೆ. ನೋಂದಣಿ ಕಾರ್ಯಕ್ಕೆ ನಿಗದಿತ ಶುಲ್ಕಕ್ಕಿಂತ ಹೆಚ್ಚು ವಸೂಲಿ ಮಾಡಲಾಗುತ್ತಿದೆ. 50 ರೂ.ನಿಂದ 250 ರೂ. ಶುಲ್ಕವಿರುವ ಸೇವೆಗಳಿಗೆ 500ರಿಂದ 2000 ರೂ.ವರೆಗೆ ಖರ್ಚು ಮಾಡಬೇಕಾಗುತ್ತಿದೆ. ನೇರವಾಗಿ ಸಾರ್ವಜನಿಕರು ಹೋದರೆ ಕೆಲಸ ಬೇಗ ಆಗುವುದಿಲ್ಲ. ಬಡವರು, ಅನಕ್ಷರಸ್ಥರು ಹಾಗು ರೈತರು ಹೋದರೆ ಕಚೇರಿಯಲ್ಲಿ ಎಲ್ಲೆಲ್ಲಿ ಏನು ನಡೆಯುತ್ತದೆ ಎನ್ನುವುದೇ ಅರ್ಥವಾಗುವುದಿಲ್ಲ. ಮಧ್ಯವರ್ತಿಗಳ ಮೂಲಕ ತೆರಳಿದರೆ ಒಂದೇ ದಿನದಲ್ಲಿ ಕೆಲಸವಾಗುತ್ತದೆ. ಇದಕ್ಕಾಗಿ ದಲ್ಲಾಳಿಗಳಿಗೆ ಸಾವಿರಾರು ರೂ. ನೀಡಬೇಕು ಎಂಬ ಆರೋಪ ಕೇಳಿಬರುತ್ತಿವೆ. 

ಸೌಲಭ್ಯಗಳಿಲ್ಲ: ಕಚೇರಿಗೆ ಆಗಮಿಸುವ ಸಾರ್ವಜನಿಕರ ಬಳಕೆಗೆ ಶೌಚಾಲಯ ವ್ಯವಸ್ಥೆ ಇಲ್ಲ. ಮಹಿಳೆಯರು, ಪುರುಷರು ಮೂತ್ರ ವಿಸರ್ಜನೆಗೆ ಸುತ್ತಮುತ್ತಲಿನ ಜಾಲಿಗಿಡಗಳ ಮರೆಯನ್ನೆ ಅವಲಂಬಿಸಬೇಕಾಗಿದೆ. ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿಲ್ಲ. ಸರಿಯಾದ ಪಾರ್ಕಿಂಗ್‌ ವ್ಯವಸ್ಥೆ ಮಾಡಿಲ್ಲ. 

ಸಿಸಿ ಕ್ಯಾಮೆರಾಗಳಿಲ್ಲ: ಕಚೇರಿಯಲ್ಲಿ ಸಿಸಿ ಕ್ಯಾಮೆರಾಗಳನ್ನು ಅವಳಡಿಸಿಲ್ಲ. ಸಿಸಿ ಕ್ಯಾಮೆರಾಗಳನ್ನು ಅಳವಡಿಸಲು ಕಚೇರಿ ಅಧಿಕಾರಿಗಳೇ ಹಿಂದೇಟು ಹಾಕುತ್ತಿದ್ದಾರೆ. ಕಚೇರಿಯಲ್ಲಿ ಅನಧಿಕೃತ ವ್ಯಕ್ತಿಗಳು ಕಚೇರಿ ಸಿಬ್ಬಂದಿಯಂತೆ ಓಡಾಡಿಕೊಂಡು ರೈತರಿಗೆ, ಅನಕ್ಷರಸ್ಥರಿಗೆ ಮೋಸ ಮಾಡುತ್ತಿದ್ದಾರೆ. ಸಿಸಿ ಕ್ಯಾಮೆರಾಗಳನ್ನು ಅಳವಡಿಸಿದರೆ ಖಾಸಗಿ ವ್ಯಕ್ತಿಗಳ ಬಣ್ಣ ಬಯಲಾಗುತ್ತದೆ. ದಲ್ಲಾಳಿಗಳ ಮೇಲೆ ನಿಗಾ ವಹಿಸಬೇಕು, 2008ರಿಂದ ಮಾನ್ವಿಯಲ್ಲಿರುವ ಉಪ ನೋಂದಣಾಧಿಕಾರಿ ಶಕೀಲ್‌ ಅಹ್ಮದ್‌ ಅವರನ್ನು ವರ್ಗಾವಣೆ ಮಾಡ ಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. 

