Advertisement

ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳಿಗೆ ಅಮಿತ್‌ “ಶಾ’ಕ್‌

06:00 AM Jan 02, 2018 | |

ಬೆಂಗಳೂರು: ಸಮಾವೇಶಗಳನ್ನು ನಡೆಸಿ ನೀಡಿದ ಜವಾಬ್ದಾರಿ ನಿರ್ವಹಿಸಿದ ವರದಿಯೊಂದಿಗೆ ಪಾರಾಗಬಹುದು ಎಂದು ಭಾವಿಸಿದ್ದ ಟಿಕೆಟ್‌ ಆಕಾಂಕ್ಷಿಗಳಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಶಾಕ್‌ ನೀಡಿದ್ದಾರೆ. ಎಲ್ಲಾ ಕಡೆ ಬೂತ್‌ ಕಮಿಟಿ ರಚನೆಯಾಗಿದ್ದರೆ ಮಾತ್ರ ನವಶಕ್ತಿ ಸಮಾವೇಶಗಳನ್ನು ನಡೆಸಬೇಕು ಎಂದು ತಾಕೀತು ಮಾಡಿದ್ದಾರೆ.

Advertisement

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಡೆಯುತ್ತಿರುವ ನವ ಕರ್ನಾಟಕ ಪರಿವರ್ತನಾ ಯಾತ್ರೆ ಪೂರೈಸಿದ ವಿಧಾನಸಭಾ ಕ್ಷೇತ್ರಗಳಲ್ಲಿ ಫೆಬ್ರವರಿ 15ರೊಳಗೆ ನವಶಕ್ತಿ ಸಮಾವೇಶಗಳನ್ನು ನಡೆಸಲು ಈ ಹಿಂದೆ ತೀರ್ಮಾನಿಸಲಾಗಿತ್ತು. ಅದರಂತೆ ಒಟ್ಟು 224 ವಿಧಾನಸಭಾ ಕ್ಷೇತ್ರಗಳ ಪೈಕಿ ಯಾತ್ರೆ ಪೂರೈಸಿರುವ ಮತ್ತು ಪೂರೈಸಬೇಕಾಗಿರುವ 210 ವಿಧಾನಸಭಾ ಕ್ಷೇತ್ರಗಳಲ್ಲಿ ಸಮಾವೇಶಕ್ಕೆ ದಿನಾಂಕಗಳನ್ನೂ ನಿರ್ಧರಿಸಿ ಆಗಿತ್ತು.
ಆದರೆ, ಭಾನುವಾರ ಬೆಂಗಳೂರಿಗೆ ಬಂದಿದ್ದ ಅಮಿತ್‌ ಶಾ, ನವಶಕ್ತಿ ಸಮಾವೇಶದ ರೂಪುರೇಷೆಯನ್ನೇ ಬದಲಿಸುವ ಮೂಲಕ ಸಮಾವೇಶ ನಡೆಸಲು ಸಿದ್ಧತೆಯಲ್ಲಿದ್ದವರಿಗೆ ಕಡಿವಾಣ ಹಾಕಿದ್ದಾರೆ.

ಹೆಸರೇ ಹೇಳುವಂತೆ ನವಶಕ್ತಿ ಎಂದರೆ ಅದು ಪಕ್ಷದ ಹೊಸ ಶಕ್ತಿಗಳ ಸಮಾವೇಶವಾಗಬೇಕು. ಅಂದರೆ, ಬೂತ್‌ ಕಮಿಟಿ ರಚನೆಯಾಗಿ ಅದರ ಸದಸ್ಯರು ಹೊಸಬರನ್ನು ಸೇರಿಸಿಕೊಂಡು ವಿಧಾನಸಭಾ ಕ್ಷೇತ್ರದಲ್ಲಿ ಸಮಾವೇಶ ನಡೆಸಬೇಕು. ಆ ಕಾರ್ಯ ಆಗಬೇಕಾದರೆ ಮೊದಲು ಆಯಾ ವಿಧಾನಸಭೆ ಕ್ಷೇತ್ರಗ ಎಲ್ಲಾ ಬೂತ್‌ಗಳಲ್ಲಿ ಬೂತ್‌ ಕಮಿಟಿಗಳು ಪೂರ್ಣ ಪ್ರಮಾಣದಲ್ಲಿ ರಚನೆಯಾಗಬೇಕು ಎಂದು ಸೂಚನೆ ನೀಡಿದ್ದಾರೆ.

