ಬೆಂಗಳೂರು: ಭಾರತೀಯ ಕಾಫಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಸ್ತರಿಸುವ ನಿಟ್ಟಿನಲ್ಲಿ ಕಾಫಿ ಬೆಳೆಯುವ ದಕ್ಷಿಣ ಭಾರತದ ಪ್ರಮುಖ ಐದು ಪ್ರದೇಶಗಳನ್ನು ಗುರುತಿಸಿ ಬ್ರ್ಯಾಂಡಿಂಗ್ ಮಾಡಲು ಸಿದ್ಧತೆ ನಡೆಸಲಾಗಿದೆ ಎಂದು ಕಾಫಿಮಂಡಳಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀವತ್ಸ ಕೃಷ್ಣ ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ಕಾಫಿ ದಿನದ ಅಂಗವಾಗಿ ಕಾಫಿ ಬೋರ್ಡ್ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತೀಯ ಕಾಫಿ ಬೆಳೆಯನ್ನು ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸಲು ಬ್ರಾಂಡ್‌ನ ಅವಶ್ಯಕತೆ ಹೆಚ್ಚಿರುತ್ತದೆ. ಹಾಗಾಗಿ “ಭೌಗೋಳಿಕ ಗುರುತು’ (ಜಿಐ ಟ್ಯಾಂಗ್) ಮೂಲಕ ಭಾರತಕ್ಕೆ ಕಾಫಿ ಪರಿಚಯಿಸಿದ ಪ್ರದೇಶವಾದ ಬಾಬಾ ಬುಡನ್‌ಗಿರಿ, ಚಿಕ್ಕಮಗಳೂರು, ಕೊಡಗು, ಆಂಧ್ರ ಪ್ರದೇಶದ ಅರಕು ವ್ಯಾಲಿ, ಕೇರಳ ವೈನಾಡ್ ಸೇರಿದಂತೆ ಒಟ್ಟು ಐದು ಪ್ರದೇಶಗಳನ್ನು ಗುರುತಿಸಲಾಗಿದೆ ಎಂದು ಹೇಳಿದರು.
ಈ ಪ್ರದೇಶಗಳಲ್ಲಿ ಬೆಳೆಯುವ ಕಾಫಿ ರುಚಿಯಲ್ಲಿ ವಿಭಿನ್ನತೆ ಹೊಂದಿವೆ. ಈ ವಿಭಿನ್ನತೆಯನ್ನೇ ವಿವಿಧ ಬ್ರ್ಯಾಂಡ್ ಮಾಡುವ ಮೂಲಕ ಭಾರತೀಯ ಕಾಫಿಯ ಅಂತಾರಾಷ್ಟೀಯ ಬ್ರ್ಯಾಂಡಿಂಗ್ ಸೃಷ್ಟಿಸಲು ಹಾಗೂ ಕಾಫಿ ಬೆಳೆಗಾರರನ್ನು ಉತ್ತೇಜಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ದಕ್ಷಿಣ ಭಾರತ ಬಿಟ್ಟರೆ ಉತ್ತರ ಭಾರತ ಸೇರಿದಂತೆ ವಿದೇಶಗಳಲ್ಲಿ ಕಾಫಿಯ ಪರಿಚಯ ಅಷ್ಟಾಗಿಲ್ಲ. ಗ್ರೀನ್ ಟೀ ಮಾತ್ರವಲ್ಲ ಕಾಫಿಯೂ ಆರೋಗ್ಯಕ್ಕೆ ಹಿತವಾಗಿದ್ದು, ಕಾಫಿಯ ಆರೋಗ್ಯ ಮುಖೀ ಅಂಶಗಳ ಕುರಿತು ವ್ಯಾಪಕ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ. ಇನ್ನು ವಿಶ್ವಕ್ಕೆ ಶೇ.17ರಷ್ಟು ಭಾರತದ ಕಾಫಿಯನ್ನು ರಫ್ತು ಮಾಡಲಾಗುತ್ತಿದೆ. ಕಳೆದ ಸಾಲಿನಲ್ಲಿ ಮೂರೂವರೆ ಲಕ್ಷ ಮೆಟ್ರಿಕ್ ಟನ್ ಅಷ್ಟು ರಪು¤ ಮಾಡಲಾಗಿದ್ದು, ಅದರ ಪ್ರಮಾಣವನ್ನು ಇನ್ನಷ್ಟು ಹೆಚ್ಚಿಸಲು ಹೊಸ ಯೋಜನೆಗಳನ್ನು ಹಾಕಿಕೊಳ್ಳಲಾಗುತ್ತಿದೆ ಎಂದರು.
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ್ ಬಾಸ್ಕರ್ ಮಾತನಾಡಿ, ಪ್ರವಾಹದಿಂದ ಕಾಫಿ ಬೆಳೆಯುವ ಪ್ರದೇಶಗಳಲ್ಲಿ ಬಹುಮುಖ್ಯವಾಗಿ ಕೊಡಗಿನಲ್ಲಿ ಸಾಕಷ್ಟು ಹಾನಿಯಾಗಿದೆ. ಇಲ್ಲಿ ಶೀಘ್ರ ಅಭಿವೃದ್ಧಿ ಕಾರ್ಯದ ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಕಾಫಿ ಮಂಡಳಿಯು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯೊಂದಿಗೆ ಸಮನ್ವಯತೆ ಮುಂದಾಗಬೇಕು. ಇನ್ನು ಕೊಡಗು ಜಿಲ್ಲೆಯ ಕಾಫಿ ಬೆಳೆಗಾರರು ಹಾಗೂ ಕೂಲಿ ಕಾರ್ಮಿಕರಿಗೆ ನೆರವಾಗುವ ನಿಟ್ಟಿನಲ್ಲಿ ನರೇಗಾ ಯೋಜನೆ ಬಳಸಿಕೊಳ್ಳಬಹುದು ಎಂದು ಸಲಹೆ ನೀಡಿದರು.
ನವೋದ್ಯಮಕ್ಕಾಗಿ ಕಾಫಿಬೋರ್ಡ್‌ನಲ್ಲಿ ಉತ್ತೇಜನ ಕೇಂದ್ರ: ಅಟಲ್ ಇನೊವೇಷನ್ ಮಿಷನ್ ವತಿಯಿಂದ ನಗರದ ಕಾಫಿ ಬೋರ್ಡ್‌ನಲ್ಲಿಯೂ ಉತ್ತೇಜನ ಕೇಂದ್ರ ಆರಂಭಿಸಲಾಗುತ್ತಿದೆ. ಈ ಉತ್ತೇಜನ ಕೇಂದ್ರಕ್ಕೆ ಮಿಷನ್ ವತಿಯಿಂದ 10 ಕೋಟಿ ರೂ.ಗಳ ನೆರವು ಕೂಡ ಒದಗಿಸಲಾಗುತ್ತದೆ. ಮುಂದಿನ ಎರಡು ವರ್ಷದಲ್ಲಿ ಈ ಕೇಂದ್ರದಿಂದ ಕನಿಷ್ಠ 20 ರಿಂದ 25 ನವೋದ್ಯಮಗಳನ್ನು ಆರಂಭಿಸಲು ಉತ್ತೇಜಿಸಲಾಗುತ್ತದೆ. ಮಿಷನ್ ವತಿಯಿಂದ ದೇಶದಲ್ಲಿ ಒಟ್ಟಾರೆ 101 ಉತ್ತೇಜನ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಅಟಲ್ ಮಿಷನ್ ನಿರ್ದೇಶಕ ಆರ್.ರಮಣನ್ ತಿಳಿಸಿದರು.