Advertisement

ಒಟ್ಟಾರೆಯಾಗಿ ಉಪ ನೋಂದಣಾಧಿಕಾರಿ ಕಚೇರಿ ಅವ್ಯವಸ್ಥೆ ಮಿತಿ ಮೀರಿದೆ. ದಲ್ಲಾಳಿಗಳ ಹಾಗೂ ಅನಧಿಕೃತ ವ್ಯಕ್ತಿಗಳ ದರಬಾರ್‌ ಹೆಚ್ಚಾಗಿದೆ. ಸರಿಯಾದ ಸೌಲಭ್ಯಗಳಿಲ್ಲದೆ ಸಾರ್ವಜನಿಕರು ಪರದಾಡುವಂತಾಗಿದೆ. ಇನ್ನಾದರೂ ಸಂಬಂಧಿಸಿದ ಮೇಲಧಿಕಾರಿಗಳು ಇತ್ತ ಗಮನ ಹರಿಸಿ ಅವ್ಯವಸ್ಥೆ ಮತ್ತು ಅವ್ಯವಹಾರಕ್ಕೆ ಕಡಿವಾಣ ಹಾಕಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಪಟ್ಟಣದ ಉಪ ನೋಂದಣಾಧಿಕಾರಿ ಶಕೀಲ್‌ ಅಹಮ್ಮದ್‌ ಆಗಮಿಸಿ ಈಗಾಗಲೇ 9 ವರ್ಷ ಕಳೆದಿದ್ದು, ವರ್ಗಾವಣೆ ನಿಯಮ ಉಲ್ಲಂಘನೆ ಮಾಡಲಾಗಿದೆ. ಚುನಾವಣೆ ನಿಮಿತ್ತ ತಾಲೂಕಿನ ವಿವಿಧ ಇಲಾಖೆ ಅಧಿಕಾರಿಗಳನ್ನು ವರ್ಗಾವಣೆಡಿದ್ದರೂ, ಇವರನ್ನು ಮಾಡಿಲ್ಲ. ಅಲ್ಲದೆ ಉಪ ನೋಂದಣಾಧಿಕಾರಿ ಕಚೇರಿ ಅವ್ಯವಸ್ಥೆಯನ್ನು ಮೇಲಾಧಿಕಾರಿಗಳು ಸರಿಪಡಿಸಬೇಕು. ದಲ್ಲಾಳಿಗಳಿಗೆ ಕಡಿವಾಣ ಹಾಕಬೇಕು.
 ಬಸವರಾಜ ನಕ್ಕುಂದಿ. ದಲಿತ ಮುಖಂಡರು ಮಾನ್ವಿ

ಮಾನ್ವಿ ಉಪ ನೋಂದಣಿ ಅಧಿಕಾರಿ ಕಚೇರಿ ಅವ್ಯವಸ್ಥೆ ಕುರಿತು ಆರೋಪಗಳು ಕೇಳಿಬರುತ್ತಿರುವುದು ನಿಜ. ಯಾರಾದರೂ ದಾಖಲೆಗಳೊಂದಿಗೆ ಸೂಕ್ತ ದೂರು ನೀಡಿದಲ್ಲಿ ಕ್ರಮ ಜರುಗಿಸಲು ಮೇಲಾಧಿಕಾರಿಗಳಿಗೆ ಶಿಫಾರಸು ಮಾಡುತ್ತೇನೆ.
 ಎಂ.ಜಿಂಗದ್‌, ಜಿಲ್ಲಾ ನೋಂದಣಿ ಅಧಿಕಾರಿ ರಾಯಚೂರು.

ದಲ್ಲಾಳಿಗಳು ಅಧಿಕ ಹಣ ಪಡೆಯುತ್ತಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ದೂರು ಬಂದಲ್ಲಿ ಖಂಡಿತವಾಗಿ ಕ್ರಮ ಕೈಗೊಳ್ಳುತ್ತೇನೆ. ವರ್ಗಾವಣೆಯಾದರೆ ಯಾವುದೇ ತಾಲೂಕಿಗೆ ಹೋಗಲು ಸಿದ್ದ.
 ಶಕೀಲ್‌ ಅಹಮ್ಮದ್‌, ಉಪನೋಂದಣಾಧಿಕಾರಿ ಮಾನ್ವಿ 

Advertisement

Udayavani is now on Telegram. Click here to join our channel and stay updated with the latest news.

Next