Advertisement

ಸಿಆರ್‌ಝಡ್‌ನ‌ಲ್ಲಿ ಅನುಮತಿ ಸ್ಥಗಿತ ಕೇಂದ್ರದಿಂದ ನೋಟಿಫಿಕೇಶನ್‌

01:12 PM Feb 21, 2017 | Harsha Rao |

ಉಡುಪಿ: ರಾಜ್ಯದ ಕರಾವಳಿ ನಿಯಂತ್ರಣ ವಲಯ (ಸಿಆರ್‌ಝಡ್‌) ವ್ಯಾಪ್ತಿಯಲ್ಲಿ ಬರುವ ಮನೆ ದುರಸ್ತಿಯಿಂದ ಹಿಡಿದು ಯಾವುದೇ ಕೆಲಸ ಕಾರ್ಯಗಳಿಗೆ ಅನುಮತಿ ನೀಡದಂತೆ ಕೇಂದ್ರ ಸರಕಾರ ಆದೇಶ ಹೊರಡಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್‌ ಮಧ್ವರಾಜ್‌ ಅವರು ಮಣಿಪಾಲ ರಜತಾದ್ರಿಯ ಜಿ.ಪಂ. ಸಭಾಂಗಣದಲ್ಲಿ ಸೋಮವಾರ ನಡೆದ ತ್ತೈಮಾಸಿಕ ಕೆಡಿಪಿ ಸಭೆಯಲ್ಲಿ ಹೇಳಿದರು.

Advertisement

ಕೇಂದ್ರ ಸರಕಾರ ಹೊರಡಿಸಿರುವ ಗಜೆಟ್‌ ನೋಟಿಫಿಕೇಶನ್‌ ಬಗ್ಗೆ ಸಚಿವರು ಅಧಿಕಾರಿಗಳಲ್ಲಿ ವಿವರಣೆ ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಂಬಂಧಪಟ್ಟ ಅಧಿಕಾರಿಯವರು, ಪ್ರಸ್ತುತ ಸಿಆರ್‌ಝಡ್‌ನ‌ಲ್ಲಿರುವ ಕೋಸ್ಟಲ್‌ ಮ್ಯಾನೇಜ್‌ಮೆಂಟ್‌ ಪ್ಲಾನ್‌ 2016 ಜ. 31ಕ್ಕೆ ಕೊನೆಯ ದಿನವಾಗಿತ್ತು. ಈ ಪ್ಲಾನ್‌ ಅನ್ನು ಹೊಸದಾಗಿ ಅಳವಡಿಸಿಕೊಳ್ಳುವ ಸಲುವಾಗಿ ಫೆ. 1ರಿಂದ ಯಥಾಸ್ಥಿತಿ ಕಾಯ್ದುಕೊಳ್ಳುವ ಸಲುವಾಗಿ ಕೇಂದ್ರ ಸರಕಾರ ಆದೇಶ ಹೊರಡಿಸಿದೆ. ಪ್ಲಾನ್‌ ರೆಡಿಯಾದ ಬಳಿಕ ಹೊಸ ಆದೇಶ ಬರಬಹುದು. ಅಲ್ಲಿಯವರೆಗೆ ಅನುಮತಿ ನೀಡಲು ಅವಕಾಶವಿಲ್ಲ ಎಂದರು.

ಹೊಸ ಪ್ಲಾನ್‌ ಸಿದ್ಧವಾಗುವವರೆಗೆ ಈ ಹಿಂದಿನಂತೆಯೇ ನಿಯಮ ಮುಂದುವರಿಯಬೇಕಿದೆ. ಅದಕ್ಕಾಗಿ ಏನಾದರೂ ಕ್ರಮ ಕೈಗೊಳ್ಳಬೇಕು ಎನ್ನುವ ಮಾತುಗಳ ಕುರಿತು ಜನಪ್ರತಿನಿಧಿಗಳು ಚರ್ಚೆ ನಡೆಸಿದರು.