ಕಳೆದ ಆಗಸ್ಟ್‌ನಲ್ಲಿ ರಾಜ್ಯಕ್ಕೆ ಆಗಮಿಸಿದ್ದ ಅಮಿತ್‌ ಶಾ, ತಳಮಟ್ಟದಿಂದ ಸಂಘಟನೆಯನ್ನು ಬಲಪಡಿಸುವುದರ ಜತೆಗೆ ಸಕ್ರಿಯಗೊಳಿಸುವ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲೂ ಬೂತ್‌ ಕಮಿಟಿಗಳನ್ನು ರಚಿಸುವಂತೆ ಸೂಚಿಸಿದ್ದರು. ಬೂತ್‌ ಕಮಿಟಿಯಲ್ಲಿ ಪರಿಶಿಷ್ಟ ಜಾತಿ, ಪಂಗಡ, ಮಹಿಳೆಯರು ಸೇರಿದಂತೆ 12 ಸದಸ್ಯರಿರಬೇಕು ಎಂದು ತಾಕೀತು ಮಾಡಿದ್ದರು. ಅದರಂತೆ ರಾಜ್ಯಾದ್ಯಂತ ಸಮರೋಪಾದಿಯಲ್ಲಿ ಬೂತ್‌ ಕಮಿಟಿಗಳನ್ನು ರಚಿಸುವ ಕಾರ್ಯ ಆರಂಭವಾಯಿತಾದರೂ ಕೆಲವು ವಿಧಾನಸಭಾ ಕ್ಷೇತ್ರಗಳಲ್ಲಿ ಈ ಕೆಲಸ ಇನ್ನೂ ಪೂರ್ಣಗೊಂಡಿಲ್ಲ. ಆದರೆ, ಕ್ಷೇತ್ರದ ಪ್ರಮುಖರು ಇದನ್ನು ಮುಚ್ಚಿಟ್ಟು ನವಶಕ್ತಿ ಸಮಾವೇಶಕ್ಕೆ ಸಿದ್ಧತೆ ಆರಂಭಿಸಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಅಮಿತ್‌ ಶಾ ಈ ಸೂಚನೆ ನೀಡಿರುವುದಾಗಿ ಪಕ್ಷದ ಮೂಲಗಳು ಹೇಳಿವೆ.

ಶಾ ನೀಡಿದ ಮಾಹಿತಿ ಬಗ್ಗೆ ಅಚ್ಚರಿ:
ಮೂಲಗಳ ಪ್ರಕಾರ ರಾಜ್ಯಾದ್ಯಂತ ಇರುವ ಸುಮಾರು 57 ಸಾವಿರ ಬೂತ್‌ಗಳಲ್ಲಿ 52 ಸಾವಿರದಷ್ಟು ಕಡೆ ಮಾತ್ರ ಬೂತ್‌ ಕಮಿಟಿಗಳು ರಚನೆಯಾಗಿವೆ. ಸುಮಾರು 4 ಸಾವಿರ ಬೂತ್‌ ಕಮಿಟಿಗಳು ಇನ್ನೂ ರಚನೆಯಾಗಬೇಕಿದೆ. ಸುಮಾರು 10 ಸಾವಿರ ಬೂತ್‌ಗಳಲ್ಲಿ ಪರಿಶಿಷ್ಟ ಜಾತಿ, ಪಂಗಡ, ಮಹಿಳೆಯರನ್ನೊಳಗೊಂಡ ಪೂರ್ಣ ಪ್ರಮಾಣದ ಬೂತ್‌ ಕಮಿಟಿಗಳು ಅಸ್ತಿತ್ವಕ್ಕೆ ಬರಬೇಕಾಗಿದೆ. ಈ ವಿಚಾರವನ್ನು ರಾಜ್ಯದ ಪ್ರಮುಖರೊಂದಿಗಿನ ಸಬೆ ವೇಳೆ ಅಮಿತ್‌ ಶಾ ಅವರು ಬಹಿರಂಗಪಡಿಸಿದಾಗ ಮುಖಂಡರು ಈ ಮಾಹಿತಿ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದರು ಎನ್ನಲಾಗಿದೆ.

