Advertisement

ಕಾರ್ಗಲ್‌ ಭಾಗದಲ್ಲಿ ಮತ್ತೆರಡು ಮಂಗಗಳ ಶವ ಪತೆ

12:17 PM Jan 04, 2019 | |

ಸಾಗರ: ಮಂಗನ ಕಾಯಿಲೆ ವ್ಯಾಪಿಸಿರುವ ಕಾರ್ಗಲ್‌ ಭಾಗದಲ್ಲಿ ಗುರುವಾರ ಎರಡು ಮಂಗಗಳು ಸತ್ತ ಬಿದ್ದಿರುವ ಮಾಹಿತಿ ಲಭ್ಯವಾಗಿದೆ. ಬುಧವಾರ ಐಬೆಕ್ಸ್‌ ಬೇಲಿಗೆ ಸಿಕ್ಕು ಗಾಯಗೊಂಡಿದ್ದ ಮಂಗ ಗುರುವಾರ ಸಾವನ್ನಪ್ಪಿದ್ದು, ಪಶು ಸಂಗೋಪನಾ ಇಲಾಖೆಯ ವೈದ್ಯರು ಪೋಸ್ಟ್‌ಮಾರ್ಟಂ ಮಾಡಿ ಸಂಗ್ರಹಿಸಿದ ಅಂಶಗಳನ್ನು ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದಾರೆ. ಕೊಳೆತ ಸ್ಥಿತಿಯಲ್ಲಿದ್ದ ಇನ್ನೊಂದು ಮಂಗವನ್ನು ಸುಡಲಾಗಿದೆ. ಅರಣ್ಯ ಇಲಾಖೆಯ ಕಾರ್ಗಲ್‌ ವನ್ಯಜೀವಿ ವಿಭಾಗದ ಅಧಿಕಾರಿಗಳು ಅರಳಗೋಡು ಸಮೀಪದ ಸಂಪದಲ್ಲಿ ಸಿಕ್ಕ ಮೃತ ಮಂಗವನ್ನು ಸುಟ್ಟು ಆ ಪ್ರದೇಶದಲ್ಲಿ ಮೆಲಾಥಿಯಾನ್‌ ಪುಡಿ ಸಿಂಪಡಿಸಿದ್ದಾರೆ.

Advertisement

ಹೆಚ್ಚುತ್ತಿರುವ ಮಂಗನ ಕಾಯಿಲೆಯ ಹಿನ್ನೆಲೆಯಲ್ಲಿ ಸಾಗರ ಉಪ ವಿಭಾಗದ ಸಹಾಯಕ ಆಯುಕ್ತರು ಹಾಗೂ ತಾಪಂ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ನೇತೃತ್ವದಲ್ಲಿ ಶನಿವಾರ ಕಾಯಿಲೆ ಬಾಧಿತ ಐದು ಗ್ರಾಪಂ ಅಧ್ಯಕ್ಷರು, ವಿವಿಧ ಇಲಾಖೆಯ ಅಧಿಕಾರಿಗಳನ್ನೊಳಗೊಂಡ ತುರ್ತು ಸಭೆಯನ್ನು ನಡೆಸಲಿದ್ದಾರೆ ಎಂದು ತಿಳಿದುಬಂದಿದೆ. ಆವಿನಹಳ್ಳಿ ಭಾಗದಲ್ಲೂ ಕೆಎಫ್‌ಡಿ ದೃಢಪಟ್ಟ ಮಂಗ ಸತ್ತಿರುವುದು ಜನರಲ್ಲಿ ಹೆಚ್ಚಿನ ಆತಂಕ ಸೃಷ್ಟಿಸಿರುವ ಹಿನ್ನೆಲೆಯಲ್ಲಿ ಈ ಸಭೆ ವ್ಯಾಪಕವಾಗಿ ಚರ್ಚೆ ನಡೆಸಲಿದೆ ಎನ್ನಲಾಗಿದೆ.

ಕೆಎಫ್‌ಡಿ ವಿಭಾಗದ ಉಪನಿರ್ದೇಶಕ ಡಾ| ರವಿಕುಮಾರ್‌ ಪತ್ರಿಕೆಯೊಂದಿಗೆ ಮಾತನಾಡಿ, ಈಗಾಗಲೇ ರಕ್ತ ಪರೀಕ್ಷೆಗೆ ಕಳುಹಿಸಲ್ಪಟ್ಟ ಎಂಟು ಪ್ರಕರಣಗಳ ಫಲಿತಾಂಶ ಗುರುವಾರ ಲಭ್ಯವಾಗುತ್ತದೆ ಎಂದು ಈ ಮುನ್ನ ನಿರೀಕ್ಷಿಸಲಾಗಿತ್ತು. ಅದು ಶುಕ್ರವಾರ ಲಭ್ಯವಾಗಲಿದೆ. ಶಿವಮೊಗ್ಗದಲ್ಲಿರುವ ಕೆಎಫ್‌ಡಿ ಪ್ರಯೋಗಾಲಯದ ಕಾಯಕಲ್ಪ ಕೆಲಸ ಕೊನೆಯ ಘಟ್ಟದಲ್ಲಿದ್ದು, ಬೇಕಾದ ರಾಸಾಯನಿಕ, ಯಂತ್ರಗಳನ್ನು ಪುಣೆಯ ಎನ್‌ ಐವಿಯಿಂದ ಪಡೆದುಕೊಳ್ಳುತ್ತಿದ್ದೇವೆ. 

