Advertisement

ಗಡಿ ಕಾದರೆ ಸೈನಿಕರ ಕಷ್ಟ ತಿಳಿಯುತ್ತೆ

01:03 AM May 13, 2019 | Lakshmi GovindaRaj |

ಬೆಂಗಳೂರು: ಹೆಚ್ಚು ಓದದವರು, ತಿನ್ನಲು ಇಲ್ಲದವರು ಸೈನ್ಯ ಸೇರುತ್ತಾರೆ ಎಂದು ರಾಜಕಾರಣಿಗಳು ಹೇಳುತ್ತಾರೆ. ದುಡಿಯದೇ ತಿನ್ನುವ ಇವರನ್ನು ಗಡಿಯಲ್ಲಿರಿಸಿ ದೇಶ ಕಾಯಲು ನಿಯೋಜಿಸಿದರೆ ಸೈನಿಕರ ಕಷ್ಟ ಗೊತ್ತಾಗುತ್ತದೆ ಎಂದು ವಾಗ್ಮಿ ಎಸ್‌.ಎನ್‌.ಸೇತುರಾಮ್‌ ಹೇಳಿದರು.

Advertisement

ಜಯನಗರದ ಆರ್‌.ವಿ. ನಿರ್ವಹಣಾಶಾಸ್ತ್ರ ಸಂಸ್ಥೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಲೇಖಕ ಆರ್‌.ಶ್ರೀನಾಗೇಶ್‌ ಅವರ ಪರಮವೀರರು ಕೃತಿ ಬಿಡುಗಡೆ ಮಾಡಿ ಮಾತನಾಡಿದ ಅವರು, ಸೈನಿಕರು ದೇಶ ಕಾಯಲು ಹೋಗಿ ಪ್ರಾಣ ತ್ಯಾಗ ಮಾಡುತ್ತಿದ್ದಾರೆ. ಚುನಾವಣೆಯಲ್ಲಿ ಪ್ರಚಾರ ಮಾಡಿ ಸುಸ್ತಾದ ರಾಜಕಾರಣಿಗಳು ರೆಸಾರ್ಟ್‌ನಲ್ಲಿ ವಿಶ್ರಾಂತಿ ಪಡೆಯುತ್ತಾರೆ. ಇವರನ್ನು ನೋಡಿದರೆ ಸೈನಿಕರು ಯಾರಿಗಾಗಿ ತ್ಯಾಗ ಮಾಡುತ್ತಿದ್ದರೆ ಎಂದು ಬೇಸರ ಮೂಡುತ್ತದೆ.

ಅತಿ ಹೆಚ್ಚು ಪರಮವೀರ ಚಕ್ರ ಪ್ರಶಸ್ತಿ ನಾವೇ ಹೆಚ್ಚು ನೀಡಿದ್ದೆವು ಎಂದು ರಾಜಕೀಯ ಪಕ್ಷಗಳು ಹೇಳಿಕೊಳ್ಳುವ ದಿನ ಬಂದರೂ ಆಶ್ಚರ್ಯ ಇಲ್ಲ ಎಂದು ಕಳವಳ ವ್ಯಕ್ತಪಡಿಸಿದ ಅವರು, ಪರಮವೀರಚಕ್ರ ಪ್ರಶಸ್ತಿ ನೀಡಿದ ಸಂಖ್ಯೆಯ ಆಧಾರದಲ್ಲಿ ದೇಶದ ಸೈನಿಕರ ಸ್ಥಿತಿಗತಿಗಳನ್ನು ನಿರ್ಧರಿಸಬಹುದು. ನಮ್ಮ ರಾಜಕೀಯ ವ್ಯವಸ್ಥೆ ಸರಿಯಿದ್ದಿದ್ದರೆ ಪರಮವೀರ ಚಕ್ರ ಪ್ರಶಸ್ತಿ ಅತಿ ಕಡಿಮೆ ಸೈನಿಕರಿಗೆ ದೊರೆಯುತ್ತಿತು ಎಂದರು.