ಭೂಪರಿವರ್ತನೆಯಾದ ಜಾಗ ನೋಂದಣಿಯ ಬಳಿಕ ಆರ್‌ಟಿಸಿಯಲ್ಲಿ ದಾಖಲಾಗಲು ವಿಳಂಬದ ಸಮಸ್ಯೆ ಮತ್ತದರ ನಿವಾರಣೆ ಬಗ್ಗೆ, ವಾರಾಹಿ ಯೋಜನೆಯಲ್ಲಿ ಬರುವ ಕಿಂಡಿ ಅಣೆಕಟ್ಟುಗಳ ನಿರ್ವಹಣೆ, ನರೇಗಾ, ಮನೆಗಳಿಗೆ ವಿದ್ಯುತ್‌ ಸಂಪರ್ಕ, ಮರಳುಗಾರಿಕೆಗೆ ಅವಕಾಶ, ದಂಡ ವಿನಾಯಿತಿ, ರಸ್ತೆಗಳ ಉನ್ನತೀಕರಣಕ್ಕೆ ಸರಕಾರಕ್ಕೆ ಪ್ರಸ್ತಾವ, ಪಡಿತರ ಕಾರ್ಡುಗಳ ವಿತರಣೆ ಬಗ್ಗೆ ಪಿಡಿಒಗಳಿಗೆ ತರಬೇತಿ, ಸಣ್ಣ ನೀರಾವರಿ, ಜಿ.ಪಂ. ಕಿಂಡಿ ಅಣೆಕಟ್ಟುಗಳ ನಿರ್ವಹಣೆ, ಶಾಲೆಗಳ ಕಟ್ಟಡ, ಡೀಮ್ಡ್ ಫಾರೆಸ್ಟ್‌, 94ಸಿ, ಸಿಆರ್‌ಝಡ್‌ ವ್ಯಾಪ್ತಿಯ ನಿವಾಸಿಗಳನ್ನು ಅದೇ ಗ್ರಾಮದ ನಿವೇಶನ ರಹಿತರ ಪಟ್ಟಿಗೆ ಸೇರ್ಪಡೆ, ಹೆದ್ದಾರಿ ಅಸಮರ್ಪಕ ಕಾಮಗಾರಿ, ಟೋಲ್‌ಗೇಟ್‌ ಮೊದಲಾದ ವಿಷಯಗಳ ಬಗ್ಗೆ ಚರ್ಚೆ ನಡೆಯಿತು.

ಮರವಂತೆ ಕಾಮಗಾರಿ: ವರದಿಗೆ ಸೂಚನೆ
ಮರವಂತೆಯಲ್ಲಿ ಮೀನುಗಾರಿಕಾ ಇಳಿದಾಣ ಕೇಂದ್ರ ನಿರ್ಮಾಣದಲ್ಲಾಗುತ್ತಿರುವ ಸಮಸ್ಯೆಗಳು, ಕಡಲ್ಕೊರೆತ ಮೊದಲಾದ ಅಂಶಗಳ ಕುರಿತು ಪ್ರತಾಪ ಚಂದ್ರ ಶೆಟ್ಟಿ, ಕೋಟ ಶ್ರೀನಿವಾಸ ಪೂಜಾರಿ, ರಾಜುಪೂಜಾರಿ, ಟಿ. ಬಾಬು ಶೆಟ್ಟಿ ಸಹಿತ ಹಲವರು ಮಾತನಾಡಿದರು. ಯೋಜನೆಯಲ್ಲಿ ತಪ್ಪಾದ ಅಂಶಗಳು, ವಿಳಂಬವಾಗಲು ಹಾಗೂ ಕಡಲ್ಕೊರೆತವಾಗಲು ಕಾರಣವನ್ನು ಪರಿಶೀಲಿಸಿ ಶೀಘ್ರ ವರದಿ ನೀಡುವಂತೆ ಉಸ್ತುವಾರಿ ಸಚಿವರು ಜಿ.ಪಂ. ಸಿಇಒ ಗೆ ಸೂಚಿಸಿದರು.