Advertisement

ಮೊದಲು ಕೊಟ್ಟ ಜವಾಬ್ದಾರಿ ಮೊದಲು ನಿರ್ವಹಿಸಿ
ಅಮಿತ್‌ ಶಾ ಅವರ ಈ ಸೂಚನೆ ಹಿಂದೆ ಮೊದಲು ಕೊಟ್ಟ ಜವಾಬ್ದಾರಿಯನ್ನು ಮೊದಲು ನಿರ್ವಹಿಸಬೇಕು ಎಂಬ ಖಡಕ್‌ ಸಂದೇಶವಿದೆ ಎನ್ನಲಾಗಿದೆ. ಕಳೆದ ಆಗಸ್ಟ್‌ನಲ್ಲಿ ಅಮಿತ್‌ ಶಾ ರಾಜ್ಯಕ್ಕೆ ಬಂದು ಹೋದ ನಂತರ ಮುಖಂಡರು, ಟಿಕೆಟ್‌ ಆಕಾಂಕ್ಷಿಗಳಿಗೆ ನಾನಾ ಹಂತಗಳಲ್ಲಿ ಹಲವು ಜವಾಬ್ದಾರಿಗಳನ್ನು ವಹಿಸಲಾಗಿತ್ತು. ಆದರೆ, ಕೆಲವರು ಒಂದಷ್ಟು ಜವಾಬ್ದಾರಿಗಳನ್ನು ಸರಿಯಾಗಿ ನಿರ್ವಹಿಸದೆ ಮೇಲ್ನೋಟಕ್ಕೆ ಕಾಣುವಂತಹ ಕೆಲಸಗಳಿಗೆ ಆದ್ಯತೆ ನೀಡಿದ್ದರು.

ಆದರೆ, ಅಮಿತ್‌ ಶಾ ಅವರು ಪ್ರತಿಯೊಬ್ಬರ ಕಾರ್ಯಚಟುವಟಿಕೆ ಬಗ್ಗೆ ಹದ್ದಿನ ಕಣ್ಣಿಟ್ಟಿದ್ದು, ವರದಿಗಳನ್ನು ತರಿಸಿಕೊಳ್ಳುತ್ತಿದ್ದಾರೆ. ಮುಂದಿನ ವಿಧಾನಸಭೆ ಚುನಾವಣೆ ಗೆಲುವು ಹೇಳುವಷ್ಟು ಸುಲಭ ಇಲ್ಲದ ಕಾರಣ ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿಗಳನ್ನು ಪೂರ್ಣ ಪ್ರಮಾಣದಲ್ಲಿ ನಿಭಾಯಿಸುವಂತಾಗಬೇಕು ಎಂದು ಅವರು ಬಯಸಿದ್ದಾರೆ. ಮುಂದಿನ ದಿನಗಳಲ್ಲೂ ಸಂಘಟನೆ ಕೆಲಸದ ಬಗ್ಗೆ ಆಸಕ್ತಿ ಹೊಂದದವರಿಗೆ ನವಶಕ್ತಿ ಸಮಾವೇಶ ಒಂದು ಪಾಠವಾಗಬೇಕು ಎಂದು ಅಮಿತ್‌ ಶಾ ಮೊದಲು ಕೊಟ್ಟ ಜವಾಬ್ದಾರಿಯನ್ನು ಮೊದಲು ನಿರ್ವಹಿಸಬೇಕು ಎಂಬ ಸಂದೇಶ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.

Advertisement

Udayavani is now on Telegram. Click here to join our channel and stay updated with the latest news.

Next