ನಿವೃತ್ತ ವಿಂಗ್‌ ಕಮಾಂಡರ್‌ ಗಿರೀಶ್‌ ಕುಮಾರ್‌ ಮಾತನಾಡಿ, ಭಯದಿಂದ ಹೊರಬಂದರೆ ಸತ್ಯ ಮಾರ್ಗದಲ್ಲಿ ನಡೆಯಬಹುದು ಎಂಬುದನ್ನು ಕಂಡುಕೊಂಡಿದ್ದೇನೆ. ಮಗ ಅಕ್ಷಯ್‌ ಗಿರೀಶ್‌ ಸೇರಿದಂತೆ ಹಲವು ಯೋಧರು ಭಯವನ್ನು ಬದಿಗಿಟ್ಟು ದೇಶ ರಕ್ಷಣೆಯ ಗುರಿ ಇರಿಸಿಕೊಂಡು ಬಲಿದಾನ ಮಾಡಿದ್ದಾರೆ. ಇವರ ಕಥೆಗಳಿಂದ ಪಾಠ ಕಲಿಯಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ನಿವೃತ್ತ ಸೈನಿಕ ಕ್ಯಾಪ್ಟನ್‌ ನವೀನ್‌ ನಾಗಪ್ಪ ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರರ ಜೀವನಗಾಥೆಯನ್ನು ಮಕ್ಕಳಿಗೆ ತಿಳಿಸಲಾಗುತ್ತದೆ. ಆದರೆ ಸ್ವಾತಂತ್ರ್ಯ ನಂತರ ದೇಶಕ್ಕಾಗಿ ಹೋರಾಡಿದ ಯೋಧರ ಬಗ್ಗೆ ಮಕ್ಕಳಿಗೆ ಮಾಹಿತಿ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

Advertisement

ಪುಸ್ತಕ ಪರಿಚರ ಮಾಡಿಕೊಟ್ಟ ಬರಹಗಾರ ರೋಹಿತ್‌ ಚಕ್ರತೀರ್ಥ, ಎಸಿ ಕೊಠಡಿಯಲ್ಲಿ ಕುಳಿತು ದೇಶವನ್ನು ತುಂಡು ಮಾಡುತ್ತೇವೆ ಎನ್ನುವವರಿಗೆ ಸೈನಿಕರ ಜೀವನದ ಬಗ್ಗೆ ತಿಳಿಸಿಕೊಡಬೇಕಿದೆ. ಪದವಿ ವ್ಯಾಸಂಗ ಮುಗಿಸಿದ ಕೂಡಲೇ ವಿದ್ಯಾರ್ಥಿಗಳು ಕಡ್ಡಾಯವಾಗಿ ಎರಡು ವರ್ಷ ಸೇನೆಯಲ್ಲಿ ಸೇವ ನಿಯಮ ಬಂದಾಗ ಮಾತ್ರ ದೇಶಪ್ರೇಮದ ಬಗ್ಗೆ ತಿಳಿಯುತ್ತದೆ ಎಂದರು.

ರಾಜ್ಯದ ಹಿಂದಿನ ಮುಖ್ಯಮಂತ್ರಿ ಮೃತ ಯೋಧ ಹನುಮಂತಪ್ಪ ಕೊಪ್ಪದ್‌ ಅವರ ಅಂತ್ಯಸಂಸ್ಕಾರಕ್ಕೆ ಹೋಗಲು ಸಮಯವಿಲ್ಲ ಎಂದಿದ್ದರು. ಈಗಿನ ಮುಖ್ಯಮಂತ್ರಿ ಸೈನಿಕರಿಗೆ ಅವಮಾನವಾಗುವಂತೆ ಮಾತನಾಡಿದ್ದಾರೆ. ಈ ರೀತಿ ಯೋಧರನ್ನು ಅಗೌರವದಿಂದ ನಡೆಸಿಕೊಳ್ಳುವ ಘಟನೆಗಳು ನಡೆಯುತ್ತಲೇ ಇವೆ ಎಂದು ಬೇಸರ ವ್ಯಕ್ತಪಡಿಸಿದರು.

ವಿಂಗ್‌ ಕಮಾಂಡರ್‌ ಗಿರೀಶ್‌ ಕುಮಾರ್‌ ಅವರ ಪತ್ನಿ ಮೇಘನ, ವಿಂಗ್‌ ಕಮಾಂಡರ್‌ ಆಪ್ರೋಜ್‌, ಯುಆರ್‌ಐ ಕೌನ್ಸಿಲ್‌ ಟ್ರಸ್ಟಿ ಡಾ.ಸಿ.ಎನ್‌.ಎನ್‌ ರಾಜು ಮೊದಲಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next