ಮುಂದಿನ ಸೋಮವಾರದಿಂದಲೇ ಶಿವಮೊಗ್ಗದಲ್ಲಿಯೇ ಕೆಎಫ್‌ಡಿ ಪರೀಕ್ಷಾ ಘಟಕ ಕಾರ್ಯಾರಂಭ ಮಾಡಲಿದೆ. ಇಲ್ಲಿ ಪರೀಕ್ಷೆ ನಡೆಸಿದ 24 ಗಂಟೆಗಳಲ್ಲಿ ಫಲಿತಾಂಶ ಲಭ್ಯವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮಂಗನ ಕಾಯಿಲೆ ತಡೆಗೆ ಹಾಲಪ್ಪ ಆಗ್ರಹ

ಬೆಂಗಳೂರು: ಶಿವಮೊಗ್ಗ ಹಾಗೂ ಮಲೆನಾಡು ಭಾಗದಲ್ಲಿ ಮಂಗನ ಕಾಯಿಲೆ ರೋಗ ಪತ್ತೆಯಾಗಿದ್ದು, ರಾಜ್ಯ ಸರ್ಕಾರ ರೋಗ ತಡೆಯಲು ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತಿಲ್ಲ. ಸೋಮವಾರದೊಳಗೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ನಿವಾಸದ ಎದುರು ಧರಣಿ ನಡೆಸುವುದಾಗಿ ಸಾಗರ ಶಾಸಕ ಹರತಾಳು ಹಾಲಪ್ಪ ಹೇಳಿದ್ದಾರೆ.

Advertisement

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಿವಮೊಗ್ಗ ಜಿಲ್ಲೆಯಲ್ಲಿ ಮಂಗನ ಕಾಯಿಲೆಯಿಂದ ಈಗಾಗಲೇ ನಾಲ್ಕು ಜನರು ನಿಧನ ಹೊಂದಿದ್ದಾರೆ. ಈ ಕುರಿತು ಸರ್ಕಾರದ ಗಮನಕ್ಕೆ ತಂದರೂ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿಯೇ ಈ ಕುರಿತು ಸರ್ಕಾರದ ಗಮನ ಸೆಳೆದಿದ್ದೆ, ಆಗ ಆರೋಗ್ಯ ಸಚಿವರ ಬದಲು ಕಾನೂನು ಸಚಿವರು ಉತ್ತರ ನೀಡಿ, ಆರೋಗ್ಯ ಸಚಿವರ ಗಮನಕ್ಕೆ ತರುವುದಾಗಿ ಹೇಳಿದ್ದರು. ಆದರೆ, ಇದುವರೆಗೂ ಆರೋಗ್ಯ ಸಚಿವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು. ಮಂಗನ ಕಾಯಿಲೆಯನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿಲ್ಲ. ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳನ್ನು ಮೂರು ದಿನಗಳಿಂದ ಭೇಟಿ ಮಾಡಲು ಪ್ರಯತ್ನ ನಡೆಸಿದರೂ ಸಿಗುತ್ತಿಲ್ಲ. ಸರ್ಕಾರ ತಕ್ಷಣವೇ ಸಾಗರಕ್ಕೆ ಆರೋಗ್ಯಾಧಿಕಾರಿಗಳ ತಂಡ ಕಳುಹಿಸಿ, ವಾಸ್ತವ ಪರಿಸ್ಥಿತಿ ಅರಿತುಕೊಳ್ಳಬೇಕು. ಶಿವಮೊಗ್ಗ ಮೆಗ್ಗಾನ್‌ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ದೊರೆಯುತ್ತಿಲ್ಲ. ತಕ್ಷಣವೇ ವಿಶೇಷ ವಾರ್ಡ್‌ ತೆರೆದು ದಿನದ 24 ಗಂಟೆಯೂ ರೋಗಿಗಳ ತಪಾಸಣೆಗೆ ವೈದ್ಯರನ್ನು ನಿಯೋಜಿಸಬೇಕು. ಪಾರ್ಶ್ವನಾಥ ಜೈನ್‌ ಎನ್ನುವವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು 1.60 ಲಕ್ಷ ರೂಪಾಯಿ ವೆಚ್ಚ ಮಾಡಿದ್ದರೂ, ಚಿಕಿತ್ಸೆ ಫ‌ಲಕಾರಿಯಾಗದೇ ನಿಧನ ಹೊಂದಿದ್ದಾರೆ. ಸರ್ಕಾರ ಅವರ ಆಸ್ಪತ್ರೆ ವೆಚ್ಚವನ್ನು ಪುನರ್‌ ಭರಿಸಬೇಕು ಎಂದು ಆಗ್ರಹಿಸಿದರು. ಪುತ್ತೂರು ಶಾಸಕ ಸಂಜೀವ್‌ ಮಠದೂರು ಇದೇ ಸಂದರ್ಭದಲ್ಲಿ ಮಾತನಾಡಿ, ದಕ್ಷಿಣ ಕನ್ನಡ ಹಾಗೂ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಕ್ಯಾಸನೂರು ಫಾರೆಸ್ಟ್‌ ಕಾಯಿಲೆ ಉಲ್ಬಣವಾಗಿದ್ದು, ಸರ್ಕಾರ ರೋಗ ತಡೆಯಲು ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next