Advertisement

ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಪ್ರತಾಪ್‌ಚಂದ್ರ ಶೆಟ್ಟಿ, ಕೋಟ ಶ್ರೀನಿವಾಸ ಪೂಜಾರಿ, ಜಿ.ಪಂ. ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಜಿಲ್ಲಾಧಿಕಾರಿ ಟಿ. ವೆಂಕಟೇಶ್‌, ಜಿ.ಪಂ. ಸಿಇಒ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌, ಉಪವಿಭಾಗಾಧಿಕಾರಿ ಶಿಲ್ಪಾ ನಾಗ್‌, ಹೆಚ್ಚುವರಿ ಎಸ್‌ಪಿ ಎನ್‌. ವಿಷ್ಣುವರ್ಧನ ಅವರು ಉಪಸ್ಥಿತರಿದ್ದರು. ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್‌ ಕಾರ್ಯಕ್ರಮ ನಿರೂಪಿಸಿದರು.

ಮರಳು ಕೊರತೆ ಇಲ್ವಂತೆ!
ಮರಳುಗಾರಿಕೆ ಸಮಸ್ಯೆ ಕುರಿತು ಕೋಟ ಶ್ರೀನಿವಾಸ ಪೂಜಾರಿ ಸಹಿತ ಹಲವರು ಅಭಿಪ್ರಾಯ ವ್ಯಕ್ತಪಡಿಸಿದರು. ಸಿಆರ್‌ಝಡ್‌ನ‌ಲ್ಲಿ ಮರಳುಗಾರಿಕೆ ಬಗ್ಗೆ ಹಸಿರು ಪೀಠದ ಆದೇಶ ಇನ್ನಷ್ಟೇ ಬರಬೇಕಿದೆ ಎಂದು ಸಚಿವರು ಹೇಳಿದರು. ಜಿಲ್ಲೆಯಲ್ಲಿ ಮರಳು ಕೊರತೆಯೇ ಇಲ್ವೇ ಎಂದು ಕೋಟ ಪ್ರಶ್ನಿಸಿದರು. ಸರಕಾರಿ ಕೆಲಸ, ವಸತಿ ಯೋಜನೆಗಳಿಗೆ ಮರಳಿನ ಕೊರತೆ ಇಲ್ಲ ಎಂದು ಇಒ ಸ್ಪಷ್ಟಪಡಿಸಿದರು.

82 ಲೋಡ್‌ ಮರಳು ಸ್ಟಾಕ್‌: ಪಿಡಬ್ಲ್ಯುಡಿ
ಪಿಡಬ್ಲ್ಯುಡಿ ಅಧಿಕಾರಿ ಚಂದ್ರಶೇಖರ್‌ ಮಾತನಾಡಿ, ಕಾರ್ಕಳದಲ್ಲಿ ನಾನ್‌ ಸಿಆರ್‌ಝಡ್‌ನ‌ 2 ಬ್ಲಾಕ್‌ಗಳನ್ನು ಗುರುತಿಸಿ 82 ಲೋಡ್‌ಮರಳು ತೆಗೆಯಲಾಗಿದೆ. ಅಲ್ಲಿ ಮರಳು ಸರಿ ಇಲ್ಲದ ಕಾರಣ ಸ್ಥಗಿತ ಮಾಡಲಾಗಿದೆ. ಕುಂದಾಪುರ ತಾ|ನಲ್ಲಿ 2 ಬ್ಲಾಕ್‌ ಗುರುತಿಸಿಕೊಂಡು 262 ಲೋಡ್‌ ಮರಳು ತೆಗೆಯಲಾಗಿದೆ. ಇದರಲ್ಲಿ ಇನ್ನೂ 80 ಲೋಡ್‌ ಸ್ಟಾಕ್‌ ಇದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next