ದಾವಣಗೆರೆ: ನಾನು ಒಬ್ಬ ತಾಲೂಕು ಅಧಿಕಾರಿ ನನ್ನ ಕೈ ಕೆಳಗೆ ಕೆಲಸ ಮಾಡುವರ ಮುಂದೆ ಕೈ ಒಡ್ಡಲು ಆಗುತ್ತಾ… ಒಬ್ಬರೇ ಒಬ್ಬ ರೈತರಿಂದ ಒಂದು ರೂಪಾಯಿ ಲಂಚ ತೆಗೆದುಕೊಂಡಿದ್ದೇನೆ ಎಂಬುದು ರುಜುವಾತಾದಲ್ಲಿ ನಾನು ಈಗಲೇ ಕೆಲಸಕ್ಕೆ ರಾಜೀನಾಮೆ ಕೊಡುತ್ತೇನೆ!.
ಈ ರಾಜೀನಾಮೆ ಸವಾಲು ಹಾಕಿದ್ದು ಯಾರೋ ಜನಪ್ರತಿನಿಧಿ ಅಲ್ಲ. ಜಗಳೂರು ತಾಲೂಕಿನ ಆರ್‌ಎಫ್‌ಒ ರಾಮಮೂರ್ತಿ. ಮಂಗಳವಾರ ಜಿಪಂ ಸಭಾಂಗಣದಲ್ಲಿ ನಡೆದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಕೆ. ಮಂಜುನಾಥ್,
ಆರ್ ಎಫ್‌ಒ ರಾಮಮೂರ್ತಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು ಮಾತ್ರವಲ್ಲ ಕೆಲವರು ನೀಡಿರುವ ದೂರುಗಳ ಪುಸ್ತಕವನ್ನು ಅಧ್ಯಕ್ಷೆ ಉಮಾ ರಮೇಶ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಸ್. ಅಶ್ವತಿಗೆ ಸಲ್ಲಿಸಿ, ಮಂಗಳವಾರದಿಂದಲೇ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಎಸ್.ಕೆ. ಮಂಜುನಾಥ್ ಆರೋಪ ಮತ್ತು ಸಲ್ಲಿಸಿದ ದೂರಿನ ಪುಸ್ತಕದ ಬಗ್ಗೆ ಪ್ರತಿಕ್ರಿಯಿಸಿದ ಆರ್‌ಎಫ್‌ಒ ರಾಮಮೂರ್ತಿ, ತಾವು ಎಲ್ಲಿಯೂ ತಪ್ಪು ಮಾಡಿಲ್ಲ ಎಂಬುದನ್ನು ಬಲವಾಗಿ ಸಮರ್ಥಿಸಿಕೊಂಡರು. ಒಂದು ಹಂತದಲ್ಲಿ ಸರ್ಕಾರ ನೀಡುವಂತಹ ಅನುದಾನದಿಂದ ಮನೆ ಕಟ್ಟಿಕೊಳ್ಳಲಿಕ್ಕೆ ಸಾಧ್ಯವೇ ಇಲ್ಲ ಎಂದು ಪ್ರತಿಪಾದಿಸಿದರು.
ಕೃಷಿ ಚಟುವಟಿಕೆಗೆ ಮರ ಕಡಿದುಕೊಂಡು ಹೋಗುವ ರೈತರ ವಿರುದ್ಧ ಕ್ರಮ ತೆಗೆದುಕೊಳ್ಳಲಿಕ್ಕಾಗುತ್ತದೆಯೇ, ಕುರಿ ಮೇಯಿಸಲು ಗಿಡಗಳನ್ನೇ ಕಡಿದವರನ್ನು ಸುಮನೆ ಬಿಡಲಿಕ್ಕಾಗುತ್ತದೆಯೇ ಅವರು ಬೇಸಾಯ ಮಾಡುವುದು ಬೇಡವೇ ಎಂದೆಲ್ಲಾ ಪ್ರಶ್ನಿಸಿದರು. ನಾನು ಯಾವುದೇ ತಪ್ಪು ಮಾಡಿಯೇ ಇಲ್ಲ,
ಸ್ಥಾಯಿ ಸಮಿತಿ ಅಧ್ಯಕ್ಷರು ಯಾರಧ್ದೋ ಮಾತು ಕೇಳಿ ಆರೋಪ ಮಾಡುತ್ತಿದ್ದಾರೆ. ನನ್ನ ಮಾತಿನಿಂದ ಯಾರಿಗಾದರೂ ನೋವಾಗಿದ್ದಲ್ಲಿ ವಿಷಾದ ವ್ಯಕ್ತಪಡಿಸುವುದಾಗಿಯೂ ತಿಳಿಸಿದರು. ಆರ್‌ಎಫ್‌ಒ ತಾವು ತಪ್ಪು ಮಾಡಿಯೇ ಇಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.
ಮೇಲಾಗಿ ಅವರೇ ಸ್ಥಳ ಪರಿಶೀಲನೆ, ತನಿಖೆ ನಡೆಸುವಂತೆ ಕೋರಿದ್ದಾರೆ. ಹಾಗಾಗಿ ಸ್ಥಾಯಿ ಸಮಿತಿ ಅಧ್ಯಕ್ಷರು, ಸದಸ್ಯರು, ಅಧಿಕಾರಿಗಳನ್ನೊಳೊಂಡ 8 ಜನರ ತನಿಖಾ ಸಮಿತಿ ರಚಿಸಿ, ಮುಂದಿನ ಕೆಡಿಪಿ ಸಭೆಗೆ ವರದಿ ಸಲ್ಲಿಸುವಂತಾಗಬೇಕು ಎಂದು ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಎನ್ .ಜಿ. ನಟರಾಜ್ ನೀಡಿದ ಸಲಹೆಗೆ ಸಭೆ ಒಪ್ಪಿಗೆ ಸೂಚಿಸಿತು.